Chhattisgarh Encounter | ಗುಂಡಿನ ಚಕಮಕಿ; 22 ಮಂದಿ ನಕ್ಸಲರ ಹತ್ಯೆ, ಪೊಲೀಸ್‌ ಹುತಾತ್ಮ

ಕೂಂಬಿಂಗ್‌ ಕಾರ್ಯಾಚರಣೆಯಲ್ಲಿ ತೊಡಗಿದ್ದ ವೇಳೆ ನಕ್ಸಲರು ಹಾಗೂ ಭದ್ರತಾ ಪಡೆ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ 18 ಮಂದಿ ನಕ್ಸಲರನ್ನು ಹತ್ಯೆ ಮಾಡಿದ್ದು, ಅಪಾರ ಪ್ರಮಾಣದ ಬಂದೂಕು, ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ನಾಲ್ವರು ನಕ್ಸಲರನ್ನು ಹತ್ಯೆ ಮಾಡಲಾಗಿದೆ.;

Update: 2025-03-20 11:42 GMT

ಎನ್‌ಕೌಂಟರ್‌ನಲ್ಲಿ ಒಬ್ಬ ಪೊಲೀಸ್ ಜವಾನ್ ಕೂಡ ಸಾವನ್ನಪ್ಪಿದ್ದಾರೆ. 

ಛತ್ತೀಸ್‌ಗಢದಲ್ಲಿ ನಕ್ಸಲರ ಅಟ್ಟಹಾಸ ಮಟ್ಟ ಹಾಕಲು ಬೃಹತ್‌ ಕಾರ್ಯಾಚರಣೆ ಆರಂಭಿಸಿರುವ ಭದ್ರತಾ ಪಡೆಯು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 22 ಮಂದಿ ನಕ್ಸಲರನ್ನು ಹತ್ಯೆ ಮಾಡಿದೆ.  

ಬಿಜಾಪುರ ಹಾಗೂ ದಂತೇವಾಡ ಜಿಲ್ಲೆಯ ಗಡಿಯಲ್ಲಿರುವ ಅರಣ್ಯದಲ್ಲಿ ಗುರುವಾರ ಬೆಳಿಗ್ಗೆ 7 ರ ಸುಮಾರಿಗೆ ಭದ್ರತಾ ಸಿಬ್ಬಂದಿಯ ಜಂಟಿ ತಂಡವು ಗಂಗಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೂಂಬಿಂಗ್‌ ಕಾರ್ಯಾಚರಣೆಯಲ್ಲಿ ತೊಡಗಿದ್ದ ವೇಳೆ ನಕ್ಸಲರು ಹಾಗೂ ಭದ್ರತಾ ಪಡೆ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದೆ.

ಗುಂಡಿನ ಕಾಳಗದಲ್ಲಿ 18 ಮಂದಿ ನಕ್ಸಲರನ್ನು ಹತ್ಯೆ ಮಾಡಿದ್ದು, ಅಪಾರ ಪ್ರಮಾಣದ ಬಂದೂಕು, ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ. ಈ ವೇಳೆ ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ) ಘಟಕದ ಒಬ್ಬ ಸಿಬ್ಬಂದಿ ಕೂಡ ಹುತಾತ್ಮರಾಗಿದ್ದಾರೆ ಎಂದು  ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ನಕ್ಸಲರ ಅಡುಗುತಾಣಗಳ ಖಚಿತ ಮಾಹಿತಿ ಮೇರೆಗೆ ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.

ಕಾಂಕೇರ್ ಜಿಲ್ಲೆಯಲ್ಲಿ ನಡೆದ ಮತ್ತೊಂದು ಕಾರ್ಯಾಚರಣೆಯಲ್ಲಿ ನಾಲ್ವರು ನಕ್ಸಲರನ್ನು ಗುರುವಾರ ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಳೆದ ತಿಂಗಳಷ್ಟೇ ಬಿಜಾಪುರದ ಇಂದ್ರಾವತಿ ರಾಷ್ಟ್ರೀಯ ಉದ್ಯಾನವನ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ 31 ನಕ್ಸಲರನ್ನು ಹತ್ಯೆ ಮಾಡಲಾಗಿತ್ತು. ಆಗ ಇಬ್ಬರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದರು. 

Tags:    

Similar News