ರೆಮ್‌ಡೆಸಿವಿರ್ ಮತ್ತು ಚುನಾವಣೆ ಬಾಂಡ್‌ಗಳ ನಡುವಿನ ಸಂಬಂಧ: ಧ್ರುವ್‌ ರಾಥೀ ಏನಂತಾರೆ?

ಔಷಧ ಕಂಪನಿಗಳಿಗೆ ಕೇಂದ್ರ ಸರ್ಕಾರದ ಅಭಯಹಸ್ತ: ಧ್ರುವ್‌ ರಾಥೀ

Update: 2024-04-15 10:41 GMT

ದೇಶವು ಕೋವಿಡ್‌ ನಿಂದ ತೀವ್ರ ಸಂಕಷ್ಟಕ್ಕೆ ಈಡಾಗಿದ್ದರೂ, ಸಾಂಕ್ರಾಮಿಕ ರೋಗಕ್ಕೆ ಅಷ್ಟೇನೂ ಪರಿಣಾಮಕಾರಿಯಲ್ಲದ ಔಷಧಗಳನ್ನು ಉತ್ಪಾದಿಸಿದ ಫಾರ್ಮಾ ಕಂಪನಿಗಳ 'ಪಾರುಗಾಣಿಕೆʼಗೆ' ಚುನಾವಣೆ ಬಾಂಡ್‌ಗಳು ಹೇಗೆ ನೆರವಾದವು ಎಂಬುದು ಹೆಚ್ಚು ಜನರಿಗೆ ತಿಳಿದಿಲ್ಲ.

ಹಾಗಾದರೆ, ಕೋವಿಡ್-19 ಔಷಧ ರೆಮ್‌ಡೆಸಿವಿರ್ ಮತ್ತು ಚುನಾವಣೆ ಬಾಂಡ್‌ಗಳ ನಡುವಿನ ಸಂಬಂಧವೇನು?

ಏನು ಸಮಸ್ಯೆ?:

ಯುಟ್ಯೂಬರ್, ವ್ಲಾಗರ್ ಮತ್ತು ಸಾಮಾಜಿಕ ಮಾಧ್ಯಮ ಕಾರ್ಯಕರ್ತ ಧ್ರುವ್ ರಾಥಿ ಅವರು ತಮ್ಮ ಇತ್ತೀಚಿನ ವೀಡಿಯೊ ಎಲೆಕ್ಟೋರಲ್ ಬಾಂಡ್ಸ್‌, ದ ಫಾರ್ಮಾ ಫೈಲ್ಸ್‌ʼ ನಲ್ಲಿ ಚುನಾವಣೆ ಬಾಂಡ್‌ಗಳು ʻದೇಶದ ಜನರ ಜೀವನದ ಜೊತೆ ಆಟವಾಡುವʼ ಔಷಧ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಟ್ಟಿವೆ ಎಂದು ಹೇಳುತ್ತಾರೆ.

ಜ್ವರಕ್ಕೆ ಕಾರಣವಾಗುತ್ತದೆ ಮತ್ತು ಆಮ್ಲಜನಕದ ಪೂರೈಕೆ ಕಡಿತಗೊಳಿಸುತ್ತದೆ ಎಂದು ರಾಜ್ಯ ನಿಯಂತ್ರಕರಿಂದ ಟೀಕೆಗೊಳಗಾದ ರೆಮ್‌ಡೆಸಿವಿರ್‌ ಬಳಕೆ ಮತ್ತು ಉತ್ಪಾದನೆ ಮುಂದುವರಿದಿದೆ ಎಂಬುದರ ಮೇಲೆ ಗಮನ ಕೇಂದ್ರೀಕರಿಸಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ ಒ) ಅಧ್ಯಯನ ಕೂಡ ಕೋವಿಡ್ ಚಿಕಿತ್ಸೆಗೆ ರೆಮ್‌ಡೆಸಿವಿರ್ ನಿಷ್ಪರಿಣಾಮಕಾರಿ ಎಂದು ಹೇಳಿದೆ. ಆದರೆ, ಚುನಾವಣಾ ಬಾಂಡ್‌ಗಳಿಂದಾಗಿ ದೇಶದಲ್ಲಿ ಈ ಔಷಧದ ತಯಾರಿಕೆ, ಮಾರಾಟ ಮತ್ತು ಬಳಕೆ ಮುಂದುವರಿದಿದೆ ಎಂದು ರಾಥಿ ಹೇಳುತ್ತಾರೆ.

