J and K Polls| ಮತ್ತೆ ಯಾರೂ ಪುನರುಜ್ಜೀವಗೊಳಿಸದಂತೆ ಭಯೋತ್ಪಾದನೆ ಸಮಾಧಿ: ಅಮಿತ್ ಶಾ
ಇದು ಮೋದಿ ಸರ್ಕಾರ.ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಪುನರುಜ್ಜೀವಗೊಳಿಸುವ ಶಕ್ತಿ ಯಾರಿಗೂ ಇಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.;
ʻಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಪುನರುಜ್ಜೀವಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಮತ್ತೆಂದೂ ತಲೆಯೆತ್ತದಂತೆ ಅದನ್ನು ಸಮಾಧಿ ಮಾಡಲಾಗುವುದು,ʼ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ (ಸೆಪ್ಟೆಂಬರ್ 16) ಹೇಳಿದರು.
ಕಿಶ್ತ್‌ವಾರ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ಜಮ್ಮು-ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್ ಮೈತ್ರಿಯಿಂದ ಸರ್ಕಾರ ರಚಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
ʻಭಯೋತ್ಪಾದನೆಯನ್ನು ತಲೆಯೆತ್ತದಂತೆ ಸಮಾಧಿ ಮಾಡುತ್ತೇವೆ. ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಪ್ರಣಾಳಿಕೆ ಉಗ್ರರನ್ನು ಬಿಡುಗಡೆ ಮಾಡುವ ಮಾತನಾಡುತ್ತಿರುವುದರಿಂದ, ಭಯೋತ್ಪಾದನೆಯನ್ನು ಪುನರುಜ್ಜೀವಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಇದು ಮೋದಿ ಸರ್ಕಾರ ಮತ್ತು ಇಲ್ಲಿ ಉಗ್ರವಾದವನ್ನು ಪುನರುಜ್ಜೀವಗೊಳಿಸುವ ಶಕ್ತಿ ಯಾರಿಗೂ ಇಲ್ಲ,ʼ ಎಂದು ಬಿಜೆಪಿ ಅಭ್ಯರ್ಥಿ/ಮಾಜಿ ಸಚಿವ ಸುನಿಲ್ ಶರ್ಮಾ ಅವರ ಪರ ಪದ್ದರ್-ನಾಗ್ಸೇನಿ ವಿಧಾನಸಭೆ ಕ್ಷೇತ್ರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಹೇಳಿದರು.
ʻಈ ಚುನಾವಣೆ ಎರಡು ಶಕ್ತಿಗಳಾದ ನ್ಯಾಷನಲ್ ಕಾನ್ಫರೆನ್ಸ್- ಪಿಡಿಪಿ ಹಾಗೂ ಬಿಜೆಪಿ ನಡುವೆ ನಡೆಯುತ್ತಿದೆ. ಎನ್‌ಸಿ-ಕಾಂಗ್ರೆಸ್ ಜಯಶಾಲಿಯಾದರೆ 370 ನೇ ವಿಧಿಯನ್ನು ಮರುಸ್ಥಾಪಿಸುತ್ತೇವೆ ಎಂದು ಹೇಳುತ್ತಿವೆ. ಅದನ್ನು ಮರುಸ್ಥಾಪಿಸಬೇಕೇ? ಪಹಾರಿಗಳು, ಗುಜ್ಜರ್‌ಗಳು ಮತ್ತು ಇತರರಿಗೆ ಬಿಜೆಪಿ ನೀಡಿದ ಮೀಸಲು ಕಸಿದುಕೊಳ್ಳಲಾಗುತ್ತದೆ,ʼ ಎಂದರು.
ʻನಾನು ಕಾಶ್ಮೀರದ ಪರಿಸ್ಥಿತಿಯನ್ನು ಗಮನಿಸುತ್ತಿದ್ದೇನೆ. ಅಬ್ದುಲ್ಲಾ ಅಥವಾ ರಾಹುಲ್ ಅವರ ಪಕ್ಷ ಇಲ್ಲಿ ಸರ್ಕಾರ ರಚಿಸುವುದಿಲ್ಲ ಎಂದು ಭರವಸೆ ನೀಡುತ್ತೇನೆ,ʼ ಎಂದು ಗೃಹ ಸಚಿವರು ಹೇಳಿದರು.
ಹದಿನೈದು ದಿನಗಳಲ್ಲಿ ಗೃಹ ಸಚಿವರು ಜಮ್ಮು ಪ್ರದೇಶಕ್ಕೆ ನೀಡಿದ ಎರಡನೇ ಭೇಟಿ ಇದಾಗಿದೆ. ಇದಕ್ಕೂ ಮೊದಲು, ಸೆಪ್ಟೆಂಬರ್ 6 ಮತ್ತು 7 ರಂದು ಜಮ್ಮುವಿಗೆ ಭೇಟಿ ನೀಡಿ ಬಿಜೆಪಿಯ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದರು ಮತ್ತು ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ್ದರು.
ಸೆಪ್ಟೆಂಬರ್ 18 ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿರುವ ಪಡ್ಡರ್-ನಾಗಸೇನಿ ಸೇರಿದಂತೆ 24 ವಿಧಾನಸಭೆ ಕ್ಷೇತ್ರಗಳಲ್ಲಿ ಇಂದು ಪ್ರಚಾರ ಅಂತ್ಯಗೊಳ್ಳಲಿದೆ.