
ಮಾನಸಿಕ ಅಸ್ವಸ್ಥ ಪತ್ನಿಗೆ ಪತಿ ಸಿರಿಲ್ ಮೋನಿಸ್ ಮೃತಪಟ್ಟಿರುವುದು ತಿಳಿಯದೆ ಶವದೊಂದಿಗೇ ಕಾಲ ಕಳೆದಿದ್ದಾರೆ.
Chikkamagaluru News| ಕೊಳೆತ ಪತಿಯ ಶವದೊಂದಿಗೆ 10 ದಿನ ಕಳೆದ ಮಾನಸಿಕ ಅಸ್ವಸ್ಥ ಪತ್ನಿ
ಪತಿಯ ಮೃತದೇಹದೊಂದಿಗೆ ಪತ್ನಿ 10 ದಿನ ಕಳೆದ ಕರುಣಾಜನಕ ಘಟನೆ ಮೂಡಿಗೆರೆಯ ಬಣಕಲ್‌ನಲ್ಲಿ ನಡೆದಿದೆ. ಮಾನಸಿಕ ಅಸ್ವಸ್ಥ ಪತ್ನಿಗೆ ಪತಿ ಸಿರಿಲ್ ಮೋನಿಸ್ ಮೃತಪಟ್ಟಿರುವುದು ತಿಳಿಯದೆ ಶವದೊಂದಿಗೇ ಕಾಲ ಕಳೆದಿದ್ದಾರೆ.
ಪತಿ ಮೃತಪಟ್ಟಿರುವುದರ ಅರಿವೇ ಇಲ್ಲದೆ, ಮಾನಸಿಕ ಅಸ್ವಸ್ಥ ಪತ್ನಿ ಕೊಳೆತ ಮೃತದೇಹದ ಜೊತೆಗೆ ಸುಮಾರು ಹತ್ತು ದಿನಗಳ ಕಾಲ ಕಳೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಬೆಳಕಿಗೆ ಬಂದಿದೆ. ಕೊಟ್ಟಿಗೆಹಾರದ ಬಣಕಲ್ ಎಂಬಲ್ಲಿ ಈ ಘಟನೆ ನಡೆದಿದ್ದು, ಬುಧವಾರ ಮಧ್ಯಾಹ್ನ ಮೃತದೇಹ ಪತ್ತೆಯಾದ ಬಳಿಕ ಇಡೀ ಪ್ರಕರಣ ತಿಳಿದಿದೆ.
ಇಲ್ಲಿನ ನಿವಾಸಿ 77 ವರ್ಷದ ಸಿರಿಲ್ ಮೋನಿಸ್ ಅವರು ಕಳೆದ 10 ದಿನಗಳ ಹಿಂದೆ ಅನಾರೋಗ್ಯದ ಕಾರಣ ಮನೆಯೊಳಗೆ ಮಲಗಿದ್ದಲ್ಲೇ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಆದರೆ ಮನೆಯಲ್ಲಿದ್ದ ಅವರ ಪತ್ನಿ ಮಾನಸಿಕವಾಗಿ ಅಸ್ವಸ್ಥರಾಗಿದ್ದರಿಂದ, ಪತಿ ಮೃತಪಟ್ಟಿದ್ದಾರೆ ಎಂಬ ವಿಷಯ ಅವರಿಗೆ ತಿಳಿದೇ ಇರಲಿಲ್ಲ.
ಹಲವು ದಿನಗಳಿಂದ ಮನೆಯ ಒಳಗಿನಿಂದ ವಿಪರೀತ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಸಂಶಯಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಮನೆಯ ಬಾಗಿಲು ತೆರೆದಾಗ ಪತಿಯ ಕೊಳೆತ ಮೃತದೇಹದ ಪಕ್ಕದಲ್ಲೇ ಪತ್ನಿ ಕುಳಿತಿರುವುದು ಕಂಡುಬಂದಿದೆ. ಮೃತದೇಹವು ಸಂಪೂರ್ಣವಾಗಿ ಕೊಳೆತು ಹೋಗಿದ್ದು, ಕಳೆದ ಹತ್ತು ದಿನಗಳಿಂದ ಮಹಿಳೆ ಪತಿಯ ಹೆಣದೊಂದಿಗೇ ವಾಸವಾಗಿದ್ದರು ಎಂಬ ವಿಷಯ ಕೇಳಿ ಸ್ಥಳೀಯರು ಮರುಗಿದ್ದಾರೆ.
ಪೊಲೀಸರು ಸ್ಥಳಕ್ಕೆ ಬಂದಾಗಲೂ ಮಾನಸಿಕ ಅಸ್ವಸ್ಥ ಪತ್ನಿ ನನ್ನ ಗಂಡ ನನಗೆ ಬೇಕು ಎಂದು ಪಟ್ಟು ಹಿಡಿದು ಶವವನ್ನು ಮುಟ್ಟಲು ಬಿಡದೆ ರೋಧಿಸಿದ್ದರು ಎನ್ನಲಾಗಿದೆ. ಸಮಾಜ ಸೇವಕ ಆರೀಫ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಲು ನೆರವಾಗಿದ್ದಾರೆ.
ಮೃತ ಸಿರಿಲ್ ಮೋನಿಸ್ ಅವರಿಗೆ ಇಬ್ಬರು ಮಕ್ಕಳಿದ್ದು, ಮಗ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೆ, ಮಗಳು ದುಬೈನಲ್ಲಿ ಶಿಕ್ಷಕಿಯಾಗಿದ್ದಾರೆ. ಮಗ ನಿತ್ಯ ತಾಯಿಗೆ ಫೋನ್ ಮಾಡಿ ವಿಚಾರಿಸಿದಾಗಲೆಲ್ಲಾ ಅಪ್ಪ ಚೆನ್ನಾಗಿದ್ದಾರೆ ಎಂದು ತಾಯಿ ಉತ್ತರಿಸುತ್ತಿದ್ದರು. ಇತ್ತೀಚೆಗಷ್ಟೇ ಊರಿಗೆ ಬಂದು ಅಪ್ಪನನ್ನ ಆಸ್ಪತ್ರೆಗೆ ದಾಖಲಿಸುವಂತೆ ಹೇಳಿ ಹೋಗಿದ್ದರು ಎನ್ನಲಾಗಿದೆ.
ಸದ್ಯ ಅವರ ಅಂತ್ಯಕ್ರಿಯೆಯನ್ನು ಬಣಕಲ್ ಕ್ರೈಸ್ತ ಸ್ಮಶಾನದಲ್ಲಿ ನಡೆಯಿತು. ಪತ್ನಿ ಮಾನಸಿಕ ಅಸ್ವಸ್ಥೆ ಮತ್ತೊಂದೆಡೆ ದೂರದೂರಿನಲ್ಲಿರುವ ಮಕ್ಕಳು... ಹೀಗಾಗಿ ಸ್ಥಳೀಯರೇ ಮೃತನ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