ದೇಶದಲ್ಲಿ ಆಂಟಿವೈರಲ್ ಔಷಧ ರೆಮ್‌ಡೆಸಿವಿರ್ ತಯಾರಿಸುವ ಪ್ರಮುಖ ಕಂಪನಿಗಳಲ್ಲಿ ಗುಜರಾತ್ ಮೂಲದ ಝೈಡಸ್ ಕ್ಯಾಡಿಲ್ಲಾ ಕೂಡ ಒಂದು.

ಏನು ತಪ್ಪಾಯಿತು?:

ಸಾಂಕ್ರಾಮಿಕ ರೋಗದ ಎರಡನೇ ಅಲೆ ಸಮಯದಲ್ಲಿ ಉತ್ತರ ಪ್ರದೇಶದ ಆಸ್ಪತ್ರೆಗಳಲ್ಲಿ ಈ ಔಷಧ ಸೇವಿಸಿದ ರೋಗಿಗಳಿಗೆ ಹೆಚ್ಚು ಜ್ವರ ಮತ್ತು ದೇಹದಲ್ಲಿ ಆಮ್ಲಜನಕದ ಮಟ್ಟ ಕುಸಿದಿರುವುದು ಕಂಡುಬಂದಿತು.

ಉತ್ತರಪ್ರದೇಶ, ಬಿಹಾರ, ಮಹಾರಾಷ್ಟ್ರ, ಗುಜರಾತ್ ಮತ್ತು ರಾಜಸ್ಥಾನ ಸೇರಿದಂತೆ ವಿ100500 ಬ್ಯಾಚಿನ ರೆಮ್‌ಡೆಸಿವಿರ್ ತೆಗೆದುಕೊಂಡ ರೋಗಿಗಳಲ್ಲಿ ಇಂಥದ್ದೇ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ರಾಥಿ ಹೇಳುತ್ತಾರೆ.

ಬಿಹಾರ ರಾಜ್ಯ ಔಷಧ ನಿಯಂತ್ರಕರು ಈಸಂಬಂಧ ಗುಜರಾತ್ ಆಹಾರ ಮತ್ತು ಔಷಧ ನಿಯಂತ್ರಣ ಆಡಳಿತ(ಎಫ್‌ಡಿಸಿಎ)ಕ್ಕೆ ಎಚ್ಚರಿಕೆ ನೀಡಿದರು- ಪರೀಕ್ಷೆಯಲ್ಲಿ ಬ್ಯಾಕ್ಟೀರಿಯಲ್ ಎಂಡೋಟಾಕ್ಸಿನ್‌‌ ಪತ್ತೆಯಾಗಿದ್ದು, ಇದು ಜ್ವರ ಉಂಟುಮಾಡುತ್ತದೆ ಮತ್ತು ಹೆಚ್ಚು ಪ್ರಮಾಣದಲ್ಲಿ ಸೇವಿಸಿದರೆ, ಸೆಪ್ಟಿಕ್ ಆಘಾತಕ್ಕೆ ಕಾರಣವಾಗುತ್ತದೆ ಎಂದು ಹೇಳಿದರು. ರಾಥೀ ಅವರ ಪ್ರಕಾರ, ಪಟ್ನಾ ಸಿವಿಲ್ ನ್ಯಾಯಾಲಯದಲ್ಲಿ ಕಂಪನಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಈ ಔಷಧ ತಯಾರಿಸಲು ಪರವಾನಗಿ ಪಡೆದಿರುವುದರಿಂದ, ಕಂಪನಿಯು ಗುಣಮಟ್ಟದ ಮಾನದಂಡಗಳನ್ನು ಅನುಸರಿಸುತ್ತಿದೆಯೇ ಎಂದು ಪರಿಶೀಲಿಸುವುದು ಗುಜರಾತ್ ಎಫ್‌ಡಿಸಿಎ ಜವಾಬ್ದಾರಿ. ಆದರೆ, ರಾಜ್ಯ ಎಫ್‌ಡಿಸಿಎ ಹಾಗೆ ಮಾಡುವಲ್ಲಿ ವಿಫಲವಾಗಿದೆ ಮತ್ತು ಔಷಧ ಗಳನ್ನು ಹಿಂಪಡೆದಿರುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ರಾಥೀ ಹೇಳುತ್ತಾರೆ.

