LPG allocation for commercial use increased to 50%: Relief for hotels and industries
x

ಸಾಂದರ್ಭಿಕ ಚಿತ್ರ

ವಾಣಿಜ್ಯ ಬಳಕೆಯ ಎಲ್‌ಪಿಜಿ ಹಂಚಿಕೆ ಶೇ.50ಕ್ಕೆ ಏರಿಕೆ; ಹೋಟೆಲ್ ಮತ್ತು ಉದ್ಯಮಗಳಿಗೆ ರಿಲೀಫ್

ಆರಂಭದಲ್ಲಿ ಗೃಹಬಳಕೆಯ ಸಿಲಿಂಡರ್‌ಗಳಿಗೆ ಆದ್ಯತೆ ನೀಡುವ ಸಲುವಾಗಿ ವಾಣಿಜ್ಯ ಬಳಕೆಯ ಪೂರೈಕೆಯನ್ನು ಕಡಿತಗೊಳಿಸಲಾಗಿತ್ತು. ತದನಂತರ ಹಂತ ಹಂತವಾಗಿ ಪೂರೈಕೆಯನ್ನು ಹೆಚ್ಚಿಸುತ್ತಾ ಬರಲಾಗಿದೆ.


Click the Play button to hear this message in audio format

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಎದುರಾಗಿದ್ದ ಇಂಧನ ಬಿಕ್ಕಟ್ಟು ನಿಧಾನವಾಗಿ ಶಮನಗೊಳ್ಳುತ್ತಿದ್ದು, ಕೇಂದ್ರ ಸರ್ಕಾರವು ವಾಣಿಜ್ಯ ಬಳಕೆಯ ಎಲ್‌ಪಿಜಿ ಹಂಚಿಕೆಯನ್ನು ಶೇ.50ಕ್ಕೆ ಹೆಚ್ಚಿಸಿದೆ. ದೇಶೀಯ ಉತ್ಪಾದನೆಯಲ್ಲಿ ಚೇತರಿಕೆ ಕಂಡುಬಂದಿರುವ ಕಾರಣ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಕೈಗಾರಿಕಾ ಕ್ಯಾಂಟೀನ್‌ಗಳು, ಆಹಾರ ಸಂಸ್ಕರಣಾ ಘಟಕಗಳು ಮತ್ತು ಸಮುದಾಯ ಅಡುಗೆ ಮನೆಗಳಂತಹ ಪ್ರಮುಖ ವಲಯಗಳಿಗೆ ಶೇ.20ರಷ್ಟು ಹೆಚ್ಚುವರಿ ಪೂರೈಕೆಯನ್ನು ಘೋಷಿಸಲಾಗಿದೆ.

ಆರಂಭದಲ್ಲಿ ಗೃಹಬಳಕೆಯ ಸಿಲಿಂಡರ್‌ಗಳಿಗೆ ಆದ್ಯತೆ ನೀಡುವ ಸಲುವಾಗಿ ವಾಣಿಜ್ಯ ಬಳಕೆಯ ಪೂರೈಕೆಯನ್ನು ಕಡಿತಗೊಳಿಸಲಾಗಿತ್ತು. ತದನಂತರ ಹಂತ ಹಂತವಾಗಿ ಪೂರೈಕೆಯನ್ನು ಹೆಚ್ಚಿಸುತ್ತಾ ಬರಲಾಗಿದ್ದು, ಪ್ರಸ್ತುತ ಒಟ್ಟು ಹಂಚಿಕೆಯ ಪ್ರಮಾಣ ಶೇ.50ಕ್ಕೆ ತಲುಪಿದೆ.

ಪಿಎನ್‌ಜಿ ಸಂಪರ್ಕ ಕಡ್ಡಾಯ

ಈ ಹೆಚ್ಚುವರಿ ಎಲ್‌ಪಿಜಿ ಹಂಚಿಕೆಯು ಷರತ್ತುಬದ್ಧವಾಗಿದ್ದು, ವಾಣಿಜ್ಯ ಸಂಸ್ಥೆಗಳು ತೈಲ ಕಂಪನಿಗಳಲ್ಲಿ ನೋಂದಾಯಿಸಿಕೊಳ್ಳುವುದು ಮತ್ತು ಕೊಳವೆ ನೈಸರ್ಗಿಕ ಅನಿಲ (ಪಿಎನ್‌ಜಿ) ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ತೈಲ ಕಾರ್ಯದರ್ಶಿಗಳು ರಾಜ್ಯಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಭವಿಷ್ಯದ ಇಂಧನ ಭದ್ರತೆಯ ದೃಷ್ಟಿಯಿಂದ ವಾಣಿಜ್ಯ ಸಂಸ್ಥೆಗಳು ಆದಷ್ಟು ಬೇಗ ಕೊಳವೆ ಅನಿಲ ಬಳಕೆಗೆ ಒಗ್ಗಿಕೊಳ್ಳಬೇಕು ಎಂದು ಸರ್ಕಾರ ಉತ್ತೇಜಿಸುತ್ತಿದೆ. ಇದಕ್ಕಾಗಿ ನಗರ ಅನಿಲ ವಿತರಣಾ ಜಾಲಗಳ ಯೋಜನೆಗಳಿಗೆ ಶೀಘ್ರವಾಗಿ ಅನುಮೋದನೆ ನೀಡುವಂತೆ ಹಾಗೂ ಕಾಮಗಾರಿ ಚುರುಕುಗೊಳಿಸುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ಕೇಂದ್ರವು ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಬಳಕೆಯ ಎಲ್‌ಪಿಜಿ ಮತ್ತು ಇಂಧನ ಪೂರೈಕೆ ಸ್ಥಿರ

