ಫೆಬ್ರವರಿ 1 ರಿಂದ ಸಿಗರೇಟ್, ತಂಬಾಕು ಮತ್ತು ಪಾನ್ ಮಸಾಲಾ ಬೆಲೆ ಏರಿಕೆ ಸಾಧ್ಯತೆ. ಸರ್ಕಾರದಿಂದ ಹೆಚ್ಚುವರಿ ಅಬಕಾರಿ ಸುಂಕ ಮತ್ತು ಆರೋಗ್ಯ ಸೆಸ್ ವಿಧಿಸಿ ಅಧಿಸೂಚನೆ ಹೊರಡಿಸಲಾಗಿದೆ.

Click the Play button to hear this message in audio format

ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ಮತ್ತು ಪಾನ್ ಮಸಾಲಾ ಮೇಲೆ ಹೊಸ 'ಸೆಸ್' ವಿಧಿಸುವ ನಿರ್ಧಾರವನ್ನು ಫೆಬ್ರವರಿ 1, 2026 ರಿಂದ ಜಾರಿಗೆ ತರಲು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಕೇಂದ್ರ ಸರ್ಕಾರವು ತಂಬಾಕು ಉತ್ಪನ್ನಗಳ ಮೇಲಿನ 'ಜಿಎಸ್‌ಟಿ ಪರಿಹಾರ ಸೆಸ್' ಅನ್ನು ರದ್ದುಗೊಳಿಸಿ, ಅದರ ಬದಲಾಗಿ ಹೊಸ ತೆರಿಗೆಗಳನ್ನು ಜಾರಿಗೆ ತರುತ್ತಿದೆ. ಇದು ಕೇವಲ ಬೆಲೆ ಏರಿಕೆಯಷ್ಟೇ ಅಲ್ಲದೆ, ಆಡಳಿತಾತ್ಮಕವಾಗಿಯೂ ದೊಡ್ಡ ಬದಲಾವಣೆಯಾಗಿದೆ. ಕೇಂದ್ರದ ಈ ಹೊಸ ನೀತಿಯಿಂದ ಸಿಗರೇಟ್‌, ಬೀಡಿ, ತಂಬಾಕು ದರ ಮತ್ತಷ್ಟು ಏರಿಕೆಯಾಗಲಿದೆ.

ಪ್ರಮುಖ ಬದಲಾವಣೆಗಳು

  • ಹೊಸ ತೆರಿಗೆಗಳ ಸೇರ್ಪಡೆ: ಪ್ರಸ್ತುತ ಜಾರಿಯಲ್ಲಿರುವ ಜಿಎಸ್‌ಟಿ (GST) ದರದ ಜೊತೆಗೆ, ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ಮತ್ತು ಪಾನ್ ಮಸಾಲಾ ಮೇಲೆ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ವಿಧಿಸಲಾಗುತ್ತದೆ.
  • ಜಿಎಸ್‌ಟಿ ಪರಿಹಾರ ಸೆಸ್ ರದ್ದು: ಈ ಹೊಸ ತೆರಿಗೆಗಳು ಸದ್ಯ ಜಾರಿಯಲ್ಲಿರುವ 'ಜಿಎಸ್‌ಟಿ ಪರಿಹಾರ ಸೆಸ್' ಅನ್ನು ಬದಲಿಸಲಿದ್ದು, ಫೆಬ್ರವರಿ 1 ರಿಂದ ಪರಿಹಾರ ಸೆಸ್ ಅಸ್ತಿತ್ವದಲ್ಲಿರುವುದಿಲ್ಲ.
  • ಪರಿಷ್ಕೃತ ಜಿಎಸ್‌ಟಿ ದರಗಳು: ಪಾನ್ ಮಸಾಲಾ, ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳಿಗೆ ಶೇ. 40 ರಷ್ಟು ಜಿಎಸ್‌ಟಿ ಅನ್ವಯವಾಗಲಿದೆ. ಬೀಡಿಗಳಿಗೆ ಶೇ. 18 ರಷ್ಟು ಜಿಎಸ್‌ಟಿ ದರವನ್ನು ನಿಗದಿಪಡಿಸಲಾಗಿದೆ.

ಉದ್ಯಮದ ಮೇಲೆ ಕಣ್ಗಾವಲು

ಹಣಕಾಸು ಸಚಿವಾಲಯವು 'ಜಗಿಯುವ ತಂಬಾಕು, ಜರ್ದಾ ಮತ್ತು ಗುಟ್ಕಾ ಪ್ಯಾಕಿಂಗ್ ಯಂತ್ರಗಳ (ಸಾಮರ್ಥ್ಯ ನಿರ್ಧಾರ ಮತ್ತು ಸುಂಕ ಸಂಗ್ರಹಣೆ) ನಿಯಮಗಳು, 2026' ಅನ್ನು ಸಹ ಅಧಿಸೂಚಿಸಿದೆ. ಇದರ ಮೂಲಕ ಉತ್ಪಾದನಾ ಸಾಮರ್ಥ್ಯಕ್ಕೆ ಅನುಗುಣವಾಗಿ ತೆರಿಗೆ ಸಂಗ್ರಹಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ.