ಆದರೆ, ಕ್ಯಾಡಿಲಾ ವಕ್ತಾರರು ಈ ಆರೋಪಗಳನ್ನು ನಿರಾಕರಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ಅಧ್ಯಯನ:

ನವೆಂಬರ್ 2020 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ 300 ದೇಶಗಳ 450 ಆಸ್ಪತ್ರೆಗಳಲ್ಲಿ 14,000 ರೋಗಿಗಳ ರೆಮ್‌ಡೆವಿಸಿರ್‌ ಅಧ್ಯಯನವನ್ನು ನಡೆಸಿತು. ಔಷಧ ಕೋವಿಡ್‌ ರೋಗಿಗಳ ಮೇಲೆ ಯಾವುದೇ ಮಹತ್ವದ ಪರಿಣಾಮ ಬೀರಿಲ್ಲ ಎಂದು ಪತ್ತೆಯಾಗಿದೆ. ಆದರೆ , ಏಪ್ರಿಲ್ 2021 ರಲ್ಲಿ ಈ ಅಧ್ಯಯನವನ್ನು ನಿರ್ಲಕ್ಷಿಸಿದ ನರೇಂದ್ರ ಮೋದಿ ಸರ್ಕಾರ ರೆಮ್‌ಡೆಸಿವಿರ್ ಉತ್ಪಾದನೆಯ ಹೆಚ್ಚಳವನ್ನು ಅನುಮೋದಿಸಿತು, ಈ ಔಷಧವನ್ನು ಅಮೆರಿಕದ ಕಂಪನಿಯೊಂದು ಅಭಿವೃದ್ಧಿಪಡಿಸಿತ್ತು. ಭಾರತದ ಏಳು ಕಂಪನಿಗಳಿಗೆ ಔಷಧ ತಯಾರಿಸಲು ಪರವಾನಗಿ ನೀಡಿತ್ತು.

ಚುನಾವಣೆ ಬಾಂಡ್‌ಗಳಿಗೆ ಸಂಬಂಧವೇನು?

ಅಕ್ಟೋಬರ್ 2022 ರಲ್ಲಿ ಝೈಡಸ್ ಕ್ಯಾಡಿಲ್ಲಾ ಬಿಜೆಪಿಗೆ ಚುನಾವಣೆ ಬಾಂಡ್‌ಗಳ ಮೂಲಕ 18 ಕೋಟಿ ರೂ. ದೇಣಿಗೆ ನೀಡಿತು. ಆಗ ರಾಜಸ್ಥಾನದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್‌ಗೆ 3 ಕೋಟಿ ರೂ., ಬಿಜೆಪಿ ಮಿತ್ರ ಪಕ್ಷವಾದ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾಗೆ 8 ಕೋಟಿ ರೂ. ನೀಡಿತು. ಕುತೂಹಲಕರ ಅಂಶವೆಂದರೆ, ಸಿಕ್ಕಿಂನ ನಾಲ್ಕು ಫಾರ್ಮಾ ಕಂಪನಿಗಳು ಈ ಪಕ್ಷಕ್ಕೆ ದೇಣಿಗೆ ನೀಡಿವೆ. ಇದೊಂದು ಫಾರ್ಮಾ ಹಬ್.

ರಾಥಿ ಅವರ ಪ್ರಕಾರ, ದೇಶಿ ಔಷಧ ಕಂಪನಿಗಳು ಚುನಾವಣೆ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ 945 ಕೋಟಿ ರೂ. ದೇಣಿಗೆ ನೀಡಿವೆ.

ಆದರೆ, ಕ್ಯಾಡಿಲ್ಲಾದಂತಹ ಕಂಪನಿಗಳು ರಾಜ್ಯದ ಆಹಾರ ಮತ್ತು ಔಷಧ ನಿಯಂತ್ರಣ ಅಧಿಕಾರಿಗಳೊಂದಿಗೆ ವಿವಾದದಲ್ಲಿವೆ ಮತ್ತು ಕೆಳದರ್ಜೆಯ ಔಷಧಗಳ ತಯಾರಿಕೆಗೆ ಪರಿಶೀಲನೆಯಲ್ಲಿವೆ.

ರೆಮ್‌ಡೆಸಿವಿರ್ ಪಯಣ ಮುಂದುವರಿದಿದ್ದು ಹೇಗೆ?:

ಹೈದರಾಬಾದ್ ಮೂಲದ ಹೆಟೆರೊ ಗುಂಪಿಗೆ ʻಕಡಿಮೆ ಗುಣಮಟ್ಟದ ಔಷಧʼಕ್ಕಾಗಿ ಮಹಾರಾಷ್ಟ್ರ ಎಫ್‌ಡಿಎ ಆರು ನೋಟಿಸ್‌ ನೀಡಿದೆ. ಇದರಲ್ಲಿ ಮೂರು ರೆಮ್‌ಡೆವಿಸಿರ್ (ಇದು ಕಂಪನಿಯ ವ್ಯವಹಾರ ವಿಸ್ತರಣೆಗೆ ಸಹಾಯ ಮಾಡಿತು) ಮತ್ತು ಆಂಟಿಫಂಗಲ್, ಬ್ಯಾಕ್ಟೀರಿಯಾ ಸೋಂಕು ಮತ್ತು ಇಟ್‌ಬೋರ್ ಕ್ಯಾಪ್ಸುಲ್‌ ಸೇರಿವೆ ಎಂದು ವರದಿಯಾಗಿದೆ.

