
ತಲೆಬುರುಡೆ ರಹಸ್ಯ ಬಯಲು: ಎಟಿಎಂ ಕಾರ್ಡ್, ಶರ್ಟ್ ಲೇಬಲ್‌ನಿಂದ ನಿಗೂಢ ಸಾವು ಪತ್ತೆ!
ದೊಡ್ಡಬಳ್ಳಾಪುರದ ನಿರ್ಜನ ಪ್ರದೇಶದಲ್ಲಿ ಪತ್ತೆಯಾದ ತಲೆಬುರುಡೆ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು, ಐದು ತಿಂಗಳ ಹಳೆಯ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣವನ್ನು ಭೇದಿಸಿದ್ದಾರೆ.
ಸಾಕ್ಷ್ಯಗಳಿಲ್ಲದೆ ಕಗ್ಗಂಟಾಗಿದ್ದ ತಲೆ ಬುರುಡೆ ಪತ್ತೆ ಪ್ರಕರಣವನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಮರದ ಮೇಲೆ ನೇತಾಡುತ್ತಿದ್ದ ಕೇವಲ ಒಂದು ತಲೆ ಬುರುಡೆಯಿಂದ ಆರಂಭವಾದ ತನಿಖೆ, ಅಂತಿಮವಾಗಿ ಕಾಣೆಯಾಗಿದ್ದ ವ್ಯಕ್ತಿಯೊಬ್ಬನ ದುರಂತ ಅಂತ್ಯವನ್ನು ಬಯಲು ಮಾಡಿದೆ.
ಭಯ ಹುಟ್ಟಿಸಿದ ತಲೆಬುರುಡೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ 'ರೆಸೋನೆಸ್ಸ್ ಲ್ಯಾಬೋರೇಟರಿಸ್' ಕಂಪನಿಯ ಆವರಣದಲ್ಲಿರುವ ನಿರ್ಜನ ಪ್ರದೇಶದಲ್ಲಿ ಕಳೆದ ಗುರುವಾರ (ಫೆ.19 ) ಅನಾಥ ಶವದ ಅವಶೇಷಗಳು ಪತ್ತೆಯಾಗಿದ್ದವು. ಅಲ್ಲಿನ ಹೊಂಗೆ ಮರದಲ್ಲಿ ತಲೆಬುರುಡೆ ನೇತಾಡುತ್ತಿದ್ದುದನ್ನು ಕಂಡ ಸಾರ್ವಜನಿಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಗ್ರಾಮಾಂತರ ಠಾಣಾ ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡಿದಾಗ ಪೊಲೀಸರ ಮುಂದೆ ದೊಡ್ಡ ಸವಾಲಾಗಿತ್ತು. ಅಲ್ಲಿ ಕೇವಲ ತಲೆಬುರುಡೆ ಮಾತ್ರ ಇತ್ತು, ದೇಹದ ಉಳಿದ ಭಾಗಗಳು ಇರಲಿಲ್ಲ. ಘಟನೆ ನಡೆದ ಸ್ಥಳವು ಸುಮಾರು 8 ಎಕರೆ ವಿಶಾಲವಾದ ಅರಣ್ಯ ಪ್ರದೇಶವಾಗಿದ್ದರಿಂದ ಆರಂಭದಲ್ಲಿ ಯಾವುದೋ ಕ್ಷುದ್ರ ಪೂಜೆ ಅಥವಾ ಮಾಟ-ಮಂತ್ರದ ಕೃತ್ಯವಿರಬಹುದು ಎಂದು ಶಂಕಿಸಲಾಗಿತ್ತು.
ಹೀಗಾಗಿ, ಯಾವುದೇ ಕುರುಹು ಇಲ್ಲದೆ ಕೇವಲ ತಲೆಬುರುಡೆ ಇಟ್ಟುಕೊಂಡು ತನಿಖೆಗೆ ಇಳಿದ ಪೊಲೀಸರಿಗೆ ಇದು ಸವಾಲು ತಂದೊಡ್ಡಿತ್ತು. ಶೂ ಲೇಸ್‌ಗಳಿಂದ ಕುತ್ತಿಗೆ ಬಿಗಿದುಕೊಂಡಿರುವುದು ಗೊತ್ತಾದರೂ ಕೇವಲ ಶೂ ಲೇಸ್‌ನಿಂದ ಇದು ಸಾಧ್ಯವೇ ಎಂಬ ಅನುಮಾನವೂ ಮೂಡಿತ್ತು. ಬುರುಡೆ ಸಿಕ್ಕ ಸ್ಥಳದ ಸುತ್ತ ಹುಡುಕಾಟ ನಡೆಸಿದಾಗ ಮೊದಲು ಮಣ್ಣಿನಲ್ಲಿ ಅರ್ಧ ಹೂತು ಹೋಗಿದ್ದ ಸ್ಥಿತಿಯಲ್ಲಿ ಶರ್ಟ್ ಸಿಕ್ಕಿತ್ತು. ನಂತರ ಪ್ಯಾಂಟ್ ಕೂಡ ಸಿಕ್ಕಿತ್ತು. ಅನತಿ ದೂರದಲ್ಲಿ ಲೇಸ್‌ಗಳಿಲ್ಲದ ಶೂಗಳು ಪತ್ತೆಯಾಗಿದ್ದವು.
