Swiss companies interested in investing in Quantum City Bengaluru
x

ಸಚಿವ ಎನ್‌. ಎಸ್‌. ಭೋಸರಾಜು

ಕ್ವಾಂಟಮ್‌ ಸಿಟಿ|ಬೆಂಗಳೂರಿನಲ್ಲಿ ಹೂಡಿಕೆಗೆ ಸ್ವಿಟ್ಜರ್ಲೆಂಡ್‌ ಕಂಪನಿಗಳು ಮುಂದು

ದೇಶದ ಮೊದಲ ಕ್ವಾಂಟಮ್‌ ಸಮಾವೇಶದಲ್ಲಿ ಘೋಷಿಸಿದಂತೆ ಈಗಾಗಲೇ ಕ್ವಾಂಟಮ್‌ ಸಿಟಿಗೆ ಭೂಮಿಯನ್ನು ರಾಜ್ಯ ಸರ್ಕಾರ ಮಂಜೂರು ಮಾಡಿದೆ ಎಂದು ಸಚಿವ ಎನ್‌. ಎಸ್‌. ಭೋಸರಾಜು ತಿಳಿಸಿದರು.


Click the Play button to hear this message in audio format

ಬೆಂಗಳೂರಿನಲ್ಲಿ ಸ್ಥಾಪಿಸಲುದ್ದೇಶಿಸಿರುವ ಕ್ವಾಂಟಮ್‌ ಸಿಟಿ ಯೋಜನೆಯಲ್ಲಿ ಹೂಡಿಕೆ ಮಾಡಲು ಸ್ವಿಟ್ಜರ್ಲೆಂಡ್‌ ಕಂಪನಿಗಳು ಮುಂದೆ ಬಂದಿವೆ ಎಂದು ಸಚಿವ ಎನ್‌. ಎಸ್‌. ಭೋಸರಾಜು ತಿಳಿಸಿದ್ದಾರೆ.

ಬುಧವಾರ(ಅ.29) ಬೆಂಗಳೂರಿನ ವಿಕಾಸಸೌಧದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಗರವನ್ನು ವಿಶ್ವದ ಕ್ವಾಂಟಮ್‌ ಕ್ಷೇತ್ರದ ಕೇಂದ್ರಬಿಂದುವನ್ನಾಗಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿ ನಡೆದ ದೇಶದ ಮೊದಲ ಕ್ವಾಂಟಮ್‌ ಸಮಾವೇಶದಲ್ಲಿ ಘೋಷಣೆ ಮಾಡಿದಂತೆ ಈಗಾಗಲೇ ಕ್ವಾಂಟಮ್‌ ಸಿಟಿಗೆ ರಾಜ್ಯ ಸರ್ಕಾರವು ಭೂಮಿ ಮಂಜೂರು ಮಾಡಿದೆ ಎಂದರು.

ಕ್ವಾಂಟಮ್‌ ಸಿಟಿಯ ಅಭಿವೃದ್ದಿಗಾಗಿ ಕ್ವಾಂಟಮ್‌ ಸಂಶೋಧನೆಯಲ್ಲಿ ತೊಡಗಿಕೊಂಡಿರುವ ವಿಶ್ವದ ಪ್ರಮುಖ ಸಂಸ್ಥೆಗಳಾದ ಇಟಿಹೆಚ್‌ ʼಜ್ಯೂರಿಚ್‌ʼ, ʼಸೆರಿʼ ಸೇರಿದಂತೆ ವಿವಿಧ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಲಾಯಿತು. ರಾಜ್ಯದಲ್ಲಿ ಕ್ವಾಂಟಮ್‌ ಪರಿಣಿತ ಮಾನವ ಸಂಪನ್ಮೂಲ ಅಭಿವೃದ್ದಿಗಾಗಿ ಐಐಎಸ್‌ಸಿ ಜೊತೆಗೂಡಿ ಕೋರ್ಸ್‌ ಪ್ರಾರಂಭಿಸಲಾಗಿದೆ. ರಾಜ್ಯದಲ್ಲಿ ಪರಿಣಿತ ಮಾನವ ಸಂಪನ್ಮೂಲ ಲಭ್ಯವಿದ್ದು, ಹೊಸ ಸಂಶೋಧನೆ ಕೈಗೊಳ್ಳಲು ಉತ್ತಮ ಪರಿಸರವಿದೆ. ಈ ಹಿನ್ನಲೆಯಲ್ಲಿ ಸಂಶೋಧನಾ ಯೋಜನೆಗಳಲ್ಲಿ ಸಹಕರಿಸುವಂತೆ ನಮ್ಮ ಮನವಿಗೆ ಇಟಿಎಚ್ ಜ್ಯೂರಿಕ್ [ETH Zurich] ಮಂಡಳಿಯ ಅಧ್ಯಕ್ಷ ಡಾ. ಮೈಕೇಲ್ ಹೆಂಗಾರ್ಟ್ನರ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.

