Rafales Hammer missile will be manufactured in Bengaluru
x

 ಹ್ಯಾಮರ್ ಕ್ಷಿಪಣಿ

ಬೆಂಗಳೂರಿನಲ್ಲೇ ತಯಾರಾಗಲಿದೆ ರಫೇಲ್‌ ಯುದ್ಧವಿಮಾನದ ಹ್ಯಾಮರ್ ಕ್ಷಿಪಣಿ

ಒಂದು ರಫೇಲ್ ವಿಮಾನವು ಏಕಕಾಲದಲ್ಲಿ ಬರೋಬ್ಬರಿ 6 ಹ್ಯಾಮರ್ ಕ್ಷಿಪಣಿಗಳನ್ನು ಹೊತ್ತೊಯ್ಯಬಲ್ಲದು ಮತ್ತು ಒಂದೇ ಬಾರಿಗೆ 6 ಬೇರೆ ಬೇರೆ ಗುರಿಗಳನ್ನು ಉಡಾಯಿಸಬಲ್ಲದು. ಪ್ರತಿ ಕ್ಷಿಪಣಿಯು 330 ಕೆ.ಜಿ ತೂಕವಿರುತ್ತದೆ.


Click the Play button to hear this message in audio format

ಭಾರತೀಯ ವಾಯುಸೇನೆಯ ಬಲವನ್ನು ಹೆಚ್ಚಿಸಿರುವ ರಫೇಲ್ (Rafale) ಯುದ್ಧ ವಿಮಾನಗಳಲ್ಲಿ ಬಳಸಲಾಗುವ ಅತ್ಯಂತ ಶಕ್ತಿಶಾಲಿ 'ಹ್ಯಾಮರ್' ಕ್ಷಿಪಣಿಗಳು ಇನ್ನು ಮುಂದೆ ವಿದೇಶದಿಂದ ಆಮದಾಗುವುದಿಲ್ಲ, ಬದಲಿಗೆ ನಮ್ಮ ದೇಶದಲ್ಲೇ ತಯಾರಾಗಲಿವೆ. ಅದೂ ನಮ್ಮ ಬೆಂಗಳೂರಿನಲ್ಲಿ!

ಈ ಸಂಬಂಧ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ಫ್ರಾನ್ಸ್‌ನ ಸಫ್ರಾನ್ ಎಲೆಕ್ಟ್ರಾನಿಕ್ಸ್ ಅಂಡ್ ಡಿಫೆನ್ಸ್ ಸಂಸ್ಥೆಗಳ ನಡುವೆ ಮಹತ್ವದ ಒಪ್ಪಂದ ಏರ್ಪಟ್ಟಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಫ್ರಾನ್ಸ್ ರಕ್ಷಣಾ ಸಚಿವೆ ಕ್ಯಾಥರೀನ್ ವೌಟ್ರಿನ್ ಅವರ ಸಮ್ಮುಖದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

50:50 ಪಾಲುದಾರಿಕೆಯ ಸಾಹಸ

ಹ್ಯಾಮರ್ ವೆಪನ್ ಸಿಸ್ಟಮ್ ಯೋಜನೆಯು ಜಂಟಿ ಹೂಡಿಕೆಯಾಗಿದ್ದು, ಬಿಇಎಲ್ ಮತ್ತು ಸಫ್ರಾನ್ ಕಂಪನಿಗಳು ತಲಾ 50:50ರಷ್ಟು ಇಕ್ವಿಟಿ ಪಾಲುದಾರಿಕೆಯನ್ನು ಹೊಂದಿವೆ. ಈ ಜಂಟಿ ಉದ್ಯಮದ ಮಂಡಳಿಯಲ್ಲಿ ಎರಡೂ ಕಂಪನಿಗಳ ತಲಾ ಇಬ್ಬರು ನಿರ್ದೇಶಕರು ಇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, 10 ವರ್ಷಗಳ ರಕ್ಷಣಾ ಸಹಕಾರ ಒಪ್ಪಂದವನ್ನೂ ಉಭಯ ದೇಶಗಳು ನವೀಕರಿಸಿವೆ.

