
ಅಲ್ಪಾಯುಷಿ ಎಂದ ಜ್ಯೋತಿಷಿ- ಹಸೆಮಣೆ ಏರಬೇಕಿದ್ದ ಯುವತಿ ನೇಣಿಗೆ ಶರಣು
"ನೀನು ಅಲ್ಪಾಯುಷಿ" ಎಂದು ಜೋತಿಷಿ ನುಡಿದಿದ್ದ ಭವಿಷ್ಯದಿಂದ ತೀವ್ರ ಆತಂಕಕ್ಕೊಳಗಾದ ಬೆಂಗಳೂರಿನ ವಿದ್ಯಾಜ್ಯೋತಿ ಎಂಬ ಯುವತಿ ನೇಣಿಗೆ ಶರಣಾಗಿದ್ದಾಳೆ.
ಪ್ರೀತಿಯ ಮದುವೆಗೆ ಎರಡೂ ಮನೆಯವರು ಸಮ್ಮತಿಸಿ, ಇನ್ನೇನು ಹಸೆಮಣೆ ಏರಲು ಸಿದ್ಧವಾಗುತ್ತಿದ್ದ ಯುವತಿಯೊಬ್ಬಳು ಜ್ಯೋತಿಷಿಯೊಬ್ಬರ ಭವಿಷ್ಯವಾಣಿಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಬೆಂಗಳೂರಿನ ಎಂಇಐ (MEI) ಲೇಔಟ್‌ನಲ್ಲಿ ಸಂಭವಿಸಿದೆ. ವಿದ್ಯಾಜ್ಯೋತಿ (29)ಮೃತಪಟ್ಟ ದುರ್ದೈವಿ.
ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದ ವಿದ್ಯಾಜ್ಯೋತಿ, ಮನೆಯಿಂದಲೇ ಕೆಲಸ ಮಾಡುತ್ತಿದ್ದಳು. ಕೊಡಗು ಮೂಲದ ಯುವಕನನ್ನು ವಿದ್ಯಾಜ್ಯೋತಿ ಪ್ರೀತಿಸುತ್ತಿದ್ದಳು. ಮಗಳ ಪ್ರೀತಿಗೆ ಒಪ್ಪಿಗೆ ನೀಡಿದ್ದ ಪೋಷಕರು, ಹುಡುಗನ ಮನೆಯವರೊಂದಿಗೆ ಮಾತನಾಡಿ ಮದುವೆ ನಿಶ್ಚಯಿಸಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ಮದುವೆ ನಡೆಯಬೇಕಿತ್ತು.
ಏನಿದು ಘಟನೆ?
ಮದುವೆಗೂ ಮುನ್ನ ಭವಿಷ್ಯ ಕೇಳಲು ಹೋದಾ ವಿದ್ಯಾಜ್ಯೋತಿ, "ನೀನು ಅಲ್ಪಾಯುಷಿ" ಎಂದು ಜ್ಯೋತಿಷಿಯೊಬ್ಬರು ಹೇಳಿದ್ದರು. ಈ ಮಾತಿನಿಂದ ಯುವತಿ ತೀವ್ರ ಆತಂಕಕ್ಕೆ ಒಳಗಾಗಿದ್ದಳು. ಇದಕ್ಕೆ ಪರಿಹಾರವಾಗಿ 9 ದಿನಗಳ ಕಾಲ ವಿಶೇಷ ಪೂಜೆ ಮಾಡುವಂತೆ ಜ್ಯೋತಿಷಿ ಸೂಚಿಸಿದ್ದರು. ಅದರಂತೆ ಕುಟುಂಬದವರು ಪೂಜೆ ನೆರವೇರಿಸುತ್ತಿದ್ದರು. ಪೂಜೆಯ ಕೊನೆಯ ದಿನವಾಗಿದ್ದ ಶುಕ್ರವಾರ ಸಂಜೆ ಮಾರಮ್ಮ ದೇವಸ್ಥಾನಕ್ಕೆ ತೆರಳಿ ದೇವಿಗೆ 'ತಾಳಿ' ಸಮರ್ಪಿಸುವ ಹರಕೆ ಇತ್ತು. ಈ ವೇಳೆ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಎಂದಿನಂತೆ ಊಟ ಮುಗಿಸಿದ ವಿದ್ಯಾಜ್ಯೋತಿ ತನ್ನ ಕೋಣೆಗೆ ತೆರಳಿ ಕೆಲಸದಲ್ಲಿ ನಿರತಳಾಗಿದ್ದಳು. ಮನೆಯವರು ಆಕೆ ಕಚೇರಿ ಕೆಲಸ ಮಾಡುತ್ತಿರಬಹುದು ಎಂದು ಭಾವಿಸಿದ್ದರು. ಆದರೆ, ಎಷ್ಟೆ ಕರೆದರೂ ವಿದ್ಯಾಜ್ಯೋತಿ ಪ್ರತಿಕ್ರಿಯಿಸಿರಲಿಲ್ಲ. ಕೆಲಸದ ಒತ್ತಡವಿರಬಹುದು ಎಂದು ಪೋಷಕರು ಸುಮ್ಮನಾಗಿದ್ದರು.
ರಾತ್ರಿ 8 ಗಂಟೆ ಸುಮಾರಿಗೆ ದೇವಸ್ಥಾನಕ್ಕೆ ಹೋಗುವ ಸಮಯವಾದಾಗ ತಾಯಿ ಮಗಳನ್ನು ಪದೇ ಪದೇ ಕರೆದಿದ್ದಾರೆ. ಎಷ್ಟು ಕರೆದರೂ ಒಳಗಿನಿಂದ ಉತ್ತರ ಬಾರದಿದ್ದಾಗ ಅನುಮಾನಗೊಂಡ ತಾಯಿ, ಕಿಟಕಿಯ ಮೂಲಕ ಇಣುಕಿ ನೋಡಿದ್ದಾರೆ. ಈ ವೇಳೆ ವಿದ್ಯಾಜ್ಯೋತಿ ತನ್ನ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಸ್ಥಳಕ್ಕೆ ಬಾಗಲಗುಂಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಜ್ಯೋತಿಷಿಯ ಮಾತು ಯುವತಿಯ ಮನಸ್ಸಿನ ಮೇಲೆ ಎಂತಹ ಪರಿಣಾಮ ಬೀರಿದೆ ಎಂಬುದು ತನಿಖೆಯಿಂದ ತಿಳಿಯಬೇಕಿದೆ. ಮದುವೆಯ ಸಂಭ್ರಮದಲ್ಲಿದ್ದ ಮನೆಯಲ್ಲಿ ಈಗ ಮಗಳ ಸಾವಿನ ಆಕ್ರಂದನ ಮುಗಿಲು ಮುಟ್ಟಿದೆ.

