ಸಾಲಗಾರರಿಗೆ ಸಿಹಿ ಸುದ್ದಿ;  ಬಡ್ಡಿ ದರ ಶೇ. 0.25 ಇಳಿಸಿದ ಆರ್​ಬಿಐ
x

ಆರ್‌ಬಿಐ 

ಸಾಲಗಾರರಿಗೆ ಸಿಹಿ ಸುದ್ದಿ; ಬಡ್ಡಿ ದರ ಶೇ. 0.25 ಇಳಿಸಿದ ಆರ್​ಬಿಐ

ಬ್ಯಾಂಕುಗಳು ಈ ದರ ಕಡಿತದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಿದರೆ, ಗೃಹ ಸಾಲ, ವಾಹನ ಸಾಲ ಮತ್ತು ಇತರೆ ಸಾಲಗಳ ಮೇಲಿನ ಬಡ್ಡಿ ದರಗಳು ಕಡಿಮೆಯಾಗಲಿವೆ.


Click the Play button to hear this message in audio format

ಹಣದುಬ್ಬರ ಇಳಿಕೆ ಮತ್ತು ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಹತ್ವದ ನಿರ್ಧಾರ ಕೈಗೊಂಡಿದೆ. ರೆಪೋ ದರವನ್ನು 25 ಮೂಲಾಂಶಗಳಷ್ಟು (bps) ಕಡಿತಗೊಳಿಸಿದ್ದು, ದರವು ಶೇ. 5.25ಕ್ಕೆ ಇಳಿಕೆಯಾಗಿದೆ. ಇದು ಅರ್ಥವ್ಯವಸ್ಥೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಆರ್‌ಬಿಐ ತೆಗೆದುಕೊಂಡಿರುವ ಮೊದಲ ಪ್ರಮುಖ 'ಸರಳೀಕರಣ ಕ್ರಮ' (Easing Step) ಎಂದು ವಿಶ್ಲೇಷಿಸಲಾಗಿದೆ.

ಬ್ಯಾಂಕುಗಳು ಈ ದರ ಕಡಿತದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಿದರೆ, ಗೃಹ ಸಾಲ, ವಾಹನ ಸಾಲ ಮತ್ತು ಇತರೆ ಸಾಲಗಳ ಮೇಲಿನ ಬಡ್ಡಿ ದರಗಳು ಕಡಿಮೆಯಾಗಲಿವೆ. ಇದರಿಂದ ಮಾಸಿಕ ಕಂತು (ಇಎಂಐ) ಮತ್ತು ಸಾಲದ ವೆಚ್ಚದಲ್ಲಿ (Credit Costs) ಇಳಿಕೆಯಾಗುವ ಸಾಧ್ಯತೆಯಿದೆ. ದೀರ್ಘಕಾಲದ ನಂತರ ಬಡ್ಡಿ ದರ ಇಳಿಕೆಯಾಗುತ್ತಿರುವುದು ಸಾಲಗಾರರಲ್ಲಿ ನೆಮ್ಮದಿ ಮೂಡಿಸಿದೆ.

ಹಣದುಬ್ಬರ ನಿಯಂತ್ರಣ

ದರ ಕಡಿತದ ನಿರ್ಧಾರಕ್ಕೆ ಕಾರಣಗಳನ್ನು ವಿವರಿಸಿದ ಗವರ್ನರ್ ಸಂಜಯ್​ ಮಲ್ಹೋತ್ರಾ, "ಬದಲಾಗುತ್ತಿರುವ ಭೌಗೋಳಿಕ ರಾಜಕೀಯ ಮತ್ತು ವ್ಯಾಪಾರ ವಾತಾವರಣವು ಜಾಗತಿಕ ಆರ್ಥಿಕತೆಯ ಮುನ್ನೋಟದ ಮೇಲೆ ಪರಿಣಾಮ ಬೀರುತ್ತಲೇ ಇದೆ. ಮುಂದುವರಿದ ಆರ್ಥಿಕತೆಗಳಲ್ಲಿ ಹಣದುಬ್ಬರವು ಇನ್ನೂ ನಿಗದಿತ ಗುರಿಗಿಂತ ಹೆಚ್ಚಿದೆ. ಆದರೆ, ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಹಣದುಬ್ಬರದ ಒತ್ತಡ ನಿಯಂತ್ರಣದಲ್ಲಿದೆ. ಈ ಅಂಶವು ನಮಗೆ 'ಹೊಂದಾಣಿಕೆಯ ವಿತ್ತೀಯ ನೀತಿ'ಯನ್ನು ಅನುಸರಿಸಲು ಅವಕಾಶ ಮಾಡಿಕೊಟ್ಟಿದೆ," ಎಂದು ತಿಳಿಸಿದರು.

ಜಾಗತಿಕ ಷೇರು ಮಾರುಕಟ್ಟೆಗಳ ಮೇಲಾಗುತ್ತಿರುವ ಪರಿಣಾಮಗಳ ಬಗ್ಗೆಯೂ ಗವರ್ನರ್ ಬೆಳಕು ಚೆಲ್ಲಿದರು. "ಕೃತಕ ಬುದ್ಧಿಮತ್ತೆ (AI) ಆಧಾರಿತ ಆಶಾವಾದ ಮತ್ತು ಷೇರುಗಳ ಅಧಿಕ ಮೌಲ್ಯಮಾಪನಗಳಿಂದ ಜಾಗತಿಕ ಇಕ್ವಿಟಿ ಮಾರುಕಟ್ಟೆಗಳು ಗೊಂದಲಮಯ ಸನ್ನಿವೇಶವನ್ನು ಎದುರಿಸುತ್ತಿವೆ. ಇದರ ಜೊತೆಗೆ, ವಿವಿಧ ದೇಶಗಳ ಕೇಂದ್ರ ಬ್ಯಾಂಕುಗಳು ಅನುಸರಿಸುತ್ತಿರುವ ಭಿನ್ನ ನೀತಿಗಳು ಬಂಡವಾಳ ಹರಿವು ಮತ್ತು ಇಳುವರಿ ಅಂತರದ ಮೇಲೆ ಅನಿಶ್ಚಿತತೆಯನ್ನು ಸೃಷ್ಟಿಸಿವೆ," ಎಂದು ಸಂಜಯ್ ಮಲ್ಹೋತ್ರಾ ಅಭಿಪ್ರಾಯಪಟ್ಟಿದ್ದಾರೆ.

Read More
Next Story