
Nothing Store: ಬೆಂಗಳೂರಲ್ಲಿ 'ನಥಿಂಗ್' ಫೋನ್ ಕ್ರೇಜ್; ಮುಂಜಾನೆಯೇ ಸಾಲುಗಟ್ಟಿ ನಿಂತ ಟೆಕ್ ಪ್ರಿಯರು!
ಬೆಳಗ್ಗೆ 9 ಗಂಟೆಗೆ ಸ್ಟೋರ್ ಉದ್ಘಾಟನೆ ನಿಗದಿಯಾಗಿದ್ದರೂ, 7 ಗಂಟೆ ಸುಮಾರಿಗೆ ಇಂದಿರಾನಗರದ ರಸ್ತೆಗಳಲ್ಲಿ ಜನಜಂಗುಳಿ ನಿರ್ಮಾಣವಾಗಿತ್ತು.
ಲಂಡನ್ ಮೂಲದ ಟೆಕ್ ಕಂಪನಿ 'ನಥಿಂಗ್' (Nothing) ಭಾರತದಲ್ಲಿ ತನ್ನ ಮೊದಲ ಫ್ಲ್ಯಾಗ್‌ಶಿಪ್ ಸ್ಟೋರ್ ಅನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತೆರೆದಿದ್ದು, ಉದ್ಘಾಟನಾ ದಿನವೇ ಗ್ರಾಹಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದ ಪ್ರತಿಷ್ಠಿತ ಇಂದಿರಾನಗರದಲ್ಲಿ ಆರಂಭವಾಗಿರುವ ಈ ಮಳಿಗೆಯ ಮುಂದೆ, ಬಾಗಿಲು ತೆರೆಯುವ ಎರಡು ಗಂಟೆಗೂ ಮುನ್ನವೇ ಟೆಕ್ ಉತ್ಸಾಹಿಗಳ ಬೃಹತ್ ಸರತಿ ಸಾಲು ಕಂಡುಬಂತು .
ಬೆಳಗ್ಗೆ 9 ಗಂಟೆಗೆ ಸ್ಟೋರ್ ಉದ್ಘಾಟನೆ ನಿಗದಿಯಾಗಿದ್ದರೂ, 7 ಗಂಟೆ ಸುಮಾರಿಗೆ ಇಂದಿರಾನಗರದ ರಸ್ತೆಗಳಲ್ಲಿ ಜನಜಂಗುಳಿ ನಿರ್ಮಾಣವಾಗಿತ್ತು. ಇದು ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ 'ನಥಿಂಗ್' ಬ್ರ್ಯಾಂಡ್ ಗಳಿಸಿಕೊಂಡಿರುವ ಜನಪ್ರಿಯತೆ ಮತ್ತು ನಿಷ್ಠಾವಂತ ಗ್ರಾಹಕ ಬಳಗಕ್ಕೆ ಸಾಕ್ಷಿ
ಆನ್‌ಲೈನ್ ಟು ಆಫ್‌ಲೈನ್
ಒನ್‌ಪ್ಲಸ್ ಸಹ-ಸಂಸ್ಥಾಪಕ ಕಾರ್ಲ್ ಪೈ ಅವರು 2020ರಲ್ಲಿ ಸ್ಥಾಪಿಸಿದ 'ನಥಿಂಗ್', ತನ್ನ ವಿಶಿಷ್ಟ ಪಾರದರ್ಶಕ ವಿನ್ಯಾಸ ಮತ್ತು ಗ್ಲಿಫ್ ಇಂಟರ್‌ಫೇಸ್ ಸ್ಮಾರ್ಟ್‌ಫೋನ್‌ಗಳು ಹಾಗೂ ಆಡಿಯೋ ಉತ್ಪನ್ನಗಳ ಮೂಲಕ ಗಮನ ಸೆಳೆದಿದೆ. ಇಷ್ಟು ದಿನ ಕೇವಲ ಆನ್‌ಲೈನ್ ಮಾರಾಟಕ್ಕೆ ಸೀಮಿತವಾಗಿದ್ದ ಕಂಪನಿ, ಇದೀಗ ಭೌತಿಕ ಮಳಿಗೆಗಳ (Physical Retail) ಮೂಲಕ ಗ್ರಾಹಕರನ್ನು ನೇರವಾಗಿ ತಲುಪಲು ಮುಂದಾಗಿದೆ. 2026ರ ಜನವರಿಯಿಂದಲೇ ಬೆಂಗಳೂರಿನಲ್ಲಿ ಮಳಿಗೆ ಆರಂಭಿಸುವ ಬಗ್ಗೆ ಸುಳಿವು ನೀಡಿದ್ದ ಕಂಪನಿ, ಇದೀಗ ಅದನ್ನು ಕಾರ್ಯರೂಪಕ್ಕೆ ತಂದಿದೆ .
ಆಫರ್‌ಗಳ ಸುರಿಮಳೆ: 99 ರೂಪಾಯಿಗೆ ಇಯರ್‌ಬಡ್ಸ್!
