Ranya Rao Gold Smuggling Case| ಅಕ್ರಮ ಚಿನ್ನ ಸಾಗಣೆ: ವಿಮಾನ ನಿಲ್ದಾಣದ ಗ್ರೀನ್‌ ಚಾನೆಲ್‌ ಅಸ್ತ್ರವಾಗಿಸಿದ ರನ್ಯಾ ರಾವ್‌!
x

Ranya Rao Gold Smuggling Case| ಅಕ್ರಮ ಚಿನ್ನ ಸಾಗಣೆ: ವಿಮಾನ ನಿಲ್ದಾಣದ 'ಗ್ರೀನ್‌ ಚಾನೆಲ್‌' ಅಸ್ತ್ರವಾಗಿಸಿದ ರನ್ಯಾ ರಾವ್‌!

ಚಿನ್ನ ಕಳ್ಳಸಾಗಣೆ ಆರೋಪ ಪ್ರಕರಣದಲ್ಲಿ ಬಂಧಿತಳಾಗಿರುವ ರನ್ಯಾ ಒಂದು ವರ್ಷದ ಅವಧಿಯಲ್ಲಿ 127 ಕೆ.ಜಿ. ಚಿನ್ನವನ್ನು ಅಕ್ರಮವಾಗಿ ಸಾಗಿಸಿರುವುದು ಹಾಗೂ ಹವಾಲಾ ದಂಧೆ ನಡೆಸಿರುವುದು ಗೊತ್ತಾಗಿದೆ.


Click the Play button to hear this message in audio format

ಚಿನ್ನ ಕಳ್ಳಸಾಗಣೆ ಆರೋಪ ಪ್ರಕರಣದಲ್ಲಿ ಬಂಧಿತಳಾಗಿರುವ ನಟಿ ಹರ್ಷವರ್ಧಿನಿ ರನ್ಯಾ ಅಲಿಯಾಸ್‌ ರನ್ಯಾ ರಾವ್‌ ಒಂದು ವರ್ಷದ ಅವಧಿಯಲ್ಲಿ 127 ಕೆ.ಜಿ. ಚಿನ್ನವನ್ನು ಅಕ್ರಮವಾಗಿ ಸಾಗಿಸಿರುವುದು ಆಶ್ಚರ್ಯ ಮೂಡಿಸಿದ್ದು, ವಿಮಾನ ನಿಲ್ದಾಣದ ಗ್ರೀನ್ ಚಾನೆಲ್ ಅನ್ನು ದುರುಪಯೋಗಪಡಿಸಿಕೊಂಡು ಸಾಗಣೆ ಮಾಡಿರುವುದು ಬೆಳಕಿಗೆ ಬಂದಿದೆ.

ದುಬೈನಿಂದ ಚಿನ್ನವನ್ನು ಪಡೆದುಕೊಂಡು ಇದಕ್ಕೆ ಹಣವನ್ನು ಅಧಿಕೃತ ಬ್ಯಾಂಕಿಂಗ್‌ ಮಾರ್ಗಗಳ ಬದಲಿಗೆ ಹವಾಲಾ ಮೂಲಕ ಪಾವತಿಸಲಾಗುತ್ತಿತ್ತು. ಇದರಿಂದ ಹಣದ ಮೂಲವನ್ನು ಪತ್ತೆ ಹಚ್ಚುವುದು ಕಷ್ಟಕರವಾಗಿತ್ತು ಎನ್ನಲಾಗಿದೆ. ಚಿನ್ನವನ್ನು ಇತರ ವಸ್ತುಗಳೊಳಗೆ ಮರೆಮಾಚಿ ಭಾರತಕ್ಕೆ ತರಲಾಗುತ್ತಿತ್ತು. ವಿಮಾನ ನಿಲ್ದಾಣದ ಗ್ರೀನ್ ಚಾನೆಲ್ ಅನ್ನು ದುರುಪಯೋಗಪಡಿಸಿಕೊಂಡು ಕಸ್ಟಮ್ಸ್ ತಪಾಸಣೆಯಿಂದ ತಪ್ಪಿಸಿಕೊಳ್ಳುತ್ತಿದ್ದರು ಎಂಬುದು ಇಡಿ ತನಿಖೆಯಿಂದ ಗೊತ್ತಾಗಿದೆ. ಇಡಿ ಅಧಿಕಾರಿಗಳು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿರುವ ಆರೋಪಪಟ್ಟಿಯಲ್ಲಿ ಈ ಬಗ್ಗೆ ಉಲ್ಲೇಖ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.