ಪ್ರಸ್ತುತ ದೇಶಾದ್ಯಂತ ಗೃಹಬಳಕೆಯ ಎಲ್‌ಪಿಜಿ ಪೂರೈಕೆಯು ಸಂಪೂರ್ಣವಾಗಿ ಸ್ಥಿರವಾಗಿದೆ ಎಂದು ಸರ್ಕಾರದ ಅಧಿಕೃತ ಪ್ರಕಟಣೆ ಸ್ಪಷ್ಟಪಡಿಸಿದೆ. ಯಾವುದೇ ವಿತರಕರ ಬಳಿಯೂ ಸಿಲಿಂಡರ್‌ಗಳ ಕೊರತೆಯಿಲ್ಲ ಹಾಗೂ ಎಂದಿನಂತೆ ಮನೆ ಬಾಗಿಲಿಗೆ ವಿತರಣಾ ಕಾರ್ಯ ಸುಗಮವಾಗಿ ಮುಂದುವರಿದಿದೆ. ಸಾರ್ವಜನಿಕರಲ್ಲಿದ್ದ ಆತಂಕ ದೂರವಾಗಿರುವುದರಿಂದ ಮುಗಿಬಿದ್ದು ಬುಕಿಂಗ್ ಮಾಡುವ ಪ್ರಮಾಣ ಗಣನೀಯವಾಗಿ ತಗ್ಗಿದೆ. ಇದರ ಜೊತೆಗೆ ದೇಶದ ಎಲ್ಲಾ ತೈಲಾಗಾರಗಳು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪೆಟ್ರೋಲ್ ಮತ್ತು ಡೀಸೆಲ್ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿದೆ. ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಯಾವುದೇ ಇಂಧನ ಕೊರತೆಯಿಲ್ಲದಿರುವುದರಿಂದ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಸರ್ಕಾರ ಅಭಯ ನೀಡಿದೆ. ಕೈಗಾರಿಕಾ ಗ್ರಾಹಕರಿಗೂ ಶೇ. 80ರಷ್ಟು ನೈಸರ್ಗಿಕ ಅನಿಲ ಪೂರೈಕೆಯಾಗುತ್ತಿದೆ.

ಕಾಳಸಂತೆಕೋರರ ಮೇಲೆ ಹದ್ದಿನ ಕಣ್ಣು ಮತ್ತು ಕಡಲ ಭದ್ರತೆ

ಇಂಧನ ಬಿಕ್ಕಟ್ಟಿನ ಲಾಭ ಪಡೆದು ಅಕ್ರಮ ದಾಸ್ತಾನು ಮತ್ತು ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ. ದೇಶಾದ್ಯಂತ ಈಗಾಗಲೇ 3,500ಕ್ಕೂ ಹೆಚ್ಚು ದಾಳಿಗಳನ್ನು ನಡೆಸಲಾಗಿದ್ದು, ಸುಮಾರು 1,400 ಅಕ್ರಮ ಎಲ್‌ಪಿಜಿ ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪೂರೈಕೆ ಮತ್ತು ವಿತರಣೆಯ ಮೇಲೆ ನಿಗಾ ಇಡಲು ಬಹುತೇಕ ರಾಜ್ಯಗಳಲ್ಲಿ ಕಂಟ್ರೋಲ್ ರೂಮ್ ಹಾಗೂ ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿಗಳನ್ನು ರಚಿಸಲಾಗಿದೆ. ಇನ್ನು ಕಡಲ ಭದ್ರತೆಗೆ ಸಂಬಂಧಿಸಿದಂತೆ ಪಶ್ಚಿಮ ಪರ್ಷಿಯನ್ ಕೊಲ್ಲಿ ಪ್ರದೇಶದಲ್ಲಿ 611 ನಾವಿಕರನ್ನು ಒಳಗೊಂಡ 22 ಭಾರತೀಯ ಧ್ವಜಧಾರಿ ಹಡಗುಗಳು ಸಂಪೂರ್ಣ ಸುರಕ್ಷಿತವಾಗಿದ್ದು, ಅಲ್ಲಿಂದ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ ಎಂದು ಸರ್ಕಾರ ಮಾಹಿತಿ ನೀಡಿದೆ.

ಹೊಟೇಲ್‌ಗಳಿಗೆ 150 ಕೋಟಿ ರೂ. ನಷ್ಟ

ಎಲ್‌ಪಿಜಿ ಸಿಲಿಂಡರ್‌ ಅಭಾವದಿಂದಾಗಿ ಕಳೆದ ವಾರ 100 ಕೋಟಿ ರೂ. ಈ ವಾರ 50 ಕೋಟಿ ರೂ. ಸೇರಿ ಒಟ್ಟು 150 ಕೋಟಿ ರೂ. ನಷ್ಟವಾಗಿದ್ದು, ಆದಷ್ಟು ಶೀಘ್ರವೇ ಎಲ್‌ಪಿಜಿ ಸಿಲಿಂಡರ್‌ ಪೂರೈಸಬೇಕು. ಈಗಾಗಲೇ ಹಲವಾರು ಹೊಟೇಲ್‌ಗಳು ಮುಚ್ಚುತ್ತಿದ್ದು, ಕೆಲವು ಹೊಟೇಲ್‌ಗಳಲ್ಲಿ ಒಂದು ಕೆ.ಜಿ. ಸೌದೆಗೆ ಒಂಬತ್ತು ರೂ. ನೀಡಿ ಖರೀದಿಸಿ ಅಡುಗೆ ಮಾಡಲಾಗುತ್ತಿದೆ ಎಂದು ಬೆಂಗಳೂರು ಹೊಟೇಲ್‌ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್‌ ಅಳಲು ತೋಡಿಕೊಂಡರು.

Read More
Next Story