
ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಪ್ರಕರಣದಲ್ಲಿ ಪತಿ ಮಹೇಂದ್ರ ರೆಡ್ಡಿಯ "ನಾನೇ ಕೊಂದೆ" ಎಂಬ ತಪ್ಪೊಪ್ಪಿಗೆ ಸಂದೇಶ ಪತ್ತೆ.
Doctor Kruthika Reddy murder|"ನಾನೇ ಕೊಂದೆ..." ಹಂತಕ ಪತಿಯ ಮೆಸೇಜ್ ರಿಟ್ರೀವ್
ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಪ್ರಕರಣದಲ್ಲಿ ಪತಿ ಮಹೇಂದ್ರ ರೆಡ್ಡಿಯ ನಾನೇ ಕೊಂದೆ ಎಂಬ ತಪ್ಪೊಪ್ಪಿಗೆ ಸಂದೇಶ ಪತ್ತೆ. ಅರಿವಳಿಕೆ ಮದ್ದು ನೀಡಿ ಹತ್ಯೆಗೈದ ಆರೋಪಿಯ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.
ಬೆಂಗಳೂರಿನ ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ಕೃತಿಕಾ ಸಾವನ್ನು ಸಹಜ ಸಾವು ಎಂದು ಬಿಂಬಿಸಲು ಪತಿ ಮಹೇಂದ್ರ ರೆಡ್ಡಿ ನಡೆಸಿದ್ದ ವ್ಯವಸ್ಥಿತ ಸಂಚನ್ನು ಪೊಲೀಸರು ಡಿಜಿಟಲ್ ಸಾಕ್ಷ್ಯಗಳ ಮೂಲಕ ಬಯಲಿಗೆಳೆದಿದ್ದಾರೆ.
ವೃತ್ತಿಯಲ್ಲಿ ಶಸ್ತ್ರಚಿಕಿತ್ಸಕನಾಗಿರುವ ಡಾ. ಮಹೇಂದ್ರ ರೆಡ್ಡಿ, ತನ್ನ ಪತ್ನಿಯ ಹತ್ಯೆಯ ನಂತರ ಪೊಲೀಸರನ್ನು ಹಾದಿತಪ್ಪಿಸಲು ಮತ್ತು ಸಾಕ್ಷ್ಯ ನಾಶಪಡಿಸಲು ಮುಂದಾಗಿದ್ದ ಎಂಬ ಆಘಾತಕಾರಿ ಅಂಶ ತನಿಖೆಯಲ್ಲಿ ದೃಢಪಟ್ಟಿದೆ. ಪೊಲೀಸರು ಮಹೇಂದ್ರ ರೆಡ್ಡಿಯ ಮೊಬೈಲ್ ಫೋನ್ ಮತ್ತು ಹಣಕಾಸು ಸಂಬಂಧಿತ ಅಪ್ಲಿಕೇಶನ್‌ಗಳನ್ನು ಪರಿಶೀಲಿಸಿದಾಗ ಹತ್ತು ಲಕ್ಷಕ್ಕೂ ಅಧಿಕ ಡಿಜಿಟಲ್ ಫೈಲ್‌ಗಳು ಲಭ್ಯವಾಗಿವೆ.
ಈ ಪೈಕಿ ಆತ ತನ್ನ ಪ್ರಿಯತಮೆಗೆ ಕಳುಹಿಸಿದ್ದ ಸಂದೇಶವೊಂದು ಪ್ರಕರಣಕ್ಕೆ ದೊಡ್ಡ ತಿರುವು ನೀಡಿದೆ. "ಈ ಸಂದೇಶ ನೋಡಿದ ನಂತರ ನನಗೆ ಕರೆ ಅಥವಾ ಮೆಸೇಜ್ ಮಾಡಬೇಡ. ಎಲ್ಲವೂ ಸರಿಯಾದ ಮೇಲೆ ನಾನೇ ಸಂಪರ್ಕಿಸುತ್ತೇನೆ. ಒಂದು ವೇಳೆ ಪೊಲೀಸರು ವಿಚಾರಿಸಿದರೆ ನಾವು ಕೇವಲ ಸ್ನೇಹಿತರು ಎಂದು ಹೇಳು. ಪದೇ ಪದೇ ಕರೆ ಮಾಡಿರುವ ಬಗ್ಗೆ ಕೇಳಿದರೆ, ಸಹಾಯಕ್ಕಾಗಿ ಕರೆ ಮಾಡಿದ್ದೆ ಎಂದು ತಿಳಿಸು" ಎಂದು ಆತ ಸೂಚನೆ ನೀಡಿದ್ದ ಎನ್ನಲಾಗಿದೆ.