ಹಿನ್ನೆಲೆ:

ಪಾನ್ ಮಸಾಲಾ ಮತ್ತು ತಂಬಾಕು ಉತ್ಪಾದನೆಯ ಮೇಲೆ ಈ ಹೊಸ ಸೆಸ್ ಮತ್ತು ಅಬಕಾರಿ ಸುಂಕವನ್ನು ವಿಧಿಸಲು ಕಳೆದ ಡಿಸೆಂಬರ್‌ನಲ್ಲಿ ಸಂಸತ್ತು ಎರಡು ಮಸೂದೆಗಳಿಗೆ ಅನುಮೋದನೆ ನೀಡಿತ್ತು. ಜನವರಿ 1 ರಂದು (ಬುಧವಾರ) ಸರ್ಕಾರವು ಇದರ ಅನುಷ್ಠಾನದ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಿದೆ.

ಸರ್ಕಾರದ ಹೊಸ ತೆರಿಗೆ ನೀತಿಯ ಪರಿಣಾಮ ಏನು?

1. ಆರ್ಥಿಕ ಮತ್ತು ಉದ್ಯಮ ವಿಶ್ಲೇಷಣೆ

• ತೆರಿಗೆ ವಂಚನೆಗೆ ಬ್ರೇಕ್: ಈ ಹಿಂದೆ ಗುಟ್ಕಾ ಮತ್ತು ಪಾನ್ ಮಸಾಲಾ ಕಂಪನಿಗಳು ನೈಜ ಉತ್ಪಾದನೆಯನ್ನು ಮರೆಮಾಚಿ ತೆರಿಗೆ ವಂಚಿಸುತ್ತಿದ್ದವು. ಈಗ ಯಂತ್ರದ ಉತ್ಪಾದನಾ ಸಾಮರ್ಥ್ಯಕ್ಕೆ ಅನುಗುಣವಾಗಿ ತೆರಿಗೆ ವಿಧಿಸುವುದರಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಬರಲಿದೆ.

• ಬೆಲೆ ಏರಿಕೆಯ ಬಿಸಿ: ತಜ್ಞರ ಪ್ರಕಾರ, ಅಂತಿಮ ಉತ್ಪನ್ನದ ಬೆಲೆಯಲ್ಲಿ ಶೇ. 15 ರಿಂದ 25 ರಷ್ಟು ಏರಿಕೆಯಾಗಬಹುದು. ಇದು ಮಧ್ಯಮ ಮತ್ತು ಕೆಳವರ್ಗದ ಜನರ ಬಜೆಟ್ ಮೇಲೆ ಪರಿಣಾಮ ಬೀರಲಿದೆ.

2. ಸಾರ್ವಜನಿಕ ಆರೋಗ್ಯದ ದೃಷ್ಟಿಕೋನ

• ಬಳಕೆ ಕಡಿತದ ನಿರೀಕ್ಷೆ: ಸಿಗರೇಟ್ ಮತ್ತು ಪಾನ್ ಮಸಾಲಾ ಬೆಲೆ ಏರಿಕೆಯಾದರೆ, ವಿಶೇಷವಾಗಿ ಯುವಜನತೆ ಮತ್ತು ಬಡವರು ಈ ಅಭ್ಯಾಸದಿಂದ ದೂರ ಸರಿಯಬಹುದು ಎಂಬುದು ಸರ್ಕಾರದ ಲೆಕ್ಕಾಚಾರ.

• ಆರೋಗ್ಯ ನಿಧಿ: 'ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್' ಮೂಲಕ ಸಂಗ್ರಹವಾಗುವ ಹಣವನ್ನು ಕ್ಯಾನ್ಸರ್ ಆಸ್ಪತ್ರೆಗಳ ಅಭಿವೃದ್ಧಿ ಮತ್ತು ಸಾರ್ವಜನಿಕ ಆರೋಗ್ಯ ಯೋಜನೆಗಳಿಗೆ ಬಳಸುವುದನ್ನು ಆರೋಗ್ಯ ತಜ್ಞರು ಸ್ವಾಗತಿಸಿದ್ದಾರೆ.

3. ಸಾರ್ವಜನಿಕ ಪ್ರತಿಕ್ರಿಯೆ

• ಗ್ರಾಹಕರ ಆತಂಕ: "ಒಂದೆಡೆ ಇಂಧನ (LPG) ಬೆಲೆ ಏರಿಕೆಯಾಗುತ್ತಿದೆ, ಮತ್ತೊಂದೆಡೆ ಇಂತಹ ಉತ್ಪನ್ನಗಳ ಬೆಲೆಯೂ ಹೆಚ್ಚುತ್ತಿದೆ. ಇದು ಜೀವನ ವೆಚ್ಚವನ್ನು ಏರಿಸುತ್ತಿದೆ" ಎಂದು ಕೆಲವು ಗ್ರಾಹಕರು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

