
ಆರ್‌ಎಸ್‌ಎಸ್ ಪ್ರಚಾರಕರೊಬ್ಬರ ಪುತ್ರಿ ಸಂಶಯಾಸ್ಪದ ಸಾವು; ಕೆರೆಯಲ್ಲಿ ಮೃತದೇಹ ಪತ್ತೆ
ಬಂಟ್ವಾಳ ತಾಲೂಕಿನ ಗುರುಕುಲದ ಕೆರೆಯಲ್ಲಿ ಬಾಲಕಿಯ ಶವ ಪತ್ತೆಯಾಗಿದ್ದು ಕಾರಣ ನಿಗೂಢವಾಗಿದೆ. ಬಾಲಕಿಯ ಆರ್‌ಎಸ್‌ಎಸ್ ಪ್ರಚಾರಕರ ಮಗಳಾಗಿದ್ದು, ಸಂಶಯಾಸ್ಪದ ಸಾವಿನ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಗುರುಕುಲ ಸಮೀಪದ ಕೆರೆಯಲ್ಲಿ ಅಪ್ರಾಪ್ತ ಬಾಲಕಿಯ ಶವವೊಂದು ಫೆ.23 ರಂದು ಪತ್ತೆಯಾಗಿದೆ. ಬಾಲಕಿಯು ಆರ್‌ಎಸ್‌ಎಸ್ ಪ್ರಚಾರಕ ರಮೇಶ್ ಅಯ್ಯರ್ ಎಂಬುವರ ಪುತ್ರಿಯಾಗಿದ್ದು, ಸಾವು ನಿಗೂಢವಾಗಿದೆ.
ಮೃತಪಟ್ಟ ಬಾಲಕಿಯನ್ನು ವೈಗಲಕ್ಷ್ಮೀ ಎಂದು ಗುರುತಿಸಲಾಗಿದೆ. ಬಾಲಕಿಯ ಮೃತದೇಹದ ಶವಸಂಸ್ಕಾರವು ಮಂಗಳವಾರ ವಿಟ್ಲದ ಸ್ಮಶಾನದಲ್ಲಿ ನಡೆದಿದೆ. ಬಾಲಕಿಯ ತಂದೆ ರಮೇಶ್ ಅಯ್ಯರ್ ಅವರು ಗುರುಕುಲದ ಸಿಬ್ಬಂದಿಯ ನಿವಾಸದಲ್ಲಿಯೇ ವಾಸವಾಗಿದ್ದರು.
ಸುಮಾರು 27 ಎಕರೆ ವ್ಯಾಪ್ತಿಯಲ್ಲಿರುವ ವಿಟ್ಲ ಸಮೀಪದ ಕೊಡಂಗಾಯಿಯ ಮೈತ್ರೇಯಿ ಗುರುಕುಲದಲ್ಲಿಯೇ ಇರುವ ಗೋ ಶಾಲೆಯ ಪಕ್ಕದ ಕೆರೆಯಲ್ಲಿ ಆಕೆಯ ಶವ ಪತ್ತೆಯಾಗಿತ್ತು. ಇದಕ್ಕೂ ಮುನ್ನ ಆಕೆ ಕಾಣೆಯಾಗಿದ್ದಳು ಎಂದು ವಿಟ್ಲ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿತ್ತು. ಸಿಸಿ ಟಿವಿ ದೃಶ್ಯಾವಳಿಯಲ್ಲಿ ಬಾಲಕಿಯು ಫೆ. 22 ರಂದು ಮಧ್ಯಾಹ್ನ 1.05 ಗಂಟೆ್ಗೆ ಹೊರ ಹೋಗಿರುವುದು ಬೆಳಕಿಗೆ ಬಂದಿದೆ. ಸ್ಥಳೀಯರು ಮತ್ತು ಗುರುಕುಲದ ಸಿಬ್ಬಂದಿ ಸುತ್ತಮುತ್ತ ಹುಡುಕಾಡಿದ್ದರೂ ಸುಳಿವು ಸಿಕ್ಕಿರಲಿಲ್ಲ. ಮಾರನೇ ದಿನ ಸಿಬ್ಬಂದಿಯು ಕೆರೆಯಲ್ಲಿ ಶವ ತೇಲುತ್ತಿರುವುದು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬೆಂಗಳೂರು ಮೂಲದವರಾದ ರಮೇಶ್ ಅವರು, ಈ ಹಿಂದೆ ಕೇಶವ ಕೃಪಾದಲ್ಲಿ ಆರೆಸ್ಸೆಸ್ ಕ್ಷೇತ್ರ ಪ್ರಚಾರಕರಾಗಿದ್ದರು. ಕಳೆದ ಕೆಲವು ವರ್ಷಗಳಿಂದ ಗುರುಕುಲದಲ್ಲಿ ವಾಸವಾಗಿದ್ದರು. ಮೃತ ವೈಗಲಕ್ಷ್ಮೀ ಗುರುಕುಲದಲ್ಲಿ ಶಿಕ್ಷಣ ಪಡೆಯುತ್ತಿದ್ದರೆ, ಆಕೆಯ ಸಹೋದರಿ ಕಲ್ಲಡ್ಕದಲ್ಲಿರುವ ಶ್ರಿರಾಮ ವಿದ್ಯಾಲಯದಲ್ಲಿ ಕಲಿಯುತ್ತಿದ್ದಾಳೆ. ತಾಯಿ ಅನಾರೋಗ್ಯದಲ್ಲಿದ್ದು, ಪ್ರತ್ಯೇಕವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುರುಕುಲದಲ್ಲಿ ಸುಮಾರು 84 ಮಂದಿ ವಿದ್ಯಾರ್ಥಿಗಳಿದ್ದರು.