ಇಷ್ಟೇ ಅಲ್ಲದೆ, ತನ್ನ ತಪ್ಪೊಪ್ಪಿಗೆಯ ಬಗ್ಗೆಯೂ ಆತ ಸಂದೇಶವೊಂದನ್ನು ರವಾನಿಸಿದ್ದಾನೆ ಎನ್ನಲಾಗಿದ್ದು, ಅದರಲ್ಲಿ "ನಾನು ಕೃತಿಕಾಳನ್ನು ಕೊಂದಿದ್ದೇನೆ ಎಂದು ಶೀಘ್ರದಲ್ಲೇ ಅವಳ ಪೋಷಕರಿಗೆ ಮತ್ತು ನನ್ನ ಪೋಷಕರಿಗೆ ತಿಳಿಸುತ್ತೇನೆ. ನಾನು ಜೈಲಿಗೆ ಹೋಗುತ್ತೇನೆ, ಕೊಲೆಗಾರ ಎಂದಿಗೂ ಸುಖವಾಗಿರಲು ಸಾಧ್ಯವಿಲ್ಲ, ನಾನು ಹಾಗೆಯೇ ಬದುಕುತ್ತೇನೆ" ಎಂದು ಬರೆದುಕೊಂಡಿದ್ದ ಎನ್ನಲಾಗಿದೆ. ಈ ಸಂದೇಶವೇ ಈಗ ಆರೋಪಿಯ ವಿರುದ್ಧದ ಪ್ರಬಲ ಸಾಕ್ಷ್ಯವಾಗಿ ಪರಿಣಮಿಸಿದೆ.
ಇನ್ನೊಂದು ಸಂದೇಶದಲ್ಲಿ ʻʻನಾನು ಇದನ್ನು ಇಲ್ಲಿಗೆ ಕೊನೆಗೊಳಿಸುತ್ತಿದ್ದೇನೆ, ಹೋಗಿ ನೀನು ಆರಾಮವಾಗಿರು. ನೀನು ಬಯಸಿದಂತೆ ನಾನು ಖುಷಿಯಾಗಿದ್ದು, ಸಾಯುತ್ತೇನೆ. ಕೊಲೆಗಾರ ಎಂದಿಗೂ ಸಂತೋಷವಾಗಿರಲು ಸಾಧ್ಯವಿಲ್ಲ. ನಾನು ಕೊಲೆಗಾರನಾಗಿಯೇ ಜೀವನವನ್ನು ನಡೆಸುತ್ತೇನೆʼʼ ಎಂದು ಬರೆದುಕೊಂಡಿದ್ದಾನೆ ಎಂದು ತಿಳಿದುಬಂದಿದೆ.