ಹೂಡಿಕೆಗೆ ಆಹ್ವಾನ

ಸ್ವಿಸ್‌ನೆಕ್ಸ್‌ ಕ್ವಾಂಟಮ್‌ ಸಮಾವೇಶದಲ್ಲಿ ಭಾಗವಹಿಸಿ ರಾಜ್ಯದಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಕುರಿತು ವಿಶ್ವದ ಪ್ರಮುಖ ಕ್ವಾಂಟಮ್‌ ಕ್ಷೇತ್ರದ ಕಂಪನಿಗಳ ಪ್ರತಿನಿಧಿಗಳಿಗೆ ಮಾಹಿತಿ ನೀಡಲಾಗಿದೆ. ನಮ್ಮಲ್ಲಿ ತಾಂತ್ರಿಕ ಅವಕಾಶಗಳು, ಮಾನವ ಸಂಪನ್ಮೂಲ ಲಭ್ಯತೆ, ಹೂಡಿಕೆಗೆ ಉತ್ತಮ ಪರಿಸರ, ಉತ್ತಮ ಸಹಕಾರದ ಬಗ್ಗೆ ಮಾಹಿತಿ ನೀಡಲಾಗುವುದು. ರಾಜ್ಯದಲ್ಲಿ ಹೂಡಿಕೆ ಮಾಡುವಂತೆಯೂ ಆಹ್ವಾನ ನೀಡಲಾಯಿತು ಎಂದು ತಿಳಿಸಿದರು.

ಕ್ವಾಂಟಮ್ ಬೇಸೆಲ್, CERN ಸಂಸ್ಥೆಗಳಿಗೆ ಭೇಟಿ

ಐನ್‌ಸ್ಟೀನ್‌ ಅವರು ಸಂಶೋಧನೆಯಲ್ಲಿ ತೊಡಗಿಕೊಂಡಿದ್ದ ETH Zurich ಸಂಸ್ಥೆಗೆ ಭೇಟಿ ನೀಡಲಾಯಿತು. ಸೂಪರ್‌ಕಂಡಕ್ಟಿಂಗ್ ಕ್ಯೂಬಿಟ್ ಮತ್ತು ಟ್ರಾಪ್ಡ್ ಐಯಾನ್ ಸಿಸ್ಟಮ್ಸ್‌ಗಳ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ETH Zurich ಕ್ವಾಂಟಮ್ ಸೆಂಟರ್‌ನ ನಿರ್ದೇಶಕರಾದ ವಿಶ್ವವಿಖ್ಯಾತ ಪ್ರೊ. ಆಂಡ್ರಿಯಾಸ್ ವಾಲ್ರಾಫ್ ಹಾಗೂ ಪ್ರೊ. ಜೊನಥನ್ ಹೋಮ್ ಮತ್ತು ಪ್ರೊ. ಕ್ಲಾಸ್ ಎನ್ಸ್‌ಸ್ಲಿನ್ ಅವರನ್ನು ಮುಂದಿನ ಕ್ವಾಂಟಮ್‌ ಇಂಡಿಯಾ ಸಮ್ಮೇಳನಕ್ಕೆ ಆಹ್ವಾನ ನೀಡಲಾಗಿದೆ ಎಂದು ಹೇಳಿದರು.

