Organizations oppose 60% free seat rule on flights: Warning of ticket price hike
x

ಭಾರತದ ವಿವಿಧ ಏರಲೈನ್ಸ್‌ ಕಂಪನಿಗಳು (ಸಾಂದರ್ಭಿಕ ಚಿತ್ರ)

ವಿಮಾನಗಳಲ್ಲಿ ಶೇ.60ರಷ್ಟು ಉಚಿತ ಸೀಟು ನಿಯಮಕ್ಕೆ ಸಂಸ್ಥೆಗಳ ವಿರೋಧ: ಟಿಕೆಟ್ ದರ ಏರಿಕೆಯ ಎಚ್ಚರಿಕೆ

ಈ ಹೊಸ ನಿಯಮವು ವಿಮಾನಯಾನ ವಲಯದ ಮೇಲೆ ಅತ್ಯಂತ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಭಾರಿ ಆರ್ಥಿಕ ಹೊರೆಗೆ ಕಾರಣವಾಗಲಿದೆ ಎಂದು ಒಕ್ಕೂಟ ಕಳವಳ ವ್ಯಕ್ತಪಡಿಸಿದೆ.


Click the Play button to hear this message in audio format

ಕೇಂದ್ರ ಸರ್ಕಾರವು ವಿಮಾನ ಪ್ರಯಾಣಿಕರಿಗೆ ಆರ್ಥಿಕ ಹೊರೆ ತಗ್ಗಿಸುವ ಉದ್ದೇಶದಿಂದ ಪ್ರತಿ ವಿಮಾನದಲ್ಲಿ ಕನಿಷ್ಠ ಶೇ. 60ರಷ್ಟು ಸೀಟುಗಳನ್ನು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ (ಸೀಟ್-ಸೆಲೆಕ್ಷನ್ ಚಾರ್ಜ್) ಉಚಿತವಾಗಿ ಕಾಯ್ದಿರಿಸಲು ಅವಕಾಶ ಕಲ್ಪಿಸುವಂತೆ ಸೂಚಿಸಿತ್ತು. ಆದರೆ, ಸರ್ಕಾರದ ಈ ಹೊಸ ಆದೇಶಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ವಿಮಾನಯಾನ ಸಂಸ್ಥೆಗಳು, ಇದರಿಂದ ಉಂಟಾಗುವ ಬೃಹತ್ ಆದಾಯದ ನಷ್ಟವನ್ನು ಸರಿದೂಗಿಸಲು ವಿಮಾನದ ಮೂಲ ಟಿಕೆಟ್ ದರವನ್ನು ಹೆಚ್ಚಿಸುವುದು ಅನಿವಾರ್ಯವಾಗಲಿದೆ ಎಂದು ಸ್ಪಷ್ಟ ಎಚ್ಚರಿಕೆ ನೀಡಿವೆ.

ಇಂಡಿಗೊ, ಏರ್ ಇಂಡಿಯಾ ಹಾಗೂ ಸ್ಪೈಸ್‌ಜೆಟ್‌ನಂತಹ ಪ್ರಮುಖ ವಿಮಾನಯಾನ ಸಂಸ್ಥೆಗಳನ್ನು ಪ್ರತಿನಿಧಿಸುವ 'ಫೆಡರೇಷನ್ ಆಫ್ ಇಂಡಿಯನ್ ಏರ್‌ಲೈನ್ಸ್' (ಎಫ್‌ಐಎ), ಈ ಹೊಸ ಆದೇಶವನ್ನು ತಕ್ಷಣವೇ ಹಿಂಪಡೆಯುವಂತೆ ನಾಗರಿಕ ವಿಮಾನಯಾನ ಸಚಿವಾಲಯವನ್ನು ಒತ್ತಾಯಿಸಿದೆ. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ಪ್ರಯಾಣಿಕರ ಹಿತದೃಷ್ಟಿಯಿಂದ ಉಚಿತ ಸೀಟು ನಿಯಮವನ್ನು ಜಾರಿಗೆ ತರಲು ಮುಂದಾದ ಬೆನ್ನಲ್ಲೇ, ಎಫ್‌ಐಎ ನಿಯೋಗವು ನಾಗರಿಕ ವಿಮಾನಯಾನ ಕಾರ್ಯದರ್ಶಿ ಸಮೀರ್ ಕುಮಾರ್ ಸಿನ್ಹಾ ಅವರಿಗೆ ಪತ್ರ ಬರೆದು ತಮ್ಮ ವಿರೋಧ ದಾಖಲಿಸಿದೆ.

ಈ ಹೊಸ ನಿಯಮವು ವಿಮಾನಯಾನ ವಲಯದ ಮೇಲೆ ಅತ್ಯಂತ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಭಾರಿ ಆರ್ಥಿಕ ಹೊರೆಗೆ ಕಾರಣವಾಗಲಿದೆ ಎಂದು ಒಕ್ಕೂಟ ಕಳವಳ ವ್ಯಕ್ತಪಡಿಸಿದೆ.