10.34 ಲಕ್ಷಕ್ಕೂ ಹೆಚ್ಚು ಡಿಜಿಟಲ್ ಫೈಲ್
ಫೋರೆನ್ಸಿಕ್ ತಂಡಗಳು ವಶಪಡಿಸಿಕೊಂಡ ಸಾಧನಗಳಿಂದ ಬೃಹತ್ ಪ್ರಮಾಣದ ಡೇಟಾವನ್ನು ಪರಿಶೀಲಿಸಿವೆ. ಇದುವರೆಗೆ 10.34 ಲಕ್ಷಕ್ಕೂ ಹೆಚ್ಚು ಡಿಜಿಟಲ್ ಫೈಲ್‌ಗಳನ್ನು ವಿಶ್ಲೇಷಿಸಲಾಗಿದ್ದು, ಇದರಲ್ಲಿ ಫೋನ್ ಪೇ ಅಪ್ಲಿಕೇಶನ್‌ನ 485 ಚಾಟ್ ರೆಕಾರ್ಡ್‌ಗಳು ಮತ್ತು ಹಲವಾರು ಡಿಲೀಟ್ ಮಾಡಲಾದ ಸಂದೇಶಗಳನ್ನು ರಿಟ್ರೀವ್ ಮಾಡಲಾಗಿದೆ. ಆರೋಪಿಯ ಸಂಚಾರ, ಸಂವಹನ ಮಾದರಿಗಳು ಮತ್ತು ಹಣಕಾಸಿನ ವಹಿವಾಟುಗಳನ್ನು ಪತ್ತೆಹಚ್ಚಲು ಈ ಡೇಟಾವನ್ನು ಬಳಸಲಾಗುತ್ತಿದೆ.
ಆರಂಭದಲ್ಲಿ ಕೃತಿಕಾ ಅವರದ್ದು ಸಹಜ ಸಾವು ಎಂದು ಭಾವಿಸಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಆಕೆಯ ದೇಹದಲ್ಲಿ 'ಪ್ರೊಪೋಫೋಲ್' ಎಂಬ ಅರಿವಳಿಕೆ ಮದ್ದು ಪತ್ತೆಯಾದ ನಂತರ ಪ್ರಕರಣವು ಕೊಲೆ ತನಿಖೆಯಾಗಿ ಬದಲಾಯಿತು. ವೈದ್ಯಕೀಯ ಜ್ಞಾನವಿದ್ದ ಮಹೇಂದ್ರ ರೆಡ್ಡಿ, ಚಿಕಿತ್ಸೆ ನೀಡುವ ನೆಪದಲ್ಲಿ ಮಿತಿಮೀರಿದ ಡೋಸ್ ನೀಡಿ ಪತ್ನಿಯನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದರು. ಸದ್ಯ ಈ ಪ್ರಕರಣವನ್ನು ಭಾರತೀಯ ನ್ಯಾಯ ಸಂಹಿತೆಯಡಿ ದಾಖಲಿಸಿಕೊಳ್ಳಲಾಗಿದ್ದು, ಮಹೇಂದ್ರ ರೆಡ್ಡಿಯ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಆರೋಪಿಯ ಹಿನ್ನೆಲೆ ಮತ್ತು ಈ ಹಿಂದೆ ಆತನ ಕುಟುಂಬದ ಮೇಲಿದ್ದ ಕ್ರಿಮಿನಲ್ ಪ್ರಕರಣಗಳ ಬಗ್ಗೆಯೂ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯೆಯಾಗಿದ್ದ ಪತ್ನಿಗೆ ಅದೇ ಆಸ್ಪತ್ರೆಯಲ್ಲಿ ವೈದ್ಯನಾಗಿದ್ದ ಪತಿ, ಇಂಜೆಕ್ಷನ್ ನೀಡಿ ಕೊಲೆ ಮಾಡಿದ್ದ ಸಂಗತಿ ಆರು ತಿಂಗಳ ಬಳಿಕ ತನಿಖೆಯಿಂದ ಬಯಲಾಗಿತ್ತು. ಡಾ.ಮಹೇಂದ್ರರೆಡ್ಡಿ ಮತ್ತು ಡಾ.ಕೃತಿಕಾರೆಡ್ಡಿ ದಂಪತಿಗೆ 2024ರ ಮೇ 26ರಂದು ವಿವಾಹವಾಗಿತ್ತು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚರ್ಮರೋಗ ತಜ್ಞೆಯಾಗಿದ್ದ ಡಾ.ಕೃತಿಕಾರೆಡ್ಡಿ ಅವರು ಅಜೀರ್ಣ, ಗ್ಯಾಸ್ಟ್ರಿಕ್, ಲೋ ಶುಗರ್‌ನಂತಹ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಇದನ್ನು ಮುಚ್ಚಿಟ್ಟ ಕುಟುಂಬದವರು ಅದೇ ಆಸ್ಪತ್ರೆಯಲ್ಲಿ ಜನರಲ್ ಸರ್ಜನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಡಾ.ಮಹೇಂದ್ರರೆಡ್ಡಿ ಎಂಬುವರೊಂದಿಗೆ ಮದುವೆ ಮಾಡಿಸಿದ್ದರು.
