ಮತ ಚಲಾವಣೆ ಸಂಖ್ಯೆ ಬಿಡುಗಡೆಯಲ್ಲಿ ವಿಳಂಬ: ಆಯೋಗಕ್ಕೆ ಪ್ರತಿಪಕ್ಷಗಳಿಂದ ಪ್ರಶ್ನೆ
ಲೋಕಸಭೆ ಚುನಾವಣೆಯ ಮೊದಲ ಎರಡು ಹಂತಗಳ ಅಂತಿಮ ಮತದಾರರ ಅಂಕಿಅಂಶವನ್ನು ಪ್ರಕಟಿಸಲು ವಿಳಂಬ ಮಾಡಿದ ಚುನಾವಣೆ ಆಯೋಗವನ್ನು ಕಾಂಗ್ರೆಸ್, ಸಿಪಿಐ(ಎಂ) ಮತ್ತು ತೃಣಮೂಲ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಟೀಕಿಸಿವೆ.
ಚುನಾವಣೆ ಆಯೋಗ ಏಪ್ರಿಲ್ 19 ರಂದು ನಡೆದ 1 ನೇ ಹಂತದ ಮತದಾನದಲ್ಲಿ ಅಂತಿಮ ಮತ ಚಲಾವಣೆ ಪ್ರಮಾಣ ಶೇ.66.14 ಮತ್ತು ಏಪ್ರಿಲ್ 26 ರಂದು ನಡೆದ ಎರಡನೇ ಹಂತದಲ್ಲಿ ಶೇ. 66.71 ರಷ್ಟು ಮತ ಚಲಾವಣೆಯಾಗಿದೆ ಎಂದು ಮಂಗಳವಾರ ಘೋಷಿಸಿದೆ.
ಒಟ್ಟು ಮತದಾರರ ಸಂಖ್ಯೆ ಎಲ್ಲಿದೆ?: ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು ಪ್ರತಿ ಸಂಸದೀಯ ಕ್ಷೇತ್ರದ ಮತದಾರರ ಸಂಪೂರ್ಣ ಸಂಖ್ಯೆಯನ್ನು ಚುನಾವಣಾ ಸಮಿತಿ ಏಕೆ ನೀಡಿಲ್ಲ ಎಂದು ಕೇಳಿದರು. ʻಚುನಾವಣೆ ಆಯೋಗ ಮತದಾನದ ಅಂಕಿಅಂಶಗಳನ್ನು ಪ್ರಕಟಿಸಿದೆ. ಇದು ಆರಂಭಿಕ ಅಂಕಿಅಂಶಗಳಿಗಿಂತ ಹೆಚ್ಚಾಗಿದೆ. ಆದರೆ, ಪ್ರತಿ ಸಂಸದೀಯ ಕ್ಷೇತ್ರದ ಮತದಾರರ ಸಂಪೂರ್ಣ ಸಂಖ್ಯೆಯನ್ನು ಏಕೆ ಬಹಿರಂಗಪಡಿಸಿಲ್ಲ? ಈ ಅಂಕಿ ತಿಳಿಯದ ಹೊರತು ಶೇಕಡಾವಾರು ಅರ್ಥಹೀನʼ ಎಂದು ಹೇಳಿದರು.
ʻಎಣಿಕೆ ಸಮಯದಲ್ಲಿ ಒಟ್ಟು ಮತದಾರರ ಸಂಖ್ಯೆಯನ್ನು ಬದಲಾಯಿಸಬಹುದಾದ್ದರಿಂದ, ಫಲಿತಾಂಶದ ಬಗ್ಗೆ ಆತಂಕ ಮುಂದುವರಿದಿದೆ. 2014 ರವರೆಗೆ ಪ್ರತಿ ಕ್ಷೇತ್ರದ ಮತದಾರರ ಒಟ್ಟು ಸಂಖ್ಯೆ ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯವಿತ್ತು. ಆಯೋಗ ಪಾರದರ್ಶಕವಾಗಿರಬೇಕು ಮತ್ತು ಈ ದತ್ತಾಂಶವನ್ನು ಪ್ರಕಟಿಸಬೇಕುʼ ಎಂದು ಹೇಳಿದರು.
ʻನಾನು ಪ್ರತಿ ಕ್ಷೇತ್ರದ ನೋಂದಾಯಿತ ಮತದಾರರ ಸಂಪೂರ್ಣ ಸಂಖ್ಯೆ ಬಗ್ಗೆ ಮಾತನಾಡುತ್ತಿದ್ದೇನೆ. ಅಂಚೆ ಮತಪತ್ರಗಳನ್ನು ಎಣಿಸಿದ ನಂತರ ತಿಳಿಯುವ ಮತಗಳ ಸಂಖ್ಯೆಯನ್ನಲ್ಲ. ಪ್ರತಿ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆಯನ್ನು ಏಕೆ ಪ್ರಕಟಿಸುತ್ತಿಲ್ಲ? ಆಯೋಗ ಉತ್ತರಿಸಬೇಕು,ʼ ಎಂದು ಎಕ್ಸ್ ನಲ್ಲಿ ಕೇಳಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ʻಆಯೋಗವು ಚುನಾವಣೆಗೆ ಸಂಬಂಧಿಸಿದ ದತ್ತಾಂಶಗಳನ್ನು ಸಮಯೋಚಿತ ಮತ್ತು ಪಾರದರ್ಶಕವಾಗಿ ಬಿಡುಗಡೆಗೊಳಿಸುವುದು ಅತ್ಯಗತ್ಯ. ಇದೇ ಮೊದಲ ಬಾರಿಗೆ, ಮೊದಲ ಹಂತದ ಮತದಾನದ ನಂತರ 11 ದಿನ ಮತ್ತು ಎರಡನೇ ಹಂತದ ಮತದಾನದ ನಾಲ್ಕು ದಿನಗಳ ನಂತರವೂ ಮತದಾನದ ಅಂತಿಮ ಅಂಕಿಅಂಶ ಪ್ರಕಟಿಸಿಲ್ಲ. ಹಿಂದೆ ಆಯೋಗ ಮತದಾನದ 24 ಗಂಟೆಗಳ ಒಳಗೆ ಅಂದಾಜು ಮತದಾನದ ಅಂಕಿಅಂಶ ಪ್ರಕಟಿಸುತ್ತಿತ್ತುʼ ಎಂದು ಎಕ್ಸ್‌ನಲ್ಲಿ ಹೇಳಿದ್ದಾರೆ.