ಮಹಾರಾಷ್ಟ್ರ ಎಫ್‌ಡಿಎ ನಡೆಸಿದ ಪ್ರಯೋಗಾಲಯ ಪರೀಕ್ಷೆಯಲ್ಲಿ ರೆಮ್‌ಡೆಸಿವಿರ್ ಹಳದಿ ಬಣ್ಣದ ದ್ರವವನ್ನು ಹೊಂದಿರುವುದು ಕಂಡು ಬಂದಿತು. ಜುಲೈ 2021 ರಲ್ಲಿ ಹೆಟೆರೊಗೆ ಈ ಕುರಿತು ನೋಟಿಸ್‌ ನೀಡಲಾಯಿತು. ಕಂಪನಿಯ ಎರಡನೇ ಮಾದರಿ ಅಗತ್ಯಕ್ಕಿಂತ ಕಡಿಮೆ ಪ್ರಮಾಣದ ಔಷಧವನ್ನು ಹೊಂದಿತ್ತು: ಅಕ್ಟೋಬರ್‌ನಲ್ಲಿ ಈ ಸಂಬಂಧ ನೋಟಿಸ್‌ ನೀಡಲಾಯಿತು. ರೆಮ್‌ಡೆಸಿವಿರ್‌ನ ಮೂರನೇ ಮಾದರಿಯು ʻಪ್ರಮಾಣಿತ ಗುಣಮಟ್ಟದಲ್ಲಿಲ್ಲʼ ಎಂದು ಡಿಸೆಂಬರ್ 2021 ರಲ್ಲಿ ನೋಟಿಸ್‌ ನೀಡಲಾಯಿತು.

ತೆಲಂಗಾಣದ ಔಷಧ ನಿಯಂತ್ರಕರು ಕೂಡ ಕಂಪನಿ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ವರದಿ ತಿಳಿಸಿದೆ. ಬದಲಿಗೆ, ಕಂಪನಿ ಮಹಾರಾಷ್ಟ್ರ ದಲ್ಲಿ ಪೂರೈಸಿದ್ದ ಕಳಪೆ ಗುಣಮಟ್ಟದ ಔಷಧಗಳನ್ನು ಸದ್ದಿಲ್ಲದೆ ಹಿಂಪಡೆದುಕೊಂಡಿತು ಮತ್ತು ಚುನಾವಣೆ ಬಾಂಡ್‌ಗಳನ್ನು ಖರೀದಿಸಿತು.

ವರದಿಗಳ ಪ್ರಕಾರ, ಹೆಟೆರೊ ಏಪ್ರಿಲ್ 2022 ರಲ್ಲಿ ತೆಲಂಗಾಣದ ಆಡಳಿತಾರೂಢ ಪಕ್ಷ ಭಾರತ್ ರಾಷ್ಟ್ರ ಸಮಿತಿ (ಬಿಆರೆಸ್‌) ಗೆ ಚುನಾವಣೆ ಬಾಂಡ್‌ಗಳ ಮೂಲಕ 40 ಕೋಟಿ ರೂ. ದೇಣಿಗೆ ನೀಡಿದೆ.

ಹೆಚ್ಚುವರಿ ಉದಾಹರಣೆಗಳು: ಮುಂಬೈ ಮೂಲದ ಸಿಪ್ಲಾ ಕಂಪನಿ ತನ್ನ ಔಷಧಗಳಿಗಾಗಿ ಮಹಾರಾಷ್ಟ್ರ ಎಫ್‌ಡಿಎಯಿಂದ ನಾಲ್ಕು ಶೋಕಾಸ್ ನೋಟಿಸ್‌ ಪಡೆದಿದೆ. ಆಗಸ್ಟ್ 2018 ರಲ್ಲಿ, ಅದರ ಆರ್‌ಸಿ ಕೆಮ್ಮಿನ ಸಿರಪ್‌ಗೆ ನೋಟಿಸ್‌ ಪಡೆಯಿತು. ಜುಲೈ 2021ರಲ್ಲಿ ರೆಮ್‌ಡೆವಿಸಿರ್‌ಗೆ ಎರಡು ನೋಟಿಸ್‌ ಪಡೆಯಿತು. ಸಿಪ್ಲಾ ನೀಡಿದ 39.2 ಕೋಟಿ ರೂ. ದೇಣಿಗೆಯಲ್ಲಿ ಬಿಜೆಪಿಗೆ 37 ಕೋಟಿ ರೂ., ಹಾಗೂ 2.2 ಕೋಟಿ ರೂ. ಕಾಂಗ್ರೆಸ್‌ಗೆ ಸಂದಾಯವಾಗಿದೆ.

