
ಸಿ.ಜೆ. ರಾಯ್ ಸಾವು: "ನಾವು ಒತ್ತಡ ಹೇರಿಲ್ಲ" ಎಂದ ಐಟಿ ಇಲಾಖೆ
ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಟಿ ಇಲಾಖೆಯು ಕುಟುಂಬಸ್ಥರ ಕಿರುಕುಳದ ಆರೋಪವನ್ನು ತಳ್ಳಿಹಾಕಿದೆ.
ಉದ್ಯಮಿ ಸಿ.ಜೆ. ರಾಯ್ ಅವರ ಸಾವಿಗೆ ಐಟಿ ಅಧಿಕಾರಿಗಳ ಒತ್ತಡವೇ ಕಾರಣ ಎಂಬ ಕುಟುಂಬಸ್ಥರ ಆರೋಪವನ್ನು ಕೇರಳದ ಆದಾಯ ತೆರಿಗೆ ಇಲಾಖೆಯ ಮೂಲಗಳು ತಳ್ಳಿಹಾಕಿವೆ. ಗುರುವಾರ ನಡೆದ ವಿಚಾರಣೆಯು ಅತ್ಯಂತ ಸೌಹಾರ್ದಯುತವಾಗಿ ನಡೆದಿತ್ತು ಮತ್ತು ಸಾಕ್ಷಿಗಳ ಸಮ್ಮುಖದಲ್ಲೇ ಸಿಜೆ ರಾಯ್ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿತ್ತು. ಹೇಳಿಕೆ ನೀಡಿದ ನಂತರ ಅವರು ಅಧಿಕಾರಿಗಳೊಂದಿಗೆ ಸಹಜವಾಗಿಯೇ ಇದ್ದರು ಎಂದು ಮೂಲಗಳು ತಿಳಿಸಿವೆ.
ಶುಕ್ರವಾರ ಯಾವುದೇ ವಿಚಾರಣೆ ನಡೆದಿಲ್ಲ
ಘಟನೆ ನಡೆದ ಶುಕ್ರವಾರದಂದು ಐಟಿ ಅಧಿಕಾರಿಗಳು ಯಾವುದೇ ಹೊಸ ಹೇಳಿಕೆ ಅಥವಾ ವಿಚಾರಣೆಯನ್ನು ನಡೆಸಿರಲಿಲ್ಲ. ಕೇವಲ ದಾಖಲೆಗಳ ಪರಿಶೀಲನೆ ನಡೆಯುತ್ತಿತ್ತು ಎಂದು ಇಲಾಖೆ ಸ್ಪಷ್ಟಪಡಿಸಿದೆ. ಇಡೀ ತನಿಖಾ ಪ್ರಕ್ರಿಯೆಯನ್ನು ಕಾನೂನು ಚೌಕಟ್ಟಿನಲ್ಲೇ ನಡೆಸಲಾಗಿದೆ. ಯಾವುದೇ ಹಂತದಲ್ಲೂ ರಾಯ್ ಅವರ ಮೇಲೆ ವೈಯಕ್ತಿಕ ಅಥವಾ ಮಾನಸಿಕ ಒತ್ತಡ ಹೇರಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ತನಿಖೆಗೆ ಸಿದ್ಧ ಎಂದ ಅಧಿಕಾರಿಗಳು
ಈ ಸಾವಿನ ಕುರಿತು ನಡೆಯುವ ಯಾವುದೇ ಉನ್ನತ ಮಟ್ಟದ ತನಿಖೆಯನ್ನು ತಾವು ಸ್ವಾಗತಿಸುವುದಾಗಿ ಅಧಿಕಾರಿಗಳು ತಿಳಿಸಿದ್ದು, ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಪತ್ರಿಕಾ ಪ್ರಕಟಣೆ ಹೊರಬರುವ ಸಾಧ್ಯತೆಯಿದೆ.
ಪೊಲೀಸ್ ತನಿಖೆ ಮತ್ತು ಮುಂದಿನ ಹಂತ
ಇಂದು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದ್ದು, ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಸದ್ಯ ಖಾಸಗಿ ಹೋಟೆಲ್‌ನಲ್ಲಿರುವ ಕುಟುಂಬಸ್ಥರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಳ್ಳುತ್ತಿದ್ದಾರೆ. ಐಟಿ ಅಧಿಕಾರಿಗಳ ವಿರುದ್ಧ ಲಿಖಿತ ದೂರು ನೀಡಿದರೆ ಮಾತ್ರ 'ಆತ್ಮಹತ್ಯೆಗೆ ಪ್ರಚೋದನೆ' ಪ್ರಕರಣ ದಾಖಲಾಗಲಿದೆ. ಕಚೇರಿಯ ಸಿಸಿಟಿವಿ ದೃಶ್ಯಾವಳಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿದ್ದು, ಘಟನೆಯ ನಿಖರ ಮಾಹಿತಿ ಶೀಘ್ರದಲ್ಲೇ ಹೊರಬರಲಿದೆ.
