
ಸಚಿವ ಎನ್.ಎಸ್. ಭೋಸರಾಜು ಮಾತನಾಡಿದರು.
ಕ್ವಾಂಟಮ್ ತಂತ್ರಜ್ಞಾನ : ಬ್ರೆಜಿಲ್-ಬೊಲಿವಿಯಾ ನಿಯೋಗದೊಂದಿಗೆ ಸಚಿವ ಎನ್.ಎಸ್. ಭೋಸರಾಜು ಚರ್ಚೆ
2035ರ ವೇಳೆಗೆ 20 ಬಿಲಿಯನ್ ಯುಎಸ್ ಡಾಲರ್ ಮೌಲ್ಯದ ಕ್ವಾಂಟಮ್ ಆರ್ಥಿಕತೆಯನ್ನು ಕಟ್ಟುವ ಹಾಗೂ ಆ ಮೂಲಕ ಎರಡು ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಬೃಹತ್ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ ಎಂದು ಸಚಿವ ಎನ್.ಎಸ್. ಭೋಸರಾಜು ತಿಳಿಸಿದರು.
ಜಾಗತಿಕ ಮಟ್ಟದಲ್ಲಿ ಕ್ವಾಂಟಮ್ ತಂತ್ರಜ್ಞಾನದ ಅಭಿವೃದ್ಧಿ ಹಾಗೂ ಬಳಕೆಗೆ 'ಬ್ರಿಕ್ಸ್' (BRICS) ರಾಷ್ಟ್ರಗಳು ಪರಸ್ಪರ ದ್ವಿಪಕ್ಷೀಯ ಸಹಕಾರದೊಂದಿಗೆ ಮುನ್ನಡೆಯುವುದು ಅತ್ಯಗತ್ಯ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಭೋಸರಾಜು ಪ್ರತಿಪಾದಿಸಿದ್ದಾರೆ. ಅಲ್ಲದೆ, ಸದಸ್ಯ ರಾಷ್ಟ್ರಗಳ ನಡುವೆ 'ಬ್ರಿಕ್ಸ್ ಕ್ವಾಂಟಮ್ ಶೃಂಗಸಭೆ' ಆಯೋಜಿಸುವ ಮಹತ್ವದ ಪ್ರಸ್ತಾಪವನ್ನು ಅವರು ಮುಂದಿಟ್ಟಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಬ್ರೆಜಿಲ್‌ನ ಸಾರ್ವಜನಿಕ ಸೇವೆಗಳ ನಿರ್ವಹಣೆ ಮತ್ತು ನಾವೀನ್ಯತೆ ಸಚಿವೆ ಎಸ್ತರ್ ಡ್ವೆಕ್ (Esther Dweck) ನೇತೃತ್ವದ ಉನ್ನತ ಮಟ್ಟದ ನಿಯೋಗದೊಂದಿಗೆ ಸಭೆ ನಡೆಸಿದ ಬಳಿಕ ಅವರು ಈ ವಿಷಯ ತಿಳಿಸಿದರು.
"ಆಸಿಯಾನ್ (ASEAN) ನಂತಹ ಇತರ ಅಂತರರಾಷ್ಟ್ರೀಯ ಒಕ್ಕೂಟಗಳು ಈಗಾಗಲೇ ಕ್ವಾಂಟಮ್ ಶೃಂಗಸಭೆಗಳನ್ನು ಯಶಸ್ವಿಯಾಗಿ ಆಯೋಜಿಸುತ್ತಿವೆ. ಅದೇ ಮಾದರಿಯಲ್ಲಿ ಬ್ರಿಕ್ಸ್ ಸದಸ್ಯ ರಾಷ್ಟ್ರಗಳಾದ ನಾವು ಕೃಷಿ, ಔಷಧ ಸಂಶೋಧನೆ, ಜಲಸಂಪನ್ಮೂಲ ನಿರ್ವಹಣೆ, ಹವಾಮಾನ ಮುನ್ಸೂಚನೆ ಹಾಗೂ ಪ್ರವಾಹ ನಿರ್ವಹಣೆಯನ್ನು ಸುಧಾರಿಸಲು ಕ್ವಾಂಟಮ್ ತಂತ್ರಜ್ಞಾನವನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಜಂಟಿಯಾಗಿ ಕೆಲಸ ಮಾಡಬೇಕಿದೆ. ಆ ಮೂಲಕ ನಮ್ಮ ಸಮಸ್ಯೆಗಳನ್ನು ಒಟ್ಟಾಗಿ ಬಗೆಹರಿಸಿಕೊಂಡು ಜಾಗತಿಕ ಅಭಿವೃದ್ಧಿಗೆ ಮುನ್ನುಡಿ ಬರೆಯಬೇಕಿದೆ" ಎಂದು ಸಚಿವರು ಕರೆ ನೀಡಿದರು.
