LPG Shortage| ರಾಜ್ಯದಲ್ಲಿ ದಿನಕ್ಕೆ ಬೇಕಿರೋದು 50 ಸಾವಿರ ಸಿಲಿಂಡರ್, ಸಿಗ್ತಿರೋದು ಕೇವಲ 1000! ಕೇಂದ್ರಕ್ಕೆ ಸಿಎಂ ಪತ್ರ
x
ಸಿಎಂ ಸಿದ್ಧರಾಮಯ್ಯ(ಸಂಗ್ರಹ ಚಿತ್ರ)

LPG Shortage| ರಾಜ್ಯದಲ್ಲಿ ದಿನಕ್ಕೆ ಬೇಕಿರೋದು 50 ಸಾವಿರ ಸಿಲಿಂಡರ್, ಸಿಗ್ತಿರೋದು ಕೇವಲ 1000! ಕೇಂದ್ರಕ್ಕೆ ಸಿಎಂ ಪತ್ರ

ಕರ್ನಾಟಕದಲ್ಲಿ ವಾಣಿಜ್ಯ ಮತ್ತು ಆಟೋ ಎಲ್‌ಪಿಜಿ ಪೂರೈಕೆಯಲ್ಲಿ ಭಾರಿ ಕೊರತೆ ಉಂಟಾಗಿದ್ದು, ಸಿಎಂ ಸಿದ್ದರಾಮಯ್ಯ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದಿದ್ದಾರೆ.


ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವಾಣಿಜ್ಯ ಎಲ್‌ಪಿಜಿ ಮತ್ತು ಆಟೋ ಎಲ್‌ಪಿಜಿ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದ್ದು, ಪರಿಸ್ಥಿತಿಯನ್ನು ನಿಭಾಯಿಸಲು ತಕ್ಷಣದ ಪರಿಹಾರ ಕ್ರಮ ಕೈಗೊಳ್ಳುವಂತೆ ಕೋರಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೇಂದ್ರ ಪೆಟ್ರೋಲಿಯಂ ಸಚಿವಾಲಯಕ್ಕೆ ತುರ್ತು ಪತ್ರ ಬರೆದಿದ್ದಾರೆ.

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ರಾಜ್ಯದಲ್ಲಿನ ವಾಣಿಜ್ಯ ಎಲ್‌ಪಿಜಿ (Commercial LPG) ಕೊರತೆಯ ಕುರಿತು ತುರ್ತು ಪತ್ರ ಬರೆದಿದ್ದು, ಕೇಂದ್ರ ಸರ್ಕಾರದ ನಿರ್ದೇಶನದಂತೆ ಗೃಹಬಳಕೆಯ ಸಿಲಿಂಡರ್‌ಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಹಿನ್ನೆಲೆಯಲ್ಲಿ, ಹೋಟೆಲ್ ಮತ್ತು ಸಾರಿಗೆ ಕ್ಷೇತ್ರಕ್ಕೆ ಅಗತ್ಯವಿರುವ ಅನಿಲ ಪೂರೈಕೆ ಸ್ಥಗಿತಗೊಂಡಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ದಿನಕ್ಕೆ 49,000 ಸಿಲಿಂಡರ್‌ಗಳ ಕೊರತೆ!

ರಾಜ್ಯ ಸರ್ಕಾರದ ಅಂಕಿಅಂಶಗಳ ಪ್ರಕಾರ, ಕರ್ನಾಟಕದಲ್ಲಿ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಕ್ಯಾಟರಿಂಗ್ ಘಟಕಗಳು ಮತ್ತು ಪಿಜಿ (PG) ವಸತಿ ನಿಲಯಗಳಿಂದ ದಿನಕ್ಕೆ ಸುಮಾರು 50,000 ವಾಣಿಜ್ಯ ಸಿಲಿಂಡರ್‌ಗಳಿಗೆ ಬೇಡಿಕೆಯಿದೆ. ಆದರೆ, ಪ್ರಸ್ತುತ ದಿನಕ್ಕೆ ಕೇವಲ 1,000 ಸಿಲಿಂಡರ್‌ಗಳನ್ನು ಮಾತ್ರ ಪೂರೈಸಲು ಕಂಪನಿಗಳಿಗೆ ಸಾಧ್ಯವಾಗುತ್ತಿದೆ. ಅಂದರೆ ಶೇ. 98 ರಷ್ಟು ಕೊರತೆಯಿದ್ದು, ಇದು ಹೋಟೆಲ್ ಉದ್ಯಮವನ್ನು ಸಂಪೂರ್ಣವಾಗಿ ಹಳಿ ತಪ್ಪಿಸಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಹೋಟೆಲ್‌ನಿಂದ ಆಟೋವರೆಗೆ ಸಂಕಷ್ಟ