ಉದ್ಘಾಟನಾ ದಿನದಂದು ಜನಸಾಗರ ಹರಿದುಬರಲು ಕಂಪನಿ ನೀಡಿದ ಆಕರ್ಷಕ ರಿಯಾಯಿತಿಗಳೂ ಪ್ರಮುಖ ಕಾರಣ. ಸೀಮಿತ ಅವಧಿಯ ಪ್ರಚಾರದ ಭಾಗವಾಗಿ, 99 ರೂಪಾಯಿಗೆ 'CMF ಬಡ್ಸ್ 2' ಅನ್ನು ನೀಡುವ ಘೋಷಣೆ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಭಾರತದ ಸ್ಪರ್ಧಾತ್ಮಕ ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯಲ್ಲಿ ಹೈಪ್ (Hype) ಸೃಷ್ಟಿಸುವ ಜೊತೆಗೆ, ಕೈಗೆಟುಕುವ ದರದಲ್ಲಿ ಉತ್ಪನ್ನಗಳನ್ನು ನೀಡುವ ತಂತ್ರಗಾರಿಕೆಯನ್ನು ನಥಿಂಗ್ ಅನುಸರಿಸುತ್ತಿದೆ .
ಇಂದಿರಾನಗರದ ಈ ಮಳಿಗೆಯಲ್ಲಿ ಸ್ಮಾರ್ಟ್‌ಫೋನ್‌ಗಳು, ಇಯರ್‌ಬಡ್ಸ್ ಸೇರಿದಂತೆ ನಥಿಂಗ್‌ನ ಇತರೆ ಆಕ್ಸೆಸರೀಸ್‌ಗಳು ಮತ್ತು CMF ಬ್ರ್ಯಾಂಡ್‌ನ ಉತ್ಪನ್ನಗಳು ಲಭ್ಯವಿರಲಿವೆ.
ಬೆಂಗಳೂರಲ್ಲಿ ಹಲವು ಸ್ಟೋರ್ಗಳು
ಬೆಂಗಳೂರು ಭಾರತದ ಪ್ರಮುಖ ಟೆಕ್ ಹಬ್ ಆಗಿರುವುದರಿಂದ, ಇಲ್ಲಿ ವಿಶ್ವದ ಪ್ರಮುಖ ಮೊಬೈಲ್ ಕಂಪನಿಗಳು ತಮ್ಮ ಅತ್ಯಾಧುನಿಕ 'ಫ್ಲ್ಯಾಗ್‌ಶಿಪ್ ಸ್ಟೋರ್'ಗಳನ್ನು ತೆರೆದಿವೆ. ಬ್ರಿಗೇಡ್ ರಸ್ತೆಯಲ್ಲಿರುವ ಸ್ಯಾಮ್‌ಸಂಗ್ ಒಪೆರಾ ಹೌಸ್ ವಿಶ್ವದ ಅತಿ ದೊಡ್ಡ ಮೊಬೈಲ್ ಅನುಭವ ಕೇಂದ್ರಗಳಲ್ಲಿ ಒಂದಾಗಿದೆ. ಅದೇ ಬ್ರಿಗೇಡ್ ರಸ್ತೆಯಲ್ಲಿ ಒನ್‌ಪ್ಲಸ್ ಬುಲೆವಾರ್ಡ್ ಹೆಸರಿನ ಬೃಹತ್ ಶೋರೂಮ್ ಕೂಡ ಇದ್ದು, ಇದು ಜಾಗತಿಕವಾಗಿ ಒನ್‌ಪ್ಲಸ್‌ನ ಅತಿ ದೊಡ್ಡ ಮಳಿಗೆಯಾಗಿದೆ. ಇತ್ತೀಚೆಗೆ ಹೆಬ್ಬಾಳದಲ್ಲಿ ಆಪಲ್ (Apple Hebbal) ತನ್ನ ಅಧಿಕೃತ ಮಳಿಗೆಯನ್ನು ಆರಂಭಿಸಿದ್ದು, ಇದು ಭಾರತದ ಅತ್ಯಂತ ವಿಶೇಷವಾದ ಆಪಲ್ ಸ್ಟೋರ್‌ಗಳಲ್ಲಿ ಒಂದೆನಿಸಿದೆ. ಇದೀಗ ನಥಿಂಗ್ ಇದರ ಜೊತೆಗೆ ಶಿಯೋಮಿ (Xiaomi) ತನ್ನ 'Mi Home' ಮಳಿಗೆಗಳನ್ನು ಪ್ರಮುಖ ಮಾಲ್‌ಗಳಲ್ಲಿ ಹೊಂದಿದೆ. ಹೀಗೆ ಬಹುತೇಕ ಎಲ್ಲಾ ಪ್ರಮುಖ ಕಂಪನಿಗಳ ಪ್ರೀಮಿಯಂ ಮಳಿಗೆಗಳು ಬೆಂಗಳೂರಿನಲ್ಲಿವೆ.