ಸಾವಿಗೆ ಸಂಶಯ ಏಕೆ?
ಗುರುಕುಲದಲ್ಲಿ ಸಂಸ್ಕಾರದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಹಿನ್ನೆಲೆಯಲ್ಲಿ ಇಲ್ಲಿನ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಳ್ಳಲು ಬಂದಿರುವ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಗುರುಕುಲದ ಸಿಬ್ಬಂದಿಗಳ ಪ್ರಕಾರ ಆಕೆ ಮಾನಸಿಕವಾಗಿ ನೊಂದಿದ್ದಳು ಮತ್ತು ಅಸೌಖ್ಯದಲ್ಲಿರುವ ಆಕೆಯ ತಾಯಿಯನ್ನು ನೋಡಲು ಆಕೆಗೆ ಅನುಮತಿ ನೀಡುತ್ತಿರಲಿಲ್ಲ ಎನ್ನುವುದಾಗಿದೆ.
ಗುರುಕುಲದ ಮುಖ್ಯ ಸಿಬ್ಬಂದಿಯೊಬ್ಬರು ಹೇಳುವಂತೆ, ಗುರುಕುಲದ ವಾಸಿಗಳಿಗೆ ಹೊರಗೆ ಹೋಗಲು ಅವಕಾಶ ಕೆಲವೊಮ್ಮೆ ಮಾತ್ರ ನೀಡಲಾಗುತ್ತದೆ. ನಿಯಮ ಹಾಗಿರುವಾಗ ಒಬ್ಬಾಕೆಗೆ ಅವಕಾಶ ನೀಡಿದರೆ ಎಲ್ಲರೂ ಬೇಡಿಕೆ ಮುಂದಿಡುತ್ತಾರೆ. ಹಾಗಾಗಿ ಆಕೆಗೆ ಅವಕಾಶ ನಿರಾಕರಿಸಲಾಗಿತ್ತು. ಆಕೆ ಬೇಡಿಕೆ ಇಟ್ಟು ತಿಂಗಳುಗಳೇ ಕಳೆದಿವೆ. ಬಳಿಕ ಆಕೆ ಸಾಮಾನ್ಯರಂತೆಯೇ ಇದ್ದಳು’ ಎನ್ನುತ್ತಾರೆ. ಇನ್ನೊಬ್ಬರು ಸಿಬ್ಬಂದಿ, ಇತ್ತೀಚೆಗೆ ಆಕೆ ತುಂಬಾ ಮೂಡಿಯಾಗಿದ್ದಳು. ಒಂಥರಾ ಖಿನ್ನತೆ ಒಳಗಾಗಿದ್ದಳು. ಆದರೂ ಆತ್ಮಹತ್ಯೆ ಮಾಡಿಕೊಳ್ಳುವ ಯಾವುದೇ ಸೂಚನೆ ಇರಲಿಲ್ಲ ಎಂದು ಗುರುಕುಲ ಸಿಬ್ಬಂದಿ ಹೇಳುತ್ತಾರೆ.
ಭರತನಾಟ್ಯಂ ಪಟು!
ವೈಗಲಕ್ಷ್ಮೀ ಭರತನಾಟ್ಯಂ ಕಲಿಯುತ್ತಿದ್ದು, ವಿಪರೀತವಾಗಿ ಅಭ್ಯಾಸ ಮಾಡುತ್ತಿದ್ದಳು. ಹೀಗೆ ಅಭ್ಯಾಸ ಮಾಡುವಾಗ ಆಕೆಯ ಎಡದ ಕಾಲಿಗೆ ಏಟಾಗಿತ್ತು ಎಂದು ಹೇಳಲಾಗುತ್ತಿದೆ. ಆದರೆ, ಕೆಲವೊಂದು ಮೂಲಗಳ ಪ್ರಕಾರ ಆಕೆಯನ್ನು ಬೇರೆ ಕಾರಣಗಳಿಗಾಗಿ ಹಿಂಸಿಸಿದ ಕಾರಣ ಕಾಲು ನೋವು ಉಂಟಾಗಿತ್ತು. ಆಕೆಯ ಶವ ಮೇಲೆತ್ತುವಾಗಲೂ ಆಕೆಯ ಕಾಲಿನಲ್ಲಿ ಬ್ಯಾಂಡೇಜು ಇದ್ದಿತ್ತು.
