Nuclear power plant on Moon| ರಷ್ಯಾದ ಯೋಜನೆಗೆ ಸೇರಲು ಭಾರತ, ಚೀನಾ ಏಕೆ ಉತ್ಸುಕವಾಗಿವೆ?
ಚಂದ್ರನಲ್ಲಿ ರಷ್ಯಾದ ಪರಮಾಣು ನಿಗಮ ರೊಸಾಟಮ್ ಸ್ಥಾಪಿಸಲು ಉದ್ದೇಶಿಸಿರುವ ಸ್ಥಾವರ ಯೋಜನೆಯಲ್ಲಿ ಮಾಸ್ಕೋದೊಂದಿಗೆ ಕೈಜೋಡಿಸಲು ನವದೆಹಲಿಯು ತೀವ್ರ ಆಸಕ್ತಿ ವ್ಯಕ್ತಪಡಿಸಿದೆ. ರಷ್ಯಾದ ಈ ಉಪಕ್ರಮವು ಭಾರತದ ಯೋಜನೆಗಳೊಂದಿಗೆ ಹೊಂದಿಕೆಯಾಗುತ್ತದೆ.;
ಚಂದ್ರನ ಮೇಲೆ ಪರಮಾಣು ವಿದ್ಯುತ್ ಸ್ಥಾವರವನ್ನು ಸ್ಥಾಪಿಸಲು ರಷ್ಯಾದೊಂದಿಗೆ ಸಹಕರಿಸಲು ಭಾರತ ಮತ್ತು ಚೀನಾ ಸಿದ್ಧವಾಗಿವೆ.
ಚಂದ್ರನಲ್ಲಿ ರಷ್ಯಾದ ಪರಮಾಣು ನಿಗಮ ರೊಸಾಟಮ್ ಸ್ಥಾಪಿಸಲು ಉದ್ದೇಶಿಸಿರುವ ಸ್ಥಾವರ ಯೋಜನೆಯಲ್ಲಿ ಮಾಸ್ಕೋದೊಂದಿಗೆ ಕೈಜೋಡಿಸಲು ನವದೆಹಲಿಯು ತೀವ್ರ ಆಸಕ್ತಿ ವ್ಯಕ್ತಪಡಿಸಿದೆ.
ವ್ಲಾಡಿವೋಸ್ಟಾಕ್‌ನಲ್ಲಿ ನಡೆದ ಈಸ್ಟರ್ನ್ ಎಕನಾಮಿಕ್ ಫೋರಮ್ ನಲ್ಲಿ ಮಾತನ್ನಾಡಿದ ರೋಸಾಟಮ್ ಮುಖ್ಯಸ್ಥ ಅಲೆಕ್ಸಿ ಲಿಖಾಚೆವ್ , ಯೋಜನೆಗೆ ಅಂತಾರಾಷ್ಟ್ರೀಯ ಆಸಕ್ತಿ ಹೆಚ್ಚಳದ ಮೇಲೆ ಬೆಳಕು ಚೆಲ್ಲಿದರು. ʻಚಂದ್ರನ ಮೇಲೆ ಅರ್ಧ ಮೆಗಾವ್ಯಾಟ್ ವರೆಗಿನ ಸಾಮರ್ಥ್ಯದ ಪರಮಾಣು ವಿದ್ಯುತ್ ಸ್ಥಾವರ ಯೋಜನೆಗೆ ಚೀನಾ ಮತ್ತು ಭಾರತ ಆಸಕ್ತಿ ತೋರಿಸಿವೆ,ʼ ಎಂದರು.
ಯೋಜನೆ ಗುರಿ ಏನು?: ರೊಸಾಟಮ್ ನೇತೃತ್ವದ ಈ ಯೋಜನೆಯಡಿ ಚೀನಾದ ಸಹಭಾಗಿತ್ವದಲ್ಲಿ 0.5 ಮೆಗಾವ್ಯಾಟ್ ಶಕ್ತಿ ಉತ್ಪಾದಿಸುವ ಸಾಮರ್ಥ್ಯವಿರುವ ಸಣ್ಣ ಪರಮಾಣು ರಿಯಾಕ್ಟರ್ ಸ್ಥಾಪಿಸುವ ಗುರಿಯಿದೆ. ಭವಿಷ್ಯದಲ್ಲಿ ಚಂದ್ರನಲ್ಲಿ ನೆಲಸುವಿಕೆಯನ್ನು ಬೆಂಬಲಿಸಲು ಅಗತ್ಯವಿರುವ ಶಕ್ತಿಯನ್ನು ಇದು ಒದಗಿಸುತ್ತದೆ ಎಂದು ರಷ್ಯಾದ ರಾಜ್ಯ ಸುದ್ದಿ ಸಂಸ್ಥೆ ಟಾಸ್ ವರದಿ ಮಾಡಿದೆ.
