ಅಸ್ಸಾಂ ಪ್ರವಾಹ | ತಗ್ಗಿದ ನೀರು; 12 ಲಕ್ಷ ಮಂದಿ ಸಂತ್ರಸ್ತರು, ಪರಿಸ್ಥಿತಿ ಭೀಕರ

ಗುವಾಹಟಿಯಲ್ಲಿರುವ ಭಾರತೀಯ ಹವಾಮಾನ ಇಲಾಖೆಯ ಪ್ರಾದೇಶಿಕ ಹವಾಮಾನ ಕೇಂದ್ರ (RMC) ಅಸ್ಸಾಂನ ಹೆಚ್ಚಿನ ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಮತ್ತು ಕೊಕ್ರಜಾರ್ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ.;

Update: 2024-07-13 12:46 GMT
ಅಸ್ಸಾಂನ ನಾಗಾನ್ ಜಿಲ್ಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶದಲ್ಲಿ ಮಹಿಳೆಯೊಬ್ಬರು ನಡೆದುಕೊಂಡು ಹೋಗುತ್ತಿದ್ದಾರೆ.
Click the Play button to listen to article

ಅಸ್ಸಾಂ ರಾಜ್ಯದ ಹಲವೆಡೆ ನೀರಿನ ಮಟ್ಟ ಇಳಿಮುಖವಾಗಿದ್ದರೂ ಶನಿವಾರವೂ ಪ್ರವಾಹ ಸಂತ್ರಸ್ತರ ಪರಿಸ್ಥಿತಿ ಭೀಕರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುವಾಹಟಿಯಲ್ಲಿರುವ ಭಾರತೀಯ ಹವಾಮಾನ ಇಲಾಖೆಯ ಪ್ರಾದೇಶಿಕ ಹವಾಮಾನ ಕೇಂದ್ರ (RMC) ಅಸ್ಸಾಂನ ಹೆಚ್ಚಿನ ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಮತ್ತು ಕೊಕ್ರಜಾರ್ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ.

"ಅರುಣಾಚಲ ಪ್ರದೇಶದ ಕೆಲವು ಜಲಾನಯನ ಪ್ರದೇಶಗಳು ಮತ್ತು ಅದರ ನೆರೆಹೊರೆ ಹಾಗೂ ಅಸ್ಸಾಂ ಮತ್ತು ಮೇಘಾಲಯದ ದಕ್ಷಿಣ ಭಾಗಗಳಲ್ಲಿ ಕಡಿಮೆಯಿಂದ ಮಧ್ಯಮ ಪ್ರವಾಹದ ಅಪಾಯವಿದೆ" ಎಂದು ಹವಾಮಾನ ಇಲಾಖೆ ಹೇಳಿದೆ. 

ಈ ಮಧ್ಯೆ  ಶುಕ್ರವಾರ ರಾತ್ರಿ  ಏಳು ಜನ ಮಳೆಗೆ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 23 ಜಿಲ್ಲೆಗಳಲ್ಲಿ 12.33 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹದಲ್ಲಿ ತತ್ತರಿಸಿದ್ದಾರೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎಎಸ್‌ಡಿಎಂಎ) ವರದಿ ಹೇಳಿದೆ. 

ಈ ಬಾರಿಯ ಪ್ರವಾಹ, ಭೂಕುಸಿತ, ಬಿರುಗಾಳಿ ಮತ್ತು ಸಿಡಿಲಿಗೆ ಬಲಿಯಾದವರ ಒಟ್ಟು ಸಂಖ್ಯೆ 106ಕ್ಕೆ ಏರಿಕೆಯಾಗಿದೆ. ಧುಬ್ರಿಯಲ್ಲಿ 3.18 ಲಕ್ಷಕ್ಕೂ ಹೆಚ್ಚು ಜನರು ಹಾನಿಗೊಳಗಾಗಿದ್ದಾರೆ. ಕ್ಯಾಚಾರ್ ಸುಮಾರು 1.5 ಲಕ್ಷ ಜನರು ಮತ್ತು ಗೋಲಾಘಾಟ್ 95,000 ಕ್ಕೂ ಹೆಚ್ಚು ಮಂದಿ ಪ್ರವಾಹದಿಂದ ತತ್ತರಿಸುತ್ತಿದ್ದಾರೆ ಎಎಸ್‌ಡಿಎಂಎ ಹೇಳಿದೆ. 

