ಅಮೆರಿಕದ ಟ್ರಾವೆಲ್ ಗೈಡ್‌ನ ʼನೊ ಲಿಸ್ಟ್ʼನಲ್ಲಿ ಕೇರಳ; ಪ್ರವಾಸೋದ್ಯಮಕ್ಕೆ ಹೊಡೆತ ಸಾಧ್ಯತೆ
2015ಮತ್ತು 2022ರ ನಡುವೆ ಭಾರತದಲ್ಲಿ ಸಂಭವಿಸಿದ 3,782 ಭೂಕುಸಿತಗಳಲ್ಲಿ ಸುಮಾರು 60 ಪ್ರತಿಶತದಷ್ಟು ಕೇರಳದಲ್ಲಿ ಸಂಭವಿಸಿದೆ ಎಂದು ವರದಿಯಲ್ಲಿ ಹೇಳಲಾಗಿದ್ದು, ಪ್ರವಾಸಿಗರಿಗೆ ಅಪಾಯಕಾರಿ ಎಂದು ಬರೆದಿದೆ.
ವಯನಾಡ್‌ನಲ್ಲಿ ಕಳೆದ ಮಳೆಗಾಲದಲ್ಲಿಉಂಟಾಗಿರುವ ಬೃಹತ್ ಪ್ರಮಾಣದ ಭೂಕುಸಿತ ಆ ರಾಜ್ಯದ ಪ್ರವಾಸೋದ್ಯಮಕ್ಕೆ ದೊಡ್ಡ ಪೆಟ್ಟು ಕೊಡುವ ಆತಂಕ ಉಂಟು ಮಾಡಿದೆ. ಇದು ಒಂದು ಘಟನೆಯಾಗಿದ್ದರೆ ಕೇರಳದಲ್ಲಿ ಕಳೆದೊಂದು ದಶಕದಲ್ಲಿ ಉಂಟಾಗಿರುವ ಹಲವಾರು ಭೂ ಕುಸಿತ ಪ್ರಕರಣಗಳು ಒಟ್ಟು ಪ್ರವಾಸೋದ್ಯಮದ ಕುಸಿತಕ್ಕೆ ಕಾರಣವಾಗಲಿದೆ. ಯಾಕೆಂದರೆ ಅಮೆರಿಕ ಮೂಲದ ಟ್ರಾವೆಲ್ ಗೈಡ್ ಸಂಸ್ಥೆಯೊಂದು ಮುಂದಿನ ವರ್ಷ (2025) ಕೇರಳಕ್ಕೆ ಪ್ರವಾಸ ಮಾಡುವುದು ಸೂಕ್ತವಲ್ಲ ಎಂದು ಸಲಹೆ ನೀಡಿದೆ. ಅವರ ʼನೊ ಲಿಸ್ಟ್ʼನಲ್ಲಿ ಕೇರಳವೂ ಸೇರಿರುವ ಕಾರಣ ಆ ರಾಜ್ಯದ ಪಾಲಿಗೆ ದೊಡ್ಡ ಹಿನ್ನಡೆಯಾಗಲಿದೆ. ಯಾಕೆಂದರೆ ಕೇರಳ ಪ್ರವಾಸೋದ್ಯಮವನ್ನು ದೊಡ್ಡ ಮಟ್ಟಿಗೆ ನಂಬಿಕೊಂಡಿದೆ.
ಫೋಡೊರ್ಸ್ ಎಂಬ ಸಂಸ್ಥೆಯೂ ನವೆಂಬರ್ 13ರಂದು ತನ್ನ ಪಟ್ಟಿಯನ್ನು ಪ್ರಕಟಿಸಿದೆ. ಅದರಲ್ಲಿ ಇತ್ತೀಚಿನ ವಯನಾಡ್ ಭೂ ಕುಸಿತ ಹಾಗೂ ಆ ರಾಜ್ಯದಲ್ಲಿನ ವಾಯು ಮಾಲಿನ್ಯದ ವಿಷಯವನ್ನು ಮುಂದಿಟ್ಟುಕೊಂಡು ಪ್ರವಾಸಕ್ಕೆ ಸೂಕ್ತವಲ್ಲ ಎಂದು ಹೇಳಿದೆ. ಈ ಬಗ್ಗೆ ಡೆಕ್ಕನ್ ಹೆರಾಲ್ಡ್ ವರದಿಯೊಂದನ್ನು ಮಾಡಿದೆ.
