ರೂಪಾಯಿ ಮೌಲ್ಯ ಕುಸಿತದ ಬಿಸಿ ಷೇರುಪೇಟೆಗೂ ತಟ್ಟಿದ್ದು. ಗುರುವಾರದ ಆರಂಭಿಕ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 343.67 ಅಂಕ ಕುಸಿದು 82,001.01ಕ್ಕೆ ತಲುಪಿದೆ.

Click the Play button to hear this message in audio format

ಜಾಗತಿಕ ಮಾರುಕಟ್ಟೆಯಲ್ಲಿನ ಉಂಟಾಗಿರುವ ಆರ್ಥಿಕ ಅನಿಶ್ಚಿತತೆ ಹಾಗೂ ಡಾಲರ್​ ಮೇಲಿನ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರೂಪಾಯಿ ಮೌಲ್ಯವು ಗುರುವಾರ (ಜ.29) ಭಾರೀ ಕುಸಿತ ಕಂಡಿದೆ. ಆರಂಭಿಕ ವಹಿವಾಟಿನಲ್ಲಿ ಸಾರ್ವಕಾಲಿಕ ಕನಿಷ್ಠ ಮಟ್ಟವಾದ 92 ರೂ. ಗೆ ತಲುಪಿದೆ.

ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ, ರೂಪಾಯಿ ಮೌಲ್ಯವು 91.95 ರೂ. ಮಟ್ಟದಲ್ಲಿ ವಹಿವಾಟು ಆರಂಭಿಸಿತು. ಆದರೆ, ಡಾಲರ್‌ಗೆ ಬೇಡಿಕೆ ಹೆಚ್ಚಾದ ಪರಿಣಾಮ ಮತ್ತು ಜಾಗತಿಕ ಬೆಳವಣಿಗೆಗೆಳ ಕಾರಣದಿಂದಾಗಿ ಮೌಲ್ಯವು ಮತ್ತಷ್ಟು ಕುಸಿದು 92 ರೂಪಾಯಿಗೆ ತಲುಪಿತು. ಬುಧವಾರದ ಅಂತ್ಯಕ್ಕೆ ರೂಪಾಯಿ 91.99 ರೂ.ಗೆ ತಲುಪಿ ತನ್ನ ಹಿಂದಿನ ಕನಿಷ್ಠ ದಾಖಲೆ ಮುರಿದು ಮತ್ತೀಗ ಮತ್ತೊಂದು ಹಿನ್ನಡೆ ಅನುಭವಿಸಿದೆ.

ಕುಸಿತಕ್ಕೆ ಪ್ರಮುಖ ಕಾರಣಗಳೇನು?

ರೂಪಾಯಿ ಮೌಲ್ಯದ ಈ ಭಾರೀ ಕುಸಿತಕ್ಕೆ ವಿದೇಶಿ ವಿನಿಮಯ ತಜ್ಞರು ಎರಡು ಕಾರಣಗಳನ್ನು ವಿವರಿಸಿದ್ದಾರೆ. ಅಮೆರಿಕದ ಫೆಡರಲ್ ರಿಸರ್ವ್ ತನ್ನ 2026ರ ತನ್ನ ಮೊದಲ ನೀತಿ ನಿರ್ಧಾರದಲ್ಲಿ ಬಡ್ಡಿದರಗಳಲ್ಲಿ ಯಥಾಸ್ಥಿತಿ ಕಾಪಾಡಿಕೊಂಡಿದೆ. ಇದರ ಪರಿಣಾಮವಾಗಿ ಡಾಲರ್ ಸೂಚ್ಯಂಕವು ಕಳೆದ ನಾಲ್ಕೂವರೆ ವರ್ಷಗಳ ಕನಿಷ್ಠ ಮಟ್ಟದಿಂದ ಚೇತರಿಸಿಕೊಂಡಿತು. ಇದು ರೂಪಾಯಿ ಮೇಲೆ ಒತ್ತಡ ಹೇರಿತು.

ಕಚ್ಚಾ ತೈಲ ಬೆಲೆಯಲ್ಲಿನ ಏರಿಕೆಯು ರೂಪಾಯಿ ಕುಸಿತಕ್ಕೆ ಮತ್ತೊಂದು ಕಾರಣ. ಕಚ್ಚಾ ತೈಲ ಬ್ಯಾರೆಲ್‌ಗೆ ಶೇ. 1.32ರಷ್ಟು ಏರಿಕೆಯಾಗಿ 69.30 ಡಾಲರ್‌ ತಲುಪಿದೆ. ಇರಾನ್ ಪರಮಾಣು ಒಪ್ಪಂದದ ವಿಚಾರದಲ್ಲಿ ಅಮೆರಿಕದ ಎಚ್ಚರಿಕೆ ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದಾಗಿ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗುವ ಭೀತಿ ಎದುರಾಗಿದೆ. ಭಾರತವು ತೈಲ ಆಮದಿನ ಮೇಲೆ ಹೆಚ್ಚು ಅವಲಂಬಿತವಾಗಿರುವುದರಿಂದ, ಕಚ್ಚಾ ತೈಲ ಬೆಲೆ ಏರಿಕೆಯು ನೇರವಾಗಿ ರೂಪಾಯಿ ಮೌಲ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ.

ಷೇರುಪೇಟೆ ಮೇಲೂ ಪರಿಣಾಮ

ರೂಪಾಯಿ ಮೌಲ್ಯ ಕುಸಿತದ ಬಿಸಿ ಷೇರುಪೇಟೆಗೂ ತಟ್ಟಿದ್ದು. ಗುರುವಾರದ ಆರಂಭಿಕ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 343.67 ಅಂಕ ಕುಸಿದು 82,001.01ಕ್ಕೆ ತಲುಪಿದ್ದರೆ, ನಿಫ್ಟಿ 94.2 ಅಂಕಗಳ ಇಳಿಕೆ ಕಂಡು 25,248.55ರಲ್ಲಿ ವಹಿವಾಟು ನಡೆಸಿದೆ.

ರೂಪಾಯಿ ಮೌಲ್ಯ ಕುಸಿಯುತ್ತಿರುವ ನಡುವೆಯೇ ದೇಶದ ಕೈಗಾರಿಕಾ ವಲಯ ಆಶಾದಾಯಕ ಬೆಳವಣಿಗೆ ಕಂಡಿದೆ. ಸರ್ಕಾರ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಡಿಸೆಂಬರ್ 2025ರಲ್ಲಿ ಭಾರತದ ಕೈಗಾರಿಕಾ ಉತ್ಪಾದನೆ (IIP) ಶೇ. 7.8ರಷ್ಟು ಪ್ರಗತಿ ಸಾಧಿಸಿದೆ. ಇದು ಕಳೆದ ಎರಡು ವರ್ಷಗಳಲ್ಲೇ ಅತ್ಯಧಿಕ ಏರಿಕೆ.

Next Story