ಇತಿಹಾಸದಲ್ಲೇ ಮೊದಲ ಬಾರಿಗೆ ಕೆ.ಜಿಗೆ 4 ಲಕ್ಷ ರೂಪಾಯಿ ಗಡಿ ದಾಟಿದ ಬೆಳ್ಳಿ, ಚಿನ್ನದ ಬೆಲೆಯಲ್ಲೂ ಭರ್ಜರಿ ಏರಿಕೆ
x

ಷೇರು ಮಾರುಕಟ್ಟೆ ಕುಸಿತದ ನಡುವೆ ಚಿನ್ನ-ಬೆಳ್ಳಿ ಬೆಲೆಯಲ್ಲಿ ಭಾರಿ ಜಿಗಿತ. ಜಾಗತಿಕ ಉದ್ವಿಗ್ನತೆ ಮತ್ತು ಡಾಲರ್ ಎದುರು ರೂಪಾಯಿ ಕುಸಿತದಿಂದ ಬೆಲೆಗಳು ಗಗನಕ್ಕೇರಿವೆ.

ಇತಿಹಾಸದಲ್ಲೇ ಮೊದಲ ಬಾರಿಗೆ ಕೆ.ಜಿಗೆ 4 ಲಕ್ಷ ರೂಪಾಯಿ ಗಡಿ ದಾಟಿದ ಬೆಳ್ಳಿ, ಚಿನ್ನದ ಬೆಲೆಯಲ್ಲೂ ಭರ್ಜರಿ ಏರಿಕೆ

ಷೇರು ಮಾರುಕಟ್ಟೆ ಕುಸಿತದ ನಡುವೆ ಚಿನ್ನ-ಬೆಳ್ಳಿ ಬೆಲೆಯಲ್ಲಿ ಭಾರಿ ಜಿಗಿತ ಉಂಟಾಗಿದ್ದು, ಜಾಗತಿಕ ಉದ್ವಿಗ್ನತೆ ಮತ್ತು ಡಾಲರ್ ಎದುರು ರೂಪಾಯಿ ಕುಸಿತದಿಂದ ಬೆಲೆಗಳು ಗಗನಕ್ಕೇರಿವೆ.


Click the Play button to hear this message in audio format

ಷೇರು ಮಾರುಕಟ್ಟೆಯ ಕುಸಿತದ ನಡುವೆಯೂ ಬಂಗಾರ ಹಾಗೂ ಬೆಳ್ಳಿಯ ದರದಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಮಲ್ಟಿ ಕಮೋಡಿಟಿ ಎಕ್ಸ್ಚೇಂಜ್ ಮಾರುಕಟ್ಟೆಯಲ್ಲಿ ಗುರುವಾರ ಬೆಳ್ಳಿಯ ಬೆಲೆ ಹಿಂದೆಂದಿಗಿಂತಲೂ ಅತ್ಯಧಿಕ ಮಟ್ಟಕ್ಕೆ ಏರಿಕೆಯಾಗಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರತಿ ಕೆ.ಜಿಗೆ 4 ಲಕ್ಷ ರೂಪಾಯಿಗಳ ಗಡಿ ದಾಟಿದೆ. ಇತ್ತ ಚಿನ್ನದ ಬೆಲೆಯೂ ದಾಖಲೆ ಬರೆದಿದ್ದು, 15,900 ರೂಪಾಯಿ ಏರಿಕೆಯೊಂದಿಗೆ ಹತ್ತು ಗ್ರಾಂಗೆ 1,93,096 ರೂಪಾಯಿ ತಲುಪಿದೆ. ಕೇವಲ ಒಂದು ವಾರದ ಅವಧಿಯಲ್ಲಿ ಬೆಳ್ಳಿ ಪ್ರತಿ ಕೆ.ಜಿಗೆ ಅಂದಾಜು 88 ಸಾವಿರ ರೂಪಾಯಿ ಹಾಗೂ ಚಿನ್ನ 33 ಸಾವಿರ ರೂಪಾಯಿಗಳಷ್ಟು ದುಬಾರಿಯಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಚಿನ್ನ ಮತ್ತು ಬೆಳ್ಳಿ ಹೊಸ ದಾಖಲೆ ಬರೆದಿವೆ. ಸ್ಪಾಟ್ ಗೋಲ್ಡ್ ಸುಮಾರು ಶೇ. 3 ರಷ್ಟು ಏರಿಕೆಯಾಗಿ ಪ್ರತಿ ಔನ್ಸ್‌ಗೆ 5,591.61 ಡಾಲರ್ ತಲುಪಿದ್ದರೆ, ಬೆಳ್ಳಿಯು 118.061 ಡಾಲರ್ ಏರಿಕೆಯಾಗಿದೆ. ಮತ್ತೊಂದೆಡೆ, ಭಾರತೀಯ ರೂಪಾಯಿ ಮೌಲ್ಯವು ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡು 92 ರೂಪಾಯಿಗಳ ಮಟ್ಟಕ್ಕೆ ತಲುಪಿರುವುದು ಕೂಡ ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.

