Shahi Idgah mosque : ಮಥುರಾ ಶಾಹಿ ಮಸೀದಿ ಆವರಣ ಸಮೀಕ್ಷೆಗೆ ನೀಡಿದ್ದ ತಡೆ ವಿಸ್ತರಿಸಿದ ಸುಪ್ರೀಂ ಕೋರ್ಟ್
Shahi Idgah mosque :1991ರ ಪೂಜಾ ಸ್ಥಳಗಳು ಕಾಯ್ದೆ ಸೇರಿ, ಸುಪ್ರೀಂ ಕೋರ್ಟ್ ಮುಂದೆ ಮೂರು ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಹೀಗಾಗಿ ಇದನ್ನು ಏ.1ರಿಂದ ಆರಂಭವಾಗುವ ವಾರಕ್ಕೆ ಪಟ್ಟಿ ಮಾಡಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ.;
ಮಥುರಾದ ವಿವಾದಿತ ಶಾಹಿ ಈದ್ಗಾ ಮಸೀದಿ ಆವರಣವನ್ನು ಕೋರ್ಟ್ ಮೇಲ್ವಿಚಾರಣೆಯಲ್ಲಿ ಸಮೀಕ್ಷೆ ನಡೆಸಬೇಕು ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪಿಗೆ ನೀಡಿದ್ದ ತಡೆಯನ್ನು ಸುಪ್ರೀಂ ಕೋರ್ಟ್ ಬುಧವಾರ ಮತ್ತಷ್ಟು ದಿನಗಳ ಕಾಲ ವಿಸ್ತರಣೆ ಮಾಡಿದೆ.
‘ಶಾಹಿ ಮಸೀದಿ ಈದ್ಗಾ ಮಸೀದಿ ಟ್ರಸ್ಟ್’ನ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಹಾಗೂ ಕೆ.ವಿ. ವಿಶ್ವನಾಥನ್ ಅವರಿದ್ದ ಪೀಠ, ಏಪ್ರಿಲ್ ಮೊದಲ ವಾರಕ್ಕೆ ವಿಚಾರಣೆ ಮುಂದೂಡಿತು. ಅಲ್ಲಿಯ ತನಕ ತಡೆ ಮುಂದುವರಿಯಲಿದೆ.
1991ರ ಪೂಜಾ ಸ್ಥಳಗಳು ಕಾಯ್ದೆ ಸೇರಿ, ಸುಪ್ರೀಂ ಕೋರ್ಟ್ ಮುಂದೆ ಮೂರು ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಹೀಗಾಗಿ ಇದನ್ನು ಏ.1ರಿಂದ ಆರಂಭವಾಗುವ ವಾರಕ್ಕೆ ಪಟ್ಟಿ ಮಾಡಿ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಅಲ್ಲಿಯ ತನಕ ಹೈಕೋರ್ಟ್ ಆದೇಶಕ್ಕೆ ನೀಡಲಾದ ಮಧ್ಯಂತರ ತಡೆ ಮುಂದುವರಿಯಲಿದೆ ಎಂದು ಕೋರ್ಟ್ ಹೇಳಿದೆ.
2023ರ ಡಿಸೆಂಬರ್ 23ರಂದು ಕೋರ್ಟ್ ಮೇಲ್ವಿಚಾರಣೆಯಲ್ಲಿ ಶಾಹಿ ಈದ್ಗಾ ಆವರಣದಲ್ಲಿ ಸಮೀಕ್ಷೆ ನಡೆಸಬೇಕು ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತ್ತು. ಅಲ್ಲದೆ ಸರ್ವೆಯ ಉಸ್ತುವಾರಿಗೆ ವಿಶೇಷ ಆಯುಕ್ತರನ್ನೂ ನೇಮಿಸಿತ್ತು. ಹೈಕೋರ್ಟ್‌ನ ಈ ಆದೇಶಕ್ಕೆ 2024ರ ಜನವರಿ 16ರಂದು ಸುಪ್ರೀಂ ಕೋರ್ಟ್ ತಡೆ ನೀಡಿತ್ತು.
ಮಥುರಾದಲ್ಲಿ, ಶ್ರೀ ಕೃಷ್ಣ ಜನ್ಮಭೂಮಿ ಟ್ರಸ್ಟ್‌ನ 13.37 ಎಕರೆ ಭೂಮಿಯ ಒಂದು ಭಾಗದಲ್ಲಿ ಶಾಹಿ ಈದ್ಗಾ ಮಸೀದಿಯನ್ನು ನಿರ್ಮಿಸಲಾಗಿದೆ. ಅದನ್ನು ಸ್ಥಳಾಂತರಿಸಲು ಸಿವಿಲ್ ನ್ಯಾಯಾಧೀಶ ಹಿರಿಯ ವಿಭಾಗ (3) ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು.
ಬಾಬರಿ ಮಸೀದಿ-ರಾಮ ಜನ್ಮಭೂಮಿ ಶೀರ್ಷಿಕೆ ವಿವಾದದಲ್ಲಿ ಮಾಡಿದಂತೆಯೇ ಮೂಲ ವಿಚಾರಣೆಯನ್ನು ನಡೆಸುವಂತೆ ಹಿಂದೂ ಪರ ವಕೀಲರು ಹೈಕೋರ್ಟ್‌ಗೆ ಮನವಿ ಮಾಡಿದ್ದರು.