• ವ್ಯಾಪಾರಿಗಳ ಆತಂಕ: ಚಿಲ್ಲರೆ ವ್ಯಾಪಾರಿಗಳು ಫೆಬ್ರವರಿ 1 ರ ನಂತರ ಈ ಉತ್ಪನ್ನಗಳ ಮಾರಾಟದಲ್ಲಿ ಇಳಿಕೆಯಾಗಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಬಗ್ಗೆ ಹಿರಿಯ ಪತ್ರಕರ್ತ ಕೆ. ಗಿರಿಪ್ರಕಾಶ್‌ ಅವರು ʻದ ಫೆಡರಲ್‌ ಕರ್ನಾಟಕʼದ ಜೊತೆ ಮಾತನಾಡಿದ್ದು, "ಇದನ್ನು ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಸಿನ್‌ ಟ್ಯಾಕ್ಸ್‌ ಎಂದು ಕರೆಯುತ್ತೇವೆ. ತಂಬಾಕನ್ನು ಏಕಾಏಕಿ ನಿಷೇಧಿಸಲು ಸಾಧ್ಯವಿಲ್ಲ. ಹೀಗಾಗಿ ಅದರ ಬಳಕೆ ಕಡಿಮೆಯಾಗಲಿ ಎಂಬ ಉದ್ದೇಶದಿಂದ ಈ ತೆರಿಗೆ ವಿಧಿಸಲಾಗುತ್ತಿದೆ. ಎಲ್ಲಾ ತಂಬಾಕು ಉತ್ಪನ್ನಗಳು ಈ ತೆರಿಗೆ ಅಡಿಯಲ್ಲಿ ಬರುತ್ತವೆ. ಈ ಹಿಂದೆ ತಂಬಾಕು ಉತ್ಪನ್ನಗಳು ಹೊರತುಪಡಿಸಿ ಕೆಲವು ರಬ್ಬರ್‌, ಅಗರಬತ್ತಿಯಂತಹ ಉತ್ಪನ್ನಗಳ ಮೇಲೆ ನಿತ್ಯ ಬಳಕೆ ವಸ್ತುಗಳ ಭಾರೀ ತೆರಿಗೆ ಹಾಕಲಾಗುತ್ತಿತ್ತು. ಆದರೆ ಅವುಗಳಿಗೆ ಈಗ ವಿನಾಯಿತಿ ನೀಡಲಾಗಿದೆ ಎಂದಿದ್ದಾರೆ. ಇನ್ನು ಐಟಿಸಿಯಂತಹ ಸಿಗರೇಟ್‌ ಉತ್ಪಾದಕ ಕಂಪನಿಗಳು ತೆರಿಗೆ ಹೆಚ್ಚಳದ ಬಗ್ಗೆ ದಶಕಗಳ ಹಿಂದೆಯೇ ಅಂದಾಜಿಸಿರುವ ಕಾರಣ ಅವು ತನ್ನ ಉದ್ಯಮವನ್ನು ಬೇರೆ ಉತ್ಪನ್ನಗಳಿಗೂ ವಿಸ್ತರಿಸಿಕೊಂಡಿದೆ. ಹೀಗಾಗಿ ಸರ್ಕಾರದ ತೆರಿಗೆಯಿಂದಾಗಬಹುದಾದ ನಷ್ಟವನ್ನು ಇತರೆ ಉದ್ಯಮಗಳಿಂದ ಸರಿದೂಗಿಸುವ ಪ್ರಯತ್ನ ಮಾಡುತ್ತವೆ" ಎಂದು ತಿಳಿಸಿದ್ದಾರೆ.

ಕಾನೂನು ಹೇಳುವ ಪ್ರಕಾರ ನೀವು ಸಿಗರೇಟ್‌ ಕೊಳ್ಳುವಾಗ ಬಿಡಿಯಾಗಿ ಖರೀದಿಸಲು ಅವಕಾಶ ಇಲ್ಲ. ಸಿಗರೇಟ್‌ ಕೊ‍ಳ್ಳಲು ಬಯಸಿದ್ದಲ್ಲಿ ಇಡೀ ಪ್ಯಾಕನ್ನೇ ಖರೀದಿಸಬೇಕು. ಆದರೆ ಸಣ್ಣ ಪುಟ್ಟ ಅಂಗಡಿಗಳಲ್ಲಿ ಸಿಗರೇಟನ್ನು ಬಿಡಿಯಾಗಿ ಮಾರಾಟ ಮಾಡುತ್ತಾರೆ. ಇದು ಕಾನೂನಿಗೆ ವಿರುದ್ಧ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬಹುದಾಗಿದೆ. ಇದು ಕೂಡ ತಂಬಾಕು ಸೇವನೆಯನ್ನು ನಿಯಂತ್ರಿಸಲು ಕೇಂದ್ರ ಕೈಗೆತ್ತಿಕೊಂಡಿರುವ ಕ್ರಮ. ಒಟ್ಟಿನಲ್ಲಿ ತಂಬಾಕು ಬಳಕೆ ನಿಯಂತ್ರಿಸುವ ನಿಟ್ಟಿನಲ್ಲೇ ಕೇಂದ್ರ ಸರ್ಕಾರ ಈಗ ಭಾರೀ ತೆರಿಗೆ ಮೂಲಕ ಕಡಿವಾಣ ಹಾಕಲು ಮುಂದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.






Next Story