ಭಾರತಕ್ಕೆ ಬಂದ ಚಿನ್ನವನ್ನು ಸ್ಥಳೀಯ ಪೆಡ್ಲರ್‌ಗಳಿಗೆ ನೀಡಲಾಗುತ್ತಿತ್ತು. ಇವರು ದೇಶದ ವಿವಿಧ ಭಾಗಗಳಲ್ಲಿರುವ ಜ್ಯುವೆಲ್ಲರಿ ವ್ಯಾಪಾರಿಗಳಿಗೆ ನಗದು ರೂಪದಲ್ಲಿ ಈ ಚಿನ್ನವನ್ನು ಮಾರಾಟ ಮಾಡುತ್ತಿದ್ದರು. ಇದರಿಂದ ಭಾರಿ ಪ್ರಮಾಣದ ಲೆಕ್ಕವಿಲ್ಲದ ನಗದು ಸಂಗ್ರಹವಾಗುತ್ತಿತ್ತು. ಸಂಗ್ರಹವಾದ ನಗದು ಹಣವನ್ನು ವಿಭಜಿಸಿ ವಿವಿಧ ಬ್ಯಾಂಕ್ ಖಾತೆಗಳ ಮೂಲಕ ಕಳುಹಿಸಲಾಗುತ್ತಿತ್ತು. ಹವಾಲಾ ಮೂಲಕ ಈ ಹಣವನ್ನು ಮರಳಿ ದುಬೈಗೆ ತಲುಪಿಸಿ ಮುಂದಿನ ಚಿನ್ನದ ಖರೀದಿಗೆ ಬಳಸಲಾಗುತ್ತಿತ್ತು. ಈ ಪ್ರಕ್ರಿಯೆಯಲ್ಲಿ ಅನೇಕ ಶೆಲ್ ಕಂಪನಿಗಳು ಮತ್ತು ಬೇನಾಮಿ ಖಾತೆಗಳನ್ನು ಬಳಸಿ, ಹಣವನ್ನು 'ಕಾನೂನುಬದ್ಧ ವ್ಯವಹಾರದ ಹಣ' ಎಂದು ಬಿಂಬಿಸಲು ಪ್ರಯತ್ನಿಸಲಾಗುತ್ತಿತ್ತು. ಇಂತಹ ಪ್ರಕ್ರಿಯೆಯಲ್ಲಿ ರನ್ಯಾರಾವ್‌ ಚಿನ್ನವನ್ನು ಅಕ್ರಮವಾಗಿ ತರುವ ಪಾತ್ರವನ್ನು ನಿಭಾಯಿಸುತ್ತಿದ್ದರು ಎಂಬುದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಗ್ರೀನ್ ಚಾನೆಲ್ ಎಂದರೇನು?

ಅಂತಾರಾಷ್ಟ್ರೀಯ ಪ್ರಯಾಣಿಕರು ಭಾರತಕ್ಕೆ ಬಂದಿಳಿದಾಗ ಅವರು ತಮ್ಮೊಂದಿಗೆ ತಂದಿರುವ ವಸ್ತುಗಳ ಮೇಲೆ ಸುಂಕ ಪಾವತಿಸಬೇಕಾಗುತ್ತದೆ. ಯಾವ ಪ್ರಯಾಣಿಕರು ತಮ್ಮ ಬಳಿ ಸುಂಕ ಪಾವತಿಸಬೇಕಾದ ಅಥವಾ ನಿಷೇಧಿತ ಯಾವುದೇ ವಸ್ತುಗಳು ಇಲ್ಲ ಎಂದು ಘೋಷಿಸಿಕೊಳ್ಳುತ್ತಾರೋ, ಅಂತಹವರು ನೇರವಾಗಿ ಹೊರಹೋಗಲು ಇರುವ ಮಾರ್ಗವೇ ಈ 'ಗ್ರೀನ್ ಚಾನೆಲ್' ಆಗಿದೆ. ಇದನ್ನು ತಮ್ಮ ಬಳಿ ಅನುಮತಿಸಲಾದ ಮಿತಿಗಿಂತ ಹೆಚ್ಚಿನ ಬೆಲೆಬಾಳುವ ವಸ್ತುಗಳು ಇಲ್ಲದವರು, ಸುಂಕ ಮುಕ್ತ ಮಿತಿಯೊಳಗಿನ ವಸ್ತುಗಳನ್ನು ಮಾತ್ರ ಹೊಂದಿರುವವರು ಮತ್ತು ಯಾವುದೇ ವಾಣಿಜ್ಯ ಬಳಕೆಯ ವಸ್ತುಗಳನ್ನು ಹೊಂದಿರದವರು ಬಳಸಿಕೊಳ್ಳುತ್ತಾರೆ. ವಿಮಾನ ನಿಲ್ದಾಣದಲ್ಲಿ ಎರಡು ರೀತಿಯ ಮಾರ್ಗಗಳ ಮೂಲಕ ಬರಲು ಅವಕಾಶ ಇರುತ್ತದೆ.

