Murder Case|ಡಿಜೆ ಹಳ್ಳಿಯಲ್ಲಿ ಭೀಕರ ಕೊಲೆ: ನಿಶ್ಚಿತಾರ್ಥ ಮಾಡಿಕೊಂಡಿದ್ದ ಅಪ್ರಾಪ್ತೆಯನ್ನೇ ಬರ್ಬರವಾಗಿ ಕೊಂದ ಯುವಕ
x

Murder Case|ಡಿಜೆ ಹಳ್ಳಿಯಲ್ಲಿ ಭೀಕರ ಕೊಲೆ: ನಿಶ್ಚಿತಾರ್ಥ ಮಾಡಿಕೊಂಡಿದ್ದ ಅಪ್ರಾಪ್ತೆಯನ್ನೇ ಬರ್ಬರವಾಗಿ ಕೊಂದ ಯುವಕ

ಕೋಲಾರ ಮೂಲದ ಅಪ್ರಾಪ್ತ ಬಾಲಕಿಯನ್ನು ಆಕೆಯ ಭಾವಿ ಪತಿಯೇ ಪಾಳುಬಿದ್ದ ಮನೆಯಲ್ಲಿ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ್ದಾನೆ. ಕೃತ್ಯವೆಸಗಿ ಕಳೆದ ಎರಡು ದಿನಗಳಿಂದ ತಲೆಮರೆಸಿಕೊಂಡಿರುವ ಆರೋಪಿ ಶಬೀಲ್‌ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.


Click the Play button to hear this message in audio format

ಬೆಂಗಳೂರಿನ ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಕೊಲೆ ಪ್ರಕರಣವೊಂದು ಇಡೀ ರಾಜಧಾನಿಯನ್ನೇ ಬೆಚ್ಚಿಬೀಳಿಸಿದೆ. ತನ್ನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಅಪ್ರಾಪ್ತ ಬಾಲಕಿಯನ್ನೇ ಯುವಕನೊಬ್ಬ ಮಂಗಳವಾರ ರಾತ್ರಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಕೋಲಾರ ಮೂಲದ ಅಪ್ರಾಪ್ತ ಬಾಲಕಿ ಹಾಗೂ ಆರೋಪಿ ಶಬೀಲ್ ನಡುವೆ ಪ್ರೀತಿ ಇತ್ತು. ಇವರ ಪ್ರೀತಿಗೆ ಒಪ್ಪಿದ್ದ ಇಬ್ಬರ ಕುಟುಂಬದವರು 2025ರ ಜೂನ್‌ನಲ್ಲಿ ಇಬ್ಬರಿಗೂ ನಿಶ್ಚಿತಾರ್ಥ ಮಾಡಿದ್ದರು. ಆದರೆ, ನಿಶ್ಚಿತಾರ್ಥದ ನಂತರ ಶಬೀಲ್‌ನ ಮನಸ್ಸಿನಲ್ಲಿ ಅನುಮಾನದ ಬೀಜ ಮೊಳಕೆಯೊಡೆಯಲು ಶುರುವಾಗಿತ್ತು. 'ತನ್ನ ಭಾವಿ ಪತ್ನಿ ಬೇರೆ ಯುವಕರೊಂದಿಗೆ ಮಾತನಾಡುತ್ತಿದ್ದಾಳೆಯೇ?' ಎಂಬ ಸಂದೇಹ ಆತನನ್ನು ಕಾಡತೊಡಗಿತ್ತು. ದಿನೇ ದಿನೇ ಈ ಅನುಮಾನ ಹೆಮ್ಮರವಾಗಿ ಬೆಳೆದು, ಕೊನೆಗೆ ಆಕೆಯ ಪ್ರಾಣವನ್ನೇ ತೆಗೆಯುವ ಮಟ್ಟಕ್ಕೆ ತಲುಪಿದ್ದು ದುರಂತ.