ಸುಳಿವು ನೀಡಿದ ಶರ್ಟ್ ಲೇಬಲ್
ಪತ್ತೆಯಾದ ಶರ್ಟ್ ಕೊರಳ ಪಟ್ಟಿಯಲ್ಲಿ 'ಶಾರದಾ ಎಂಟರ್‌ಪ್ರೈಸಸ್' ಎಂಬ ಲೇಬಲ್ ಇತ್ತು. ಪೊಲೀಸರು ತಕ್ಷಣವೇ ಈ ಕಂಪನಿಯನ್ನು ಸಂಪರ್ಕಿಸಿ ವಿಚಾರಿಸಿದಾಗ, ಇದು ಸೆಕ್ಯೂರಿಟಿ ಗಾರ್ಡ್‌ಗಳಿಗೆ ನೀಡುವ ಸಮವಸ್ತ್ರ ಎಂಬುದು ತಿಳಿದುಬಂದಿತು. ಆ ಸಮಯದಲ್ಲಿ ಕಂಪನಿಯಿಂದ ನಾಪತ್ತೆಯಾಗಿದ್ದ ಸಿಬ್ಬಂದಿಗಳ ಪಟ್ಟಿಯನ್ನು ಪೊಲೀಸರು ಸಿದ್ಧಪಡಿಸಿಕೊಂಡರು.
ಪತ್ತೆಯಾದ ಪ್ಯಾಂಟ್ ಅನ್ನು ಕೂಲಂಕಷವಾಗಿ ತಪಾಸಣೆ ನಡಿಸಿದಾಗ ಜೇಬಿನಲ್ಲಿ ಯೂನಿಯನ್ ಬ್ಯಾಂಕ್‌ಗೆ ಸೇರಿದ ಎಟಿಎಂ ಕಾರ್ಡ್ ಪತ್ತೆಯಾಯಿತು. ಈ ಕಾರ್ಡ್ ಆಧರಿಸಿ ಬ್ಯಾಂಕ್‌ನಿಂದ ಮಾಹಿತಿ ಪಡೆದಾಗ ಅದು ಕೊಳತೂರು ಗ್ರಾಮದ ನಿವಾಸಿ ಸಿದ್ದರಾಜು (46) ಎಂಬುವವರಿಗೆ ಸೇರಿದ್ದು ಎಂಬುದು ದೃಢಪಟ್ಟಿತು. ಸಿದ್ದರಾಜು ಕಳೆದ ನಾಲ್ಕೈದು ತಿಂಗಳಿನಿಂದ ನಾಪತ್ತೆಯಾಗಿದ್ದರೂ, ಕುಟುಂಬದವರು ಎಲ್ಲೋ ಕೆಲಸಕ್ಕೆ ಹೋಗಿರಬಹುದು ಎಂದು ಭಾವಿಸಿ ಪೊಲೀಸರಿಗೆ ದೂರು ನೀಡಿರಲಿಲ್ಲ. ನಂತರ ಸಿದ್ದರಾಜು ಅವರ ಪತ್ನಿಯು ಬಟ್ಟೆ ಮತ್ತು ಶೂಗಳ ಮೂಲಕ ಅದು ತನ್ನ ಪತಿಯೇ ಎಂದು ಗುರುತಿಸಿದರು.
ಸಿದ್ದರಾಜು ಸುಮಾರು 5 ತಿಂಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಮೃತದೇಹ ಕೊಳೆತು ಹೋಗಿತ್ತು. ಮಳೆ ಮತ್ತು ಗಾಳಿಯಿಂದಾಗಿ ದೇಹದ ಭಾಗಗಳು ಜಾರಿ ಕೆಳಗೆ ಬಿದ್ದು ಮಣ್ಣು ಪಾಲಾಗಿದ್ದವು. ಪೊಲೀಸರು ಜೆಸಿಬಿ ಸಹಾಯದಿಂದ ಆ ಭಾಗದಲ್ಲಿ ಮಣ್ಣನ್ನು ಅಗೆಸಿದಾಗ ಸಿದ್ದರಾಜು ಅವರ ಅಸ್ಥಿಪಂಜರದ ಉಳಿದ ಮೂಳೆಗಳು ಪತ್ತೆಯಾದವು.
ಸಿದ್ದರಾಜು ತೀವ್ರ ಕುಡಿತದ ಚಟಕ್ಕೆ ದಾಸರಾಗಿದ್ದರು. ಕೌಟುಂಬಿಕ ಕಲಹದಿಂದಾಗಿ ಮನೆಯವರಿಂದ ದೂರ ಉಳಿದಿದ್ದರು. ಇದೇ ಮಾನಸಿಕ ಒತ್ತಡದಲ್ಲಿ ಅವರು ನಿರ್ಜನ ಪ್ರದೇಶಕ್ಕೆ ಬಂದು ಶೂ ಲೇಸ್‌ಗಳನ್ನೇ ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ.