2036 ರ ವೇಳೆಗೆ ಪರಮಾಣು ಸ್ಥಾವರ ಪ್ರಾರಂಭಿಸುವುದು ರಷ್ಯಾದ ಗುರಿ. ಇದು ರಷ್ಯಾ ಮತ್ತು ಚೀನಾ ಜಂಟಿಯಾಗಿ ಅಭಿವೃದ್ಧಿಪಡಿಸುತ್ತಿರುವ ಉದ್ದೇಶಿತ ಇಂಟರ್ನ್ಯಾಷನಲ್ ಲೂನಾರ್ ರಿಸರ್ಚ್ ಸ್ಟೇಷನ್ (ಐಎಲ್‌ಆರ್‌ಎಸ್) ಗೆ ವಿಶ್ವಾಸಾರ್ಹ ಶಕ್ತಿಯ ಮೂಲ ಒದಗಿಸುತ್ತದೆ. ಈ ನೆಲೆ 2035 ಮತ್ತು 2045 ರ ನಡುವೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಆಸಕ್ತ ದೇಶಗಳಿಗೆ ಮುಕ್ತ ಸಂಶೋಧನಾ ಕೇಂದ್ರವಾಗಿರಲಿದೆ.
ಈ ಉಪಕ್ರಮವು 2040 ರ ವೇಳೆಗೆ ಮಾನವಸಹಿತ ಚಂದ್ರಯಾನ ಮತ್ತು ಚಂದ್ರನಲ್ಲಿ ನೆಲೆಯನ್ನು ಸ್ಥಾಪಿಸುವ ಭಾರತದ ಯೋಜನೆಯೊಂದಿಗೆ ಹೊಂದಿಕೆಯಾಗುತ್ತದೆ. ಆದ್ದರಿಂದ, ಭಾರತ ಸಹಯೋಗಕ್ಕೆ ಆಸಕ್ತಿ ತೋರಿಸಿದೆ.
ಈ ಸಂಕೀರ್ಣ ಸಾಹಸಕ್ಕೆ ಬೇಕಾದ ತಾಂತ್ರಿಕ ಪರಿಹಾರಗಳು ಮುಕ್ತಾಯದ ಹಂತದಲ್ಲಿವೆ. ರೋಸಾಟಮ್ ಅಣು ಸ್ಥಾವರವನ್ನು ಸ್ವಾಯತ್ತವಾಗಿ ನಿರ್ಮಿಸಲು ಯೋಜಿಸಿದೆ. ಮಾನವ ಒಳಗೊಳ್ಳುವಿಕೆಯನ್ನು ಕಡಿಮೆ ಮಾಡುವ ಮತ್ತು ಬಾಹ್ಯಾಕಾಶ ತಂತ್ರಜ್ಞಾನದಲ್ಲಿನ ಪ್ರಗತಿಯನ್ನು ಒತ್ತಿಹೇಳುವ ಮಹತ್ವದ ಸಾಧನೆಯಾಗಿದೆ.
ಪರಮಾಣು ವಿದ್ಯುತ್ ಸ್ಥಾವರ ಏಕೆ?: ಚಂದ್ರನ 14 ದಿನಗಳ ದೀರ್ಘ ರಾತ್ರಿಗಳಿಂದ ಸೌರ ಶಕ್ತಿಯನ್ನು ನಂಬುವಂತಿಲ್ಲ. ಆದರೆ, ಪರಮಾಣು ಶಕ್ತಿ ನಿರಂತರ ಮತ್ತು ಸ್ಥಿರವಾದ ಶಕ್ತಿಯ ಮೂಲವಾಗಿದೆ. ರಷ್ಯಾದ ಬಾಹ್ಯಾಕಾಶ ಸಂಸ್ಥೆ ರಾಸ್ಕೋಮಾಸ್ ಮತ್ತು ಚೀನಾದ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತಗಳ ಬಾಹ್ಯಾಕಾಶ ಸಹಯೋಗ 2021ರಿಂದ ಚಾಲ್ತಿಯಲ್ಲಿದೆ. ಇದರ ಫಲವೇ ಐಎಲ್‌ಆರ್‌ಎಸ್ ಯೋಜನೆ. ಆದರೆ, ಯೋಜನೆಯು ಅಮೆರಿಕದ ಜೊತೆಗೆ ಸಂಬಂಧದ ಮೇಲೆ ಪ್ರಭಾವ ಬೀರಬಹುದು.