ರಂಜಾನ್ ಹಬ್ಬದ ಭೇಟಿ

ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಬಾಲಕಿಯು ಬೆಂಗಳೂರಿನ ಡಿಜೆ ಹಳ್ಳಿ ವ್ಯಾಪ್ತಿಯಲ್ಲಿರುವ ತನ್ನ ಸಂಬಂಧಿಕರ ಮನೆಗೆ ಬಂದಿದ್ದಳು. ಮನೆಯವರ ಕಣ್ತಪ್ಪಿಸಿ ಆಕೆ ಆಗಾಗ್ಗೆ ಶಬೀಲ್‌ನನ್ನು ಭೇಟಿಯಾಗುತ್ತಿದ್ದಳು. ಅವರಿಬ್ಬರೂ ಭೇಟಿಯಾಗಲು ಒಂದು ಪಾಳುಬಿದ್ದ ಹಳೆಯ ಮನೆಯನ್ನು ಆಯ್ದುಕೊಂಡಿದ್ದರು. ಘಟನೆ ನಡೆದ ದಿನ ರಾತ್ರಿ ಸುಮಾರು 9 ಗಂಟೆಯ ವೇಳೆಗೆ, ಬಾಲಕಿಯು ತನ್ನ ಮೊಬೈಲ್ ಫೋನ್ ಅನ್ನು ಮನೆಯಲ್ಲೇ ಬಿಟ್ಟು ಯಾರಿಗೂ ತಿಳಿಯದಂತೆ ಶಬೀಲ್‌ನನ್ನು ಭೇಟಿಯಾಗಲು ಅದೇ ಪಾಳುಬಿದ್ದ ಮನೆಗೆ ಹೋಗಿದ್ದಳು.

ಆದರೆ, ಅಲ್ಲಿ ಅವಳಿಗಾಗಿ ಕಾಯುತ್ತಿದ್ದದ್ದು ಪ್ರೀತಿಯಲ್ಲ, ಸಾವು! ಇಬ್ಬರ ನಡುವೆ ಮಾತುಕತೆ ನಡೆಯುತ್ತಿರುವಾಗಲೇ ಶಬೀಲ್‌ನ ಅನುಮಾನದ ಭೂತ ಭುಗಿಲೆದ್ದಿದೆ. ವಿಕೃತಿಯ ಪರಮಾವಧಿ ಮೆರೆದ ಆತ, ಬಾಲಕಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಆಕೆಯ ಎದೆಯ ಭಾಗವನ್ನು ಚಾಕುವಿನಿಂದ ಸೀಳಿ, ಗುಪ್ತಾಂಗಕ್ಕೂ ಇರಿದು ಅಮಾನವೀಯವಾಗಿ ವರ್ತಿಸಿದ್ದಾನೆ. ಅಷ್ಟಕ್ಕೇ ಸುಮ್ಮನಾಗದ ಆತ, ಕೊನೆಗೆ ಕತ್ತು ಕೊಯ್ದು ಆಕೆಯನ್ನು ಬರ್ಬರವಾಗಿ ಹತ್ಯೆಗೈದು ಅಲ್ಲಿಂದ ಪರಾರಿಯಾಗಿದ್ದಾನೆ.

ಆರೋಪಿಗಾಗಿ ಹುಡುಕಾಟ

ಮನೆಗೆ ಬಂದಿದ್ದ ಹುಡುಗಿ ರಾತ್ರಿಯಾದರೂ ಹಿಂದಿರುಗದಿರುವುದನ್ನು ಕಂಡು ಸಂಬಂಧಿಕರು ಆತಂಕಗೊಂಡಿದ್ದಾರೆ. ಮೊಬೈಲ್ ಕೂಡ ಮನೆಯಲ್ಲೇ ಇದ್ದುದರಿಂದ ಆಕೆಯನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಕೂಡಲೇ ಶಬೀಲ್‌ನ ಕುಟುಂಬಸ್ಥರನ್ನು ವಿಚಾರಿಸಿದಾಗ, ಅವರಿಬ್ಬರು ಭೇಟಿಯಾಗುತ್ತಿದ್ದ ಪಾಳುಬಿದ್ದ ಮನೆಯ ಬಗ್ಗೆ ಮಾಹಿತಿ ಸಿಕ್ಕಿದೆ. ಆತಂಕದಿಂದಲೇ ಆ ಮನೆಗೆ ಧಾವಿಸಿದ ಕುಟುಂಬಸ್ಥರಿಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕಿಯ ಮೃತದೇಹ ಕಂಡಿದೆ.

ಕೂಡಲೇ ಡಿಜೆ ಹಳ್ಳಿ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಘಟನೆ ನಡೆದು ಎರಡು ದಿನಗಳು ಕಳೆದರೂ ಆರೋಪಿ ಶಬೀಲ್‌ನ ಸುಳಿವು ಮಾತ್ರ ಸಿಕ್ಕಿಲ್ಲ. ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದು, ಶಬೀಲ್‌ನ ಕುಟುಂಬಸ್ಥರು, ಸ್ನೇಹಿತರು ಹಾಗೂ ಸಂಬಂಧಿಕರನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಜಾಲಾಡಲಾಗುತ್ತಿದೆ. ಪೊಲೀಸ್ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಶೀಘ್ರದಲ್ಲೇ ಆರೋಪಿಯನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Read More
Next Story