ಕ್ವಾಂಟಮ್ ಕ್ಷೇತ್ರದಲ್ಲಿ ಕರ್ನಾಟಕದ್ದೇ ಪಾರುಪತ್ಯ
ಸಭೆಯಲ್ಲಿ ಕ್ವಾಂಟಮ್ ಕ್ಷೇತ್ರದಲ್ಲಿ ರಾಜ್ಯದ ಸಾಧನೆಗಳನ್ನು ವಿವರಿಸಿದ ಭೋಸರಾಜು, "ಕರ್ನಾಟಕವು ಈಗಾಗಲೇ ದೇಶದ ಮೊಟ್ಟಮೊದಲ ಹಾಗೂ ಸ್ಥಳೀಯವಾಗಿ ನಿರ್ಮಿಸಲಾದ ವಾಣಿಜ್ಯ ಕ್ವಾಂಟಮ್ ಕಂಪ್ಯೂಟರ್ ಅನ್ನು ಹೊಂದಿದೆ. 100 ಮಿಲಿಯನ್ ಯುಎಸ್ ಡಾಲರ್ (ಸುಮಾರು 830 ಕೋಟಿ ರೂ.) ಮೊತ್ತದ 'ಕ್ವಾಂಟಮ್ ಇನ್ನೋವೇಶನ್ ಫಂಡ್' ಘೋಷಣೆ ಮತ್ತು ಪ್ರತ್ಯೇಕ 'ಕ್ವಾಂಟಮ್ ಸಿಟಿ' ಅಭಿವೃದ್ಧಿ ಮಾಡುವ ಮೂಲಕ ಕರ್ನಾಟಕವು ದೇಶಕ್ಕೇ ಮಾದರಿಯಾಗಿದೆ" ಎಂದು ಹರ್ಷ ವ್ಯಕ್ತಪಡಿಸಿದರು.
ಇದರ ಜೊತೆಗೆ, 2035ರ ವೇಳೆಗೆ 20 ಬಿಲಿಯನ್ ಯುಎಸ್ ಡಾಲರ್ ಮೌಲ್ಯದ ಕ್ವಾಂಟಮ್ ಆರ್ಥಿಕತೆಯನ್ನು ಕಟ್ಟುವ ಹಾಗೂ ಆ ಮೂಲಕ ಎರಡು ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಬೃಹತ್ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ ಎಂದು ಅವರು ಮಾಹಿತಿ ನೀಡಿದರು.
