
ಗ್ಯಾಸ್ ಸಿಲಿಂಡರ್ ಬುಕಿಂಗ್ಗೆ 35 ದಿನಗಳ ಕಾಯುವಿಕೆ ಎಂಬ ಸುದ್ದಿ ಸುಳ್ಳು...
ಪ್ರಸ್ತುತ ಜಾರಿಯಲ್ಲಿರುವ ನಿಯಮದ ಪ್ರಕಾರ, ನಗರ ಪ್ರದೇಶದ ಗ್ರಾಹಕರು ಎರಡು ಸಿಲಿಂಡರ್‌ಗಳ ಬುಕಿಂಗ್ ನಡುವೆ 25 ದಿನಗಳ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ಅದೇ ನಿಯಮ ಮುಂದುವರಿದಿದೆ.
ಇತ್ತೀಚಿನ ದಿನಗಳಲ್ಲಿ ಅಡುಗೆ ಅನಿಲ (ಎಲ್‌ಪಿಜಿ) ಸಿಲಿಂಡರ್ ಬುಕಿಂಗ್ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಭಾರೀ ವದಂತಿಯೊಂದಕ್ಕೆ ಸ್ಪಷ್ಟನೆ ಸಿಕ್ಕಿದೆ. ಒಂದು ಬಾರಿ ಗ್ಯಾಸ್ ಬುಕ್ ಮಾಡಿದ ಬಳಿಕ ಮುಂದಿನ ಸಿಲಿಂಡರ್ ಪಡೆಯಲು 35 ದಿನಗಳ ಕಾಲ ಕಾಯಬೇಕು ಎಂಬ ಸುಳ್ಳು ಸುದ್ದಿಯೊಂದು ಗ್ರಾಹಕರಲ್ಲಿ ತೀವ್ರ ಆತಂಕ ಸೃಷ್ಟಿಸಿತ್ತು. ಆದರೆ, ಈ ವದಂತಿಯನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಅಧಿಕಾರಿಗಳು, ಬುಕಿಂಗ್ ನಿಯಮಗಳಲ್ಲಿ ಯಾವುದೇ ಹೊಸ ಬದಲಾವಣೆ ಮಾಡಿಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ಜನಸಾಮಾನ್ಯರಿಗೆ ನಿರಾಳತೆ ನೀಡಿದ್ದಾರೆ.
ಪ್ರಸ್ತುತ ಜಾರಿಯಲ್ಲಿರುವ ನಿಯಮದ ಪ್ರಕಾರ, ನಗರ ಪ್ರದೇಶದ ಗ್ರಾಹಕರು ಎರಡು ಸಿಲಿಂಡರ್‌ಗಳ ಬುಕಿಂಗ್ ನಡುವೆ 25 ದಿನಗಳ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ಅದೇ ರೀತಿ ಗ್ರಾಮೀಣ ಭಾಗದ ಬಳಕೆದಾರರಿಗೆ ಈ ಮಿತಿ 45 ದಿನಗಳಷ್ಟಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾಗಿರುವ ಯುದ್ಧದ ಭೀತಿ ಮತ್ತು ಜಾಗತಿಕ ಪೂರೈಕೆ ಸರಪಳಿಯ ಆತಂಕದ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕಾ ಕ್ರಮವಾಗಿ ಕಾಳಸಂತೆಯಲ್ಲಿ ಗ್ಯಾಸ್ ದಾಸ್ತಾನು ಮಾಡುವುದನ್ನು ತಡೆಯಲು ಕಳೆದ ಮಾರ್ಚ್ 9 ರಂದು ಸಣ್ಣ ಬದಲಾವಣೆ ಮಾಡಲಾಗಿತ್ತು. ಅದರಂತೆ, ನಗರ ಪ್ರದೇಶದ ಗ್ರಾಹಕರ ಬುಕಿಂಗ್ ಅಂತರವನ್ನು 21 ದಿನಗಳಿಂದ 25 ದಿನಗಳಿಗೆ ಹೆಚ್ಚಿಸಲಾಗಿತ್ತು. ಇದನ್ನು ಹೊರತುಪಡಿಸಿ ಬೇರೆ ಯಾವುದೇ ಹೊಸ ನಿರ್ಬಂಧಗಳನ್ನು ವಿಧಿಸಿಲ್ಲ.
