Woman sexually harassed in the middle of the road in Indiranagar, Bengaluru; assaulted by a man in a car
x

ಸಾಂದರ್ಭಿಕ ಚಿತ್ರ

ನಡುರಸ್ತೆಯಲ್ಲೇ ಮಹಿಳೆಗೆ ಲೈಂಗಿಕ ಕಿರುಕುಳ; ಕಾರಿನಲ್ಲಿ ಬಂದ ಕಾಮುಕರ ಅಟ್ಟಹಾಸ

ಮಹಿಳೆ ಅಲ್ಲಿಂದ ತೆರಳಲು ಯತ್ನಿಸಿದರೂ, ಕಾಮುಕರು ಬಿಡದೆ ಹಿಂಬಾಲಿಸಿ ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆ. ಪ್ರಶ್ನಿಸಿದಾಗ, ಆರೋಪಿಗಳು ನಡುರಸ್ತೆಯಲ್ಲೇ ಅಸಭ್ಯವಾಗಿ ವರ್ತಿಸಿದ್ದಾರೆ.


Click the Play button to hear this message in audio format

ರಾಜಧಾನಿಯ ಪ್ರತಿಷ್ಠಿತ ಬಡಾವಣೆ ಇಂದಿರಾನಗರದಲ್ಲಿ ಮಹಿಳೆಯೊಬ್ಬರಿಗೆ ನಡುರಸ್ತೆಯಲ್ಲೇ ಲೈಂಗಿಕ ಕಿರುಕುಳ ನೀಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಚಿಕ್ಕಪೇಟೆ ದ್ಕೊಣ್ಣೆ ಬಿರಿಯಾನಿ ಹೌಸ್ ಬಳಿ ಈ ಘಟನೆ ನಡೆದಿದ್ದು, ಕಾರಿನಲ್ಲಿ ಬಂದ ಅಪರಿಚಿತ ಯುವಕರ ಗುಂಪು ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ, ಜೀವ ಬೆದರಿಕೆ ಹಾಕಿದೆ.

ಸಂತ್ರಸ್ತ 36 ವರ್ಷದ ಮಹಿಳೆ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಹಿಳೆ ತನ್ನ ಸ್ನೇಹಿತನೊಂದಿಗೆ ಹೋಟೆಲ್‌ಗೆ ಬಂದಿದ್ದ ವೇಳೆ, ಕಾರಿನಲ್ಲಿ ಬಂದ ಪುಂಡರ ಗುಂಪು ಆಕೆಯನ್ನು ಗುರಿಯಾಗಿಸಿಕೊಂಡು ಅಶ್ಲೀಲ ಕಮೆಂಟ್‌ಗಳನ್ನು ಮಾಡಲು ಆರಂಭಿಸಿದೆ.

ಕಾರು ಹರಿಸುವುದಾಗಿ ಬೆದರಿಕೆ

ಆರೋಪಿಗಳ ವರ್ತನೆಯನ್ನು ಕಂಡು ಮಹಿಳೆ ಅಲ್ಲಿಂದ ತೆರಳಲು ಯತ್ನಿಸಿದರೂ, ಕಾಮುಕರು ಬಿಡದೆ ಹಿಂಬಾಲಿಸಿ ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆ. ಇದನ್ನು ಪ್ರಶ್ನಿಸಿದಾಗ, ಆರೋಪಿಗಳು ನಡುರಸ್ತೆಯಲ್ಲೇ ಅಸಭ್ಯವಾಗಿ ಬೈದಾಡಿದ್ದಾರೆ. ಅಲ್ಲದೆ, "ನಿಮ್ಮ ಮೇಲೆ ಕಾರು ಹರಿಸುತ್ತೇವೆ" ಎಂದು ಬೆದರಿಕೆ ಹಾಕಿದ್ದಾರೆ. ಮಹಿಳೆ ಆಟೋ ಹತ್ತಿ ಹೋಗಲು ಮುಂದಾದಾಗ, ಆಟೋ ಅಡ್ಡಗಟ್ಟಿ ದೈಹಿಕವಾಗಿ ದೂಡಿದ್ದಾರೆ ಎಂದು ದೂರಿನಲ್ಲಿ ಗಂಭೀರ ಆರೋಪ ಮಾಡಲಾಗಿದೆ.

ಸ್ನೇಹಿತನ ವಿರುದ್ಧವೂ ಪ್ರತಿ-ದೂರು

ಘಟನೆಗೆ ಸಂಬಂಧಿಸಿದಂತೆ ಇಂದಿರಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಕುತೂಹಲಕಾರಿ ಸಂಗತಿಯೆಂದರೆ, ಪೊಲೀಸರು ಮಹಿಳೆಯ ಸ್ನೇಹಿತನ ವಿರುದ್ಧವೂ ಪ್ರತಿ-ದೂರು ದಾಖಲಿಸಿಕೊಂಡಿದ್ದಾರೆ.

ಜಗಳದ ಸಂದರ್ಭದಲ್ಲಿ ಮಹಿಳೆಯ ಸ್ನೇಹಿತ ಆರೋಪಿಗಳ ಗುಂಪಿಗೆ 'ಮಧ್ಯದ ಬೆರಳು' ತೋರಿಸಿ ಅವಮಾನಿಸಿದ್ದಾನೆ ಎಂದು ಆರೋಪಿಸಿ ಈ ದೂರು ದಾಖಲಿಸಲಾಗಿದೆ. ಸಾರ್ವಜನಿಕವಾಗಿ ನಡೆದ ಈ ಘಟನೆ ಇಂದಿರಾನಗರದಂತಹ ಜನನಿಬಿಡ ಪ್ರದೇಶದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಪ್ರಶ್ನೆ ಮೂಡಿಸಿದೆ.

Read More
Next Story