2025ರಲ್ಲಿ ಪ್ರವಾಸ ಮಾಡಲು ಯೋಜಿಸಿದ್ದರೆ ಮರುಪರಿಗಣಿಸಬೇಕಾಗಬಹುದು ಎಂಬ 15 ತಾಣಗಳನ್ನು ಗುರುತಿಸಿದೆ. ಅದರಲ್ಲಿ ಕೇರಳವನ್ನು ಉಲ್ಲೇಖಿಸಲಾಗಿದು, ಮಿತಿ ಮೀರಿದ ಪ್ರವಾಸೋದ್ಯಮದಿಂದಾಗಿ ಕೇರಳದಲ್ಲಿ ನೈಸರ್ಗಿಕ ವಿಕೋಪಗಳು ಸಂಭವಿಸುತ್ತಿವೆ. ಇಂಥ ಕಡೆ ನೀರಿನ ಸಹಜ ಹರಿವಿಗೆ ಅಡಚಣೆ ಉಂಟು ಮಾಡುವಂತೆ ನಿರ್ಮಾಣಗಳನ್ನು ಮಾಡಿದ್ದರಿಂದ ಭೂಕುಸಿತಗಳು ಉಂಟಾಗಿವೆ ಎಂದು ಬರೆಯಲಾಗಿದೆ.
ಈ ವರದಿಯಲ್ಲಿ ಹಲವಾರು ತಜ್ಞರು ಹಾಗೂ ಪರಿಸರವಾದಿಗಳ ಹೇಳಿಕೆಗಳನ್ನು ಉಲ್ಲೇಖಿಸಲಾಗಿದೆ. ಅದರ ಪ್ರಕಾರ 2015ರಿಂದ 2022ರವರೆಗೆ ಭಾರತದಲ್ಲಿ ಆಗಿರುವ 3,782 ಭೂ ಕುಸಿತ ಪ್ರಕರಣಗಳಲ್ಲಿ ಶೇಕಡಾ 60ರಷ್ಟು ಕೇರಳದಲ್ಲಿಯೇ ಉಂಟಾಗಿದೆ. ಈ ರಾಜ್ಯವು ನೈಸರ್ಗಿಕ ವಿಕೋಪಗಳಿಗೆ ಹೆಚ್ಚು ತುತ್ತಾಗುವ ಸಾಧ್ಯತೆಗಳಿವೆ ಎಂದು ಬರೆಯಲಾಗಿದೆ.
ವರದಿಯಲ್ಲಿ ʼವೆಂಬನಾಡ್ ಕೆರೆʼಯಲ್ಲಿ ಆಗಿರುವ ಮಾಲಿನ್ಯವನ್ನು ಹೇಳಲಾಗಿದೆ. ಈ ತಾಣವು ಕೇರಳದ ಅತ್ಯಂತ ಜನಪ್ರಿಯ ಹಿನ್ನೀರು ಪ್ರವಾಸೋದ್ಯಮ ತಾಣವಾಗಿದೆ. ಅಂದ ಹಾಗೆ ಭಾರತದ ಪ್ರವಾಸೋದ್ಯಮ ಹೆಚ್ಚಿರುವ ರಾಜ್ಯಗಳಲ್ಲಿ ಕೇರಳವನ್ನು ಮಾತ್ರ ʼನೊ ಲಿಸ್ಟ್ʼನಲ್ಲಿ ಪಟ್ಟಿ ಮಾಡಲಾಗಿದೆ.
ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಡೆತ
ಕೇರಳಕ್ಕೆ ಪ್ರವಾಸೋದ್ಯಮ ದೊಡ್ಡ ಆದಾಯದ ಮೂಲ. ಇದು ಸಾವಿರಾರು ಮಂದಿಗೆ ಉದ್ಯೋಗ ಮತ್ತು ಉದ್ಯಮದ ಅವಕಾಶಗಳನ್ನು ಕಲ್ಪಿಸಿದೆ. ಪ್ರವಾಸದ ಋತು ಆರಂಭಗೊಳ್ಳುವ ಕೆಲವೇ ದಿನಗಳ ಮೊದಲು ಈ ವರದಿ ಬಂದಿರುವ ಕಾರಣ ಈ ರಾಜ್ಯಕ್ಕೆ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಲಿದೆ ಹಾಗೂ ಈ ಕ್ಷೇತ್ರಕ್ಕೆ ದೊಡ್ಡ ಹೊಡೆತ ಕೊಡಲಿದೆ.