ತಡೆಗೋಡೆಯಿಲ್ಲದ ಕೆರೆ
ಶವ ಪತ್ತೆಯಾಗಿದ್ದ ಕೆರೆಗೆ ಯಾವುದೇ ರೀತಿಯ ತಡೆಗೋಡೆ ಇಲ್ಲವಾಗಿದ್ದು, ಎಲ್ಲರೂ ಸುತ್ತ ನಡೆದಾಡುವಾಗ ಎಚ್ಚರಿಕೆಯಿಂದಲೇ ಹೋಗುತ್ತಾರೆ. ಪಕ್ಕದಲ್ಲಿಯೇ ಗೋ ಶಾಲೆಯಿದ್ದು, ಗೋವುಗಳನ್ನು ಹೊರಗೆ ಬಿಟ್ಟರೂ ಯಾವುದೇ ರೀತಿಯ ಅವಘಢ ಸಂಭವಿಸಿದ ಉದಾಹರಣೆಗಳಿಲ್ಲ. ತುಂಬಾ ಆಳವಿಲ್ಲದೇ ಇದ್ದರೂ ಒಂದಷ್ಟು ವಿಶಾಲವಾಗಿರುವ ಕೆರೆಯಾಗಿದೆ. ಆದರೂ ವೈಗಲಕ್ಷ್ಮೀ ಕಾಲು ಜಾರಿ ಬೀಳುವ ಸಂಭವಗಳಿಲ್ಲ ಎನ್ನುತ್ತಾರೆ ಗುರುಕುಲದ ಸಿಬ್ಬಂದಿ.
ಮಾನಸಿಕ ಹಿಂಸೆ?
ವೈಗಲಕ್ಷ್ಮೀ ಗೆ ಮಾನಸಿಕವಾಗಿ ಹಿಂಸೆಯಾಗಿತ್ತು, ಆಕೆಗೆ ತಂದೆ ಹಲವಾರು ಕಟ್ಟುಪಾಡು ವಿಧಿಸಿದ್ದರು. ಹಾಗಾಗಿ ಆಕೆಗೆ ಸ್ವಾತಂತ್ರವಿರಲಿಲ್ಲ. ಕೌಟುಂಬಿಕವಾಗಿ ತಂದೆಯಿಂದ ಆಕೆ ಬಹುತೇಕ ನೊಂದಿದ್ದಳು. ಗುರುಕುಲದಲ್ಲಿರುವ ಸಿಬ್ಬಂದಿಗಳ ನಿವಾಸದಲ್ಲಿ ಆಕೆ ತಂದೆ ಮತ್ತು ತಂಗಿಯ ಜೊತೆಗೆ ವಾಸವಿದ್ದಿದ್ದು, ತಾಯಿ ಅಸೌಖ್ಯದ ಕಾರಣ ದೂರ ಇರುವ ಕಾರಣ ತಂದೆಯಿಂದ ಆಕೆ ನೊಂದಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವೈಕುಂಠ ಏಕಾದಶಿ ದಿನ ಜನನ
ವೈಗಲಕ್ಷ್ಮೀ ವೈಕುಂಠ ಏಕಾದಶಿಯ ದಿನ ಜನಿಸಿದ್ದ ಕಾರಣ ಆಕೆಗೆ `ವೈ’ ಅಕ್ಷರದಿಂದ ಆರಂಭವಾಗುವ ಹೆಸರನ್ನು ಕೇಶವ ಕೃಪಾದ ಹಿರಿಯರೊಬ್ಬರು ಸೂಚಿಸಿದ್ದರಂತೆ. ಪ್ರತೀ ವರ್ಷ ವೈಕುಂಠ ಏಕಾದಶಿಯ ದಿನ ಆಕೆ ಉಪವಾಸ ಆಚರಿಸಿ ದೇವರ ಪೂಜೆ ನಡೆಸುತ್ತಿದ್ದಳು ಎಂದು ನಿಕಟವರ್ತಿಗಳು ತಿಳಿಸಿದ್ದಾರೆ. ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವ ವಿಟ್ಲ ಪೊಲೀಸರು, ಈ ಬಗ್ಗೆ ಬೇರೆ ಯಾವುದೇ ದೂರು ಬಂದಿಲ್ಲ ಎಂದಿದ್ದಾರೆ.

