RBI ರೆಪೊ ದರವನ್ನು ಶೇ. 5.25 ಕ್ಕೆ ಸ್ಥಿರವಾಗಿರಿಸಿದೆ. ಇದರಿಂದ ಗೃಹ ಮತ್ತು ವೈಯಕ್ತಿಕ ಸಾಲಗಾರರ EMI ಮೇಲೆ ಆಗುವ ಪರಿಣಾಮಗಳೇನು? ಸಂಪೂರ್ಣ ಮಾಹಿತಿ ಇಲ್ಲಿದೆ

Click the Play button to hear this message in audio format

ಭಾರತೀಯ ರಿಸರ್ವ್ ಬ್ಯಾಂಕ್ (RBI) ಫೆಬ್ರವರಿ 06, ಶುಕ್ರವಾರದಂದು ನಡೆದ ಸಭೆಯಲ್ಲಿ ರೆಪೊ ದರವನ್ನು ಶೇ. 5.25 ರಷ್ಟು ಬದಲಾಗದೆ ಉಳಿಸಿಕೊಳ್ಳಲು ನಿರ್ಧರಿಸಿದೆ. ಕಳೆದ ವರ್ಷ 125 ಬೇಸಿಸ್ ಪಾಯಿಂಟ್‌ಗಳಷ್ಟು (bps) ಕಡಿತಗೊಳಿಸಿದ ನಂತರ ಈಗ ಸ್ಥಿರತೆಯನ್ನು ಕಾಯ್ದುಕೊಳ್ಳಲಾಗಿದೆ. ಈ ನಿರ್ಧಾರವು ಆರ್ಥಿಕ ಸ್ಥಿರತೆಯನ್ನು ತರುತ್ತದೆಯಾದರೂ, ಸಾಲಗಾರರಿಗೆ ಅಥವಾ ಠೇವಣಿದಾರರಿಗೆ ತಕ್ಷಣದ ಯಾವುದೇ ಹೆಚ್ಚಿನ ಲಾಭ ಅಥವಾ ಬದಲಾವಣೆ ತರುವುದಿಲ್ಲ.

ಪ್ರಸಕ್ತ ಹಣಕಾಸು ವರ್ಷದ ಕೇಂದ್ರ ಬ್ಯಾಂಕಿನ ಕೊನೆಯ ಹಣಕಾಸು ನೀತಿ ಇದಾಗಿದೆ. ಮೇ 2020 ಮತ್ತು ಏಪ್ರಿಲ್ 2022ರ ನಡುವೆ ರೆಪೊ ದರವು ಶೇ. 4 ರಷ್ಟಿತ್ತು. ಏಪ್ರಿಲ್ 2022ರಿಂದ ಫೆಬ್ರವರಿ 2023ರ ನಡುವೆ ದರವನ್ನು ಕ್ರಮೇಣ ಶೇ. 6.5 ಕ್ಕೆ ಏರಿಸಲಾಯಿತು. ಇತ್ತೀಚೆಗೆ ಈ ಮಹತ್ವದ ಬದಲಾವಣೆ ಮಾಡಲಾಗಿದ್ದು, ಶೇ. 6.5 ರಲ್ಲಿದ್ದ ದರವನ್ನು ಇತ್ತೀಚೆಗೆ ಶೇ. 5.25 ಕ್ಕೆ ಇಳಿಸಲಾಗಿದ್ದು, ಈಗ ಅದನ್ನು ಸ್ಥಿರವಾಗಿಡಲಾಗಿದೆ.

ಸಾಲಗಾರರ ಮೇಲೆ ಇದರ ಪರಿಣಾಮವೇನು?

ರೆಪೊ ದರದಲ್ಲಿ ಬದಲಾವಣೆ ಇಲ್ಲದ ಕಾರಣ ಹಳೆಯ ಸಾಲಗಾರರ ಇಎಂಐ (EMI) ಮೊತ್ತದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಹೊಸ ಸಾಲಗಾರರ ಸಾಲದ ಮೇಲಿನ ಬಡ್ಡಿ ದರಗಳು ಸದ್ಯಕ್ಕೆ ಸ್ಥಿರವಾಗಿರಲಿವೆ. ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕುಗಳು ಗೃಹ, ವಾಹನ ಮತ್ತು ವೈಯಕ್ತಿಕ ಸಾಲಗಳ ಮೇಲಿನ ಪ್ರಸ್ತುತ ಬಡ್ಡಿ ದರಗಳನ್ನೇ ಮುಂದುವರಿಸುವ ಸಾಧ್ಯತೆಯಿದೆ.

ರೆಪೊ ದರ ಸ್ಥಿರತೆಯಿಂದ ಇಎಂಐ (EMI) ಮೇಲೆ ಏನು ಪರಿಣಾಮ ಬೀರಬಹುದು ಎಂಬುದನ್ನು ಉದಾಹರಣೆ ಸಹಿತ ವಿವರಿಸಲಾಗಿದೆ. ಉದಾಹರಣೆಗೆ, ನೀವು ಶೇ. 8.20 ಬಡ್ಡಿದರದಲ್ಲಿ 30 ವರ್ಷಗಳ ಅವಧಿಗೆ 50 ಲಕ್ಷ ರೂಪಾಯಿ ಗೃಹ ಸಾಲ ಪಡೆದಿದ್ದರೆ, ನಿಮ್ಮ ಮಾಸಿಕ ಇಎಂಐ 37,346 ರೂಪಾಯಿಗಳಲ್ಲೇ ಮುಂದುವರಿಯುತ್ತದೆ. ಇದರಿಂದ ಮಾಸಿಕ ಅಥವಾ ವಾರ್ಷಿಕವಾಗಿ ಯಾವುದೇ ಹೆಚ್ಚಿನ ಉಳಿತಾಯವಾಗುವುದಿಲ್ಲ. ಅದೇ ರೀತಿ, ಶೇ. 12 ರ ಬಡ್ಡಿದರದಲ್ಲಿ 5 ಲಕ್ಷ ರೂಪಾಯಿ ವೈಯಕ್ತಿಕ ಸಾಲವನ್ನು 5 ವರ್ಷಗಳ ಅವಧಿಗೆ ಪಡೆದಿದ್ದರೆ, ನಿಮ್ಮ ಇಎಂಐ 11,122 ರೂಪಾಯಿಗಳಲ್ಲೇ ಸ್ಥಿರವಾಗಿರುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ, ಆರ್‌ಬಿಐನ ಈ ನಿರ್ಧಾರವು ಮಾರುಕಟ್ಟೆಯಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡಿದೆಯೇ ಹೊರತು ಸಾಲಗಾರರ ಮಾಸಿಕ ವೆಚ್ಚದಲ್ಲಿ ಯಾವುದೇ ಇಳಿಕೆ ತಂದಿಲ್ಲ.

Next Story