ಎಸ್‌ಬಿಐ, ಪಿಎನ್‌ಬಿ ಮತ್ತು ಕೆನರಾ ಬ್ಯಾಂಕ್‌ನಂತಹ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಚೆಕ್ ಕ್ಲಿಯರೆನ್ಸ್, ನಗದು ವ್ಯವಹಾರ ಮತ್ತು ಶಾಖಾ ಮಟ್ಟದ ಸೇವೆಗಳು ಸ್ಥಗಿತಗೊಂಡಿವೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಐದು ದಿನಗಳ ಕೆಲಸದ ಅವಧಿಯನ್ನು ತಕ್ಷಣವೇ ಜಾರಿಗೆ ತರಬೇಕೆಂದು ಒತ್ತಾಯಿಸಿ ಸಾರ್ವಜನಿಕ ವಲಯದ ಬ್ಯಾಂಕ್ ಉದ್ಯೋಗಿಗಳು ಮಂಗಳವಾರ ದೇಶಾದ್ಯಂತ ಮುಷ್ಕರ ನಡೆಸುತ್ತಿದ್ದಾರೆ. ಒಂಬತ್ತು ಪ್ರಮುಖ ಬ್ಯಾಂಕ್ ಯೂನಿಯನ್‌ಗಳ ಒಕ್ಕೂಟವಾದ 'ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್' ಈ ಮುಷ್ಕರಕ್ಕೆ ಕರೆ ನೀಡಿದ್ದು, ಇದರಿಂದಾಗಿ ಮಂಗಳವಾರ ಬ್ಯಾಂಕಿಂಗ್ ಸೇವೆಗಳಲ್ಲಿ ದೊಡ್ಡ ಮಟ್ಟದ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.
ಜನವರಿ 23ರಂದು ಮುಖ್ಯ ಕಾರ್ಮಿಕ ಆಯುಕ್ತರ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯು ಯಾವುದೇ ಫಲ ನೀಡದೆ ವಿಫಲವಾದ ಹಿನ್ನೆಲೆಯಲ್ಲಿ, ಒಕ್ಕೂಟವು ಈ ಹೋರಾಟವನ್ನು ಮುಂದುವರಿಸಲು ನಿರ್ಧರಿಸಿದೆ. ಭಾನುವಾರ (ಜ. 25) ಮತ್ತು ಸೋಮವಾರ (ಜ. 26 - ಗಣರಾಜ್ಯೋತ್ಸವ) ರಜೆಯ ಕಾರಣ ಈಗಾಗಲೇ ಬ್ಯಾಂಕ್‌ಗಳು ಮುಚ್ಚಲ್ಪಟ್ಟಿದ್ದು, ಈಗ ಮಂಗಳವಾರವೂ ಮುಷ್ಕರ ನಡೆಯುತ್ತಿರುವುದರಿಂದ ಸತತ ಮೂರನೇ ದಿನ ಗ್ರಾಹಕರು ಬ್ಯಾಂಕಿಂಗ್ ಸೇವೆಗಳಿಂದ ವಂಚಿತರಾಗುವಂತಾಗಿದೆ.
ಪ್ರಮುಖ ಬೇಡಿಕೆ ಮತ್ತು ಹಿನ್ನೆಲೆ
ಬ್ಯಾಂಕ್‌ಗಳಲ್ಲಿ ಎಲ್ಲಾ ಶನಿವಾರಗಳನ್ನು ರಜಾದಿನಗಳೆಂದು ಘೋಷಿಸಿ, ವಾರಕ್ಕೆ ಐದು ದಿನಗಳ ಕೆಲಸದ ಪದ್ಧತಿಯನ್ನು ಜಾರಿಗೊಳಿಸಬೇಕು ಎಂಬುದು ಉದ್ಯೋಗಿಗಳ ಪ್ರಮುಖ ಬೇಡಿಕೆಯಾಗಿದೆ. ಈ ಕುರಿತು ಮಾರ್ಚ್ 2024ರಲ್ಲಿ ಭಾರತೀಯ ಬ್ಯಾಂಕ್‌ಗಳ ಸಂಘ ಮತ್ತು ಯುಎಫ್‌ಬಿಯು ನಡುವೆ ಒಪ್ಪಂದ ಏರ್ಪಟ್ಟಿದ್ದರೂ, ಕೇಂದ್ರ ಸರ್ಕಾರವು ಈವರೆಗೂ ಅಧಿಕೃತ ಅಧಿಸೂಚನೆ ಹೊರಡಿಸಿಲ್ಲ. ವಾರಕ್ಕೆ 5 ದಿನ ಕೆಲಸ ಜಾರಿಯಾದರೆ, ಉದ್ಯೋಗಿಗಳು ಪ್ರತಿದಿನ 40 ನಿಮಿಷಗಳ ಕಾಲ ಹೆಚ್ಚುವರಿ ಕೆಲಸ ಮಾಡಲು ಸಿದ್ಧರಿರುವುದಾಗಿ ಯೂನಿಯನ್‌ಗಳು ತಿಳಿಸಿವೆ.
ಯಾವ ಸೇವೆಗಳ ಮೇಲೆ ಪರಿಣಾಮ?
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ , ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ಸೇರಿದಂತೆ ಪ್ರಮುಖ ಸರ್ಕಾರಿ ಬ್ಯಾಂಕ್‌ಗಳಲ್ಲಿ ನಗದು ಜಮೆ, ಹಿಂಪಡೆಯುವಿಕೆ, ಚೆಕ್ ಕ್ಲಿಯರೆನ್ಸ್ ಮತ್ತು ಆಡಳಿತಾತ್ಮಕ ಕೆಲಸಗಳಿಗೆ ಅಡ್ಡಿಯಾಗಬಹುದು. ಆದರೆ, ಎಚ್‌ಡಿಎಫ್‌ಸಿ, ಐಸಿಐಸಿಐ ಮತ್ತು ಆಕ್ಸಿಸ್ ಬ್ಯಾಂಕ್‌ನಂತಹ ಖಾಸಗಿ ಬ್ಯಾಂಕ್‌ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.
ಡಿಜಿಟಲ್ ಬ್ಯಾಂಕಿಂಗ್ ಸೇವೆಗಳಾದ ಯುಪಿಐ, ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಯಾವುದೇ ವ್ಯತ್ಯಯವಿಲ್ಲದೆ ಕಾರ್ಯನಿರ್ವಹಿಸಲಿವೆ. ಆದರೆ, ಸ್ಥಳೀಯವಾಗಿ ಎಟಿಎಂಗಳಲ್ಲಿ ನಗದು ಕೊರತೆ ಉಂಟಾಗುವ ಸಾಧ್ಯತೆ ಇದೆ ಎಂದು ಬ್ಯಾಂಕಿಂಗ್ ಮೂಲಗಳು ತಿಳಿಸಿವೆ. ಬ್ಯಾಂಕ್‌ಗಳು ಈಗಾಗಲೇ ಈ ಕುರಿತು ಷೇರು ಮಾರುಕಟ್ಟೆಗಳಿಗೆ ಮಾಹಿತಿ ನೀಡಿದ್ದು, ಗ್ರಾಹಕರು ಡಿಜಿಟಲ್ ಪಾವತಿ ವಿಧಾನಗಳನ್ನು ಬಳಸಲು ಸಲಹೆ ನೀಡಿವೆ.


