ಯುದ್ಧದ ನಡುವೆಯೂ ಮಂಗಳೂರು ಕರಾವಳಿ ತಲುಪಿದ ಎಲ್‌ಪಿಜಿ ಹಡಗು
x

ಯುದ್ಧದ ನಡುವೆಯೂ ಮಂಗಳೂರು ಕರಾವಳಿ ತಲುಪಿದ ಎಲ್‌ಪಿಜಿ ಹಡಗು

ಇರಾನ್ ದಾಳಿ ಹಾಗೂ ಅದಕ್ಕೆ ಪ್ರತಿಯಾಗಿ ನಡೆಯುತ್ತಿರುವ ಸೇನಾ ಕಾರ್ಯಾಚರಣೆಗಳಿಂದಾಗಿ ಪಶ್ಚಿಮ ಏಷ್ಯಾದ ಸಮುದ್ರ ಮಾರ್ಗಗಳು ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಹೀಗಾಗಿ ಇಂಧನ ಕೊರತೆ ಭೀತಿ ಎದುರಾಗಿದೆ.


ಮಧ್ಯಪ್ರಾಚ್ಯದಲ್ಲಿ ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ಭುಗಿಲೆದ್ದಿರುವ ಭೀಕರ ಯುದ್ಧದ ಕಾರ್ಮೋಡಗಳ ನಡುವೆಯೂ ಭಾರತದಲ್ಲಿ ಇಂಧನ ಪೂರೈಕೆ ವಿಚಾರದಲ್ಲಿ ಆಶಾಭಾವ ಮೂಡಿದೆ. ಗುಜರಾತ್‌ನಿಂದ ಬರೋಬ್ಬರಿ 17,600 ಮೆಟ್ರಿಕ್ ಟನ್ ಅಡುಗೆ ಅನಿಲವನ್ನು (ಎಲ್‌ಪಿಜಿ) ಹೊತ್ತುತಂದ ವಿಯೆಟ್ನಾಂ ಧ್ವಜವಿರುವ 'ಅಪೊಲೊ ಓಷನ್' ಬೃಹತ್ ಟ್ಯಾಂಕರ್ ಹಡಗು ನವಮಂಗಳೂರು ಬಂದರಿಗೆ ಯಶಸ್ವಿಯಾಗಿ ಬಂದಿಳಿದಿದೆ. 2026ರ ಮಾರ್ಚ್ ಆರಂಭದಿಂದಲೇ ಪಶ್ಚಿಮ ಏಷ್ಯಾದ ಸಮುದ್ರ ಮಾರ್ಗಗಳಲ್ಲಿ ಯುದ್ಧದ ವಾತಾವರಣ ಕವಿದಿದ್ದರೂ, ಅನಿಲ ಪೂರೈಕೆ ನಡೆಯುತ್ತಿದೆ ಎಂಬುದಕ್ಕೆ ಇದುವೆ ಸಾಕ್ಷಿ.

ಹಡಗು ಮಂಗಳೂರು ತಲುಪಿರುವ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ದಟ್ಟ ಮಂಜು ಮುಸುಕಿದ ವಾತಾವರಣದ ನಡುವೆಯೂ ಟಗ್‌ಬೋಟ್‌ಗಳ ಸಹಾಯದಿಂದ ಬೃಹತ್ ಹಡಗು ಸುರಕ್ಷಿತವಾಗಿ ಮಂಗಳೂರು ಬಂದರಿನಲ್ಲಿ ಲಂಗರು ಹಾಕುವ ದೃಶ್ಯಗಳು ಸೆರೆಯಾಗಿವೆ. ಈ ಬೃಹತ್ ಪ್ರಮಾಣದ ಎಲ್‌ಪಿಜಿ ದಾಸ್ತಾನು ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL) ಮತ್ತು ಭಾರತ್ ಪೆಟ್ರೋಲಿಯಂ (BPCL) ಕಂಪನಿಗಳಿಗೆ ಸೇರಿದ್ದಾಗಿದೆ.