ಚಿನ್ನ, ಹೆಚ್ಚಿನ ವಿದೇಶಿ ಕರೆನ್ಸಿ ಅಥವಾ ಸುಂಕ ಪಾವತಿಸಬೇಕಾದ ವಸ್ತುಗಳಿದ್ದರೆ ರೆಡ್‌ ಚಾನೆಲ್‌ ಮಾರ್ಗದ ಮೂಲಕ ಹೋಗಿ ಅಧಿಕಾರಿಗಳಿಗೆ ಮಾಹಿತಿ ನೀಡಿ ಸುಂಕ ಪಾವತಿಸಬೇಕಾಗುತ್ತದೆ. ಒಂದು ವೇಳೆ ಅಂತಹ ಯಾವುದೇ ವಸ್ತುಗಳಿಲ್ಲದಿದ್ದರೆ ಗ್ರೀನ್‌ ಚಾನೆಲ್‌ ಮಾರ್ಗದ ಮೂಲಕ ತಪಾಸಣೆಯಿಲ್ಲದೆ ಹೊರಹೋಗಬಹುದಾಗಿದೆ.

ಒಂದು ವರ್ಷದಲ್ಲಿ 127 ಕೆ.ಜಿ ಚಿನ್ನಾಭರಣ ಸಾಗಾಟ

ಅಕ್ರಮ ಚಿನ್ನ ಸಾಗಾಣೆ ಜಾಲವು ವ್ಯವಸ್ಥಿತವಾಗಿ ಮತ್ತು ಸಂಘಟಿತವಾಗಿ ಆರೋಪಿಗಳು ನಡೆಸುತ್ತಿದ್ದರು. ವಿದೇಶದಲ್ಲಿ ಸಂಗ್ರಹಿಸಿದ ಚಿನ್ನವನ್ನು ಭಾರತಕ್ಕೆ ಅಕ್ರಮವಾಗಿ ತರುತ್ತಿದ್ದರು. ನಗದು ಆಧಾರಿತ ವ್ಯವಹಾರ, ಹವಾಲಾ ಮತ್ತು ಬ್ಯಾಂಕಿಂಗ್‌ ಮಾರ್ಗಗಳ ಮೂಲಕ ಅಕ್ರಮ ಹಣ ವರ್ಗಾವಣೆ ಮಾಡಲಾಗಿದೆ. ಇಂತಹ ವ್ಯವಸ್ಥಿತ ಚಟುವಟಿಕೆಯು ವ್ಯಾಪಾರ, ಹಣಕಾಸು ವ್ಯವಸ್ಥೆಗಳನ್ನು ಹಾಳು ಮಾಡುವುದಲ್ಲದೆ, ಗಡಿಯಾಚೆಗಿನ ವಹಿವಾಟುಗಳನ್ನು ನಿಂತ್ರಿಸಲು ಉದ್ದೇಶಿರುವ ಸಂಸ್ಥೆಗಳ ಮೇಲಿನ ಸಾರ್ವಜನಿಕ ನಂಬಿಕೆ ಕಳೆದುಕೊಳ್ಳುವಂತೆ ಮಾಡುತ್ತವೆ ಎಂದು ಆರೋಪಪಟ್ಟಿಯಲ್ಲಿ ತಿಳಿಸಿದೆ.

ಅಕ್ರಮ ಚಿನ್ನ ಸಾಗಾಣೆಯು ತಂಡವಾಗಿ 2024ರ ಮಾರ್ಚ್‌ನಿಂದ 2025ರ ಮಾರ್ಚ್ ಅವಧಿಯಲ್ಲಿ 102.55 ಕೋಟಿ ರೂ. ಮೌಲ್ಯದ 127 ಕೆ.ಜಿ. 287 ಗ್ರಾಂ ಚಿನ್ನಾಭರಣವನ್ನು ಆರೋಪಿಗಳು ಸಾಗಾಟ ಮಾಡಿದ್ದಾರೆ. ಪ್ರಮುಖ ಆರೋಪಿ ರನ್ಯಾ ರಾವ್‌ 2025ರ ಮಾ.3ರಂದು 12.56 ಕೋಟಿ ರೂ. ಮೌಲ್ಯದ 14 ಕೆ.ಜಿ. ಚಿನ್ನವನ್ನು ವಿದೇಶದಿಂದ ಕಳ್ಳ ಸಾಗಾಟ ಮಾಡುವಾಗ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳ ಬಲೆಗೆ ಬಿದ್ದಿದ್ದರು. ಬಳಿಕ ಆಕೆಯ ಮನೆಯ ಮೇಲೆ ದಾಳಿ ನಡೆಸಿ ಶೋಧಿಸಿದಾಗ ಪತ್ತೆಯಾದ 2.06 ಕೋಟಿ ರೂ. ಮೌಲ್ಯದ ಚಿನ್ನಾಭರಣ ಮತ್ತು 2.67 ಕೋಟಿ ರೂ. ನಗದನ್ನು ಜಪ್ತಿ ಮಾಡಿದ್ದರು. ಈ ಸಂಬಂಧ ಡಿಆರ್‌ಐ ಮತ್ತು ಸಿಬಿಐ ದಾಖಲಿಸಿದ್ದ ಎಫ್‌ಐಆರ್‌ ಆಧಾರದ ಮೇಲೆ ಇ.ಡಿ. ತನಿಖೆ ನಡೆಸಿದೆ ಎಂದು ತಿಳಿಸಿದೆ.