ಚಿನ್ನ - ಬೆಳ್ಳಿ ದರ ಏರಿಕೆಗೆ ಕಾರಣಗಳು ಏನು?

ಜಾಗತಿಕ ಅಸ್ಥಿರತೆ ಮತ್ತು ಸುರಕ್ಷಿತ ಹೂಡಿಕೆ

ವಿಶ್ವದಾದ್ಯಂತ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆ, ವಿಶೇಷವಾಗಿ ಇರಾನ್ ಪರಮಾಣು ಕಾರ್ಯಕ್ರಮದ ಕುರಿತಾದ ಗೊಂದಲಗಳು ಮತ್ತು ಅಮೆರಿಕದ ವಿದೇಶಾಂಗ ನೀತಿಗಳಲ್ಲಿನ ಬದಲಾವಣೆಗಳು ಹೂಡಿಕೆದಾರರನ್ನು ಚಿನ್ನದತ್ತ ಸೆಳೆಯುವಂತೆ ಮಾಡಿದೆ. ಆರ್ಥಿಕ ಅನಿಶ್ಚಿತತೆಯ ಸಂದರ್ಭದಲ್ಲಿ ಚಿನ್ನವನ್ನು ಅತ್ಯಂತ ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗುತ್ತಿದ್ದು, ಅತಿ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ.

ಅಮೆರಿಕದ ಸಾಲ ಮತ್ತು ಡಾಲರ್ ಕುಸಿತ

ಅಮೆರಿಕದ ಫೆಡರಲ್ ರಿಸರ್ವ್ ತನ್ನಬ ಬಡ್ಡಿ ದರಗಳನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲು ನಿರ್ಧರಿಸಿರುವುದು ಮತ್ತು ಅಮೆರಿಕದ ರಾಷ್ಟ್ರೀಯ ಸಾಲವು ದಾಖಲೆ ಮಟ್ಟಕ್ಕೆ ಏರಿಕೆಯಾಗಿರುವುದು ಡಾಲರ್ ಮೌಲ್ಯ ಕುಗ್ಗಿಸಿದೆ. ಡಾಲರ್ ದುರ್ಬಲಗೊಂಡಾಗ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರಿಕೆಯಾಗುವುದು ಸಾಮಾನ್ಯ ಪ್ರವೃತ್ತಿಯಾಗಿದ್ದು, ಈಗ ಅದೇ ವಿದ್ಯಮಾನ ನಡೆಯುತ್ತಿದೆ.

ಕೇಂದ್ರ ಬ್ಯಾಂಕ್‌ಗಳ ಖರೀದಿ

ವಿಶ್ವದ ವಿವಿಧ ದೇಶಗಳ ಕೇಂದ್ರ ಬ್ಯಾಂಕ್‌ಗಳು ತಮ್ಮ ಮೀಸಲು ನಿಧಿಯಲ್ಲಿ ಡಾಲರ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಭಾರಿ ಪ್ರಮಾಣದಲ್ಲಿ ಚಿನ್ನ ಖರೀದಿಸುತ್ತಿವೆ. ಚೀನಾ ಮತ್ತು ಭಾರತದಂತಹ ದೇಶಗಳ ಕೇಂದ್ರ ಬ್ಯಾಂಕ್‌ಗಳ ಸತತ ಖರೀದಿಯು ಬೆಲೆ ಏರಿಕೆಗೆ ದೊಡ್ಡ ಬೆಂಬಲ ನೀಡಿದೆ.

