
ಸಾಂದರ್ಭಿಕ ಚಿತ್ರ
Suicide case|ಸ್ನಾನದ ಕೋಣೆಯಲ್ಲಿ ಬೆಂಕಿ ಹಚ್ಚಿಕೊಂಡು 22 ವರ್ಷದ ಯುವತಿ ಸಾವು
ನೆಲಮಂಗಲದ ಕೆ.ಜಿ. ಶ್ರೀನಿವಾಸಪುರದಲ್ಲಿ ಆ್ಯಪಲ್ ಕಂಪನಿ ಉದ್ಯೋಗಿ ಯಶಸ್ವಿನಿ (22) ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ. ಸಾವಿಗೂ ಮುನ್ನ ಪೆಟ್ರೋಲ್ ಖರೀದಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪ್ರತಿಷ್ಠಿತ ಆ್ಯಪಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 22 ವರ್ಷದ ಯುವತಿಯೊಬ್ಬಳು, ತನ್ನ ಮನೆಯ ಸ್ನಾನದ ಕೋಣೆಯಲ್ಲಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲಮಂಗಲದ ಕೆ.ಜಿ. ಶ್ರೀನಿವಾಸಪುರದಲ್ಲಿ ನಡೆದಿದೆ. ಈಕೆ ಕಳೆದ ಐದು ತಿಂಗಳಿಂದ ದೊಡ್ಡಬಳ್ಳಾಪುರದಲ್ಲಿರುವ ಆ್ಯಪಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ.
ಯಶಸ್ವಿನಿ ಮನೆಯ ಹೊರಗಿರುವ ಸ್ನಾನದ ಕೋಣೆಗೆ ತೆರಳಿ ತನ್ನ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ಬೆಂಕಿಯ ಜ್ವಾಲೆ ತೀವ್ರವಾಗಿದ್ದರಿಂದ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಆತ್ಮಹತ್ಯೆಗೂ ಮುನ್ನ ಆಕೆ ದಾಬಸ್‌ಪೇಟೆಯ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಖರೀದಿಸುತ್ತಿರುವ ದೃಶ್ಯಗಳು ಅಲ್ಲಿನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಆಕೆ ಮೊದಲೇ ಈ ನಿರ್ಧಾರ ಮಾಡಿದ್ದಳು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ವಿಷಯ ತಿಳಿಯುತ್ತಿದ್ದಂತೆಯೇ ದಾಬಸ್‌ಪೇಟೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಯಶಸ್ವಿನಿ ಈ ಹಂತದ ನಿರ್ಧಾರಕ್ಕೆ ಬರಲು ಕೆಲಸದ ಒತ್ತಡ ಕಾರಣವೇ ಅಥವಾ ವೈಯಕ್ತಿಕ ಸಮಸ್ಯೆಗಳಿವೆಯೇ ಎಂಬ ಬಗ್ಗೆ ಪೊಲೀಸರು ಕುಟುಂಬದವರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಯುವತಿಯ ಅಕಾಲಿಕ ನಿಧನದಿಂದ ಕೆ.ಜಿ. ಶ್ರೀನಿವಾಸಪುರ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ.
ಇತ್ತೀಚೆಗೆ ನಗರದ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 29 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಕೆ ಅಲ್ಪಾಯುಷಿ ಎಂದು ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದರು ಎನ್ನಲಾಗಿದ್ದು, ಈ ಮಾತಿನಿಂದ ಆಕೆ ತೀವ್ರ ಮಾನಸಿಕ ಆತಂಕಕ್ಕೆ ಒಳಗಾಗಿದ್ದರು. ಇದೇ ಭಯದಿಂದಾಗಿ ಆಕೆ ತನ್ನ ಜೀವನವನ್ನು ಕೊನೆಗಾಣಿಸಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಇಷ್ಟಪಟ್ಟ ಹುಡುಗನೊಂದಿಗೆ ಮದುವೆಯಾಗಬೇಕಿದ್ದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಳು.
(ಆತ್ಮಹತ್ಯೆಗಳನ್ನು ತಡೆಯಲು ಸಾಧ್ಯ. ಸಹಾಯಕ್ಕಾಗಿ ದಯವಿಟ್ಟು ಆತ್ಮಹತ್ಯೆ ತಡೆ ಸಹಾಯವಾಣಿಗಳನ್ನು ಸಂಪರ್ಕಿಸಿ:1ಲೈಫ್: 7893078930; ಲೈಫ್‌ಲೈನ್ +91-9163940404 , +91-9088030303; ಸುಮೈತ್ರಿ - 011-23389090 , +91-9315767849 ; ನೇಹಾ ಆತ್ಮಹತ್ಯೆ ತಡೆ ಕೇಂದ್ರ : 044-24640050; ಆಸರಾ ಸಹಾಯವಾಣಿ ಆತ್ಮಹತ್ಯೆ ತಡೆ, ಭಾವನಾತ್ಮಕ ಬೆಂಬಲ ಮತ್ತು ಆಘಾತ ನೆರವು ಕೇಂದ್ರ: 91-9820466726; ಕಿರಣ್, ಮಾನಸಿಕ ಆರೋಗ್ಯ ಪುನರ್ವಸತಿ ಕೇಂದ್ರ: 1800-599-0019; ದಿಶಾ: 0471-2552056; ಮೈತ್ರಿ: 0484-2540530; ಮತ್ತು ಸ್ನೇಹಾ ಆತ್ಮಹತ್ಯೆ ತಡೆ ಸಹಾಯವಾಣಿ: 044-24640050)