"ರಾಜ್ಯದ ಹಲವೆಡೆ ಪ್ರವಾಹದ ನೀರು ಕಡಿಮೆಯಾಗುತ್ತಿದೆ. ಬಹುತೇಕ ಪ್ರದೇಶಗಳಲ್ಲಿ ಮಳೆ ನಿಂತಿರುವುದರಿಂದ ಪರಿಸ್ಥಿತಿ ಮತ್ತಷ್ಟು ಸುಧಾರಿಸುವ ಸಾಧ್ಯತೆಯಿದೆ" ಎಂದು ಎಎಸ್‌ಡಿಎಂಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದು, ಆಡಳಿತವು 18 ಜಿಲ್ಲೆಗಳಲ್ಲಿ 316 ಪರಿಹಾರ ಶಿಬಿರಗಳು ಮತ್ತು ಪರಿಹಾರ ವಿತರಣಾ ಕೇಂದ್ರಗಳನ್ನು ನಿರ್ವಹಿಸುತ್ತಿದೆ, ಪ್ರಸ್ತುತ 2,95,651 ನಿರಾಶ್ರಿತ ಜನರು ಆಶ್ರಯ ಪಡೆದಿದ್ದಾರೆ.

ರಾಜ್ಯ ಸರ್ಕಾರವು ಕಳೆದ 24 ಗಂಟೆಗಳಲ್ಲಿ ರಾಜ್ಯದ ಪ್ರವಾಹ ಸಂತ್ರಸ್ತರಿಗೆ 3,621.01 ಕ್ವಿಂಟಾಲ್ ಅಕ್ಕಿ, 666.3 ಕ್ವಿಂಟಾಲ್ ಬೇಳೆ, 6,266.61 ಕ್ವಿಂಟಲ್ ಉಪ್ಪು ಮತ್ತು 11,446.82 ಲೀಟರ್ ಸಾಸಿವೆ ಎಣ್ಣೆಯನ್ನು ವಿತರಿಸಿದೆ. ಪ್ರಸ್ತುತ 2,406 ಗ್ರಾಮಗಳು ಜಲಾವೃತವಾಗಿದ್ದು, ಅಸ್ಸಾಂನಾದ್ಯಂತ 32,924.32 ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ತಿಳಿಸಿದ್ದಾರೆ. 

ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಪ್ರವಾಹದ ನೀರಿನಿಂದ ಒಡ್ಡುಗಳು, ರಸ್ತೆಗಳು, ಸೇತುವೆಗಳು ಮತ್ತು ಇತರ ಮೂಲಸೌಕರ್ಯಗಳು ಹಾನಿಗೊಳಗಾಗಿವೆ. ಪ್ರಸ್ತುತ, ನಿಮತಿಘಾಟ್, ತೇಜ್‌ಪುರ ಮತ್ತು ಧುಬ್ರಿಯಲ್ಲಿ ಬ್ರಹ್ಮಪುತ್ರ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರ ಉಪನದಿಗಳಾದ ಚೆನಿಮರಿಯಲ್ಲಿ ಬುರ್ಹಿದಿಹಿಂಗ್ ಮತ್ತು ನಂಗ್ಲಮುರಘಾಟ್‌ನಲ್ಲಿ ದಿಸಾಂಗ್ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಬರಾಕ್ ನದಿಯ ಉಪನದಿ ಕುಶಿಯಾರಾ ಕೂಡ ಕರೀಮ್‌ಗಂಜ್ ಪಟ್ಟಣದಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. 

Tags:    

Similar News