ಮದುವೆ ನಂತರ ಪತ್ನಿಗೆ ಆರೋಗ್ಯ ಸಮಸ್ಯೆಗಳಿರುವುದು ಪತಿಗೆ ಗೊತ್ತಾಗಿತ್ತು. ಪ್ರತಿದಿನ ವಾಂತಿ ಮತ್ತು ಇತರೆ ಸಮಸ್ಯೆಗಳಿಂದ ಬಳಲುತ್ತಿದ್ದ ಪತ್ನಿಯನ್ನು ಕೊಲೆ ಮಾಡಲು ಪತಿ ಮಹೇಂದ್ರರೆಡ್ಡಿ ಯೋಜನೆ ರೂಪಿಸಿದ್ದ. ಕೃತಿಕಾ ರೆಡ್ಡಿ ಅನಾರೋಗ್ಯದಿಂದ ತವರುಮನೆಯಲ್ಲಿ ಮಲಗಿದ್ದಾಗ ಅಲ್ಲಿಗೆ ಬಂದ ಮಹೇಂದ್ರರೆಡ್ಡಿ, ಆಕೆಗೆ ಐವಿ ಇಂಜೆಕ್ಷನ್ ಮೂಲಕ ಎರಡು ದಿನಗಳ ಕಾಲ ಔಷಧ ನೀಡಿದ್ದ. ನಂತರ ಜ್ಞಾನ ತಪ್ಪಿದ್ದ ಕೃತಿಕಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಡಾ. ಕೃತಿಕಾರೆಡ್ಡಿ ಮೃತಪಟ್ಟಿದ್ದರು. ಆದರೆ, ಡಾ. ಮಹೇಂದ್ರ ರೆಡ್ಡಿ ಇದನ್ನು ಸಹಜ ಸಾವು ಎಂದು ಹೇಳಿ ಕುಟುಂಬದವರನ್ನು ನಂಬಿಸಿದ್ದರು.
ಆರಂಭದಲ್ಲಿ ಪೊಲೀಸರು ಇದನ್ನು ಅಸ್ವಾಭಾವಿಕ ಸಾವು ಎಂದು ದಾಖಲಿಸಿಕೊಂಡಿದ್ದರು. ಆದರೆ ಆಕೆಯ ಸಹೋದರಿ ನಿಕಿತಾ ಎಂ. ರೆಡ್ಡಿ ಅನುಮಾನ ವ್ಯಕ್ತಪಡಿಸಿ ತನಿಖೆಗೆ ಒತ್ತಾಯಿಸಿದರು. ತಿಂಗಳುಗಳ ನಂತರ, ಫೋರೆನ್ಸಿಕ್ ವರದಿಯು ಕೃತಿಕಾ ಅವರ ದೇಹದ ಅಂಗಗಳಲ್ಲಿ 'ಪ್ರೊಪೊಫೋಲ್' ಅಂಶ ಇರುವುದನ್ನು ದೃಢಪಡಿಸಿತ್ತು. ಇದರಿಂದಾಗಿ ಪ್ರಕರಣವನ್ನು ಕೊಲೆ ಎಂದು ಮರು ವರ್ಗೀಕರಿಸಿ, ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಲಾಗಿತ್ತು.

