
Stock Market| ಷೇರು ಮಾರುಕಟ್ಟೆಯಲ್ಲಿ ಭಾರಿ ಪತನ: ಸೆನ್ಸೆಕ್ಸ್ 1,600 ಪಾಯಿಂಟ್ಸ್ ಕುಸಿತ
ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರಿ ರಕ್ತಪಾತವಾಗಿದೆ. ಅಮೆರಿಕ-ಇರಾನ್ ಮಾತುಕತೆ ವಿಫಲ ಹಾಗೂ ಕಚ್ಚಾ ತೈಲ ಬೆಲೆ 100 ಡಾಲರ್ ದಾಟಿದ ಬೆನ್ನಲ್ಲೇ ಸೆನ್ಸೆಕ್ಸ್ ಮತ್ತು ನಿಫ್ಟಿ ಪಾತಾಳಕ್ಕೆ ಕುಸಿದಿವೆ.
ಜಾಗತಿಕ ರಾಜಕೀಯ ಅನಿಶ್ಚಿತತೆ ಮತ್ತು ಕಚ್ಚಾ ತೈಲ ಬೆಲೆಯಲ್ಲಿನ ದಿಢೀರ್ ಏರಿಕೆಯಿಂದಾಗಿ ವಾರದ ಆರಂಭದಲ್ಲೇ ಭಾರತೀಯ ಷೇರು ಮಾರುಕಟ್ಟೆ ಭಾರಿ ಕುಸಿತ ಕಂಡಿದೆ. ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 1,600 ಪಾಯಿಂಟ್ಸ್ ಕುಸಿತ ಕಂಡರೆ, ನಿಫ್ಟಿ ಪ್ರಮುಖ ಮಟ್ಟಕ್ಕಿಂತ ಕುಸಿದಿದೆ.
ಸೋಮವಾರದ ವಹಿವಾಟಿನಲ್ಲಿ ನಿಫ್ಟಿ (Nifty) 450ಕ್ಕೂ ಹೆಚ್ಚು ಪಾಯಿಂಟ್ಸ್ ಕುಸಿತ ಕಂಡು 23,600 ಮಟ್ಟಕ್ಕೆ ತಲುಪಿದೆ. ಇತ್ತ ಸೆನ್ಸೆಕ್ಸ್ (Sensex) ಬರೋಬ್ಬರಿ 1,600 ಪಾಯಿಂಟ್ಸ್ ಕುಸಿದು 76,000 ಗಡಿಯ ಕೆಳಕ್ಕೆ ಕುಸಿದಿದೆ. ಮಾರುಕಟ್ಟೆಯ ಈ ಹಠಾತ್ ಕುಸಿತದಿಂದಾಗಿ ಹೂಡಿಕೆದಾರರ ಲಕ್ಷಾಂತರ ಕೋಟಿ ರೂಪಾಯಿ ಸಂಪತ್ತು ಕರಗಿ ಹೋಗಿದೆ.
ತೈಲ ಬೆಲೆ ಏರಿಕೆಗೆ ಕಾರಣವೇನು?
ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಂಡಿರುವ ಉದ್ವಿಗ್ನತೆ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರಿದೆ. ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಮಾತುಕತೆ ವಿಫಲವಾದ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 'ಹಾರ್ಮುಜ್ ಜಲಸಂಧಿ'ಯಲ್ಲಿ (Strait of Hormuz) ನೌಕಾ ದಿಗ್ಬಂಧನಕ್ಕೆ ಆದೇಶಿಸಿದ್ದಾರೆ. ಇದು ಜಾಗತಿಕ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟುಮಾಡುವ ಭೀತಿ ಮೂಡಿಸಿದ್ದು, ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 100 ಡಾಲರ್ ಗಡಿ ದಾಟಿದೆ.
ಭಾರತದ ಮೇಲೆ ಏನು ಪರಿಣಾಮ?
