ನೀಟ್ ಬಗ್ಗೆ ಮಾತನಾಡಲು ಅವಕಾಶ ಕೊಡಲಿಲ್ಲ: ರಾಹುಲ್ ಗಾಂಧಿ
ನೀಟ್ ಬಗ್ಗೆ ಸದನದಲ್ಲಿ ಪ್ರಸ್ತಾಪಿಸುವಾಗ ರಾಹುಲ್ ಗಾಂಧಿ ಅವರ ಮೈಕ್ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.;
ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳ ಬಗ್ಗೆ ಪ್ರತಿಪಕ್ಷ ಇಂಡಿಯ ಒಕ್ಕೂಟ ರಚನಾತ್ಮಕ ಚರ್ಚೆಯನ್ನು ಬಯಸಿದೆ. ಆದರೆ, ಸಂಸತ್ತಿನಲ್ಲಿ ಅದಕ್ಕೆ ಅವಕಾಶ ಕೊಡಲಿಲ್ಲ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶುಕ್ರವಾರ (ಜೂನ್ 28) ಹೇಳಿದರು.
ರಾಹುಲ್ ಎಕ್ಸ್ ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ, ʻಪ್ರಶ್ನೆಪತ್ರಿಕೆ ಸೋರಿಕೆ ಆಗಿರುವುದು ಎಲ್ಲರಿಗೂ ತಿಳಿದಿದೆ. ವೈದ್ಯರಾಗಬೇಕೆಂದು ಓದಿದ ವಿದ್ಯಾರ್ಥಿಗಳ ಕನಸುಗಳು ಮತ್ತು ಆಕಾಂಕ್ಷೆಗಳು ಅಪಹಾಸ್ಯಕ್ಕೊಳಗಾಗಿವೆ,ʼ ಎಂದು ಬರೆದಿ ದ್ದಾರೆ.
ನೀಟ್ ಕುರಿತು ಸದನದಲ್ಲಿ ಪ್ರಸ್ತಾಪಿಸುವಾಗ ರಾಹುಲ್ ಅವರ ಮೈಕ್ ಸಂಪರ್ಕ ಕಡಿತಗೊಳಿಸಲಾಯಿತು ಎಂದು ಕಾಂಗ್ರೆಸ್ ಆರೋಪಿಸಿದ ಬಳಿಕ ಅವರ ಹೇಳಿಕೆ ಬಂದಿದೆ.
ʻನಿನ್ನೆ ವಿರೋಧ ಪಕ್ಷಗಳ ಜೊತೆಗಿನ ಸಭೆಯಲ್ಲಿ ನೀಟ್ ಕುರಿತು ಒಂದು ದಿನದ ಚರ್ಚೆ ಅಗತ್ಯವಿದೆ ಎಂದಾಗ, ಎಲ್ಲರೂ ಒಪ್ಪಿಕೊಂಡಿದ್ದಾರೆ. ಚರ್ಚೆಯನ್ನು ಶಾಂತಿ, ಸೌಹಾರ್ದದಿಂದ ನಡೆಸಲು ನಾವು ಬದ್ಧರಾಗಿದ್ದೇವೆ,ʼ ಎಂದು ಹೇಳಿದರು.
ʻನೀಟ್ ಪರೀಕ್ಷೆ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ಇಂಡಿಯ ಒಕ್ಕೂಟ ರಚನಾತ್ಮಕ ಚರ್ಚೆಯನ್ನು ಬಯಸುತ್ತದೆ. ಆದರೆ, ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನೀಡದಿರುವುದು ದುರದೃಷ್ಟಕರ. ಇದು ದೇಶಾದ್ಯಂತ ಲಕ್ಷಾಂತರ ಕುಟುಂಬ ಗಳನ್ನು ಆತಂಕಕ್ಕೀಡು ಮಾಡಿರುವ ವಿಷಯ. ಈ ಬಗ್ಗೆ ಚರ್ಚಿಸಲು ಮತ್ತು ವಿದ್ಯಾರ್ಥಿಗಳಿಗೆ ಗೌರವವನ್ನು ನೀಡುವಂತೆ ಪ್ರಧಾನಿಯನ್ನು ಒತ್ತಾಯಿಸುತ್ತೇವೆ,ʼ ಎಂದು ಅವರು ಹೇಳಿದರು.
ಸ್ಪೀಕರ್‌ಗೆ ಮನವಿ: ಇದಕ್ಕೂ ಮುನ್ನ ಲೋಕಸಭೆಯಲ್ಲಿ ರಾಹುಲ್, ಸ್ಪೀಕರ್ ಓಂ ಬಿರ್ಲಾ ಅವರಿಗೆ ಮನವಿ ಸಲ್ಲಿಸಿದರು. ʻನಮ್ಮ ಧ್ವನಿಗೆ ನೀವು ನಮಗೆ ಅವಕಾಶ ನೀಡುತ್ತೀರಿ, ಭಾರತದ ಜನರ ಧ್ವನಿಯನ್ನು ಪ್ರತಿನಿಧಿಸಲು ನಮಗೆ ಅವಕಾಶ ನೀಡುತ್ತೀರಿ ಎಂದು ನನಗೆ ವಿಶ್ವಾಸವಿದೆ,ʼ ಎಂದು ಅವರು ಹೇಳಿದರು.
ʻಪ್ರತಿಪಕ್ಷಗಳ ಧ್ವನಿಯನ್ನು ಅಡಗಿಸಿ, ಸದನವನ್ನು ನಡೆಸಬಹುದು ಎಂಬುದು ಪ್ರಜಾಸತ್ತಾತ್ಮಕವಲ್ಲದ ವಿಚಾರ. ಪ್ರತಿಪಕ್ಷಗಳು ‘ಸಂವಿಧಾನ’ವನ್ನು ರಕ್ಷಿಸಬೇಕೆಂದು ಭಾರತೀಯರು ನಿರೀಕ್ಷಿಸುತ್ತಾರೆ ಎಂಬುದನ್ನು ಈ ಚುನಾವಣೆ ತೋರಿಸಿದೆ,ʼ ಎಂದು ಹೇಳಿದರು.
ಚರ್ಚೆಗೆ ಪ್ರತಿಪಕ್ಷಗಳು ಒತ್ತಾಯಿಸಿದ್ದರಿಂದ, ಲೋಕಸಭೆಯ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಗಿದೆ.