Pahalgam Attack | ಪಾಕಿಸ್ತಾನದಿಂದ ಆಮದಾಗುವ ವಸ್ತುಗಳಿಗೆ ನಿರ್ಬಂಧ; ಉಭಯ ರಾಷ್ಟ್ರಗಳ ಮಧ್ಯೆ ವ್ಯಾಪಾರ ಸ್ಥಗಿತ
ಪರೋಕ್ಷ ಆಮದು ಅಥವಾ ರಫ್ತು ನಿಷೇಧಿಸುವ ನಿಟ್ಟಿನಲ್ಲಿ ಕಾಯ್ದೆಗೆ ಪ್ರತ್ಯೇಕ ನಿಬಂಧನೆ ಸೇರಿಸಲಾಗಿದೆ ಎಂದು ವಿದೇಶಿ ವ್ಯಾಪಾರ ನಿರ್ದೇಶನಾಲಯ (DGFT) ಮೇ 2 ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಿದೆ.;
ಪಹಲ್ಗಾಮ್ ದಾಳಿ ನಂತರ ಭಾರತ-ಪಾಕಿಸ್ತಾನ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಮತ್ತಷ್ಟು ಹದಗೆಟ್ಟಿದೆ. ಪರಸ್ಪರ ವಾಯುಪ್ರದೇಶ ಬಳಕೆ ನಿರ್ಬಂಧಿಸಿದ ನಂತರ ಪಾಕಿಸ್ತಾನದಿಂದ ಮಾಡಿಕೊಳ್ಳುತ್ತಿದ್ದ ಎಲ್ಲಾ ಸರಕುಗಳ ಆಮದು ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
2024-25 ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಪಾಕಿಸ್ತಾನಕ್ಕೆ ಭಾರತದ ರಫ್ತು ಪ್ರಮಾಣ 447.65 ಮಿಲಿಯನ್ ಡಾಲರ್ ಆಗಿತ್ತು. ಆಮದು ಪ್ರಮಾಣ ಕೇವಲ 0.42 ಮಿಲಿಯನ್ ಡಾಲರ್ ಇತ್ತು. ಅವಲಂಬನೆ ಕಡಿಮೆಯಾಗಿರುವ ಕಾರಣ ಆಮದು ನಿಷೇಧಿಸಲಾಗಿದೆ.
ಆಮದಾಗುತ್ತಿದ್ದ ವಸ್ತುಗಳೇನು?
ಪಾಕಿಸ್ತಾನದಿಂದ ಭಾರತಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಒಣ ಹಣ್ಣುಗಳು, ಚರ್ಮ ಉತ್ಪನ್ನಗಳು, ಸೌಂದರ್ಯವರ್ಧಕಗಳು, ಸಿಮೆಂಟ್, ಕಲ್ಲುಪ್ಪು, ಮುಲ್ತಾನ್ ಮಿಟ್ಟಿ, ಕಾಟನ್, ಮೆಟಲ್ ಕಾಂಪೌಂಡ್, ಸಲ್ಫರ್ ಹಾಗೂ ಕನ್ನಡಕಗಳಿಗೆ ಬಳಸುವ ಆಪ್ಟಿಕಲ್ಸ್ ಆಮದು ಮಾಡಿಕೊಳ್ಳಲಾಗುತ್ತಿತ್ತು. ಈಗ ಅವುಗಳ ಆಮದು ನಿಲ್ಲಿಸಿದೆ.
ವಿದೇಶಿ ವ್ಯಾಪಾರ ಮಹಾ ನಿರ್ದೇಶನಾಲಯ ಅಧಿಸೂಚನೆ
ವಿದೇಶಿ ವ್ಯಾಪಾರ ನೀತಿ 2023 ರಡಿ ಮುಂದಿನ ಆದೇಶದವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಪಾಕಿಸ್ತಾನದಿಂದ ಆಮದಾಗುವ ಹಾಗೂ ಪಾಕಿಸ್ತಾನಕ್ಕೆ ರಫ್ತುಮಾಡುವ ಸರಕುಗಳನ್ನು ನಿರ್ಬಂಧಿಸಲಾಗಿದೆ.
ಪರೋಕ್ಷ ಆಮದು ಅಥವಾ ರಫ್ತು ನಿಷೇಧಿಸುವ ನಿಟ್ಟಿನಲ್ಲಿ ಕಾಯ್ದೆಗೆ ಪ್ರತ್ಯೇಕ ನಿಬಂಧನೆ ಸೇರಿಸಲಾಗಿದೆ ಎಂದು ವಿದೇಶಿ ವ್ಯಾಪಾರ ನಿರ್ದೇಶನಾಲಯ (DGFT) ಮೇ 2 ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಿದೆ.
ನಿಷೇಧದಲ್ಲಿ ಒಳಪಟ್ಟಿರುವ ವಸ್ತುಗಳಿಗೆ ಯಾವುದೇ ವಿನಾಯ್ತಿ ಇದ್ದಲ್ಲಿ ಅದಕ್ಕೆ ಭಾರತ ಸರ್ಕಾರದ ಅನುಮೋದನೆ ಪಡೆಯುವುದು ಅಗತ್ಯವಾಗಿದೆ ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ವ್ಯಾಪಾರ ಸ್ಥಗಿತ
2024-25ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಪಾಕಿಸ್ತಾನದಿಂದ 0.08 ಮಿಲಿಯನ್ ಮೌಲ್ಯದ ಹಣ್ಣುಗಳು ಮತ್ತು ಬೀಜಗಳನ್ನು ಆಮದು ಮಾಡಿಕೊಳ್ಳಲಾಗಿತ್ತು. ಅಂತೆಯೇ 0.26 ಮಿಲಿಯನ್ ಮೌಲ್ಯದ ಎಣ್ಣೆ ಕಾಳುಗಳು, ಔಷಧೀಯ ಸಸ್ಯಗಳು ಹಾಗೂ ಸಾವಯವ ರಾಸಾಯನಿಕಗಳನ್ನು ತರಿಸಿಕೊಳ್ಳಲಾಗಿತ್ತು. ಈ ಎಲ್ಲಾ ವಸ್ತುಗಳ ಮಾರಾಟವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.
ಪಾಕಿಸ್ತಾನದ ಪ್ರತೀಕಾರ ಕ್ರಮ
ಭಾರತದ ಆಮದು ನಿಷೇಧ ಕ್ರಮಕ್ಕೆ ಪ್ರತೀಕಾರವಾಗಿ ಪಾಕಿಸ್ತಾನ ಕೂಡ ಭಾರತದೊಂದಿಗಿನ ಎಲ್ಲಾ ರೀತಿಯ ವ್ಯಾಪಾರವನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. 2022-23 ಹಾಗೂ 2021-22 ರಲ್ಲಿ ಭಾರತವು ಕ್ರಮವಾಗಿ 627.1 ಮಿಲಿಯನ್ ಮತ್ತು 513.82 ಮಿಲಿಯನ್ ಮೌಲ್ಯದ ಸರಕುಗಳನ್ನು ರಫ್ತು ಮಾಡಿತ್ತು.