
ಐಟಿ ನಗರಿ ಬೆಂಗಳೂರಿನಲ್ಲಿ ರೋಡ್ ರೇಜ್ ಪ್ರಕರಣಗಳು ಮಿತಿಮೀರುತ್ತಿದ್ದು, ಕಚೇರಿಗೆ ತೆರಳುತ್ತಿದ್ದ ವ್ಯಕ್ತಿಯೊಬ್ಬರ ಕಾರು ಅಡ್ಡಗಟ್ಟಿ ಮನಬಂದಂತೆ ಹಲ್ಲೆ ನಡೆಸಿರುವ ಘಟನೆ ನಗರದ ಬ್ರೂಕ್‌ಫೀಲ್ಡ್ ಬಳಿ ವರದಿಯಾಗಿದೆ.
ಬೆಂಗಳೂರಲ್ಲಿ ರೋಡ್ ರೇಜ್: ಕಚೇರಿಗೆ ತೆರಳುತ್ತಿದ್ದವರ ಮೇಲೆ ದೆಹಲಿ ಮೂಲದ ದುಷ್ಕರ್ಮಿಗಳಿಂದ ಹಲ್ಲೆ
ಕೃತ್ಯಕ್ಕೆ ಬಳಸಲಾದ ಈ ಕಾರಿನ ಮೇಲೆ ಈಗಾಗಲೇ ಹದಿನೈದಕ್ಕೂ ಹೆಚ್ಚು ಸಂಚಾರ ನಿಯಮ ಉಲ್ಲಂಘನೆ ಹಾಗೂ ಇತರ ಪ್ರಕರಣಗಳು ದಾಖಲಾಗಿವೆ ಎಂಬ ಅಂಶ ಬೆಳಕಿಗೆ ಬಂದಿದೆ.
ಐಟಿ ನಗರಿ ಬೆಂಗಳೂರಿನಲ್ಲಿ ರೋಡ್ ರೇಜ್ ಪ್ರಕರಣಗಳು ಮಿತಿಮೀರುತ್ತಿದ್ದು, ಕಚೇರಿಗೆ ತೆರಳುತ್ತಿದ್ದ ವ್ಯಕ್ತಿಯೊಬ್ಬರ ಕಾರು ಅಡ್ಡಗಟ್ಟಿ ಮನಬಂದಂತೆ ಹಲ್ಲೆ ನಡೆಸಿರುವ ಘಟನೆ ನಗರದ ಬ್ರೂಕ್‌ಫೀಲ್ಡ್ ಬಳಿ ವರದಿಯಾಗಿದೆ. ದೆಹಲಿ ನೋಂದಣಿಯ ಕಾರಿನಲ್ಲಿ ಬಂದ ಇಬ್ಬರು ಆಗಂತುಕರು ಈ ಕೃತ್ಯವೆಸಗಿದ್ದು, ಹೆಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಬ್ರೂಕ್‌ಫೀಲ್ಡ್ ಪ್ರದೇಶದಲ್ಲಿರುವ ಎಚ್‌ಪಿ ಪೆಟ್ರೋಲ್ ಬಂಕ್ ಬಳಿ ದಿಲೀಪ್ ಕಾರಿಯ ಎಂಬುವವರು ತಮ್ಮ ಕಚೇರಿಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಮಾರ್ಗಮಧ್ಯೆ ಏಕಾಏಕಿ ಕಾರು ಅಡ್ಡಗಟ್ಟಿದ ಇಬ್ಬರು ದುಷ್ಕರ್ಮಿಗಳು, ದಿಲೀಪ್ ಅವರ ಕಾರಿನ ಗಾಜು ಒಡೆದು ದಾಂಧಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ, ದಿಲೀಪ್ ಅವರ ಮುಖಕ್ಕೆ ಬಲವಾಗಿ ಪಂಚ್ ಮಾಡಿ ಗಾಯಗೊಳಿಸಿದ್ದಾರೆ. ಯಾವುದೇ ಪ್ರಚೋದನೆ ಅಥವಾ ಕಾರಣವಿಲ್ಲದೆ ತಮ್ಮ ಮೇಲೆ ಏಕಾಏಕಿ ಹಲ್ಲೆ ನಡೆಸಲಾಗಿದೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.
ಆರೋಪಿಗಳ ಕಾರಿನ ಮೇಲೆ 15ಕ್ಕೂ ಹೆಚ್ಚು ಕೇಸ್
ಹಲ್ಲೆಕೋರರು 'ಡಿಎಲ್ 08 ಸಿಎಝಡ್ 2473' (DL8CAZ2473) ಸಂಖ್ಯೆಯ ದೆಹಲಿ ನೋಂದಣಿಯ ಕಾರಿನಲ್ಲಿ ಬಂದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಅಚ್ಚರಿಯ ವಿಚಾರವೆಂದರೆ, ಕೃತ್ಯಕ್ಕೆ ಬಳಸಲಾದ ಈ ಕಾರಿನ ಮೇಲೆ ಈಗಾಗಲೇ ಹದಿನೈದಕ್ಕೂ ಹೆಚ್ಚು ಸಂಚಾರ ನಿಯಮ ಉಲ್ಲಂಘನೆ ಹಾಗೂ ಇತರ ಪ್ರಕರಣಗಳು ದಾಖಲಾಗಿವೆ ಎಂಬ ಅಂಶ ಬೆಳಕಿಗೆ ಬಂದಿದೆ.
ಹೆಚ್‌ಎಎಲ್ ಠಾಣೆಯಲ್ಲಿ ದೂರು ದಾಖಲು
ನಡುರಸ್ತೆಯಲ್ಲಿ ನಡೆದ ಈ ಗೂಂಡಾಗಿರಿಯಿಂದ ಕಂಗಾಲಾದ ದಿಲೀಪ್ ಕಾರಿಯ ಅವರು ತಕ್ಷಣವೇ ಸಮೀಪದ ಹೆಚ್‌ಎಎಲ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಸಂತ್ರಸ್ತರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳ ಪತ್ತೆಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ತಲೆಮರೆಸಿಕೊಂಡಿರುವ ದುಷ್ಕರ್ಮಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

