2026ರ ಆರಂಭದಲ್ಲೇ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 111 ರೂಪಾಯಿ ಏರಿಕೆಯಾಗಿದ್ದು, ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರಿಗೆ ಹೊರೆ. ಮನೆಬಳಕೆ ಸಿಲಿಂಡರ್ ದರ ಸ್ಥಿರವಾಗಿದೆ.
ಹೊಸ ವರ್ಷದ ಮೊದಲ ದಿನವೇ ಜನಸಾಮಾನ್ಯರಿಗೆ ಮತ್ತು ಉದ್ಯಮಿಗಳಿಗೆ ಇಂಧನ ದರ ಏರಿಕೆಯ ಬಿಸಿ ತಟ್ಟಿದೆ. ಜನವರಿ 1 ರಿಂದ ಜಾರಿಗೆ ಬರುವಂತೆ 19 ಕೆಜಿ ತೂಕದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಸರ್ಕಾರ 111 ರೂಪಾಯಿ ಹೆಚ್ಚಿಸಿದೆ. ಈ ದರ ಏರಿಕೆಯು ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಸಣ್ಣ ವ್ಯಾಪಾರಸ್ಥರ ನಿರ್ವಹಣಾ ವೆಚ್ಚವನ್ನು ಹೆಚ್ಚಿಸುವ ಸಾಧ್ಯತೆಯಿದೆ.
ಪ್ರಮುಖ ನಗರಗಳಲ್ಲಿ ವಾಣಿಜ್ಯ ಸಿಲಿಂಡರ್ ದರ:
ಬೆಲೆ ಏರಿಕೆಯ ನಂತರ ವಿವಿಧ ನಗರಗಳಲ್ಲಿ ವಾಣಿಜ್ಯ ಸಿಲಿಂಡರ್ ದರ ಹೀಗಿದೆ:
• ದೆಹಲಿ: 1,580.50 ರೂ.ಗಳಿಂದ 1,691.50 ರೂ. ಕ್ಕೆ ಏರಿಕೆ.
• ಕೋಲ್ಕತ್ತಾ: 1,684 ರೂ.ಗಳಿಂದ 1,795 ರೂ. ಕ್ಕೆ ಏರಿಕೆ.
• ಮುಂಬೈ: 1,531 ರೂ.ಗಳಿಂದ 1,642.50 ರೂ. ಕ್ಕೆ ಏರಿಕೆ.
• ಪಾಟ್ನಾ: 1,953.50 ರೂ. ಕ್ಕೆ ತಲುಪಿದೆ.
ಗೃಹಬಳಕೆಯ ಸಿಲಿಂಡರ್ ದರದಲ್ಲಿ ಬದಲಾವಣೆ ಇಲ್ಲ
ಗೃಹಿಣಿಯರಿಗೆ ಸಮಾಧಾನಕರ ವಿಷಯವೆಂದರೆ, 14 ಕೆಜಿ ತೂಕದ ಮನೆಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ದೆಹಲಿಯಲ್ಲಿ 853 ರೂ. ಮತ್ತು ಮುಂಬೈನಲ್ಲಿ 852.50ರೂ. ಇದ್ದು, ಹಳೆಯ ದರವೇ ಮುಂದುವರಿಯಲಿದೆ.
ಬೆಂಗಳೂರಿನಲ್ಲಿದರ ಎಷ್ಟಿದೆ?
ಇಡೀ ದೇಶಾದ್ಯಂತ ವಾಣಿಜ್ಯ ಸಿಲಿಂಡರ್ ದರದಲ್ಲಿ 111 ರೂಪಾಯಿ ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ ಇದರ ಅಂದಾಜು ದರ ಹೀಗಿದೆ. ಸುಮಾರು 1,750 ರೂ.ಗಳಿಂದ 1,770ರೂ.ವರೆಗೆ (ಸ್ಥಳೀಯ ತೆರಿಗೆಗಳು ಮತ್ತು ವಿತರಕರ ಶುಲ್ಕದ ಆಧಾರದ ಮೇಲೆ ಇದು ಅಲ್ಪ ವ್ಯತ್ಯಾಸವಾಗಬಹುದು). ಈ ಏರಿಕೆಯು ಹೋಟೆಲ್, ಕ್ಯಾಂಟೀನ್ ಮತ್ತು ಸಣ್ಣ ಉದ್ಯಮಿಗಳ ಮೇಲೆ ನೇರ ಪರಿಣಾಮ ಬೀರಲಿದೆ.
ಗೃಹಬಳಕೆಯ ಸಿಲಿಂಡರ್ (14.2 ಕೆಜಿ):
ಗೃಹಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ, ಇದು ಗ್ರಾಹಕರಿಗೆ ಸಮಾಧಾನದ ಸಂಗತಿಯಾಗಿದೆ. ಪ್ರಸ್ತುತ ದರ ಸುಮಾರು 805 ರೂ. ರಿಂದ 815ರೂ.ರಷ್ಟಿದೆ.
ಪಿಎನ್‌ಜಿ (PNG) ದರ ಕಡಿತ: ಮನೆಗಳಿಗೆ ಅಲ್ಪ ರಿಲೀಫ್
ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯ ನಡುವೆಯೂ, ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಬಳಸುವ ಮನೆಗಳಿಗೆ ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (IGL) ಸಿಹಿ ಸುದ್ದಿ ನೀಡಿದೆ. ದೆಹಲಿ ಮತ್ತು ಎನ್‌ಸಿಆರ್ ವ್ಯಾಪ್ತಿಯಲ್ಲಿ ಪಿಎನ್‌ಜಿ ದರವನ್ನು ಇಳಿಕೆ ಮಾಡಲಾಗಿದೆ.
ಬೆಲೆ ಏರಿಕೆಗೆ ಕಾರಣವೇನು?
ಜಾಗತಿಕ ಇಂಧನ ದರಗಳು, ರೂಪಾಯಿ-ಡಾಲರ್ ವಿನಿಮಯ ದರ, ಆಮದು ವೆಚ್ಚ ಮತ್ತು ಸ್ಥಳೀಯ ತೆರಿಗೆಗಳಲ್ಲಿನ ವ್ಯತ್ಯಾಸಗಳು ಎಲ್‌ಪಿಜಿ ಬೆಲೆಯ ಮೇಲೆ ಪ್ರಭಾವ ಬೀರುತ್ತವೆ. ರಾಜ್ಯಗಳ ತೆರಿಗೆ ನೀತಿಗಳಿಂದಾಗಿ ಒಂದೊಂದು ನಗರದಲ್ಲಿ ಒಂದೊಂದು ರೀತಿಯ ದರ ಇರುತ್ತದೆ.