ಇರಾನ್ ದಾಳಿ ಹಾಗೂ ಅದಕ್ಕೆ ಪ್ರತಿಯಾಗಿ ನಡೆಯುತ್ತಿರುವ ಸೇನಾ ಕಾರ್ಯಾಚರಣೆಗಳಿಂದಾಗಿ ಪಶ್ಚಿಮ ಏಷ್ಯಾದ ಸಮುದ್ರ ಮಾರ್ಗಗಳು ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿವೆ. ಇಂತಹ ಕ್ಲಿಷ್ಟಕರ ಸಮಯದಲ್ಲಿಯೂ ಭಾರತದ ಇಂಧನ ಆಮದು ಭದ್ರತೆ ಜನರಿಗೆ ನಂಬಿಕೆ ಮೂಡಿಸುತ್ತಿದೆ.

ವದಂತಿಗಳನ್ನು ನಂಬಬೇಡಿ

ಇತ್ತೀಚಿನ ದಿನಗಳಲ್ಲಿ ಅಡುಗೆ ಅನಿಲ (ಎಲ್‌ಪಿಜಿ) ಸಿಲಿಂಡರ್ ಬುಕಿಂಗ್ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಭಾರೀ ವದಂತಿಯೊಂದಕ್ಕೆ ಸ್ಪಷ್ಟನೆ ಸಿಕ್ಕಿದೆ. ಒಂದು ಬಾರಿ ಗ್ಯಾಸ್ ಬುಕ್ ಮಾಡಿದ ಬಳಿಕ ಮುಂದಿನ ಸಿಲಿಂಡರ್ ಪಡೆಯಲು 35 ದಿನಗಳ ಕಾಲ ಕಾಯಬೇಕು ಎಂಬ ಸುಳ್ಳು ಸುದ್ದಿಯೊಂದು ಗ್ರಾಹಕರಲ್ಲಿ ತೀವ್ರ ಆತಂಕ ಸೃಷ್ಟಿಸಿತ್ತು. ಆದರೆ, ಈ ವದಂತಿಯನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಅಧಿಕಾರಿಗಳು, ಬುಕಿಂಗ್ ನಿಯಮಗಳಲ್ಲಿ ಯಾವುದೇ ಹೊಸ ಬದಲಾವಣೆ ಮಾಡಿಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ಜನಸಾಮಾನ್ಯರಿಗೆ ನಿರಾಳತೆ ನೀಡಿದ್ದಾರೆ.

ಪ್ರಸ್ತುತ ಜಾರಿಯಲ್ಲಿರುವ ನಿಯಮದ ಪ್ರಕಾರ, ನಗರ ಪ್ರದೇಶದ ಗ್ರಾಹಕರು ಎರಡು ಸಿಲಿಂಡರ್‌ಗಳ ಬುಕಿಂಗ್ ನಡುವೆ 25 ದಿನಗಳ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ಅದೇ ರೀತಿ ಗ್ರಾಮೀಣ ಭಾಗದ ಬಳಕೆದಾರರಿಗೆ ಈ ಮಿತಿ 45 ದಿನಗಳಷ್ಟಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾಗಿರುವ ಯುದ್ಧದ ಭೀತಿ ಮತ್ತು ಜಾಗತಿಕ ಪೂರೈಕೆ ಸರಪಳಿಯ ಆತಂಕದ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕಾ ಕ್ರಮವಾಗಿ ಕಾಳಸಂತೆಯಲ್ಲಿ ಗ್ಯಾಸ್ ದಾಸ್ತಾನು ಮಾಡುವುದನ್ನು ತಡೆಯಲು ಕಳೆದ ಮಾರ್ಚ್ 9 ರಂದು ಸಣ್ಣ ಬದಲಾವಣೆ ಮಾಡಲಾಗಿತ್ತು. ಅದರಂತೆ, ನಗರ ಪ್ರದೇಶದ ಗ್ರಾಹಕರ ಬುಕಿಂಗ್ ಅಂತರವನ್ನು 21 ದಿನಗಳಿಂದ 25 ದಿನಗಳಿಗೆ ಹೆಚ್ಚಿಸಲಾಗಿತ್ತು. ಇದನ್ನು ಹೊರತುಪಡಿಸಿ ಬೇರೆ ಯಾವುದೇ ಹೊಸ ನಿರ್ಬಂಧಗಳನ್ನು ವಿಧಿಸಿಲ್ಲ.

Read More
Next Story