
ಸಾಂದರ್ಭಿಕ ಚಿತ್ರ
ಕರ್ನಾಟಕದಲ್ಲಿ ಎಲೆಕ್ಟ್ರಿಕ್ ವಾಹನಗಳು ಇನ್ನು ಮುಂದೆ ದುಬಾರಿ; ಶೇ. 100ರಷ್ಟು ರಸ್ತೆ ತೆರಿಗೆ ವಿನಾಯಿತಿ ರದ್ದು
ಹಳೆಯ ಅಥವಾ ಬಳಸಿದ ವಾಹನಗಳಿಗೆ ಅವುಗಳ ವಯಸ್ಸಿನ ಆಧಾರದ ಮೇಲೆ ತೆರಿಗೆಯಲ್ಲಿ ಕಡಿತವನ್ನು ನೀಡಲಾಗಿದೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಮಾತ್ರ ಈಗಲೂ ಸಂಪೂರ್ಣ ತೆರಿಗೆ ವಿನಾಯಿತಿ ಮುಂದುವರಿಯಲಿದೆ.
ಕರ್ನಾಟಕ ಸರ್ಕಾರವು 2016ರಿಂದ ಎಲೆಕ್ಟ್ರಿಕ್ ಕಾರುಗಳು, ಜೀಪ್‌ಗಳು, ಬಸ್‌ಗಳು ಮತ್ತು ಖಾಸಗಿ ಸೇವಾ ವಾಹನಗಳಿಗೆ ನೀಡುತ್ತಿದ್ದ ಶೇಕಡಾ 100ರಷ್ಟು ರಸ್ತೆ ತೆರಿಗೆ ವಿನಾಯಿತಿಯನ್ನು ರದ್ದುಗೊಳಿಸಿದೆ. ಏಪ್ರಿಲ್ 10ರಂದು ಹೊರಡಿಸಲಾದ ಅಧಿಕೃತ ಅಧಿಸೂಚನೆಯ ಪ್ರಕಾರ ನೂತನ ತೆರಿಗೆ ದರಗಳು ಜಾರಿಗೆ ಬಂದಿವೆ.
ಸರ್ಕಾರದ ನೂತನ ಅಧಿಸೂಚನೆಯ ಅನ್ವಯ, ವಾಹನದ ಬೆಲೆಗೆ ಅನುಗುಣವಾಗಿ ಮೂರು ಹಂತಗಳಲ್ಲಿ ಜೀವಿತಾವಧಿ ತೆರಿಗೆಯನ್ನು (Lifetime Tax) ವಿಧಿಸಲಾಗುತ್ತದೆ. 10 ಲಕ್ಷ ರೂಪಾಯಿವರೆಗಿನ ಬೆಲೆಯ ಎಲೆಕ್ಟ್ರಿಕ್ ವಾಹನಗಳಿಗೆ ಶೇ. 5ರಷ್ಟು ತೆರಿಗೆ. 10 ಲಕ್ಷದಿಂದ 25 ಲಕ್ಷದವರೆಗಿನ ವಾಹನಗಳಿಗೆ ಶೇ. 8ರಷ್ಟು ತೆರಿಗೆ ಹಾಗೂ 25 ಲಕ್ಷಕ್ಕಿಂತ ಮೇಲ್ಪಟ್ಟ ಬೆಲೆಯ ವಾಹನಗಳಿಗೆ ಶೇ. 10ರಷ್ಟು ತೆರಿಗೆ ವಿಧಿಸಲಾಗುತ್ತದೆ.
ಹಳೆಯ ವಾಹನಗಳಿಗೆ ವಿನಾಯಿತಿ
ಹಳೆಯ ಅಥವಾ ಬಳಸಿದ ವಾಹನಗಳಿಗೆ ಅವುಗಳ ವಯಸ್ಸಿನ ಆಧಾರದ ಮೇಲೆ ತೆರಿಗೆಯಲ್ಲಿ ಕಡಿತವನ್ನು ನೀಡಲಾಗಿದೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಮಾತ್ರ ಈಗಲೂ ಸಂಪೂರ್ಣ ತೆರಿಗೆ ವಿನಾಯಿತಿ ಮುಂದುವರಿಯಲಿದೆ. ಈಗಾಗಲೇ ನೋಂದಣಿಯಾಗಿರುವ ರಾಜ್ಯದ ಸ್ಥಳೀಯ ಇವಿ ಮಾಲೀಕರಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದ್ದು, ನಿರಾಳತೆ ಒದಗಿಸಿದೆ. ಆದರೆ, ನಿರಾಕ್ಷೇಪಣಾ ಪತ್ರ (NOC) ಪಡೆದು ಹೊರರಾಜ್ಯಗಳಿಂದ ತಂದು ಮರು-ನೋಂದಣಿ ಮಾಡುವ ವಾಹನಗಳಿಗೆ ಮಾತ್ರ ಪೂರ್ವಾನ್ವಯವಾಗಿ ತೆರಿಗೆ ವಿಧಿಸಲಾಗುತ್ತದೆ.
ಸರ್ಕಾರದ ಆದಾಯದ ಗುರಿ
ಈ ಹೊಸ ತೆರಿಗೆ ನೀತಿಯಿಂದ ಬೊಕ್ಕಸಕ್ಕೆ ಹೆಚ್ಚುವರಿಯಾಗಿ 250 ಕೋಟಿ ಆದಾಯ ಸಂಗ್ರಹಿಸುವ ಗುರಿಯನ್ನು ಸರ್ಕಾರ ಹೊಂದಿದೆ. ನಿಯಮ ಜಾರಿಯಾಗುವ ಮುನ್ಸೂಚನೆ ಅರಿತಿದ್ದ ಗ್ರಾಹಕರು, ತೆರಿಗೆ ಉಳಿಸುವ ಉದ್ದೇಶದಿಂದ ಮಾರ್ಚ್ ತಿಂಗಳಲ್ಲೇ ಮುಗಿಬಿದ್ದು ತಮ್ಮ ಎಲೆಕ್ಟ್ರಿಕ್ ವಾಹನಗಳನ್ನು ನೋಂದಾಯಿಸಿಕೊಂಡಿದ್ದರು. ಐಟಿ (IT) ಕ್ಷೇತ್ರದ ಬೆಳವಣಿಗೆಗೆ ಒತ್ತು ನೀಡುವ ರಾಜ್ಯವೊಂದು, ಇವಿ ಬಳಕೆಯನ್ನು ಉತ್ತೇಜಿಸುವ ಬದಲು ಇಂತಹ ತೆರಿಗೆ ವಿಧಿಸಿರುವುದು ಸರ್ಕಾರದ 'ಆರ್ಥಿಕ ಹತಾಶೆ'ಯನ್ನು ತೋರಿಸುತ್ತದೆ ಹಾಗೂ ಪರಿಸರ ಸ್ನೇಹಿ ವಾಹನಗಳ ಭವಿಷ್ಯಕ್ಕೆ ಮಾರಕವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ತೀವ್ರವಾಗಿ ಟೀಕಿಸಿದ್ದಾರೆ.

