Raid on Isha Foundation | ಕೋರ್ಟ್ ಸೂಚನೆ ಬೆನ್ನಲ್ಲೇ ಈಶಾ ಫೌಂಡೇಷನ್ ಆಶ್ರಮದ ಮೇಲೆ ಪೊಲೀಸರ ದಾಳಿ
ಕೊಯಮತ್ತೂರಿನ ಎಡಿಎಸ್ಪಿ, ಡಿಎಸ್ಪಿ ನೇತೃತ್ವದಲ್ಲಿ 150ಕ್ಕೂ ಹೆಚ್ಚು ಪೊಲೀಸರು ದಾಳಿ ನಡೆಸಿ, ಈಶಾ ಆಶ್ರಮವಾಸಿಗಳ ವಿವರ, ಜೀವನಶೈಲಿ ಕುರಿತು ವಿಚಾರಣೆ ನಡೆಸಿದರು. ಜೊತೆಗೆ ಆಶ್ರಮದಲ್ಲಿ ಶೋಧ ಕಾರ್ಯ ನಡೆಸಿದರು;
ತಮಿಳುನಾಡಿನ ಕೊಯಮತ್ತೂರು ಈಶಾ ಫೌಂಡೇಷನ್ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳ ವರದಿ ಸಲ್ಲಿಸಲು ಮದ್ರಾಸ್ ಹೈಕೋರ್ಟ್ ಸೂಚನೆ ನೀಡಿದ ಬೆನ್ನಲ್ಲೇ ಕೊಯಮತ್ತೂರು ಜಿಲ್ಲಾ ಪೊಲೀಸರು ಸದ್ಗುರು ಜಗ್ಗಿ ವಾಸುದೇವ್ ಅವರ ತೊಂಡಮುತೂರು ಆಶ್ರಮದ ಮೇಲೆ ದಾಳಿ ನಡೆಸಿದ್ದಾರೆ.
ಕೊಯಮತ್ತೂರಿನ ಎಡಿಎಸ್ಪಿ, ಡಿಎಸ್ಪಿ ನೇತೃತ್ವದಲ್ಲಿ 150ಕ್ಕೂ ಹೆಚ್ಚು ಪೊಲೀಸರು ದಾಳಿ ನಡೆಸಿ, ಆಶ್ರಮವಾಸಿಗಳ ವಿವರ, ಜೀವನಶೈಲಿ ಕುರಿತು ವಿಚಾರಣೆ ನಡೆಸಿದರು. ಜೊತೆಗೆ ಆಶ್ರಮದಲ್ಲಿ ಶೋಧ ಕಾರ್ಯ ನಡೆಸಿದರು.
ಪೊಲೀಸ್ ದಾಳಿ ಬೆನ್ನಲ್ಲೇ ಪ್ರಕಟಣೆ ಹೊರಡಿಸಿರುವ ಈಶಾ ಯೋಗ ಕೇಂದ್ರವು ಇದೊಂದು ನಿಯಮಿತ ತಪಾಸಣೆ. ನ್ಯಾಯಾಲಯದ ಸೂಚನೆ ಮೇರೆಗೆ ಸಾಮಾನ್ಯ ತಪಾಸಣೆ ನಡೆಸಿದ್ದಾರೆ. ಆತಂಕ ಪಡುವ ವಿಷಯವಲ್ಲ ಎಂದು ತಿಳಿಸಿದೆ.
ದೂರು ಆಧರಿಸಿ ನ್ಯಾಯಾಲಯ ಸೂಚನೆ
ಹೆಣ್ಣುಮಕ್ಕಳಿಗೆ ಬಲವಂತವಾಗಿ ಸನ್ಯಾಸ ಸ್ವೀಕರಿಸಲು ಒತ್ತಾಯಿಸಲಾಗುತ್ತಿದೆ ಎಂಬ ದೂರಿನ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ನ್ಯಾಯಪೀಠ, ಈಶಾ ಫೌಂಡೇಷನ್ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳ ವರದಿ ನೀಡುವಂತೆ ಜಿಲ್ಲಾ ಪೊಲೀಸರಿಗೆ ಸೂಚಿಸಿತ್ತು.
ತಮ್ಮ ಇಬ್ಬರು ಹೆಣ್ಣುಮಕ್ಕಳಾದ ಗೀತಾ ಕಾಮರಾಜ್(42), ಲತಾ ಕಾಮರಾಜ್(39) ಅವರ ಮನಸ್ಸು ಕೆಡಿಸಿ ಕುಟುಂಬದೊಂದಿಗೆ ಸಂಬಂಧ ಕಡಿದುಕೊಂಡು ಆಶ್ರಮದಲ್ಲೇ ಉಳಿಯುವಂತೆ ಮಾಡಿದ್ದಾರೆ ಎಂದು ಆರೋಪಿಸಿ ನಿವೃತ್ತ ಪ್ರಾಧ್ಯಾಪಕ ಡಾ.ಎಸ್.ಕಾಮರಾಜ್ ಎಂಬುವರು ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.
