ಪಶ್ಚಿಮ ಘಟ್ಟಗಳಲ್ಲಿ ಜಲ ಯೋಜನೆ: ಇಎಸಿಯಿಂದ ಹಲವು ಸಲಹೆ

ಆರು ರಾಜ್ಯಗಳ 56,800 ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸುವ ಆರನೇ ಕರಡು ಅಧಿಸೂಚನೆಗೆ ಆಕ್ಷೇಪಣೆ-ಸಲಹೆಗಳನ್ನು ಸಲ್ಲಿಸಲು ನೀಡಿದ್ದ 60 ದಿನಗಳ ಅವಧಿ ಸೆಪ್ಟೆಂಬರ್‌ 30ರಂದು ಕೊನೆಗೊಂಡಿದೆ;

Update: 2024-10-04 11:32 GMT
ಪಶ್ಚಿಮಘಟ್ಟದಲ್ಲಿ ಜಲ ವಿದ್ಯುತ್‌ ಯೋಜನೆಗಳಿಗೆ ಇಎಸಿಯಿಂದ ಹಲವು ಸಲಹೆ ನೀಡಿದೆ

ಪರಿಸರ ಸೂಕ್ಷ್ಮ ಪಶ್ಚಿಮ ಘಟ್ಟಗಳಲ್ಲಿ ಪಂಪ್ಡ್ ಸ್ಟೋರೇಜ್ ಯೋಜನೆ(ಪಿಎಸ್‌ಪಿ)ಗಳಿಗೆ ಪರಿಸರ ಅನುಮತಿ ನೀಡುವ ಮೊದಲು ʻಸಂಪೂರ್ಣʼ (ಇನ್‌ ಟೋಟೋ) ಸ್ಥಳ ಪರಿಶೀಲನೆ ನಡೆಸಬೇಕು ಎಂದು ಕೇಂದ್ರ ಪರಿಸರ ಸಚಿವಾಲಯದ ಸಮಿತಿ ಹೇಳಿದೆ. 

ಸೆಪ್ಟೆಂಬರ್ 27 ರಂದು ಸಚಿವಾಲಯದ ತಜ್ಞರ ಮೌಲ್ಯಮಾಪನ ಸಮಿತಿ (ಇಎಸಿ)ಯ ಸಭೆಯಲ್ಲಿ, ಸದಸ್ಯ ಕಾರ್ಯದರ್ಶಿ ಅವರು ಪಶ್ಚಿಮ ಘಟ್ಟದ ಸುಮಾರು 15 ಯೋಜನೆಗಳಿಗೆ ಅನುಮತಿಗೆ ಮುನ್ನ ಪೂರ್ಣಗೊಳಿಸಬೇಕಾದ ಪರಿಸರ ಅಧ್ಯಯನಗಳನ್ನು ವಿವರಿಸುವ ಕಾರ್ಯವಿಧಾನ(ಟಿಒ‌ಆರ್‌)ಕ್ಕೆ ಅನುಮತಿ ನೀಡಲಾಗಿದೆ ಎಂದು ಹೇಳಿದ್ದಾರೆ.

ʻಪಶ್ಚಿಮ ಘಟ್ಟಗಳಲ್ಲಿ ನಿರ್ಮಿಸಲು ಉದ್ದೇಶಿಸಿರುವ ಪಿಎಸ್ಪಿಗಳಿಗೆ ಶಿಫಾರಸು ಮಾಡಲಾದ ನಿಯಮಗಳನ್ನು ಇಎಸಿ ಪರಿಶೀಲಿಸಿದೆ. ಪ್ರದೇಶದ ಪರಿಸರ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು, ಪಂಪ್ ಮಾಡಿದ ಜಲ ಶೇಖರಣೆ ಯೋಜನೆಗಳಿಗೆ ಉಪ ಸಮಿತಿ ಸದಸ್ಯರು ಸ್ಥಳ ಪರಿಶೀಲನೆ ಭೇಟಿಗೆ ಶಿಫಾರಸು ಮಾಡಲಾಗಿದೆ.

