
ಮೂರು ಎಕರೆ ಜಮೀನಿನ ಆಸೆಗಾಗಿ ಸ್ವಂತ ಪತ್ನಿ, ಮಗ ಮತ್ತು ಬಾಮೈದನೇ ಸೇರಿ ಸಂಚು ರೂಪಿಸಿ ವ್ಯಕ್ತಿಯನ್ನು ಹತ್ಯೆಗೈದಿರುವುದು ಪೊಲೀಸ್ ತನಿಖೆಯಿಂದ ದೃಢಪಟ್ಟಿದೆ.
ಆಸ್ತಿಗಾಗಿ ಪತ್ನಿ, ಮಗನಿಂದಲೇ ಸುಪಾರಿ: ಬೆಳಗಾವಿಯ ಭೀಕರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು
ಕೊಲೆಯಾದ ವ್ಯಕ್ತಿಯನ್ನು ಹಿರೇನಂದಿಹಳ್ಳಿ ಗ್ರಾಮದ ಕಲ್ಮೇಶ ಕೋಟಿ ಎಂದು ಗುರುತಿಸಲಾಗಿದೆ. ಇವರು ತುಮಕೂರಿನ ಮಠವೊಂದರಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು.
ಕಿತ್ತೂರು ತಾಲೂಕಿನ ಹಿರೇನಂದಿಹಳ್ಳಿ ಹೊರವಲಯದಲ್ಲಿ ಇತ್ತೀಚೆಗೆ ಪತ್ತೆಯಾಗಿದ್ದ ಅಪರಿಚಿತ ವ್ಯಕ್ತಿಯ ಶವದ ರಹಸ್ಯ ಬಯಲಾಗಿದೆ. ಮೂರು ಎಕರೆ ಜಮೀನಿನ ಆಸೆಗಾಗಿ ಸ್ವಂತ ಪತ್ನಿ, ಮಗ ಮತ್ತು ಬಾಮೈದನೇ ಸೇರಿ ಸಂಚು ರೂಪಿಸಿ ವ್ಯಕ್ತಿಯನ್ನು ಹತ್ಯೆಗೈದಿರುವುದು ಪೊಲೀಸ್ ತನಿಖೆಯಿಂದ ದೃಢಪಟ್ಟಿದೆ.
ಕೊಲೆಯಾದ ವ್ಯಕ್ತಿಯನ್ನು ಹಿರೇನಂದಿಹಳ್ಳಿ ಗ್ರಾಮದ ಕಲ್ಮೇಶ ಕೋಟಿ ಎಂದು ಗುರುತಿಸಲಾಗಿದೆ. ಇವರು ತುಮಕೂರಿನ ಮಠವೊಂದರಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಊರಿಗೆ ಬಂದಿದ್ದ ಕಲ್ಮೇಶ್‌ಗೆ ಹಬ್ಬವೇ ಕೊನೆಯ ದಿನವಾಗಲಿದೆ ಎಂದು ಯಾರು ಊಹಿಸಿರಲಿಲ್ಲ. ಫೆಬ್ರವರಿ 20ರಂದು ಅವರ ಶವ ಗ್ರಾಮದ ಹೊರವಲಯದಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಗಿತ್ತು.
ಪಾರ್ಟಿ ಹೆಸರಲ್ಲಿ ಕರೆದೊಯ್ದು ಉಸಿರುಗಟ್ಟಿಸಿ ಕೊಲೆ
ಮೂರು ಎಕರೆ ಜಮೀನಿನ ಮೇಲೆ ಕಣ್ಣಿಟ್ಟಿದ್ದ ಬಾಮೈದ ಮಲ್ಲೇಶ ಅಂಬಣ್ಣವರ, ತನ್ನ ಭಾವನನ್ನೇ ಮುಗಿಸಲು ಸ್ಕೆಚ್ ಹಾಕಿದ್ದನು. 'ಪಾರ್ಟಿ ಮಾಡಿ ಬರೋಣ' ಎಂದು ನಂಬಿಸಿ ಕಲ್ಮೇಶನನ್ನು ಜಮೀನಿಗೆ ಕರೆದೊಯ್ಯಲಾಗಿತ್ತು. ಅಲ್ಲಿ ಮಲ್ಲೇಶ ಮತ್ತು ಆತನ ಗೆಳೆಯ ಮುದುಕಪ್ಪ ಕೋಲೇಕರ್ ಸೇರಿ ಕಲ್ಮೇಶನನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಕೃತ್ಯದ ಬಳಿಕ ಆರೋಪಿ ಮಲ್ಲೇಶ ತಾನೇ ಖುದ್ದಾಗಿ ತನ್ನ ಅಕ್ಕನಿಗೆ (ಮೃತನ ಪತ್ನಿ) ಕರೆ ಮಾಡಿ ವಿಷಯ ಮುಟ್ಟಿಸಿದ್ದಾನೆ ಎನ್ನಲಾಗಿದೆ.
ಮನೆಮಂದಿಯೇ ಹಂತಕರು!
ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದ್ದು ತನಿಖೆಯ ಹಂತದಲ್ಲಿ. ಕೇವಲ ಬಾಮೈದ ಮಾತ್ರವಲ್ಲದೆ, ಮೃತ ಕಲ್ಮೇಶನ ಪತ್ನಿ ಕಸ್ತೂರಿ ಕೋಟಿ ಮತ್ತು ಪುತ್ರ ಕಿರಣ್ ಕೋಟಿ ಕೂಡ ಈ ಹತ್ಯೆಯ ಸಂಚಿನಲ್ಲಿ ನೇರವಾಗಿ ಭಾಗಿಯಾಗಿದ್ದರು ಎಂಬುದು ಪೊಲೀಸರ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ಆಸ್ತಿ ವಿವಾದ ಮತ್ತು ಕೌಟುಂಬಿಕ ಕಲಹವೇ ಈ ಕೃತ್ಯಕ್ಕೆ ಪ್ರೇರಣೆ ಎಂದು ತಿಳಿದುಬಂದಿದೆ.
ನಾಲ್ವರು ಆರೋಪಿಗಳು ಜೈಲು ಪಾಲು
ಪ್ರಕರಣ ದಾಖಲಿಸಿಕೊಂಡಿದ್ದ ಕಿತ್ತೂರು ಪೊಲೀಸರು ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ, ಬಾಮೈದ ಮಲ್ಲೇಶ, ಆತನ ಸ್ನೇಹಿತ ಮುದುಕಪ್ಪ, ಮೃತನ ಪತ್ನಿ ಕಸ್ತೂರಿ ಮತ್ತು ಪುತ್ರ ಕಿರಣ್‌ನನ್ನು ಬಂಧಿಸಿದ್ದಾರೆ. ಸದ್ಯ ನಾಲ್ವರೂ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಬೆಳಗಾವಿಯ ಹಿಂಡಲಗಾ ಜೈಲಿಗೆ ರವಾನಿಸಲಾಗಿದೆ.

