ಹೆಸರಾಂತ ಹಿನ್ನೆಲೆ ಗಾಯಕ ಮೊಹಮ್ಮದ್ ರಫಿ 1958 ರಲ್ಲಿ ಕೊಚ್ಚಿಯಲ್ಲಿ ನಡೆದ ವಿವಾಹವೊಂದರಲ್ಲಿ ಹಾಡಿದ್ದರು. ಗುಜರಾತ್ನ ಕಚ್ ಪ್ರದೇಶದಿಂದ ವಲಸೆ ಬಂದು ಕೊಚ್ಚಿಯಲ್ಲಿ ನೆಲೆಸಿದ್ದ ಆ ಕುಟುಂಬ, ಹಾಡಿನ ಧ್ವನಿಮುದ್ರಿಕೆಯನ್ನು ಕಳೆದುಕೊಂಡಿತು. ಆ ವಂಶದ ಕುಡಿಯೊಂದು ಕಳೆದುಹೋದ ರೆಕಾರ್ಡಿಂಗ್ನ ಹುಡುಕಾಟ ನಡೆಸುತ್ತಿದೆ.
31 ನಿಮಿಷ ಅವಧಿಯ ʻಮೊಹಮ್ಮದ್ ರಫಿ ಫ್ಯಾನ್ ಬ್ಲಾಗ್ʼ ಸಾಕ್ಷ್ಯಚಿತ್ರವು ಕಲಾವಿದ ನಿಹಾಲ್ ಫೈಜಲ್ ಅವರ ಕುಟುಂಬದಲ್ಲಿ ನಡೆದ ಹಿನ್ನೆಲೆ ಗಾಯಕ ಮೊಹಮ್ಮದ್ ರಫಿ ಅವರಿಗೆ ಸಂಬಂಧಿಸಿದ ಎರಡು ಕಥೆಗಳನ್ನು ಒಳಗೊಂಡಿದೆ. 1958 ರಲ್ಲಿ ಫೈಸಲ್ ಅವರ ಅಜ್ಜ-ಅಜ್ಜಿಯ ವಿವಾಹದಲ್ಲಿ ಹಾಡಲು ರಫಿ ಅವರು ಕೊಚ್ಚಿನ್(ಇಂದಿನ ಕೊಚ್ಚಿ)ಗೆ ಆಗಮಿಸಿದ್ದರು. ರಫಿ ತಮ್ಮ ಹಿಟ್ ಹಾಡುಗಳ ಜೊತೆಗೆ ಆ ಸಂದರ್ಭಕ್ಕಾಗಿ ಸಂಯೋಜಿಸಿದ ಹಾಡನ್ನು ಕೂಡ ಹಾಡಿದರು. ಈ ಕಾರ್ಯಕ್ರಮವನ್ನು ರೆಕಾರ್ಡ್ ಮಾಡಿದ್ದರೂ, ಅದು ಕಳೆದು ಹೋಯಿತು.
ನಿಹಾಲ್ ಫೈಜಲ್ ಅವರ ಚಿಕ್ಕಪ್ಪ ಮೊಹಮ್ಮದ್ ಪರ್ವೇಜ್, ರಫಿ ಅವರಿಗೆ ಮೀಸಲಾದ ಬ್ಲಾಗ್ ಅನ್ನು 2008 ರಲ್ಲಿ ಪ್ರಾರಂಭಿಸಿದರು. ಗಾಯಕ ನಿಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಿ, ವಿವಿಧ ಆನ್ಲೈನ್ ಸಮುದಾಯಗಳಲ್ಲಿ ಹಂಚಿಕೊಂಡರು. ಆದರೆ, 2014 ರಲ್ಲಿ ಬ್ಲಾಗ್ ಅನ್ನು ಅಳಿಸಿದರು. ಸಾಕ್ಷ್ಯಚಿತ್ರವು ರೆಕಾರ್ಡಿಂಗ್ ಮತ್ತು ಬ್ಲಾಗ್ ನ ಪತ್ತೆಹಚ್ಚುವಿಕೆಯ ಪ್ರಯತ್ನಗಳನ್ನು ಒಳಗೊಂಡಿದೆ.