ಗ್ಲೆನ್‌ಮಾರ್ಕ್ ಫಾರ್ಮಾಸ್ಯುಟಿಕಲ್ಸ್ ಮತ್ತು ಟಾರೆಂಟ್ ಫಾರ್ಮಾ ಕೂಡ ಬಾಂಡ್‌ಗಳ ಮೂಲಕ ದೇಣಿಗೆ ನೀಡಿವೆ. 2022 ಮತ್ತು 2023 ರ ನಡುವೆ ಗ್ಲೆನ್‌ಮಾರ್ಕ್‌ಗೆ ರಕ್ತದೊತ್ತಡವನ್ನು ನಿಯಂತ್ರಿಸುವ ಔಷಧಿಗೆ ಮಹಾರಾಷ್ಟ್ರ ಎಫ್‌ಡಿಎ ನಾಲ್ಕು ನೋಟಿಸ್‌ ನೀಡಿತು. ನವೆಂಬರ್ 2022 ರಲ್ಲಿ ಕಂಪನಿ ಬಿಜೆಪಿಗೆ 9.75 ಕೋಟಿ ರೂ. ದೇಣಿಗೆ ನೀಡಿತು.

ಗುಜರಾತ್ ಮೂಲದ ಟಾರೆಂಟ್ ಫಾರ್ಮಾದ ಡೆಪ್ಲಾಟ್ 150 ಗುಣಮಟ್ಟ ಸಮರ್ಪಕವಾಗಿಲ್ಲ ಎಂದು ಎಫ್‌ಡಿಎ 2018 ರಲ್ಲಿ ಘೋಷಿಸಿತು. ಅಕ್ಟೋಬರ್ 2019 ರಲ್ಲಿ ಅಮೆರಿಕದ ಎಫ್‌ಡಿಎ ಕೂಡ ಉತ್ಪಾದನೆಯಲ್ಲಿ ಗುಣಮಟ್ಟದ ವೈಫಲ್ಯ ಕುರಿತು ಕಂಪನಿಗೆ ಎಚ್ಚರಿಕೆ ನೀಡಿತು.ಆದರೆ, ಮೇ 2019 ರಿಂದ ಜನವರಿ 2024 ರ ನಡುವೆ ಕಂಪನಿ 77.5 ಕೋಟಿ ರೂ. ದೇಣಿಗೆ ನೀಡಿದ್ದು, ಅದರಲ್ಲಿ 61 ಕೋಟಿ ರೂ.ಬಿಜೆಪಿಗೆ ಸಂದಾಯವಾಗಿದೆ.

ರಾಥಿ ಇನ್ನೇನು ಹೇಳಿದರು?:

ಇಷ್ಟು ದೊಡ್ಡ ಹಗರಣವನ್ನು ಸುಗಮಗೊಳಿಸಿದ್ದಕ್ಕೆ ರಾಥಿ, ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಡಿಮೆ ಗುಣಮಟ್ಟದ ಔಷಧ ತಯಾರಿಸುವ ಕಂಪನಿಗಳ ದಂಡವನ್ನು ಸರಾಗಗೊಳಿಸಲು ಕೇಂದ್ರ ಸರ್ಕಾರವು ಆಗಸ್ಟ್ 2023 ರಲ್ಲಿ ಕಾನೂನು ಅಂಗೀಕರಿಸಿದೆ. ಈ ಕಾಯಿದೆ ಫಾರ್ಮಾ ಕಂಪನಿಗಳಿಗೆ ಜೈಲು ಶಿಕ್ಷೆಗೆ ಬದಲು ನ್ಯಾಯಾಲಯದ ಹೊರಗೆ ಇತ್ಯರ್ಥಕ್ಕೆ ಸಹಾಯ ಮಾಡುತ್ತದೆ ಎಂದು ರಾಥಿ ದೂರಿದ್ದಾರೆ.ಐಔಷಧ

Tags:    

Similar News