ದೇಶದೆಲ್ಲೆಡೆ ಚಿನ್ನ ಹಾಗೂ ಬೆಳ್ಳಿದರಗಳು ಹೆಚ್ಚಾಗುತ್ತಿರುವುದು ಆಭರಣ ಪ್ರಿಯರಿಗೆ ಆತಂಕ ಮೂಡಿಸಿದೆ. ಇಂದಿನ ದರ ಎಷ್ಟಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ
ಚಿನಿವಾರಪೇಟೆಯ ಇತಿಹಾಸದಲ್ಲೇ ಹಿಂದೆಂದೂ ಕಾಣದ ರೀತಿಯಲ್ಲಿ, ಪ್ರತಿ 10 ಗ್ರಾಂ ಚಿನ್ನದ ಬೆಲೆ ಈಗ ಬರೋಬ್ಬರಿ 1.60 ಲಕ್ಷ ರೂಪಾಯಿಗಳ ಗಡಿ ದಾಟಿ ಸಾರ್ವಕಾಲಿಕ ದಾಖಲೆ ಬರೆದಿದೆ. ಇತ್ತ ಬೆಳ್ಳಿಯ ಕಥೆಯೂ ಭಿನ್ನವಾಗಿಲ್ಲ ಕಳೆದ ವರ್ಷದವರೆಗೂ ಸಾಮಾನ್ಯರಿಗೆ ಸುಲಭವಾಗಿ ಲಭ್ಯವಿದ್ದ ಬೆಳ್ಳಿ, ಈಗ ಕೆ.ಜಿ.ಗೆ 4 ಲಕ್ಷ ರೂಪಾಯಿಗಳ ಸನಿಹಕ್ಕೆ ಬಂದು ನಿಂತಿದೆ. ಸೋಮವಾರದ (ಜ.26) ಈ ದಿಢೀರ್ ದರ ಏರಿಕೆಯು ಮದುವೆ, ಹಬ್ಬ ಹಾಗೂ ಶುಭ ಸಮಾರಂಭಗಳ ತಯಾರಿ ನಡೆಸುತ್ತಿದ್ದ ಕುಟುಂಬಗಳಲ್ಲಿ ಆತಂಕದ ಬಿರುಗಾಳಿ ಎಬ್ಬಿಸಿದೆ. ಚಿನ್ನದ ಅಂಗಡಿಗಳಲ್ಲಿ ಜನರಿಗಿಂತ ಹೆಚ್ಚಾಗಿ ಆತಂಕವೇ ಮನೆಮಾಡಿದೆ.
ಹಾಗಾದರೆ, ಈ ಬೆಲೆ ಏರಿಕೆಗೆ ಅಸಲಿ ಕಾರಣವೇನು? ಇದು ಹೂಡಿಕೆದಾರರಿಗೆ ಲಾಭವೇ ಅಥವಾ ಜನಸಾಮಾನ್ಯರ ಕನಸಿಗೆ ಬಿದ್ದ ಹೊಡೆತವೇ? ಇಂದಿನ ಮಾರುಕಟ್ಟೆಯ ಇತ್ತೀಚಿನ ದರ ಪಟ್ಟಿ ಮತ್ತು ಸಂಪೂರ್ಣ ವರದಿ ಇಲ್ಲಿದೆ.
ಇತ್ತೀಚಿನ ಮಾಹಿತಿಯ ಪ್ರಕಾರ, ಚಿನ್ನ ಮತ್ತು ಬೆಳ್ಳಿ ಬೆಲೆಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿವೆ. ಸೋಮವಾರ(ಜ.26) ದರಗಳು ಹೆಚ್ಚಾಗಿದ್ದು, ಚಿನ್ನದ ಬೆಲೆ 1.60 ಲಕ್ಷ ರೂ. ಗಡಿಯನ್ನು ದಾಟಿದ್ದರೆ, ಬೆಳ್ಳಿ ಬೆಲೆಯು 4 ಲಕ್ಷ ರೂಪಾಯಿಗಳಿಗೆ ಕೇವಲ 25 ಸಾವಿರ ರೂಪಾಯಿಗಳಷ್ಟು ಕಡಿಮೆಯಿದೆ.
ಮಾರುಕಟ್ಟೆಯಲ್ಲಿ ಪ್ರಸ್ತುತ ದರ
24 ಕ್ಯಾರೆಟ್ ಚಿನ್ನಕ್ಕೆ 10ಗ್ರಾಂ ಗೆ 2,450 ರೂ. ಏರಿಕೆಯಾಗಿದ್ದು, 1,62,710 ರೂ. ಗೆ ತಲುಪಿದೆ. 22 ಕ್ಯಾರೆಟ್ ಚಿನ್ನಕ್ಕೆ 10 ಗ್ರಾಂ ಗೆ 2,250 ರೂ. ಗೆ ಹೆಚ್ಚಾಗಿದೆ. 1,49,150 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನ ಕೂಡ ಹೊಸ ದಾಖಲೆ ಬರೆದಿದ್ದು, 10 ಗ್ರಾಂಗೆ 1,840 ರೂ. ಗೆ ಏರಿಕೆಯಾಗಿ 1,22,030 ರೂ. ಗೆ ತಲುಪಿದೆ. ಬೆಳ್ಳಿ ದರ ಕೂಡ ಭಾರೀ ಏರಿಕೆ ಕಂಡಿದೆ. ಒಂದು ಕೆ.ಜಿ ಬೆಳ್ಳಿಯ ಬೆಲೆ ಏಕಾಏಕಿ 10,000 ರೂ. ಹೆಚ್ಚಾಗುವ ಮೂಲಕ 3,75,000 ರೂ. ಗೆ ತಲುಪಿದೆ.