ಏನೋ ತಪ್ಪಾಗಿದೆ?: ತೃಣಮೂಲ ಕಾಂಗ್ರೆಸ್ ನಾಯಕ ಡೆರೆಕ್ ಒಬ್ರಿಯಾನ್ ಹೇಳಿದರು, ʻಎರಡು ಹಂತಗಳು ಮುಗಿದ ನಾಲ್ಕು ದಿನಗಳ ನಂತರ ಆಯೋಗ ಮತದಾನದ ಅಂಕಿಅಂಶ ಬಿಡುಗಡೆ ಮಾಡುತ್ತದೆ. 4 ದಿನಗಳ ಹಿಂದೆ ಬಿಡುಗಡೆ ಮಾಡಿದ್ದಕ್ಕಿಂತ ಶೇ. 5.75 ರಷ್ಟು ಹೆಚ್ಚಳವಾಗಿದೆ. ಇದು ಸಾಮಾನ್ಯವೇ? ಏನೋ ತಪ್ಪಾಗಿದೆʼ ಎಂದು ಎಕ್ಸ್ ನಲ್ಲಿ ಬರೆದಿದ್ದಾರೆ.
ʻಪ್ರಧಾನಿ ಮೋದಿ ಅವರು ಸ್ವಂತ ಅಂಪೈರ್ ನ್ನು ಪಡೆಯಲು ಮತ್ತು ಆಯೋಗವನ್ನು ನಾಶಮಾಡಲು ಸಂಸತ್ತಿನಲ್ಲಿ ಕಾನೂನು ಬದಲಿಸಿದ್ದಾರೆʼ ಎಂದು ಒಬ್ರಿಯಾನ್ ಈ ಹಿಂದೆ ಆರೋಪಿಸಿದ್ದರು.
ಮುಖ್ಯ ಚುನಾವಣಾ ಆಯುಕ್ತ ಮತ್ತು ಇತರ ಚುನಾವಣಾ ಆಯುಕ್ತ(ನೇಮಕ, ಸೇವಾ ಷರತ್ತುಗಳು ಮತ್ತು ಅಧಿಕಾರಾವಧಿ) ಕಾಯಿದೆ 2023 ನ್ನು ಉಲ್ಲೇಖಿಸಿದ್ದಾರೆ. ಪ್ರಧಾನಿ, ವಿರೋಧ ಪಕ್ಷದ ನಾಯಕ ಮತ್ತು ಕೇಂದ್ರ ಸಚಿವರ ಅಧ್ಯಕ್ಷತೆಯ ಆಯ್ಕೆ ಸಮಿತಿಯು ಸಿಇಸಿ ಮತ್ತು ಚುನಾವಣೆ ಆಯುಕ್ತರ ನೇಮಕಕ್ಕೆ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡುತ್ತದೆ. ಸಮಿತಿಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಇರುವುದಿಲ್ಲ.
ಯೆಚೂರಿ, ʻಆಯೋಗ ಮೊದಲ ಎರಡು ಹಂತಗಳ ಅಂತಿಮ ಅಂಕಿಅಂಶ ಬಹಿರಂಗಪಡಿಸಿಲ್ಲ. ಅಂದಾಜು ಮತದಾನದ ಶೇಕಡಾವಾರು ಮಾತ್ರ ಹಾಕಿದೆ. ಸಂಸದೀಯ ಕ್ಷೇತ್ರದಲ್ಲಿ ನೋಂದಾಯಿಸಿದ ಒಟ್ಟು ಮತದಾರರು ಆಯೋಗದ ವೆಬ್‌ಸೈಟ್‌ನಲ್ಲಿಲ್ಲ.ಆದ್ದರಿಂದ ಘೋಷಿಸಿದ ಶೇಕಡಾವಾರು ಅರ್ಥಹೀನ ಮತ್ತು ತಪ್ಪುದಾರಿಗೆಳೆಯುತ್ತದೆʼ ಎಂದು ಹೇಳಿದರು.
ಚುನಾವಣೆ ಏಳು ಹಂತಗಳಲ್ಲಿ ನಡೆಯುತ್ತಿದ್ದು, ಮೇ 7, ಮೇ 13, ಮೇ 20, ಮೇ 25 ಮತ್ತು ಜೂನ್ 1 ರಂದು ಮುಂದಿನ ಹಂತಗಳು ನಡೆಯಲಿವೆ. ಎಣಿಕೆ ದಿನಾಂಕ ಜೂನ್ 4.