ವಾಣಿಜ್ಯ ಅನಿಲದ ಕೊರತೆಯು ಸಮಾಜದ ವಿವಿಧ ಸ್ತರಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಬೆಂಗಳೂರಿನ ಲಕ್ಷಾಂತರ ಐಟಿ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ಪಿಜಿ ಹಾಗೂ ಹೋಟೆಲ್‌ಗಳ ಆಹಾರದ ಮೇಲೆ ಅವಲಂಬಿತರಾಗಿದ್ದಾರೆ. ಸಿಲಿಂಡರ್ ಕೊರತೆಯಿಂದ ಅನೇಕ ಹೋಟೆಲ್‌ಗಳು ಮತ್ತು ಪಿಜಿಗಳು ಈಗಾಗಲೇ ಮುಚ್ಚುತ್ತಿದ್ದು, ಇವರಿಗೆ ಊಟದ ಸಮಸ್ಯೆ ಎದುರಾಗಿದೆ.

ಆಟೋ ಎಲ್‌ಪಿಜಿ ವಿತರಣೆಯಲ್ಲಿ ಪಾರದರ್ಶಕತೆ ಇಲ್ಲದ ಕಾರಣ ಸಾವಿರಾರು ಆಟೋ ಚಾಲಕರು ಇಂಧನಕ್ಕಾಗಿ ಗಂಟೆಗಟ್ಟಲೆ ಕಾಯುವಂತಾಗಿದೆ. ಇದು ನಗರದ 'ಲಾಸ್ಟ್ ಮೈಲ್ ಕನೆಕ್ಟಿವಿಟಿ' ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಡೈರಿ ಫಾರ್ಮ್‌ಗಳು ಮತ್ತು ಸಣ್ಣ ಕೃಷಿ ಸಂಸ್ಕರಣಾ ಘಟಕಗಳಿಗೂ ವಾಣಿಜ್ಯ ಎಲ್‌ಪಿಜಿ ಅನಿವಾರ್ಯವಾಗಿದ್ದು, ಉತ್ಪಾದನೆ ಕುಂಠಿತಗೊಂಡಿದೆ.

ವ್ಯವಸ್ಥೆಯಲ್ಲಿನ ದೋಷವೇನು?

ಗೃಹಬಳಕೆಯ ಗ್ಯಾಸ್ ವಿತರಣೆಯನ್ನು ಮೇಲ್ವಿಚಾರಣೆ ಮಾಡಲು ಸಮರ್ಥವಾದ ಐಟಿ ವ್ಯವಸ್ಥೆ ಇದೆ. ಆದರೆ, ವಾಣಿಜ್ಯ ಮತ್ತು ಆಟೋ ಎಲ್‌ಪಿಜಿ ವಿತರಣೆಯನ್ನು ಗಮನಿಸಲು ಯಾವುದೇ ಸಂಯೋಜಿತ ಪ್ಲಾಟ್‌ಫಾರ್ಮ್ ಇಲ್ಲ. ಇದರಿಂದಾಗಿ ವಿತರಣೆಯಲ್ಲಿ ಅಕ್ರಮ ನಡೆಯುವ ಸಾಧ್ಯತೆಯಿದ್ದು, ಹೊಣೆಗಾರಿಕೆಯ ಕೊರತೆ ಎದ್ದು ಕಾಣುತ್ತಿದೆ ಎಂದು ರಾಜ್ಯ ಸರ್ಕಾರ ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದೆ.

ಶೀಘ್ರದಲ್ಲೇ ಬರಲಿದೆ ಎಲ್‌ಪಿಜಿ ಟ್ಯಾಂಕರ್?

ವಿದೇಶದಿಂದ ಎರಡು ಬೃಹತ್ ಎಲ್‌ಪಿಜಿ ಟ್ಯಾಂಕರ್‌ಗಳು ಭಾರತಕ್ಕೆ ಆಗಮಿಸುತ್ತಿವೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ, ಕರ್ನಾಟಕದ ಕರಾವಳಿ ಮತ್ತು ಬೆಂಗಳೂರಿನ ವಿಶೇಷ ಅಗತ್ಯತೆಗಳನ್ನು ಪರಿಗಣಿಸಿ ರಾಜ್ಯಕ್ಕೆ ಹೆಚ್ಚಿನ ಪಾಲು ನೀಡಬೇಕು ಎಂದು ಸರ್ಕಾರ ಮನವಿ ಮಾಡಿದೆ. ಈ ಟ್ಯಾಂಕರ್‌ಗಳು ಆಗಮಿಸಿದರೆ ಮಾತ್ರ ರಾಜ್ಯದ ಹೋಟೆಲ್ ಉದ್ಯಮಕ್ಕೆ ಜೀವದಾನ ಸಿಗಲಿದೆ.

Read More
Next Story