ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣ: ಶಾಸಕ ಬೈರತಿ ಬಸವರಾಜ್‌ಗೆ ಜಾಮೀನು
x

ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣ: ಶಾಸಕ ಬೈರತಿ ಬಸವರಾಜ್‌ಗೆ ಜಾಮೀನು

ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಶಾಸಕ ಬೈರತಿ ಬಸವರಾಜು ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಷರತ್ತುಬದ್ಧ ಜಾಮೀನು ನೀಡಿದೆ.


Click the Play button to hear this message in audio format

ರಾಜಧಾನಿಯ ಭೂಗತ ಲೋಕದಲ್ಲಿ ಸಂಚಲನ ಮೂಡಿಸಿದ್ದ ರೌಡಿಶೀಟರ್ 'ಬಿಕ್ಲು ಶಿವ' ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಳೆದ 20 ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಕೆ.ಆರ್. ಪುರ ಕ್ಷೇತ್ರದ ಶಾಸಕ ಬೈರತಿ ಬಸವರಾಜ್ ಅವರಿಗೆ ನ್ಯಾಯಾಲಯದಿಂದ ದೊಡ್ಡ ಸಮಾಧಾನ ಸಿಕ್ಕಿದೆ.

ಈ ಹೈಪ್ರೊಫೈಲ್ ಪ್ರಕರಣದ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶಾಸಕರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದು, ಅವರ ಜೈಲುವಾಸಕ್ಕೆ ತಾತ್ಕಾಲಿಕ ತೆರೆ ಬಿದ್ದಿದೆ.

ಸುಪ್ರೀಂ ಕದ ತಟ್ಟಿದ್ದರೂ ತಪ್ಪಿರಲಿಲ್ಲ ಬಂಧನ ಭೀತಿ

ಈ ಹಿಂದೆ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಎದುರಾಗಿದ್ದ ಬಂಧನದ ಭೀತಿಯಿಂದ ಪಾರಾಗಲು ಬೈರತಿ ಬಸವರಾಜ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಅಲ್ಲಿ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡ ಬೆನ್ನಲ್ಲೇ ತನಿಖಾಧಿಕಾರಿಗಳು ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದರು. ಸುಪ್ರೀಂ ಕೋರ್ಟ್‌ನ ಕಟ್ಟುನಿಟ್ಟಿನ ನಿಲುವಿನ ನಂತರ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದ ಶಾಸಕರು, ಕಳೆದ ಮೂರು ವಾರಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ದಿನಗಳನ್ನು ಕಳೆಯುವಂತಾಗಿತ್ತು. ತನಿಖೆಯ ಹಂತದಲ್ಲಿ ಅವರ ಪಾತ್ರದ ಕುರಿತು ಸರಣಿ ವಿಚಾರಣೆಗಳು ನಡೆದಿದ್ದವು.

ಕಟ್ಟುನಿಟ್ಟಿನ ಷರತ್ತುಗಳೊಂದಿಗೆ ಬಿಡುಗಡೆ ಆದೇಶ

ಶಾಸಕರ ಪರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುದೀರ್ಘವಾಗಿ ಆಲಿಸಿದ 82ನೇ ವಿಶೇಷ ನ್ಯಾಯಾಲಯವು (ಜನಪ್ರತಿನಿಧಿಗಳ ನ್ಯಾಯಾಲಯ), ಪ್ರಕರಣದ ಪ್ರಸ್ತುತ ತನಿಖಾ ಪ್ರಗತಿಯನ್ನು ಪರಿಗಣಿಸಿ ಜಾಮೀನು ನೀಡಲು ಸಮ್ಮತಿಸಿದೆ. ನ್ಯಾಯಾಲಯವು ಎರಡು ಲಕ್ಷ ರೂಪಾಯಿಗಳ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿಯನ್ನು ಪಡೆದು ಬಿಡುಗಡೆಗೆ ಆದೇಶಿಸಿದೆ. ಆದರೆ, ಈ ಜಾಮೀನು ಸಂಪೂರ್ಣ ಮುಕ್ತವಾಗಿರದೆ ಕೆಲವು ಕಟ್ಟುನಿಟ್ಟಿನ ಷರತ್ತುಗಳನ್ನು ಒಳಗೊಂಡಿದೆ. ತನಿಖೆಗೆ ಪೂರ್ಣ ಸಹಕಾರ ನೀಡುವುದು, ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು ಮತ್ತು ನ್ಯಾಯಾಲಯದ ಅನುಮತಿಯಿಲ್ಲದೆ ವಿದೇಶ ಪ್ರವಾಸ ಕೈಗೊಳ್ಳಬಾರದು ಎಂಬಂತಹ ಪ್ರಮುಖ ನಿಯಮಗಳನ್ನು ನ್ಯಾಯಾಧೀಶರು ವಿಧಿಸಿದ್ದಾರೆ.

ಶಾಸಕರೊಬ್ಬರು ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವುದು ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಜಾಮೀನು ಸಿಕ್ಕಿರುವುದು ಅವರ ಬೆಂಬಲಿಗರಲ್ಲಿ ಹರ್ಷ ಮೂಡಿಸಿದೆ. ಹೀಗಿದ್ದರೂ, ಪ್ರಕರಣದ ವಿಚಾರಣೆ ಇನ್ನೂ ಪ್ರಗತಿಯಲ್ಲಿದ್ದು, ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಕೆಯ ಹಂತದಲ್ಲಿ ನ್ಯಾಯಾಲಯದ ಮುಂದಿನ ನಡೆಗಳು ತೀವ್ರ ಕುತೂಹಲ ಮೂಡಿಸಿವೆ.

ಏನಿದು ಪ್ರಕರಣದ ಹಿನ್ನೆಲೆ?

2025ರ ಜುಲೈ 15ರಂದು ಹಲಸೂರು ಕೆರೆ ಸಮೀಪದ ಮನೆಯೊಂದರ ಎದುರು ನಡೆದ ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಆರ್. ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್ ವಿರುದ್ಧ ಭಾರತಿನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

ಕೊಲೆಯಾದ ಶಿವಪ್ರಕಾಶ್ ಅವರ ತಾಯಿ ವಿಜಯಲಕ್ಷ್ಮಿ ನೀಡಿದ ದೂರಿನ ಆಧಾರದ ಮೇಲೆ ಜಗದೀಶ್, ಕಿರಣ್, ವಿಮಲ್ ಮತ್ತು ಅನಿಲ್ ವಿರುದ್ಧ ಎಫ್‌ಐಆ‌ರ್ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದರು. ಜುಲೈ 24ರಂದು ಬಿಕ್ಲು ಶಿವನ ಬರ್ಬರ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರವು ಸಿಐಡಿ ತನಿಖೆಗೆ ವಹಿಸಿ ಆದೇಶ ಹೊರಡಿಸಿತ್ತು. ಈ ಪ್ರಕರಣದಲ್ಲಿ ಶಾಸಕ ಬೈರತಿ ಬಸವರಾಜ್ ಐದನೇ ಆರೋಪಿಯಾಗಿದ್ದು, ಸಾಕಷ್ಟು ದಿನಗಳ ಕಾಲ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದರು.

Read More
Next Story