
Airline Free Seats| ವಿಮಾನ ಪ್ರಯಾಣಿಕರಿಗೆ ಗುಡ್ ನ್ಯೂಸ್: ಶೇ. 60 ರಷ್ಟು ಸೀಟುಗಳು ಇನ್ಮುಂದೆ ಉಚಿತ!
ವಿಮಾನ ಪ್ರಯಾಣಿಕರ ಹಿತದೃಷ್ಟಿಯಿಂದ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಡಿಜಿಸಿಎ (DGCA) ಹೊಸ ನಿಯಮಗಳನ್ನು ಜಾರಿಗೆ ತಂದಿವೆ. ಶೇ. 60 ರಷ್ಟು ಉಚಿತ ಸೀಟುಗಳು, ಒಂದೇ PNRನಲ್ಲಿ ಪ್ರಯಾಣಿಸುವವರಿಗೆ ಪಕ್ಕಪಕ್ಕದ ಸೀಟು ಮತ್ತು ಪ್ರಾದೇಶಿಕ ಭಾಷೆಯಲ್ಲಿ ಮಾಹಿತಿ ಒದಗಿಸುವುದು ಕಡ್ಡಾಯವಾಗಿದೆ.
ವಿಮಾನದಲ್ಲಿ ಪ್ರಯಾಣಿಸುವ ಜನರಿಗೆ ಹೊರೆಯಾಗುತ್ತಿದ್ದ ಸೀಟು ಆಯ್ಕೆಯ ಶುಲ್ಕ (Seat Charges) ಮತ್ತು ಇತರ ಗುಪ್ತ ಶುಲ್ಕಗಳಿಗೆ ಕೇಂದ್ರ ಸರ್ಕಾರ ಬ್ರೇಕ್ ಹಾಕಿದೆ. ಯಾವುದೇ ವಿಮಾನದಲ್ಲಿ ಕನಿಷ್ಠ ಶೇ. 60 ರಷ್ಟು ಸೀಟುಗಳು ಉಚಿತವಾಗಿ ಸಿಗುವಂತೆ ನೋಡಿಕೊಳ್ಳಬೇಕು ಎಂದು ವಿಮಾನಯಾನ ಸಂಸ್ಥೆಗಳಿಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ವಿಮಾನಯಾನ ನಿಯಂತ್ರಕ ಸಂಸ್ಥೆ (DGCA) ಖಡಕ್ ಸೂಚನೆ ನೀಡಿದೆ.
ಪ್ರಯಾಣಿಕರ ದೂರಿಗೆ ಸ್ಪಂದಿಸಿದ ಸರ್ಕಾರ
ವಿಮಾನ ಟಿಕೆಟ್ ಬುಕ್ ಮಾಡುವಾಗ ಬಹುತೇಕ ಎಲ್ಲಾ ಸೀಟುಗಳಿಗೆ ಹೆಚ್ಚುವರಿ ಹಣ ಪಾವತಿಸಬೇಕಾದ ಪರಿಸ್ಥಿತಿಯ ಬಗ್ಗೆ ಪ್ರಯಾಣಿಕರು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ವಿಮಾನಯಾನ ಸಂಸ್ಥೆಗಳು ಗ್ರಾಹಕರನ್ನು ಶೋಷಿಸುತ್ತಿವೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು 'ಪ್ರಯಾಣಿಕ ಸ್ನೇಹಿ' ನಿಯಮಗಳನ್ನು ಜಾರಿಗೆ ತಂದಿದೆ.
ಹೊಸ ನಿಯಮಗಳು ಹೇಳೋದೇನು?
ಶೇ. 60 ರಷ್ಟು ಸೀಟು ಫ್ರೀ: ವಿಮಾನದಲ್ಲಿರುವ ಒಟ್ಟು ಸೀಟುಗಳ ಪೈಕಿ ಕನಿಷ್ಠ ಶೇ. 60 ರಷ್ಟು ಸೀಟುಗಳನ್ನು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಪ್ರಯಾಣಿಕರಿಗೆ ಹಂಚಿಕೆ ಮಾಡಬೇಕು.