ನಿಹಾಲ್ ಅವರ ಅಜ್ಜಅಬ್ದುಲ್ ರಜಾಕ್ ಮತ್ತು ಅಜ್ಜಿ ರಬಿಯಾ ಬಾಯಿ (ಇವರ ಮದುವೆಗೆ ರಫಿ ಆಗಮಿಸಿದ್ದರು) ಇಂದಿಗೂ ರಫಿ ಅವರ ಗಾಯನವನ್ನು ನೆನಪಿಸಿಕೊಳ್ಳುತ್ತಾರೆ. ಕುಟುಂಬ ಕಾಯ್ದಿರಿಸಿಕೊಂಡಿರುವ ವಿವಾಹದ ಆಲ್ಬಂನಲ್ಲಿರುವ 50ಕ್ಕಕೂ ಅಧಿಕ ಕಪ್ಪು-ಬಿಳುಪು ಪೋಟೋದಲ್ಲಿರುವ ಪ್ರತಿಯೊಬ್ಬರನ್ನು ಅವರು ಯಾರು ಮತ್ತು ಎಲ್ಲಿನವರು ಎಂದು ಅಬ್ದುಲ್ ರಜಾಕ್ ಗುರುತಿಸುತ್ತಾರೆ.
ʻಅವರು (ರಫಿ) ಮುಂಬೈನಿಂದ ಕೊಚ್ಚಿಗೆ ಡಕೋಟಾ ವಿಮಾನದಲ್ಲಿ ಬಂದರು. ಮದುವೆಯ ಮರುದಿನ ಅವರ ಕಾರ್ಯಕ್ರಮ ಇತ್ತು. ಭಾರೀ ಜನಸಂದಣಿ ಇತ್ತು. 21ಕ್ಕೂ ಹೆಚ್ಚು ಹಾಡುಗಳಲ್ಲದೆ, ನಮಗಾಗಿ ರಚಿಸಿದ ಒಂದು ಹಾಡನ್ನೂ ಹಾಡಿದರು. ನನಗೆ ಹಾಡಿನ ಸಾಲುಗಳು ನೆನಪಿಲ್ಲ ಆದರೆ, ಆ ಕ್ಷಣಗಳು ಹಸಿರಾಗಿವೆʼ ಎಂದು 88 ವರ್ಷದ ಅಬ್ದುಲ್ ರಜಾಕ್ ಹೇಳಿದರು.
ರಫಿ ಅವರು ಅಜ್ಜ-ಅಜ್ಜಿಗಾಗಿ ಹಾಡಿದ ವಿಶೇಷ ಹಾಡನ್ನು ಕೇಳುತ್ತಾ ಬೆಳೆದ ನಿಹಾಲ್ ಫೈಜಲ್, ಈ ಐತಿಹಾಸಿಕ ಘಟನೆಯನ್ನು ದಾಖಲಿಸಲು ನಿರ್ಧರಿಸಿದರು. ಸಾಕ್ಷ್ಯಚಿತ್ರಕ್ಕಾಗಿ ಅಜ್ಜಿ, ಚಿಕ್ಕಪ್ಪ ಮತ್ತು ಕುಟುಂಬದ ಅನೇಕ ರೊಂದಿಗೆ ಮಾತನಾಡಿದರು. ಕಚ್ಛಿ ಭಾಷೆಯಲ್ಲಿರುವ ಸಾಕ್ಷ್ಯಚಿತ್ರವನ್ನು 2017ರಲ್ಲಿ ಬಿಡುಗಡೆ ಮಾಡಿದರು.
ʻನಾನು ಈ ಸಾಕ್ಷ್ಯಚಿತ್ರವನ್ನು ಕುಟುಂಬದವರಿಗಾಗಿ ಮಾಡಿದ್ದೇನೆ ಮತ್ತು ನೋಡಿ ಎಲ್ಲರೂ ಇಷ್ಟಪಟ್ಟರು. ದೇಶ ಮತ್ತು ವಿದೇಶದಲ್ಲಿರುವ ಕುಟುಂಬದ ಇತರ ಸದಸ್ಯರೊಂದಿಗೆ ಲಿಂಕ್ ನ್ನು ಹಂಚಿಕೊಳ್ಳಲಾರಂಭಿಸಿದರುʼ ಎನ್ನುತ್ತಾರೆ ಬೆಂಗಳೂರು ಮೂಲದ ನಿಹಾಲ್.