ಟಿಕೆಟ್ ದರ ಏರಿಕೆಯ ಅನಿವಾರ್ಯತೆ ಮತ್ತು ಸಬೂಬು

ಸೀಟು ಆಯ್ಕೆಯ ಶುಲ್ಕವು ವಿಮಾನಯಾನ ಸಂಸ್ಥೆಗಳ ಆದಾಯದ ಕಾನೂನುಬದ್ಧ ಹಾಗೂ ಪ್ರಮುಖ ಭಾಗವಾಗಿದೆ ಎಂದು ಸಂಸ್ಥೆಗಳು ವಾದಿಸಿವೆ. ಹೊಸ ನಿಯಮದಿಂದ ಉಂಟಾಗುವ ಆರ್ಥಿಕ ನಷ್ಟವನ್ನು ಸರಿದೂಗಿಸಲು ಮೂಲ ಟಿಕೆಟ್ ದರವನ್ನು ಹೆಚ್ಚಿಸದೆ ಬೇರೆ ದಾರಿಯಿಲ್ಲ. ಇದರ ಪರಿಣಾಮವಾಗಿ, ನಿರ್ದಿಷ್ಟ ಸೀಟು ಆಯ್ಕೆ ಮಾಡಲು ಇಚ್ಛಿಸದ ಸಾಮಾನ್ಯ ಪ್ರಯಾಣಿಕರಿಗೂ ಟಿಕೆಟ್ ದರ ದುಬಾರಿಯಾಗಲಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ವಿಮಾನಯಾನ ಸಂಸ್ಥೆಗಳು ಅತ್ಯಂತ ಕಡಿಮೆ ಲಾಭಾಂಶದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಇಂಧನ, ನಿರ್ವಹಣೆ ಹಾಗೂ ವಿಮಾನ ನಿಲ್ದಾಣದ ಶುಲ್ಕಗಳಂತಹ ಹೆಚ್ಚುತ್ತಿರುವ ವೆಚ್ಚಗಳನ್ನು ನಿಭಾಯಿಸಲು ಇಂತಹ ಪೂರಕ ಆದಾಯಗಳನ್ನೇ ನೆಚ್ಚಿಕೊಂಡಿವೆ. ಸದ್ಯ ಸೀಟುಗಳ ಲಭ್ಯತೆ, ಮುಂಭಾಗದ ಸಾಲು ಮತ್ತು ಲೆಗ್-ರೂಮ್ ಆಧಾರದ ಮೇಲೆ ಪ್ರಯಾಣಿಕರಿಗೆ 200 ರೂ. ಗಳಿಂದ 2,100 ರೂ. ವರೆಗೆ ಸೀಟು ಆಯ್ಕೆ ಶುಲ್ಕ ವಿಧಿಸಲಾಗುತ್ತಿದೆ.

ಆರ್ಥಿಕ ಬಿಕ್ಕಟ್ಟಿನ ಸವಾಲುಗಳು

ಕೇಂದ್ರ ಸರ್ಕಾರವು ಈ ಮಹತ್ವದ ನಿರ್ಧಾರವನ್ನು ಪ್ರಕಟಿಸುವ ಮುನ್ನ ವಿಮಾನಯಾನ ವಲಯದ ಪಾಲುದಾರರೊಂದಿಗೆ ಯಾವುದೇ ರೀತಿಯ ಸಮಾಲೋಚನೆ ನಡೆಸಿಲ್ಲ ಎಂದು ಸಂಸ್ಥೆಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ. ಮಾರುಕಟ್ಟೆ ಆಧಾರಿತ ಬೆಲೆ ನಿಗದಿಯ ಮೇಲೆ ಇಂತಹ ಏಕರೂಪದ ನಿರ್ಬಂಧಗಳನ್ನು ಹೇರುವುದು ವಾಣಿಜ್ಯ ನಮ್ಯತೆಯನ್ನು ಹಾಳುಮಾಡುತ್ತದೆ ಹಾಗೂ ಭವಿಷ್ಯದಲ್ಲಿ ಅನಗತ್ಯ ನಿಯಂತ್ರಣಗಳ ಮಧ್ಯಪ್ರವೇಶಕ್ಕೆ ಇದು ಮುನ್ನುಡಿ ಬರೆಯಲಿದೆ ಎಂದು ಒಕ್ಕೂಟ ಎಚ್ಚರಿಸಿದೆ. ಮತ್ತೊಂದೆಡೆ, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಬಿಕ್ಕಟ್ಟಿನಿಂದಾಗಿ ವಿಮಾನಯಾನ ಸಂಸ್ಥೆಗಳು ಈಗಾಗಲೇ ಆರ್ಥಿಕವಾಗಿ ಕಂಗೆಟ್ಟಿವೆ. ವಿಪರೀತವಾಗಿ ಏರಿಕೆಯಾಗುತ್ತಿರುವ ಜೆಟ್ ಇಂಧನ ದರ ಸೇರಿದಂತೆ ಹಲವು ಕಾರ್ಯಾಚರಣೆಯ ಸವಾಲುಗಳನ್ನು ಎದುರಿಸುತ್ತಿರುವ ಈ ಸಂಕಷ್ಟದ ಸಮಯದಲ್ಲಿ ಇಂತಹ ನಿಯಮಗಳು ಗಾಯದ ಮೇಲೆ ಬರೆ ಎಳೆದಂತಾಗಲಿವೆ ಎಂದು ಸಚಿವಾಲಯದ ಗಮನಕ್ಕೆ ತರಲಾಗಿದೆ.

Read More
Next Story