ರಾಜ್ಯದ ವಿದ್ಯಾರ್ಥಿಗಳಿಗೆ ತರಬೇತಿ

ETH ಜ್ಯೂರಿಚ್‌ ವಿಶ್ವವಿದ್ಯಾಲಯ ಪ್ರಯೋಗಾಲಯದ ಸಂಶೋಧನೆಗಳು ಈಗ ಸ್ಟಾರ್ಟಪ್‌ಗಳಾಗಿ ಬೆಳೆದಿವೆ. ಇಂತಹ ಪರಿಸರವನ್ನು ಕ್ವಾಂಟಮ್‌ ಸಿಟಿಯಲ್ಲಿ ಅಳವಡಿಸುವ ಹಾಗೂ ಸಹಭಾಗಿತ್ವದ ಮನವಿಗೆ ಸಕಾರಾತ್ಮಕ ಸ್ಪಂದನೆ ದೊರೆತಿದೆ. Zurich Instruments ಸಂಸ್ಥೆಗೆ ಭೇಟಿ ನೀಡುವ ಮೂಲಕ ಕ್ವಾಂಟಮ್‌ ಕಂಪ್ಯೂಟಿಂಗ್‌ ಅಭಿವೃದ್ದಿಗೆ ಅಗತ್ಯವಿರುವಂತಹ ಉಪಕರಣಗಳ ತಯಾರಿಕೆ ಬಗ್ಗೆ ಮಾಹಿತಿ ನೀಡಲಾಯಿತು. ಕರ್ನಾಟಕದ ಸಂಶೋಧನಾ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಈ ಸಂಸ್ಥೆ ಮುಂದಾಗಿದೆ ಎಂದು ತಿಳಿಸಿದರು.

ಜಿನಿವಾದ ಸೈನ್ಸ್‌ ಅಂಡ್‌ ಡಿಪ್ಲೋಮಸಿ ಆಂಟಿಸಿಪೇಟರ್‌ ಸಮಾವೇಶದಲ್ಲಿ ಭಾಗಿಯಾದ ಸಂಧರ್ಭದಲ್ಲಿ ಭಾರತ ಸರ್ಕಾರದ ಮುಖ್ಯ ವೈಜ್ಞಾನಿಕ ಸಲಹೆಗಾರರಾದ ಪ್ರೊ. ಅಜಯ್ ಸೂದ್ ಅವರನ್ನು ಸಮಾವೇಶದಲ್ಲಿ ಭೇಟಿಯಾಗಿದ್ದು, ರಾಜ್ಯದ ಕ್ವಾಂಟಮ್‌ ಕನಸು ನನಸು ಮಾಡುವ ನಿಟ್ಟಿನಲ್ಲಿ ಅಗತ್ಯವಿರುವಂತಹ ಸಲಹೆ ಹಾಗೂ ಸಹಕಾರ ನೀಡುವ ಕುರಿತು ಚರ್ಚಿಸಲಾಗಿದೆ ಎಂದರು.

ಹೈಕಮಾಂಡ್‌ ತೀರ್ಮಾನವೇ ಅಂತಿಮ

ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಹೈಕಮಾಂಡ್‌ ತೀರ್ಮಾನವೇ ಅಂತಿಮ ಎಂದು ಸಿಎಂ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಇಬ್ಬರೂ ಹೇಳಿದ್ದಾರೆ. ಪಕ್ಷದಲ್ಲಿ ಶಿಸ್ತು ಮುಖ್ಯವಾಗಿರಬೇಕು. ಬಹಿರಂಗವಾಗಿ ಯಾರೂ ಮಾತನಾಡಬಾರದು. ನಾಯಕತ್ವ ಬದಲಾವಣೆ, ನವೆಂಬರ್‌ ಕ್ರಾಂತಿ ಹಾಗೂ ಸಚಿವ ಸಂಪುಟ ಪುನಾರಚನೆ ಬಗ್ಗೆ ಸಚಿವರು ಹಾಗೂ ಶಾಸಕರು ಅನಗತ್ಯ ಹೇಳಿಕೆ ನೀಡಬಾರದು ಎಂದು ತಿಳಿಸಿದರು.

Read More
Next Story