ಚಿನ್ನದ ಬೆಲೆ 1.5 ಲಕ್ಷ ರೂ. ಗಡಿ ದಾಟಿ ಸಾರ್ವಕಾಲಿಕ ದಾಖಲೆ; ಬೆಳ್ಳಿ ಕೆ.ಜಿ.ಗೆ 3.23 ಲಕ್ಷ ರೂ.ಗೆ ಏರಿಕೆ
x

ಬಂಗಾರದ ದರ ಇದೇ ಮೊದಲ ಬಾರಿಗೆ 10 ಗ್ರಾಂಗೆ 1.5 ಲಕ್ಷ ರೂಪಾಯಿಗಳ ಗಡಿಯನ್ನು ದಾಟಿದ್ದರೆ, ಬೆಳ್ಳಿ ದರವು ಕೆಜಿಗೆ 3.23 ಲಕ್ಷ ರೂಪಾಯಿಗಳಿಗೆ ಏರಿಕೆಯಾಗಿದೆ.

ಚಿನ್ನದ ಬೆಲೆ 1.5 ಲಕ್ಷ ರೂ. ಗಡಿ ದಾಟಿ ಸಾರ್ವಕಾಲಿಕ ದಾಖಲೆ; ಬೆಳ್ಳಿ ಕೆ.ಜಿ.ಗೆ 3.23 ಲಕ್ಷ ರೂ.ಗೆ ಏರಿಕೆ

ಬಂಗಾರದ ದರ ಇದೇ ಮೊದಲ ಬಾರಿಗೆ 10 ಗ್ರಾಂಗೆ 1.5 ಲಕ್ಷ ರೂಪಾಯಿಗಳ ಗಡಿಯನ್ನು ದಾಟಿದ್ದರೆ, ಬೆಳ್ಳಿ ದರವು ಕೆಜಿಗೆ 3.23 ಲಕ್ಷ ರೂಪಾಯಿಗಳಿಗೆ ಏರಿಕೆಯಾಗಿದೆ.


Click the Play button to hear this message in audio format

ಜಾಗತಿಕ ಮಾರುಕಟ್ಟೆಯಲ್ಲಿನ ಅಸ್ಥಿರತೆ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೊಸ ಸುಂಕ ನೀತಿಗಳ ಪರಿಣಾಮವಾಗಿ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ಹೊಸ ಇತಿಹಾಸ ಬರೆದಿವೆ. ಬಂಗಾರದ ದರ ಇದೇ ಮೊದಲ ಬಾರಿಗೆ 10 ಗ್ರಾಂಗೆ 1.5 ಲಕ್ಷ ರೂಪಾಯಿಗಳ ಗಡಿಯನ್ನು ದಾಟಿದ್ದರೆ, ಬೆಳ್ಳಿ ದರವು ಕೆಜಿಗೆ 3.23 ಲಕ್ಷ ರೂಪಾಯಿಗಳಿಗೆ ಏರಿಕೆಯಾಗಿದೆ.

ಅಖಿಲ ಭಾರತ ಸರಾಫಾ ಅಸೋಸಿಯೇಷನ್ ಪ್ರಕಾರ, ಮಂಗಳವಾರದಂದು ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ದರವು ಬರೋಬ್ಬರಿ 5,100 ರೂ. ಏರಿಕೆ ಕಂಡಿದ್ದು, 99.9ರಷ್ಟು ಶುದ್ಧತೆಯ 10 ಗ್ರಾಂ ಚಿನ್ನದ ಬೆಲೆ 1,53,200 ರೂ.ಗಳಿಗೆ (ತೆರಿಗೆಗಳು ಸೇರಿದಂತೆ) ತಲುಪಿದೆ. ಹಿಂದಿನ ದಿನವಷ್ಟೇ ಇದರ ಬೆಲೆ 1,48,100 ರೂ.ಗಳಷ್ಟಿತ್ತು.