ಕೆರೆಗಳ ರಕ್ಷಣೆಗೆ 'ಡಿಜಿಟಲ್ ವಾಟರ್ ಸ್ಟ್ಯಾಕ್' ಬಳಕೆ
ಸಭೆಯಲ್ಲಿ ಕ್ವಾಂಟಮ್ ಕಂಪ್ಯೂಟಿಂಗ್ ಹೊರತಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (DPI), ಕೃತಕ ಬುದ್ಧಿಮತ್ತೆ (AI) ಮತ್ತು ಬಾಹ್ಯಾಕಾಶ ತಂತ್ರಜ್ಞಾನದ ಕುರಿತೂ ವ್ಯಾಪಕ ಚರ್ಚೆ ನಡೆಯಿತು. ಸಣ್ಣ ನೀರಾವರಿ ಇಲಾಖೆಯಲ್ಲಿ ಜಾರಿಗೆ ತರಲಾಗುತ್ತಿರುವ ವಿನೂತನ 'ಡಿಜಿಟಲ್ ವಾಟರ್ ಸ್ಟ್ಯಾಕ್' (Digital Water Stack) ವ್ಯವಸ್ಥೆಯ ಬಗ್ಗೆಯೂ ಸಚಿವರು ವಿವರಿಸಿದರು. ಉಪಗ್ರಹ ಆಧಾರಿತ ಕಣ್ಗಾವಲು ಹಾಗೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವನ್ನು ಒಳಗೊಂಡಿರುವ ಈ ವ್ಯವಸ್ಥೆಯು, ಜಲಮೂಲಗಳ ಗಡಿಗಳನ್ನು ಒತ್ತುವರಿಯಿಂದ ರಕ್ಷಿಸಲು, ಕೆರೆಗಳ ನೀರಿನ ಗುಣಮಟ್ಟ ಕಾಯ್ದುಕೊಳ್ಳಲು ಮತ್ತು ಅಂತರ್ಜಲ ಮಟ್ಟದ ಮೇಲೆ ನಿಗಾ ಇಡಲು ಅತ್ಯಂತ ಸಹಕಾರಿಯಾಗಿದೆ ಎಂದರು.
ಈ ಉನ್ನತ ಮಟ್ಟದ ನಿಯೋಗದಲ್ಲಿ ಡೇಟಾಪ್ರೆವ್ (Dataprev) ಅಧ್ಯಕ್ಷರಾದ ರೊಡ್ರಿಗೊ ಅಸುಂಪಾವೊ ಮತ್ತು ಬ್ರೆಜಿಲಿಯನ್ ಎಐ ಅಬ್ಸರ್ವೇಟರಿ (Brazilian AI Observatory) ತಜ್ಞರು ಉಪಸ್ಥಿತರಿದ್ದರು.
ಬೊಲಿವಿಯಾ ನಿಯೋಗದೊಂದಿಗೂ ದ್ವಿಪಕ್ಷೀಯ ಸಭೆ
ಇದಕ್ಕೂ ಮುನ್ನ ಸೋಮವಾರ, ಬೊಲಿವಿಯಾದ ವಿಜ್ಞಾನ ಮತ್ತು ತಂತ್ರಜ್ಞಾನ ಉಪಸಚಿವ ಒಮರ್ ಅಲ್ಫ್ರೆಡೊ ಪೆನಲೋಜಾ ಎಸ್ಕಲೇರಾ ಅವರ ನೇತೃತ್ವದ ನಿಯೋಗದೊಂದಿಗೂ ಸಚಿವ ಭೋಸರಾಜು ಅವರು ಕಾರ್ಯತಂತ್ರದ ಸಹಕಾರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಫಲಪ್ರದ ದ್ವಿಪಕ್ಷೀಯ ಸಭೆ ನಡೆಸಿದರು. ಐಟಿ/ಬಿಟಿ ಇಲಾಖೆ ಕಾರ್ಯದರ್ಶಿ ಎನ್. ಮಂಜುಳಾ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದ ಈ ಸಭೆಯಲ್ಲಿ, ಶಿಕ್ಷಣ, ಆರೋಗ್ಯ ಮತ್ತು ಒಟ್ಟಾರೆ ಜೀವನಮಟ್ಟವನ್ನು ಸುಧಾರಿಸಲು ಕೃತಕ ಬುದ್ಧಿಮತ್ತೆ ಹಾಗೂ ಕ್ವಾಂಟಮ್ ಕಂಪ್ಯೂಟಿಂಗ್‌ನಂತಹ ಸುಧಾರಿತ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಕುರಿತು ಪ್ರಮುಖವಾಗಿ ಚರ್ಚಿಸಲಾಯಿತು.