ʻಈ ಯೋಜನೆಗಳು ಸೂಕ್ಷ್ಮವಾದ ಪಶ್ಚಿಮ ಘಟ್ಟಗಳಲ್ಲಿ ನೆಲೆಗೊಂಡಿವೆ ಮತ್ತು ಇಲ್ಲಿ ಬೃಹತ್ ಅರಣ್ಯ ಪ್ರದೇಶ ಇದೆ. ಈ ಪ್ರದೇಶದಲ್ಲಿ ಪರಿಸರ ಅನುಮತಿ ನೀಡುವ ಅಥವಾ ಯಾವುದೇ ಶಿಫಾರಸುಗಳನ್ನು ಮಾಡುವ ಮೊದಲು, ಎಲ್ಲ ಯೋಜನೆಗಳ ಸ್ಥಳ ಪರಿಶಿಲನೆ ಮಾಡಲಾಗುವುದುʼ ಎಂದು ಇಎಸಿ ಹೇಳಿದೆ.

ಪಿಎಸ್‌ಪಿ ಎಂದರೇನು?

ಪಶ್ಚಿಮ ಘಟ್ಟಗಳು, ಹಿಮಾಲಯದಂತೆ ದೇಶದ ಅತ್ಯಂತ ದುರ್ಬಲ ಬೆಟ್ಟ ಪ್ರದೇಶಗಳಾಗಿವೆ. ಅಕ್ರಮ ಗಣಿಗಾರಿಕೆ, ಅನಿಯಂತ್ರಿತ ನಿರ್ಮಾಣ ಮತ್ತು ಅನಿಯಂತ್ರಿತ ವಾಣಿಜ್ಯ ಚಟುವಟಿಕೆಗಳಿಗೆ ಗುರಿಯಾಗಿದೆ.

ಪಿಎಸ್‌ಪಿ ಎರಡು ಜಲಾಶಯಗಳನ್ನು ಒಳಗೊಂಡಿರುತ್ತದೆ- ಒಂದು ಬೆಟ್ಟದ ಮೇಲೆ ಮತ್ತು ಇನ್ನೊಂದು ಕೆಳಭಾಗದಲ್ಲಿ. ಮೇಲಿನ ಜಲಾಶಯಕ್ಕೆ ನೀರು ಪಂಪ್ ಮಾಡಲು ವಿದ್ಯುತ್ ಬಳಸಲಾಗುತ್ತದೆ. ವಿದ್ಯುತ್ ಬೇಡಿಕೆ ಹೆಚ್ಚಾದಾಗ, ನೀರನ್ನು ಟರ್ಬೈನ್ ಮೂಲಕ ಕೆಳಗಿನ ಜಲಾಶಯಕ್ಕೆ ಬಿಡುಗಡೆ ಮಾಡಿ, ವಿದ್ಯುತ್ ಉತ್ಪಾದಿಸಲಾಗುತ್ತದೆ.

ಗಾಡ್ಗೀಳ್ ವರದಿ

2010 ರಲ್ಲಿ ಕೇಂದ್ರವು ಪಶ್ಚಿಮ ಘಟ್ಟಗಳ ಮೇಲೆ ಜನಸಂಖ್ಯೆ ಒತ್ತಡ, ಹವಾಮಾನ ಬದಲಾವಣೆ ಮತ್ತು ಅಭಿವೃದ್ಧಿ ಚಟುವಟಿಕೆಗಳ ಪರಿಣಾಮವನ್ನು ಅಧ್ಯಯನ ಮಾಡಲು ಪರಿಸರಶಾಸ್ತ್ರಜ್ಞ ಡಾ. ಮಾಧವ್ ಗಾಡ್ಗೀಳ್ ಅವರ ನೇತೃತ್ವದಲ್ಲಿ ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿಯನ್ನು ರಚಿಸಿತು.