2026ರ ಆರಂಭದಲ್ಲೇ ಬಂಗಾರಕ್ಕೆ ಭಾರಿ ಬೇಡಿಕೆ

2026ರ ಆರಂಭದಿಂದಲೇ ಚಿನ್ನದ ದರ ಏರುಮುಖವಾಗಿದೆ. ವರ್ಷಾರಂಭದಲ್ಲಿ (2025ರ ಅಂತ್ಯಕ್ಕೆ) 1,37,700 ರೂ. ಇದ್ದ 10 ಗ್ರಾಂ ಚಿನ್ನದ ಬೆಲೆ, ಕೇವಲ 20 ದಿನಗಳಲ್ಲಿ 15,500 ರೂ. (ಶೇ. 11.2) ಹೆಚ್ಚಳ ಕಂಡಿದೆ. ರೂಪಾಯಿ ಮೌಲ್ಯ ಕುಸಿತ ಮತ್ತು ಜಾಗತಿಕ ಅನಿಶ್ಚಿತತೆ ಈ ಏರಿಕೆಗೆ ಪ್ರಮುಖ ಕಾರಣವಾಗಿದೆ ಎಂದು ಎಲ್​ಕೆಪಿ ಸೆಕ್ಯುರಿಟೀಸ್​ನ ವಿಪಿ ರಿಸರ್ಚ್ ಅನಾಲಿಸ್ಟ್ ಜತಿನ್ ತ್ರಿವೇದಿ ತಿಳಿಸಿದ್ದಾರೆ.

ಬೆಳ್ಳಿ ದರದಲ್ಲೂ ಭಾರೀ ಜಿಗಿತ

ಸತತ ಎಂಟನೇ ದಿನವೂ ಏರಿಕೆ ಕಂಡಿರುವ ಬೆಳ್ಳಿ, ಮಂಗಳವಾರ ಒಂದೇ ದಿನ 20,400 ರೂ. (ಶೇ. 7) ಏರಿಕೆಯಾಗಿ ಕೆಜಿಗೆ 3.23 ಲಕ್ಷ ರೂ.ಗಳ ದಾಖಲೆಯ ಮಟ್ಟ ತಲುಪಿದೆ. ಸೋಮವಾರವಷ್ಟೇ ಬೆಳ್ಳಿ ದರ 3 ಲಕ್ಷ ರೂ. ಗಡಿ ದಾಟಿತ್ತು. ಜನವರಿ 8ರಂದು 2,43,500 ರೂ. ಇದ್ದ ಬೆಳ್ಳಿ ದರ, ಕಳೆದ ಎಂಟು ದಿನಗಳಲ್ಲಿ ಬರೋಬ್ಬರಿ 79,500 ರೂ. (ಶೇ. 32.6) ಏರಿಕೆಯಾಗಿದೆ.

ಏರಿಕೆಗೆ ಪ್ರಮುಖ ಕಾರಣಗಳೇನು?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಯುರೋಪಿಯನ್ ರಾಷ್ಟ್ರಗಳ ಮೇಲೆ ಶೇ. 10ರಷ್ಟು ಸುಂಕ ವಿಧಿಸುವುದಾಗಿ ಘೋಷಿಸಿರುವುದು ಜಾಗತಿಕ ವ್ಯಾಪಾರದಲ್ಲಿ ಆತಂಕ ಸೃಷ್ಟಿಸಿದೆ. ಇದು ಹೂಡಿಕೆದಾರರನ್ನು ಸುರಕ್ಷಿತ ಹೂಡಿಕೆಯಾದ ಚಿನ್ನದತ್ತ ಮುಖ ಮಾಡುವಂತೆ ಮಾಡಿದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚುತ್ತಿರುವ ಭೂ-ರಾಜಕೀಯ ಉದ್ವಿಗ್ನತೆಗಳು ಜಾಗತಿಕ ಆರ್ಥಿಕತೆಗೆ ಅಪಾಯವನ್ನು ತಂದೊಡ್ಡಿದ್ದು, ಇದು ಚಿನ್ನದ ಬೆಲೆ ಏರಿಕೆಗೆ ಇಂಬು ನೀಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಗೋಲ್ಡ್ (Spot Gold) ಪ್ರತಿ ಔನ್ಸ್‌ಗೆ 4,750 ಡಾಲರ್‌ಗೆ ಏರಿಕೆಯಾಗಿದೆ. ಸ್ಪಾಟ್ ಸಿಲ್ವರ್ ಕೂಡ ಪ್ರತಿ ಔನ್ಸ್‌ಗೆ 95.88 ಡಾಲರ್‌ ತಲುಪಿದೆ.

Read More
Next Story