
ಸಾಂದರ್ಭಿಕ ಚಿತ್ರ
ಎಚ್ಚರಿಕೆ; ಮುದ್ರಾ ಯೋಜನೆ ಹೆಸರಿನಲ್ಲಿ ನಕಲಿ ಸಾಲ ಮಂಜೂರಾತಿ ಪತ್ರಗಳ ಹಾವಳಿ; ಬಲೆಗೆ ಬಿದ್ದರೆ ನಿಮಗೆ ನಷ್ಟ
ಈ ಕುರಿತು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಅಧಿಕೃತವಾಗಿ ಸ್ಪಷ್ಟನೆ ನೀಡಿರುವ ಪಿಐಬಿ ಫ್ಯಾಕ್ಟ್ ಚೆಕ್ ಘಟಕವು, ಪ್ರಸ್ತುತ ಹರಿದಾಡುತ್ತಿರುವ ಪತ್ರಗಳು ಸಂಪೂರ್ಣ ನಕಲಿ ಎಂದು ಘೋಷಿಸಿದೆ.
ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ಸಾಲ ಮಂಜೂರಾಗಿದೆ ಎಂದು ತಿಳಿಸುವ ನಕಲಿ ಪತ್ರಗಳು ಸಾಮಾಜಿಕ ಜಾಲತಾಣಗಳು ಹಾಗೂ ವಾಟ್ಸಾಪ್‌ಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. 2,550 ಪ್ರೊಸೆಸಿಂಗ್ ಶುಲ್ಕ ಪಾವತಿಸಿದರೆ ತಕ್ಷಣವೇ 5 ಲಕ್ಷ ರೂಪಾಯಿ ಸಾಲ ಒದಗಿಸುವುದಾಗಿ ಈ ಪತ್ರಗಳಲ್ಲಿ ಸುಳ್ಳು ಭರವಸೆ ನೀಡಲಾಗುತ್ತಿದ್ದು, ಸಾರ್ವಜನಿಕರು ಇಂತಹ ವಂಚನೆಗೆ ಬಲಿಯಾಗದಂತೆ ಎಚ್ಚರಿಕೆ ವಹಿಸಲು ಕೇಂದ್ರ ಸರ್ಕಾರದ 'ಪಿಐಬಿ ಫ್ಯಾಕ್ಟ್ ಚೆಕ್' (PIB Fact Check) ಸೂಚಿಸಿದೆ.
ವಂಚಕರು ಮುದ್ರಾ ಯೋಜನೆಯ ಅಧಿಕೃತ ಲಾಂಛನಗಳನ್ನು ಬಳಸಿ, ನೋಡಲು ಅಸಲಿಯಂತೆಯೇ ಕಾಣುವ ನಕಲಿ ಸಾಲ ಮಂಜೂರಾತಿ ಪತ್ರಗಳನ್ನು ಸೃಷ್ಟಿಸುತ್ತಾರೆ. ಈ ಪತ್ರಗಳನ್ನು ವಾಟ್ಸ್ಆ್ಯಪ್, ಇಮೇಲ್ ಅಥವಾ ಎಸ್‌ಎಂಎಸ್ ಮೂಲಕ ಕಳುಹಿಸಿ, ಸಾಲದ ಮೊತ್ತವನ್ನು ಬಿಡುಗಡೆ ಮಾಡಲು 'ಪ್ರೊಸೆಸಿಂಗ್ ಶುಲ್ಕ', 'ವಿಮಾ ಶುಲ್ಕ' ಅಥವಾ 'ಒಪ್ಪಂದದ ಶುಲ್ಕ'ದ ಹೆಸರಿನಲ್ಲಿ ಮುಂಗಡವಾಗಿ ಹಣವನ್ನು ಕೇಳುತ್ತಾರೆ. ವಾಸ್ತವದಲ್ಲಿ, ಮುದ್ರಾ ಯೋಜನೆಯಡಿ ಸಾಲ ಪಡೆಯಲು ಯಾವುದೇ ರೀತಿಯ ಮುಂಗಡ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ.