'ಹ್ಯಾಮರ್' (Highly Agile Modular Munition Extended Range) ಎಂಬುದು ಅತ್ಯಾಧುನಿಕ ಸ್ಮಾರ್ಟ್ ಆಯುಧವಾಗಿದ್ದು, ವೈಮಾನಿಕ ದಾಳಿಯಲ್ಲಿ ಗೇಮ್ ಚೇಂಜರ್ ಎನಿಸಿಕೊಂಡಿದೆ. ಇದು 'ಫೈರ್ ಅಂಡ್ ಫರ್ಗೆಟ್' (Fire and Forget) ತಂತ್ರಜ್ಞಾನವನ್ನು ಹೊಂದಿದೆ. ಅಂದರೆ, ಒಮ್ಮೆ ಗುರಿಯನ್ನು ಲಾಕ್ ಮಾಡಿ ಹಾರಿಸಿದರೆ ಸಾಕು, ಎಂತಹ ಪ್ರತಿಕೂಲ ಹವಾಮಾನವಿದ್ದರೂ ಇದು ನಿಖರವಾಗಿ ಹೋಗಿ ಗುರಿಯನ್ನು ಧ್ವಂಸ ಮಾಡುತ್ತದೆ. ಸುಮಾರು 60 ರಿಂದ 70 ಕಿಲೋಮೀಟರ್ ದೂರದಲ್ಲಿರುವ ಶತ್ರು ನೆಲೆಗಳನ್ನೂ ಇದು ಪುಡಿಗಟ್ಟಬಲ್ಲದು. ಪರ್ವತ ಪ್ರದೇಶಗಳಲ್ಲಿ ಅಡಗಿರುವ ಉಗ್ರರ ಬಂಕರ್‌ಗಳು, ಬಲಿಷ್ಠ ಕಟ್ಟಡಗಳು ಮತ್ತು ಸೇನಾ ನೆಲೆಗಳನ್ನು ಧ್ವಂಸಗೊಳಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ.

ಒಂದು ರಫೇಲ್ ವಿಮಾನವು ಏಕಕಾಲದಲ್ಲಿ ಬರೋಬ್ಬರಿ 6 ಹ್ಯಾಮರ್ ಕ್ಷಿಪಣಿಗಳನ್ನು ಹೊತ್ತೊಯ್ಯಬಲ್ಲದು ಮತ್ತು ಒಂದೇ ಬಾರಿಗೆ 6 ಬೇರೆ ಬೇರೆ ಗುರಿಗಳನ್ನು ಉಡಾಯಿಸಬಲ್ಲದು. ಪ್ರತಿ ಕ್ಷಿಪಣಿಯು 330 ಕೆ.ಜಿ ತೂಕವಿರುತ್ತದೆ.

ತೇಜಸ್‌ಗೂ ಸಿಗಲಿದೆ ಬಲ

ಪ್ರಸ್ತುತ ಇದನ್ನು ರಫೇಲ್ ಯುದ್ಧ ವಿಮಾನಗಳಲ್ಲಿ ಮಾತ್ರ ಬಳಸಲಾಗುತ್ತಿದೆ. ಆದರೆ, ದೇಶೀಯವಾಗಿ ತಯಾರಾಗಲಿರುವುದರಿಂದ ಮುಂದಿನ ದಿನಗಳಲ್ಲಿ ಭಾರತದ ಹೆಮ್ಮೆಯ ಲಘು ಯುದ್ಧ ವಿಮಾನ 'ತೇಜಸ್' (Tejas) ಕೂಡ ಹ್ಯಾಮರ್ ಅಸ್ತ್ರವನ್ನು ಹೊತ್ತೊಯ್ಯುವ ಸಾಧ್ಯತೆಯಿದೆ.

Read More
Next Story