ದೂರಿನ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್.ಎಂ.ಸುಬ್ರಹ್ಮಣ್ಯಂ ಹಾಗೂ ವಿ.ಶಿವಜ್ಞಾನಂ ನೇತೃತ್ವದ ನ್ಯಾಯಪೀಠ, ಸದ್ಗುರು ಜಗ್ಗಿ ವಾಸುದೇವ ಅವರು ತಮ್ಮ ಮಕ್ಕಳಿಗೆ ಮಾತ್ರ ಮದುವೆ ಮಾಡಿಸಿ, ಬೇರೆ ಹೆಣ್ಣುಮಕ್ಕಳಿಗೇಕೆ ಸನ್ಯಾಸತ್ವ ಸ್ವೀಕರಿಸಲು ಪ್ರೇರೇಪಿಸುತ್ತಿದ್ದಾರೆ ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಈಶಾ ಸಂಸ್ಥೆ ಪರ ವಕೀಲರಾದ ಕೆ.ರಾಜೇಂದ್ರಕುಮಾರ್ ಅವರು, ಆಶ್ರಮದಲ್ಲಿ ಸನ್ಯಾಸತ್ವಕ್ಕಾಗಲಿ, ಮದುವೆಗಾಗಲಿ ಯಾರಿಗೂ ನಾವು ಸಲಹೆ ನೀಡುವುದಿಲ್ಲ. ಇದು ಅವರವರ ವೈಯಕ್ತಿಕ ನಿರ್ಧಾರ. ಈಶಾ ಫೌಂಡೇಷನ್ ಕೇವಲ ಯೋಗ ಮತ್ತು ಆಧ್ಯಾತ್ಮದ ಪ್ರಚಾರಕ್ಕೆ ಮಾತ್ರ ಸ್ಥಾಪಿತವಾಗಿದೆ ಎಂದು ಹೇಳಿದ್ದರು.
ಇದೇ ವೇಳೆ ನ್ಯಾಯಾಲಯದ ಕಲಾಪಕ್ಕೆ ಹಾಜರಾಗಿದ್ದ ದೂರುದಾರ ಕಾಮರಾಜ್ ಅವರ ಇಬ್ಬರು ಪುತ್ರಿಯರು, ನಾವು ಸ್ವ ಇಚ್ಛೆಯಿಂದ ಈಶಾ ಸಂಸ್ಥೆಯಲ್ಲಿದ್ದೇವೆ ಎಂದು ಹೇಳಿಕೆ ನೀಡಿದ್ದರು. ಆಗ ನ್ಯಾಯಪೀಠ, ಈಶಾ ಫೌಂಡೇಷನ್ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳ ವರದಿ ನೀಡಲು ಪೊಲೀಸರಿಗೆ ಸೂಚಿಸಿ, ವಿಚಾರಣೆ ಮುಂದೂಡಿತ್ತು.
ಕಾಮರಾಜ್ ಅವರ ಮೊದಲ ಪುತ್ರಿ ಗೀತಾ ಕಾಂರಾಜ್ ಅವರು ಇಂಗ್ಲೆಂಡ್ ವಿಶ್ವವಿದ್ಯಾನಿಲಯದಿಂದ ಮೆಕಾಟ್ರಾನಿಕ್ಸ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. 2008 ರಲ್ಲಿ ಕೆಲಸ ಬಿಡುವುದಕ್ಕೂ ಮೊದಲು ಕೈ ತುಂಬಾ ಸಂಬಳ ಪಡೆಯುತ್ತಿದ್ದರು. ನಂತರ ಈಶಾ ಸಂಸ್ಥೆಯ ಯೋಗ ತರಗತಿಗಳಿಗೆ ಹಾಜರಾಗುತಿದ್ದರು. ಇನ್ನು ಎರಡನೇ ಮಗಳಾದ ಲತಾ ಕಾಮರಾಜ್ ಅವರು ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದು, ಅಕ್ಕನ ಹಾದಿಯನ್ನೇ ಅನುಸರಿಸಿದರು ಎಂದು ನ್ಯಾಯಾಲಯಕ್ಕೆ ನೀಡಿರುವ ವೃತ್ತಿ ವಿವರದಲ್ಲಿ ತಿಳಿಸಲಾಗಿದೆ. ಈಶಾ ಫೌಂಡೇಷನ್ ನೀಡುವ ಆಹಾರ ಮತ್ತು ಔಷಧಿಗಳು ಅರಿವಿನ ಸಾಮರ್ಥ್ಯ ಕ್ಷೀಣಿಸುವಂತಿವೆ. ಇದರಿಂದ ಮಕ್ಕಳು ನಮ್ಮ ಕುಟುಂಬದಿಂದ ಬೇರೆಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ಅಂಶದ ಕುರಿತಾಗಿಯೂ ನ್ಯಾಯಾಲಯ ಕಳವಳ ವ್ಯಕ್ತಪಡಿಸಿತ್ತು.
ಈಶಾ ಫೌಂಡೇಷನ್ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣ
ಅರ್ಜಿದಾರರ ವಕೀಲರಾದ ಎಂ.ಪುರುಷೋತ್ತಮನ್ ಅವರು, ಈಶಾ ಫೌಂಡೇಷನ್ ವಿರುದ್ಧ ಹಲವಾರು ಕ್ರಿಮಿನಲ್ ಮೊಕದ್ದಮೆಗಳಿವೆ. ಇದು ವ್ಯಾಪಕ ದುರ್ನಡತೆಯ ಬಗ್ಗೆ ಸುಳಿವು ನೀಡುತ್ತವೆ ಎಂದು ನ್ಯಾಯಾಲಯದ ಗಮನ ಸೆಳೆದಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈಶಾ ಫೌಂಡೇಷನ್ಗೆ ಸಂಬಂಧಿಸಿದ ಎಲ್ಲಾ ಕ್ರಿಮಿನಲ್ ಪ್ರಕರಣಗಳ ವಿವರವಾದ ವಸ್ತುಸ್ಥಿತಿ ವರದಿಯನ್ನು ಅ.4 ರೊಳಗೆ ಸಲ್ಲಿಸುವಂತೆ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಇ.ರಾಜ್ ತಿಲಕ್ ಅವರಿಗೆ ನ್ಯಾಯಾಲಯ ಸೂಚಿಸಿತು.