ಭಾರತವು ತನ್ನ ಅಗತ್ಯದ ಬಹುಪಾಲು ತೈಲವನ್ನು ಆಮದು ಮಾಡಿಕೊಳ್ಳುವುದರಿಂದ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾದಾಗ ದೇಶದ ಆಮದು ವೆಚ್ಚ ಹೆಚ್ಚಾಗುತ್ತದೆ. ಇದು ನೇರವಾಗಿ ಹಣದುಬ್ಬರ ಏರಿಕೆಗೆ ಕಾರಣವಾಗುತ್ತದೆ. ಇದರಿಂದಾಗಿ ಬ್ಯಾಂಕಿಂಗ್ ಮತ್ತು ಹಣಕಾಸು ವಲಯದ ಷೇರುಗಳು ಇಂದು ಭಾರಿ ಮಾರಾಟದ ಒತ್ತಡಕ್ಕೆ ಸಿಲುಕಿವೆ.
ಬ್ಯಾಂಕಿಂಗ್ ವಲಯಕ್ಕೆ ದೊಡ್ಡ ಹೊಡೆತ
ಹಣದುಬ್ಬರ ಏರಿಕೆಯಾದರೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಡ್ಡಿದರ ಕಡಿತಗೊಳಿಸುವ ಸಾಧ್ಯತೆ ಕ್ಷೀಣಿಸುತ್ತದೆ. ಇದು ಬ್ಯಾಂಕುಗಳ ಸಾಲ ನೀಡುವ ಸಾಮರ್ಥ್ಯ ಮತ್ತು ಲಾಭದ ಮೇಲೆ ಪರಿಣಾಮ ಬೀರುವುದರಿಂದ ಹೂಡಿಕೆದಾರರು ಬ್ಯಾಂಕಿಂಗ್ ಷೇರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಮತ್ತು ಜಿಯೋಜಿತ್ ಇನ್ವೆಸ್ಟ್‌ಮೆಂಟ್ಸ್ ತಜ್ಞರ ಪ್ರಕಾರ, ಪ್ರಸ್ತುತ ಪರಿಸ್ಥಿತಿಯು ಕಾದು ನೋಡುವ ತಂತ್ರಕ್ಕೆ ಸೂಕ್ತವಾಗಿದೆ.
ರೂಪಾಯಿ ಮೌಲ್ಯದ ಮೇಲೆ ಒತ್ತಡ
ತೈಲ ಬೆಲೆ ಏರಿಕೆಯಿಂದ ಭಾರತದ ಚಾಲ್ತಿ ಖಾತೆ ಕೊರತೆ ಹೆಚ್ಚಾಗುವ ಸಾಧ್ಯತೆ ಇದೆ. ಇದು ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಮತ್ತಷ್ಟು ಕುಸಿಯುವಂತೆ ಮಾಡಬಹುದು. ವಿದೇಶಿ ಹೂಡಿಕೆದಾರರು (FPI) ಮಾರುಕಟ್ಟೆಯಿಂದ ಹಣವನ್ನು ಹಿಂಪಡೆಯುತ್ತಿರುವುದು ಕೂಡ ಮಾರುಕಟ್ಟೆಯ ಅಸ್ಥಿರತೆಗೆ ಕಾರಣವಾಗಿದೆ.
ಹೂಡಿಕೆದಾರರಿಗೆ ತಜ್ಞರ ಸಲಹೆ
ಮಾರುಕಟ್ಟೆಯು ಜಾಗತಿಕ ವಿದ್ಯಮಾನಗಳಿಗೆ ತಕ್ಷಣದ ಪ್ರತಿಕ್ರಿಯೆ ನೀಡಿದೆಯಾದರೂ, ಭಾರತದ ಆರ್ಥಿಕತೆಯ ಅಡಿಪಾಯ ಭದ್ರವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟು ಬಗೆಹರಿಯುವವರೆಗೂ ಮಾರುಕಟ್ಟೆಯಲ್ಲಿ ಏರಿಳಿತ ಮುಂದುವರಿಯುವ ಸಾಧ್ಯತೆ ಇದೆ.