2011ರಲ್ಲಿ ಸಮಿತಿ ಇಡೀ ಪರ್ವತ ಶ್ರೇಣಿಯನ್ನು ಪರಿಸರ ಸೂಕ್ಷ್ಮ ಪ್ರದೇಶ (ಇಎಸ್‌ಎ) ಎಂದು ಘೋಷಿಸಲು ಮತ್ತು ಪರಿಸರ ಸೂಕ್ಷ್ಮತೆಯ ಆಧಾರದ ಮೇಲೆ ಮೂರು ಪರಿಸರ ಸೂಕ್ಷ್ಮ ವಲಯ (ಇಎಸ್‌ಜಡ್‌ 1, 2, ಮತ್ತು 3) ಎಂದು ವಿಂಗಡಿಸಲು ಶಿಫಾರಸು ಮಾಡಿತು. ಆದರೆ, ಶಿಫಾರಸುಗಳು ರಾಜ್ಯ ಸರ್ಕಾರ, ಕೈಗಾರಿಕೆ ಮತ್ತು ಸ್ಥಳೀಯ ಸಮುದಾಯದಿಂದ ವಿರೋಧ ಎದುರಿಸಿತು.

ಕಸ್ತೂರಿರಂಗನ್ ವರದಿ

ಯುನೆಸ್ಕೋ ಜುಲೈ 2012 ರಲ್ಲಿ ಪಶ್ಚಿಮ ಘಟ್ಟಗಳನ್ನು ವಿಶ್ವ ಪಾರಂಪರಿಕ ತಾಣ ಎಂದು ಘೋಷಿಸಿತು. 2013 ರಲ್ಲಿ ಈ ಪ್ರದೇಶದ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಕ್ರಮ ಸೂಚಿಸಲು ಕೆ.ಕಸ್ತೂರಿರಂಗನ್ ನೇತೃತ್ವದಲ್ಲಿ ಉನ್ನತ ಮಟ್ಟದ ಕಾರ್ಯಕಾರಿ ಗುಂಪನ್ನು ರಚಿಸಿತು. ಸಮಿತಿ 59,940 ಚದರ ಕಿ.ಮೀ ವ್ಯಾಪ್ತಿಯ ಪಶ್ಚಿಮ ಘಟ್ಟಗಳ ಶೇ.37 ರಷ್ಟು ಪ್ರದೇಶವನ್ನು ಪರಿಸರ ಸೂಕ್ಷ್ಮ ಎಂದು ಗುರುತಿಸಿದೆ. ಪಶ್ಚಿಮ ಘಟ್ಟಗಳನ್ನು ಪರಿಸರ ಸೂಕ್ಷ್ಮ ಎಂದು ಘೋಷಿಸಲು ಮಾರ್ಚ್ 2014 ರಿಂದ ಕೇಂದ್ರ ಪರಿಸರ ಸಚಿವಾಲಯ ಆರು ಕರಡು ಅಧಿಸೂಚನೆಗಳನ್ನು ಹೊರಡಿಸಿದೆ. ಆದರೆ, ರಾಜ್ಯಗಳ ಆಕ್ಷೇಪದಿಂದಾಗಿ ಅಂತಿಮ ಅಧಿಸೂಚನೆ ಆಗಬೇಕಿದೆ.

ಆರು ರಾಜ್ಯಗಳ 56,800 ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸುವ ಆರನೇ ಕರಡು ಅಧಿಸೂಚನೆಗೆ ಆಕ್ಷೇಪಣೆ-ಸಲಹೆ ಸಲ್ಲಿಸಲು ನೀಡಿದ್ದ 60 ದಿನಗಳ ಗಡುವು ಸೆಪ್ಟೆಂಬರ್‌ 30ರಂದು ಕೊನೆಗೊಂಡಿದೆ.

Tags:    

Similar News