ಪ್ರಕರಣದ ಹಿನ್ನೆಲೆ
ತೆರಿಗೆ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆಯ ದೂರಿನ ಹಿನ್ನೆಲೆಯಲ್ಲಿ, ಕೇರಳ ಮೂಲದ ಆದಾಯ ತೆರಿಗೆ ಇಲಾಖೆ (IT) ಅಧಿಕಾರಿಗಳ ತಂಡವು ಜನವರಿ 28ರಿಂದ ಸಿ.ಜೆ. ರಾಯ್ ಅವರ ಬೆಂಗಳೂರಿನ ನಿವಾಸ ಹಾಗೂ ರಿಚ್‌ಮಂಡ್ ಸರ್ಕಲ್‌ನಲ್ಲಿರುವ ಕಾನ್ಫಿಡೆಂಟ್ ಗ್ರೂಪ್ ಪ್ರಧಾನ ಕಚೇರಿಯ ಮೇಲೆ ನಿರಂತರ ದಾಳಿ ನಡೆಸುತ್ತಿತ್ತು. ಸತತ ಮೂರು ದಿನಗಳಿಂದ ದಾಖಲೆಗಳ ಪರಿಶೀಲನೆ ಮತ್ತು ವಿಚಾರಣೆ ನಡೆಯುತ್ತಿತ್ತು.
ಶುಕ್ರವಾರ ಮಧ್ಯಾಹ್ನ ಸುಮಾರು 3:15ರ ಸಮಯದಲ್ಲಿ ಐಟಿ ಅಧಿಕಾರಿಗಳು ಕಚೇರಿಯಲ್ಲಿ ರಾಯ್ ಅವರನ್ನು ವಿಚಾರಣೆ ಮಾಡುತ್ತಿದ್ದರು. ಮೂಲಗಳ ಪ್ರಕಾರ, ವಿಚಾರಣೆ ವೇಳೆ ರಾಯ್ ಅವರು "ಕೆಲವು ಪ್ರಮುಖ ದಾಖಲೆಗಳನ್ನು ತರುತ್ತೇನೆ" ಅಥವಾ "ಕುಟುಂಬದವರ ಜೊತೆ ಮಾತನಾಡಬೇಕು" ಎಂದು ಹೇಳಿ ಪಕ್ಕದ ಕೊಠಡಿಗೆ ತೆರಳಿದರು.
ಕೊಠಡಿಯೊಳಗೆ ಹೋದ ಕೆಲವೇ ನಿಮಿಷಗಳಲ್ಲಿ ಗುಂಡಿನ ಸದ್ದಿನ ಶಬ್ದ ಕೇಳಿಬಂದಿದೆ. ಅಧಿಕಾರಿಗಳು ಮತ್ತು ಕಚೇರಿ ಸಿಬ್ಬಂದಿ ಓಡಿ ಹೋಗಿ ನೋಡಿದಾಗ, ಸಿ.ಜೆ. ರಾಯ್ ಅವರು ತಮ್ಮ ಪರವಾನಗಿ ಪಡೆದ ಪಿಸ್ತೂಲ್‌ನಿಂದ ಎದೆಗೆ ಗುಂಡು ಹಾರಿಸಿಕೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.
ಸಿ.ಜೆ. ರಾಯ್ ಯಾರು?
ದಕ್ಷಿಣ ಭಾರತದ ಪ್ರಮುಖ ಬಿಲ್ಡರ್ ಆಗಿದ್ದ ಸಿ.ಜೆ. ರಾಯ್ ಬೆಂಗಳೂರು, ಕೇರಳ ಹಾಗೂ ದುಬೈನಲ್ಲಿ ಬೃಹತ್ ಅಪಾರ್ಟ್‌ಮೆಂಟ್ ಮತ್ತು ವಿಲ್ಲಾ ಯೋಜನೆಗಳನ್ನು ನಿರ್ಮಿಸಿದ್ದರು. ಕನ್ನಡದ 'ಒಗ್ಗರಣೆ' ಸೇರಿದಂತೆ ಒಟ್ಟು 8 ಸಿನಿಮಾಗಳನ್ನು ನಿರ್ಮಿಸಿದ್ದರು. ಮಲಯಾಳಂನ ಸೂಪರ್ ಸ್ಟಾರ್ ಮೋಹನ್ ಲಾಲ್ ನಟನೆಯ 'ಮರಕ್ಕಾರ್' ಚಿತ್ರದ ನಿರ್ಮಾಣದಲ್ಲೂ ಇವರ ಪಾಲುದಾರಿಕೆ ಇತ್ತು.