ದೇಶದಲ್ಲಿ ಗ್ಯಾಸ್ ಕೊರತೆ ಇಲ್ಲ, ಪೂರೈಕೆ ಸುಗಮ
ಜಾಗತಿಕ ಮಟ್ಟದಲ್ಲಿ ತೈಲ ಮತ್ತು ಅನಿಲ ಪೂರೈಕೆಯಲ್ಲಿ ವ್ಯತ್ಯಯದ ಆತಂಕವಿದ್ದರೂ, ಭಾರತದಲ್ಲಿ ಸದ್ಯಕ್ಕೆ ಯಾವುದೇ ರೀತಿಯ ಎಲ್‌ಪಿಜಿ ಕೊರತೆಯಿಲ್ಲ. ದೇಶದಾದ್ಯಂತ ಅಗತ್ಯವಿರುವಷ್ಟು ಗ್ಯಾಸ್ ದಾಸ್ತಾನು ಲಭ್ಯವಿದ್ದು, ಗ್ರಾಹಕರು ಯಾವುದೇ ಕಾರಣಕ್ಕೂ ಆತಂಕಕ್ಕೊಳಗಾಗಿ ಅನಿಲವನ್ನು ಅಕ್ರಮವಾಗಿ ಸಂಗ್ರಹಿಸುವ ಅಥವಾ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ತೈಲ ಕಂಪನಿಗಳು ಅಭಯ ನೀಡಿವೆ. ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ಸರ್ಕಾರ ಹಾಗೂ ಇಲಾಖೆ ಹದ್ದಿನ ಕಣ್ಣಿಟ್ಟಿದೆ.
ಸಿಲಿಂಡರ್ ವಿತರಣೆಯಲ್ಲಿ ವಿಳಂಬವೇಕೆ?
ನಿಯಮಗಳೇನೋ ಸ್ಪಷ್ಟವಾಗಿವೆ, ದಸ್ತಾನು ಕೂಡ ಸಾಕಷ್ಟಿದೆ. ಆದರೆ ವಾಸ್ತವದಲ್ಲಿ ಗ್ರಾಹಕರು ಗ್ಯಾಸ್ ಬುಕ್ ಮಾಡಿದ ನಂತರ ಸಿಲಿಂಡರ್ ಮನೆ ಬಾಗಿಲಿಗೆ ಬರಲು 7 ರಿಂದ 14 ದಿನಗಳ ಕಾಲ ವಿಳಂಬವಾಗುತ್ತಿದೆ. ಗ್ಯಾಸ್ ಏಜೆನ್ಸಿಗಳು ಮತ್ತು ಆನ್‌ಲೈನ್ ಬುಕಿಂಗ್ ಆ್ಯಪ್‌ಗಳಲ್ಲಿ ನಿರಂತರವಾಗಿ ಇಂತಹ ದೂರುಗಳು ದಾಖಲಾಗುತ್ತಿವೆ. ಇದಕ್ಕೆ ಮುಖ್ಯ ಕಾರಣ ಕಚ್ಚಾ ವಸ್ತುವಿನ ಕೊರತೆಯಲ್ಲ, ಬದಲಾಗಿ ಸ್ಥಳೀಯ ಮಟ್ಟದ ಸಾರಿಗೆ ಮತ್ತು ವಿತರಣಾ ವ್ಯವಸ್ಥೆಯಲ್ಲಿನ (ಲಾಜಿಸ್ಟಿಕ್ಸ್) ಸಮಸ್ಯೆಗಳಾಗಿವೆ. ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಸಿಬ್ಬಂದಿ ಕೊರತೆ ಮತ್ತು ವಿತರಣಾ ಜಾಲದ ಮೇಲಿನ ಒತ್ತಡದಿಂದಾಗಿ ಗ್ರಾಹಕರಿಗೆ ಸಮಯಕ್ಕೆ ಸರಿಯಾಗಿ ಸಿಲಿಂಡರ್ .
ಸಣ್ಣ ಸಿಲಿಂಡರ್ಗಳಲ್ಲಿ ವಿತರಣೆ
ಇದೇ ವೇಳೆ ಗ್ಯಾಸ್ ಅನ್ನು 10 ಕೆ.ಜಿ ತೂಕದ ಸಣ್ಣ ಸಿಲಿಂಡರ್ಗಳಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಸುದ್ದಿಯೂ ಹರಡಿದೆ. ಈ ಬಗ್ಗೆಯೂ ಯಾವುದೇ ಸ್ಪಷ್ಟನೆ ಇಲ್ಲ ಎಂಬುದಾಗಿಯೂ ಹೇಳಲಾಗುತ್ತಿದೆ.