ಬೆಂಗಳೂರು, ಹೈದರಾಬಾದ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಬಹುತೇಕ ಇದೇ ರೀತಿ ಇವೆ. ಬೆಳ್ಳಿಯ ಓಟವನ್ನು ನೋಡಿದರೆ ಈ ವಾರದ ಅಂತ್ಯದೊಳಗೆ ಅದು 4 ಲಕ್ಷ ರೂಪಾಯಿಗಳ ಗಡಿಯನ್ನು ದಾಟಿದರೂ ಆಶ್ಚರ್ಯವಿಲ್ಲ.
ಚಿನ್ನದ ಗಟ್ಟಿ
ಚಿನ್ನ ಹಾಗೂ ಬೆಳ್ಳಿಯ ಬೆಲೆ ಹೆಚ್ಚಾಗಲು ಪ್ರಮುಖ ಕಾರಣಗಳು
ಜಾಗತಿಕ ರಾಜಕೀಯ ಅಸ್ಥಿರತೆ
ರಷ್ಯಾ-ಉಕ್ರೇನ್ ಮತ್ತು ಮಧ್ಯಪ್ರಾಚ್ಯದ ಸಂಘರ್ಷಗಳ ಜೊತೆಗೆ, 2026ರಲ್ಲಿ ಅಮೆರಿಕ - ಯುರೋಪ್ ನಡುವಿನ ಸುಂಕದ ಸಮರ ಮತ್ತು ಗ್ರೀನ್‌ಲ್ಯಾಂಡ್ ವಿಚಾರವಾಗಿ ಉಂಟಾಗಿರುವ ಉದ್ವಿಗ್ನತೆ ಹೂಡಿಕೆದಾರರನ್ನು ಚಿನ್ನದತ್ತ ಸೆಳೆಯುತ್ತಿದ್ದು ಏರಿಕೆಯಾಗುವಂತೆ ಮಾಡಿದೆ.
ಕೇಂದ್ರ ಬ್ಯಾಂಕುಗಳಿಂದ ಚಿನ್ನದ ಖರೀದಿ
ಜಾಗತಿಕವಾಗಿ ಅನೇಕ ರಾಷ್ಟ್ರಗಳ ಕೇಂದ್ರ ಬ್ಯಾಂಕುಗಳು, ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳು, ಡಾಲರ್ ಮೇಲಿನ ಅವಲಂಬನೆ ಕಡಿಮೆ ಮಾಡಲು ಟನ್‌ಗಟ್ಟಲೆ ಚಿನ್ನವನ್ನು ಖರೀದಿಸಿ ಮೀಸಲಿಡುತ್ತಿರುವುದು ಪ್ರಮುಖ ಕಾರಣವಾಗಿದೆ.
ಬೆಳ್ಳಿಯ ಕೈಗಾರಿಕಾ ಬೇಡಿಕೆ
ಸೌರಶಕ್ತಿ ಫಲಕಗಳು, ಎಲೆಕ್ಟ್ರಿಕ್ ವಾಹನಗಳು (EV) ಮತ್ತು 5G ತಂತ್ರಜ್ಞಾನದಲ್ಲಿ ಬೆಳ್ಳಿಯ ಬಳಕೆ ಹೆಚ್ಚಾಗುತ್ತಿದೆ. ಸರಬರಾಜಿನ ಕೊರತೆ ಮತ್ತು ಚೀನಾದ ರಫ್ತು ನಿರ್ಬಂಧಗಳಿಂದಾಗಿ ಬೆಳ್ಳಿ ಬೆಲೆ ಗಗನಕ್ಕೇರುತ್ತಿದೆ.
ರೂಪಾಯಿ ಮೌಲ್ಯದ ಕುಸಿತ
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಇಳಿಕೆಯಾಗುತ್ತಿರುವುದು ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಹೆಚ್ಚಾಗಲು ನೇರ ಕಾರಣವಾಗಿದೆ.
ಬಡ್ಡಿದರ ಕಡಿತದ ನಿರೀಕ್ಷೆ
ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಕಡಿತಗೊಳಿಸುವ ನಿರೀಕ್ಷೆಯಿರುವುದು ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾಗಿ ಚಿನ್ನವನ್ನು ಆಯ್ಕೆ ಮಾಡಿಕೊಳ್ಳಲು ಪ್ರೇರೇಪಿಸುತ್ತಿದೆ.
ದೇಶೀಯ ಬೇಡಿಕೆ
ಭಾರತದಲ್ಲಿ ಮದುವೆಯ ಸೀಸನ್ ಮತ್ತು ಹಬ್ಬಗಳ ಸಮಯದಲ್ಲಿ ಹೆಚ್ಚಾಗುವ ಬೇಡಿಕೆಯು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆಯನ್ನು ಮತ್ತಷ್ಟು ಹೆಚ್ಚಿಸುತ್ತಿದೆ.