ಒಂದೇ ಪಿಎನ್‌ಆರ್ (PNR) - ಜೊತೆಯಲ್ಲೇ ಸೀಟು: ಒಂದೇ ಟಿಕೆಟ್‌ನಲ್ಲಿ (PNR) ಪ್ರಯಾಣಿಸುವ ಕುಟುಂಬದ ಸದಸ್ಯರು ಅಥವಾ ಗುಂಪಿನ ಸದಸ್ಯರಿಗೆ ಒಟ್ಟಿಗೆ ಅಥವಾ ಪಕ್ಕಪಕ್ಕದ ಸೀಟುಗಳನ್ನೇ ನೀಡಬೇಕು. ಸೀಟು ಹಂಚಿಕೆ ವಿಚಾರದಲ್ಲಿ ವಿಮಾನದೊಳಗೆ ನಡೆಯುವ ಗದ್ದಲಗಳನ್ನು ತಪ್ಪಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಪ್ರಯಾಣಿಕರ ಹಕ್ಕುಗಳ ಪ್ರದರ್ಶನ: ವಿಮಾನ ವಿಳಂಬ, ರದ್ದತಿ ಅಥವಾ ಬೋರ್ಡಿಂಗ್ ನಿರಾಕರಣೆಯ ಸಂದರ್ಭದಲ್ಲಿ ಪ್ರಯಾಣಿಕರಿಗಿರುವ ಹಕ್ಕುಗಳನ್ನು ವಿಮಾನಯಾನ ಸಂಸ್ಥೆಗಳು ತಮ್ಮ ವೆಬ್‌ಸೈಟ್, ಮೊಬೈಲ್ ಆ್ಯಪ್ ಮತ್ತು ಏರ್‌ಪೋರ್ಟ್ ಕೌಂಟರ್‌ಗಳಲ್ಲಿ ಪ್ರಮುಖವಾಗಿ ಪ್ರದರ್ಶಿಸಬೇಕು.
ಪ್ರಾದೇಶಿಕ ಭಾಷೆಯಲ್ಲಿ ಮಾಹಿತಿ: ಪ್ರಯಾಣಿಕರ ಅನುಕೂಲಕ್ಕಾಗಿ ವಿಮಾನಯಾನ ಸಂಸ್ಥೆಗಳು ತಮ್ಮ ನಿಯಮಗಳನ್ನು ಮತ್ತು ಪ್ರಯಾಣಿಕರ ಹಕ್ಕುಗಳನ್ನು ಕೇವಲ ಇಂಗ್ಲಿಷ್ ಮಾತ್ರವಲ್ಲದೆ ಪ್ರಾದೇಶಿಕ ಭಾಷೆಗಳಲ್ಲಿಯೂ ಸಂವಹನ ಮಾಡಬೇಕು ಎಂದು ಸೂಚಿಸಲಾಗಿದೆ.
ಕ್ರೀಡಾಪಟುಗಳು ಮತ್ತು ಸಂಗೀತಗಾರರಿಗೆ ಅನುಕೂಲ
ಕ್ರೀಡಾ ಉಪಕರಣಗಳು ಸಂಗೀತ ವಾದ್ಯಗಳು ಮತ್ತು ಸಾಕುಪ್ರಾಣಿಗಳನ್ನು (Pets) ವಿಮಾನದಲ್ಲಿ ಕೊಂಡೊಯ್ಯುವ ಬಗ್ಗೆ ಇದುವರೆಗೆ ಸ್ಪಷ್ಟ ನಿಯಮಗಳಿರಲಿಲ್ಲ. ಈಗ ಈ ಬಗ್ಗೆ ಪಾರದರ್ಶಕ ನೀತಿಗಳನ್ನು ರೂಪಿಸುವಂತೆ ಡಿಜಿಸಿಎ ಸೂಚಿಸಿದೆ. ಇದರಿಂದಾಗಿ ಇವುಗಳನ್ನು ಕೊಂಡೊಯ್ಯುವಾಗ ವಿಧಿಸಲಾಗುತ್ತಿದ್ದ ಮನಬಂದಂತೆ ಶುಲ್ಕಗಳಿಗೆ ತಡೆ ಬೀಳಲಿದೆ.
ಏಕೆ ಈ ಬದಲಾವಣೆ?
ವಿಮಾನಯಾನ ಸಂಸ್ಥೆಗಳು 'ವೆಬ್ ಚೆಕ್-ಇನ್' ಹೆಸರಿನಲ್ಲಿ ಪ್ರತಿಯೊಂದು ಸೀಟಿಗೂ ಹಣ ವಸೂಲಿ ಮಾಡುತ್ತಿದ್ದವು. ಕಿಟಕಿ ಪಕ್ಕದ ಸೀಟು ಇರಲಿ ಅಥವಾ ಮಧ್ಯದ ಸೀಟು ಇರಲಿ, ಗ್ರಾಹಕರು ಹಣ ನೀಡಲೇಬೇಕಾದ ಅನಿವಾರ್ಯತೆ ಇತ್ತು. ಸರ್ಕಾರದ ಈ ಹೊಸ ನಿಯಮವು ಸಾಮಾನ್ಯ ಪ್ರಯಾಣಿಕರ ಜೇಬಿಗೆ ಬೀಳುತ್ತಿದ್ದ ಕತ್ತರಿಯನ್ನು ತಪ್ಪಿಸಲಿದೆ.