ಸಹಚರರ ವಿರುದ್ಧವೂ ಆರೋಪಪಟ್ಟಿ

ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿ ತನಿಖೆ ನಡೆಸುತ್ತಿರುವ ಇಡಿ ಅಧಿಕಾರಿಗಳು ರನ್ಯಾರಾವ್‌ ಮತ್ತು ಆಕೆಯ ಸಹಚರರಾದ ತರುಣ್‌ ಕೊಂಡೂರು ಹಾಗೂ ಸಾಹಿಲ್‌ ಸಕಾರಿಯಾ ಜೈನ್‌ ವಿರುದ್ಧವೂ ಆರೋಪಪಟ್ಟಿ ಸಲ್ಲಿಸಿದೆ. ರನ್ಯಾರಾವ್‌ ವಿಮಾನ ನಿಲ್ದಾಣದಲ್ಲಿ ಚಿನ್ನದೊಂದಿಗೆ ಸಿಕ್ಕಬಿದ್ದ ಆರೋಪಿಯಾದರೆ, ಆರೋಪಿ ತರುಣ್‌ ಕೊಂಡೂರು ಈ ಜಾಲದ ಪ್ರಮುಖ ಸಂಚುಕೋರರಲ್ಲಿ ಒಬ್ಬರಾಗಿದ್ದಾರೆ. ಮತ್ತೋರ್ವ ಆರೋಪಿ ಸಾಹಿಲ್‌ ಸಕಾರಿಯಾ ಜೈನ್‌ ಅಕ್ರಮ ಸಾಗಣೆ ಮತ್ತು ಮಾರಾಟ ಪ್ರಕ್ರಿಯೆಯಲ್ಲಿ ಭಾಗಿಯಾದ ವ್ಯಕ್ತಿಯಾಗಿದ್ದಾನೆ ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ.

ಯಾರು ಈ ರನ್ಯಾರಾವ್‌?

ರನ್ಯಾರಾವ್ ಚಿಕ್ಕಮಗಳೂರಿನಲ್ಲಿ ಜನಿಸಿ, ಕೊಡಗಿನಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ನಂತರ ಬೆಂಗಳೂರಿನಲ್ಲಿ ದಯಾನಂದ ಸಾಗರ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನಲ್ಲಿ ಎಂಜಿನಿಯರಿಂಗ್ ವ್ಯಾಸಂಗಕ್ಕೆ ಸೇರಿದರು. ಆದರೆ ನಟನಾ ವೃತ್ತಿಯನ್ನು ಮುಂದುವರಿಸಲು ತಮ್ಮ ಅಧ್ಯಯನವನ್ನು ನಿಲ್ಲಿಸಿದರು.

ನಂತರ ಅವರು ಮುಂಬೈನ ಕಿಶೋರ್ ನಮಿತ್ ಕಪೂರ್ ನಟನಾ ಶಾಲೆಯಲ್ಲಿ ತರಬೇತಿ ಪಡೆದರು. ರನ್ಯಾರಾವ್‌ ಐಪಿಎಸ್‌ ಅಧಿಕಾರಿ ಕೆ. ರಾಮಚಂದ್ರ ರಾವ್ ಅವರ ಮಲಮಗಳಾಗಿದ್ದಾರೆ. ಮಾಣಿಕ್ಯ (2014) ಸಿನಿಮಾದಲ್ಲಿ ಕಿಚ್ಚ ಸುದೀಪ್ ಜೊತೆ ನಟಿಸಿ ತಮ್ಮ ನಟನೆಗೆ ಪದಾರ್ಪಣೆ ಮಾಡಿದರು. ನಂತರ ಅವರು ತಮಿಳು ಚಿತ್ರ ವಾಘಾ (2016) ನಲ್ಲಿ ವಿಕ್ರಮ್ ಪ್ರಭು ಜೊತೆ ನಾಯಕಿಯಾಗಿ ನಟಿಸಿದರು ಮತ್ತು ಗಣೇಶ್ ಅವರೊಂದಿಗೆ ಕನ್ನಡ ಚಿತ್ರ ಪಟಾಕಿ (2017) ನಲ್ಲಿ ನಟಿಸಿದರು.

Read More
Next Story