ಬೆಳ್ಳಿಯ ಕೈಗಾರಿಕಾ ಬೇಡಿಕೆ ಮತ್ತು ಪೂರೈಕೆ ಕೊರತೆ

ಬೆಳ್ಳಿಯ ಬೆಲೆಯು 120 ಡಾಲರ್​ ಮಟ್ಟ ತಲುಪಲು ಕೇವಲ ಹೂಡಿಕೆಯಷ್ಟೇ ಅಲ್ಲದೆ, ಕೈಗಾರಿಕಾ ಬಳಕೆಯೂ ಕಾರಣವಾಗಿದೆ. ಸೌರಶಕ್ತಿ , ಎಲೆಕ್ಟ್ರಿಕ್ ವಾಹನಗಳು ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಸೌಕರ್ಯಗಳಿಗೆ ಬೆಳ್ಳಿಯ ಅಗತ್ಯ ಹೆಚ್ಚಿದೆ. ಆದರೆ ಗಣಿಗಾರಿಕೆಯಲ್ಲಿ ಪೂರೈಕೆಯ ಮಿತಿ ಇರುವುದರಿಂದ ಮಾರುಕಟ್ಟೆಯಲ್ಲಿ ಬೆಳ್ಳಿಗೆ ತೀವ್ರ ಅಭಾವ ಸೃಷ್ಟಿಯಾಗಿದೆ.

ಭಾರತೀಯ ಮಾರುಕಟ್ಟೆಯ ಮೇಲಿನ ಪರಿಣಾಮ

ಜಾಗತಿಕ ಮಾರುಕಟ್ಟೆಯ ಈ ಏರಿಕೆಯಿಂದಾಗಿ ಭಾರತದಲ್ಲೂ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 1.67 ಲಕ್ಷ ರೂ. ದಾಟಿದ್ದರೆ, ಬೆಳ್ಳಿ ಬೆಲೆ ಪ್ರತಿ ಕೆ.ಜಿಗೆ 4 ಲಕ್ಷ ರೂ. ಸಮೀಪದಲ್ಲಿದೆ. ಹೂಡಿಕೆದಾರರು ಈಗ ಲಾಭವನ್ನು ಕಾಯ್ದಿರಿಸಲು ಮುಂದಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಬೆಲೆಯಲ್ಲಿ ಸಣ್ಣ ಪ್ರಮಾಣದ ಏರಿಳಿತ ಕಂಡುಬರಬಹುದು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಹೂಡಿಕೆದಾರರಿಗೆ ತಜ್ಞರ ಸಲಹೆ

ಪ್ರಸ್ತುತ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ವಿಪರೀತ ಏರಿಳಿತ ಕಂಡುಬರುತ್ತಿದೆ. ತಜ್ಞರ ಪ್ರಕಾರ, ಬೆಳ್ಳಿಗೆ 98 ಡಾಲರ್ ಮತ್ತು ಚಿನ್ನಕ್ಕೆ 5,000 ಡಾಲರ್ ಮಟ್ಟದಲ್ಲಿ ಬೆಂಬಲ ಸಿಗುವ (ಸಪೋರ್ಟ್​ ಲೆವೆಲ್​​) ಸಾಧ್ಯತೆಯಿದೆ. ಆದರೆ ಮಾರುಕಟ್ಟೆಯ ಅತಿಯಾದ ಅಸ್ಥಿರತೆಯಿಂದಾಗಿ ಹೊಸದಾಗಿ ಹೂಡಿಕೆ ಮಾಡುವವರು ಎಚ್ಚರಿಕೆಯಿಂದಿರಬೇಕು ಮತ್ತು ಸದ್ಯಕ್ಕೆ ದೊಡ್ಡ ಮಟ್ಟದ ಹೂಡಿಕೆಯಿಂದ ದೂರವಿರುವುದು ಉತ್ತಮ ಎಂದು ಮಾರುಕಟ್ಟೆ ತಜ್ಞರು ಸಲಹೆ ನೀಡಿದ್ದಾರೆ.

Read More
Next Story