ಚಂದ್ರನ ಅನ್ವೇಷಣೆಗೆ ನಾಸಾ ಪರಮಾಣು ರಿಯಾಕ್ಟರ್‌ಗಳ ಬಳಕೆಯನ್ನು ಪರಿಗಣಿಸುತ್ತಿದೆ. ʻಸೌರಶಕ್ತಿ ಚಂದ್ರನ ಮೇಲೆ ಮಿತಿಗಳನ್ನು ಹೊಂದಿ ದೆ. ಪರಮಾಣು ಸ್ಥಾವರದಿಂದ ಚಂದ್ರನ ರಾತ್ರಿಗಳಲ್ಲಿ ನಿರಂತರವಾಗಿ ವಿದ್ಯುತ್ ಉತ್ಪಾದಿಸಬಹುದು,ʼ ಎಂದು ನಾಸಾ ಹೇಳಿದೆ.
ಚಂದ್ರನ ಮೇಲೆ ಪರಮಾಣು ವಿದ್ಯುತ್ ಸ್ಥಾವರ ಯೋಜನೆಯಲ್ಲಿ ಭಾರತದ ಪಾಲ್ಗೊಳ್ಳುವಿಕೆಯು ಚಂದ್ರನ ಮೇಲೆ ಶಾಶ್ವತ ಅಸ್ತಿತ್ವವನ್ನು ಸ್ಥಾಪಿಸುವ ಜಾಗತಿಕ ಓಟದ ಮತ್ತೊಂದು ಹೆಜ್ಜೆಯಾಗಿದೆ.
ಚಂದ್ರನಿಗೆ ಪರಮಾಣು ಇಂಧನ ಸಾಗಣೆ ಸುರಕ್ಷಿತ ಎಂದು ವಿಜ್ಞಾನಿಗಳು ಭರವಸೆ ನೀಡಿದ್ದಾರೆ. ಉಡಾವಣೆ ವೈಫಲ್ಯ ಸೇರಿದಂತೆ ಬೇರಾವುದೇ ಸಮಸ್ಯೆ ಉದ್ಭವಿಸಿದರೆ, ಸ್ವಯಂಚಾಲಿತವಾಗಿ ಸ್ಥಗಿತಗೊಳ್ಳುವಂತೆ ಸ್ಥಾವರಗಳನ್ನು ವಿನ್ಯಾಸಗೊಳಿಸಲಾಗಿದೆ.
ಭಾರತದ ಮುನ್ನಡೆ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಎಸ್. ಸೋಮನಾಥ್ ಅವರು ಕಳೆದ ನವೆಂಬರ್‌ನಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಚಂದ್ರನ ಅನ್ವೇಷಣೆಗೆ ತಾತ್ಕಾಲಿಕ ಮಾರ್ಗಸೂಚಿಯನ್ನು ವಿವರಿಸಿದ್ದರು.
2023 ರಲ್ಲಿ ಭಾರತ ಚಂದ್ರಯಾನ-3 ಮಿಷನ್‌ನೊಂದಿಗೆ ಚಂದ್ರನ ಮೇಲೆ ಯಶಸ್ವಿ ರೋಬೋಟಿಕ್ ಲ್ಯಾಂಡಿಂಗ್ ಸಾಧಿಸಿದ ಐದನೇ ದೇಶವಾಯಿತು. ಚಂದ್ರಯಾನ-4 ಮತ್ತು 5ರ ವಿನ್ಯಾಸ ಪೂರ್ಣಗೊಂಡಿದ್ದು, ಸರ್ಕಾರದ ಅನುಮೋದನೆ ಬಾಕಿ ಇದೆ. 2035 ರೊಳಗೆ ಭಾರತದ ಮೊದಲ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸಲು ಮತ್ತು 2040 ರ ವೇಳೆಗೆ ಮೊದಲ ಭಾರತೀಯನನ್ನು ಚಂದ್ರನ ಮೇಲೆ ಇಳಿಸಲು ಪ್ರಯತ್ನ ನಡೆಯುತ್ತಿದೆ.