ಪಿಐಬಿ ಫ್ಯಾಕ್ಟ್ ಚೆಕ್ ಸ್ಪಷ್ಟನೆ
ಈ ಕುರಿತು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಅಧಿಕೃತವಾಗಿ ಸ್ಪಷ್ಟನೆ ನೀಡಿರುವ ಪಿಐಬಿ ಫ್ಯಾಕ್ಟ್ ಚೆಕ್ ಘಟಕವು, ಪ್ರಸ್ತುತ ಹರಿದಾಡುತ್ತಿರುವ ಪತ್ರಗಳು ಸಂಪೂರ್ಣ ನಕಲಿ ಎಂದು ಘೋಷಿಸಿದೆ. 'ಮುದ್ರಾ' ಎಂಬುದು ಕೇವಲ ಒಂದು ಮರುಹಣಕಾಸು ಸಂಸ್ಥೆಯಾಗಿದ್ದು, ಇದು ಯಾವುದೇ ವ್ಯಕ್ತಿಗಳಿಗೆ ಅಥವಾ ಕಿರು-ಉದ್ಯಮಿಗಳಿಗೆ ನೇರವಾಗಿ ಸಾಲ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಬದಲಾಗಿ, ಮುದ್ರಾ ಯೋಜನೆಯಡಿ ಸಾಲವನ್ನು ಕೇವಲ ಅಧಿಕೃತ ಬ್ಯಾಂಕ್‌ಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಹಾಗೂ ಕಿರು-ಹಣಕಾಸು ಸಂಸ್ಥೆಗಳ ಮೂಲಕ ಮಾತ್ರ ಪಡೆಯಬಹುದು. ಮುದ್ರಾ ಸಾಲ ಕೊಡಿಸಲು ಯಾವುದೇ ಮಧ್ಯವರ್ತಿಗಳು ಅಥವಾ ಏಜೆಂಟ್‌ಗಳನ್ನು ಸರ್ಕಾರ ನೇಮಿಸಿಲ್ಲ.
ವಂಚನೆಯಿಂದ ಪಾರಾಗುವುದು ಹೇಗೆ?
ನಕಲಿ ಸಾಲದ ಆಮಿಷಗಳಿಂದ ಪಾರಾಗಲು ಈ ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ.
ಸಾಲ ಮಂಜೂರಾತಿಗೂ ಮುನ್ನ ಯಾರಾದರೂ ನಿಮ್ಮಿಂದ ಹಣ ಕೇಳಿದರೆ, ಅದು ಖಂಡಿತವಾಗಿಯೂ ವಂಚನೆ ಎಂದು ಅರಿತುಕೊಳ್ಳಿ. ನೀವು ಯಾವುದೇ ಅರ್ಜಿ ಸಲ್ಲಿಸದಿದ್ದರೂ, ನಿಮ್ಮ ಸಾಲ 'ಪ್ರೀ-ಅಪ್ರೂವ್ಡ್' ಆಗಿದೆ ಎಂದು ಸಂದೇಶ ಬಂದರೆ ಅದು ನಕಲಿ. ಸಾಲದ ಅಗತ್ಯವಿದ್ದರೆ ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ನೇರವಾಗಿ ಭೇಟಿ ನೀಡಿ ಅಧಿಕಾರಿಗಳನ್ನು ಸಂಪರ್ಕಿಸಿ ಅಥವಾ ಮುದ್ರಾ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ (mudra.org.in) ಅಥವಾ ಜನ್ ಸಮರ್ಥ್ (JanSamarth) ಪೋರ್ಟಲ್‌ಗೆ ಭೇಟಿ ನೀಡಿ.
ಯಾವುದೇ ರೀತಿಯ ಅನುಮಾನಾಸ್ಪದ ಅಥವಾ ನಕಲಿ ಸಂದೇಶಗಳು ಕಂಡುಬಂದಲ್ಲಿ, ಕೂಡಲೇ ಪಿಐಬಿ ಫ್ಯಾಕ್ಟ್ ಚೆಕ್ ವಾಟ್ಸಾಪ್ ಸಂಖ್ಯೆ +91 8799711259 ಅಥವಾ ಇಮೇಲ್ factcheck@pib.gov.in ಗೆ ದೂರು ನೀಡುವಂತೆ ಸರ್ಕಾರ ಕೋರಿದೆ.