ಕೇರಳದ ಪ್ರವಾಸೋದ್ಯಮ ಇಲಾಖೆ ಹಾಗೂ ಇನ್ನಿತರ ಪಾಲುದಾರರು ಅಮೆರಿಕದ ಸಂಸ್ಥೆಯ ನೊ ಲಿಸ್ಟ್‌ನಲ್ಲಿ ತಮ್ಮ ರಾಜ್ಯ ಇರುವದನ್ನು ಗಮನಿಸಿಲ್ಲ.
ಕೇರಳ ಟ್ರಾವೆಲ್ ಮಾರ್ಟ್ (KTM) ನ ಮಾಜಿ ಅಧ್ಯಕ್ಷ ಹಾಗೂ ಪ್ರವಾಸೋದ್ಯಮ ಕ್ಷೇತ್ರದಲ್ಲಿನ ದೊಡ್ಡ ಉದ್ಯಮಿ ಬೇಬಿ ಮ್ಯಾಥ್ಯೂ ಅವರು ಕೇರಳ ಪ್ರವಾಸೋದ್ಯಮದ ಭವಿಷ್ಯದ ಬಗ್ಗೆ ಭರವಸೆ ಹೊಂದಿದ್ದಾರೆ. ಕೇರಳವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿಗರಿಂದ ಉತ್ತಮ ಸ್ಪಂದನೆ ಪಡೆಯುತ್ತಿದೆ. ಲಂಡನ್‌ನ ವರ್ಲ್ಡ್ ಟ್ರಾವೆಲ್ ಮಾರ್ಟ್ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ಇನ್ನೂಇದೆ . ವಯನಾಡ್ ಸುರಕ್ಷಿತವಾಗಿದೆ ಎಂದು ಹೇಳುವುದಕ್ಕಾಗಿ ದೇಶವ್ಯಾಪಿ ಅಭಿಯಾನಗಳನ್ನೂ ನಡೆಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ಹಾಗೂ ವಯನಾಡ್ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ರಾಹುಲ್ ಗಾಂಧಿಯೂ ವಯನಾಡ್ ಪ್ರವಾಸೋದ್ಯಮದ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ. ಈ ಪ್ರದೇಶವು ಸುರಕ್ಷಿತವಾಗಿದೆ ಹಾಗೂ ಭವಿಷ್ಯದಲ್ಲಿ ಇದನ್ನು ಜಾಗತಿಕವಾಗಿ ಅತ್ಯುತ್ತಮ ಪ್ರವಾಸೋದ್ಯಮ ತಾಣವನ್ನಾಗಿ ಮಾಡುವ ಗುರಿ ಹೊಂದಿದ್ದೇನೆ ಎಂದು ಹೇಳಿದ್ದಾರೆ.
ಎಚ್ಚರಿಕೆಯ ಕರೆಗಂಟೆ
ಕೇರಳದಲ್ಲಿ ನಡೆಯುತ್ತಿರುವ ಅನಿಯಂತ್ರಿತ ಪ್ರವಾಸೋದ್ಯಮದ ಬಗ್ಗೆ ಪರಿಸರ ತಜ್ಞರು ಎಚ್ಚರಿಕೆಯ ಮಾತುಗಳನ್ನಾಡಿದ್ದಾರೆ.
ಇದು ಕೇರಳಕ್ಕೆ ಎಚ್ಚರಿಕೆಯ ಕರೆಯಾಗಿದೆ. ಅಭಿವೃದ್ಧಿ ಕಾರ್ಯಗಳಿಂದಾಗಿ ಪರಿಸರದ ಮೇಲಾಗುತ್ತಿರುವ ಪರಿಣಾಮದ ಕುರಿತು ಗಂಭೀರ ಅಧ್ಯಯನ ನಡೆಯಬೇಕಾಗಿದೆ. ಪ್ರಮುಖವಾಗಿ ಗುಡ್ಡ ಪ್ರದೇಶ ಹಾಗೂ ಪರಿಸರ ಸೂಕ್ಷ್ಯ ವಲಯದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳು ಅಪಾಯಕಾರಿ. ಪರಿಸರಕ್ಕೆ ಹಾನಿಯಾಗದಂತೆ ಪ್ರವಾಸೋದ್ಯಮ ಚಟುವಟಿಕೆ ನಡೆಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ರಾಜ್ಯವು ಸುಸ್ಥಿರ ಪ್ರವಾಸೋದ್ಯಮದ ಕಡೆಗೆ ಹೆಚ್ಚಿನ ಗಮನ ಕೊಡಬೇಕಾಗಿದೆ ಎಂದು ತಜ್ಞರು ಹೇಳಿದ್ದಾರೆ.