ಪ್ರಧಾನಿ ರಷ್ಯಾ ಭೇಟಿ ಇಂದಿನಿಂದ

ʻಇದು ಅತ್ಯಂತ ಮಹತ್ವದ ಮತ್ತು ಪೂರ್ಣ ಪ್ರಮಾಣದ ಭೇಟಿ ಆಗಿರಲಿದೆ. ರಷ್ಯಾ-ಭಾರತದ ಸಂಬಂಧಗಳಿಗೆ ತುಂಬಾ ನಿರ್ಣಾಯಕವಾಗಿರಲಿದೆʼ ಎಂದು ಪುಟಿನ್ ಅವರ ಪತ್ರಿಕಾ ಕಾರ್ಯದರ್ಶಿ ಪೆಸ್ಕೋವ್ ಹೇಳಿದ್ದಾರೆ;

Update: 2024-07-08 07:28 GMT
2019 ರಲ್ಲಿ ವ್ಲಾಡಿವೋಸ್ಟಾಕ್‌ನಲ್ಲಿ ನಡೆದ ಆರ್ಥಿಕ ಸಮಾವೇಶದಲ್ಲಿ ಭಾಗವಹಿಸಿದ್ದ ನರೇಂದ್ರ ಮೋದಿ ಮತ್ತು ಪುಟಿನ್‌

ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ(ಜುಲೈ 8)ದಿಂದ ಮಾಸ್ಕೋಗೆ ಎರಡು ದಿನಗಳ ಭೇಟಿ ನೀಡಲಿದ್ದಾರೆ. ಈ ಪ್ರವಾಸವನ್ನು ಪಶ್ಚಿಮ ದೇಶಗಳು ʻಅಸೂಯೆʼ ಯಿಂದ ನೋಡುತ್ತಿವೆ ಎಂದು ಕ್ರೆಮ್ಲಿನ್ ಹೇಳಿದೆ.

ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಶೃಂಗಸಭೆ ಮಟ್ಟದ ಮಾತುಕತೆಗೆ ಮಾಸ್ಕೋಗೆ ಪ್ರಧಾನಿ ನರೇಂದ್ರ ಮೋದಿಯವರನ್ನುರಷ್ಯಾ ನಿರೀಕ್ಷಿಸುತ್ತಿದೆ ಎಂದು ಕ್ರೆಮ್ಲಿನ್ ಹೇಳಿದೆ. 22ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಗೆ ಅಧ್ಯಕ್ಷ ಪುಟಿನ್ ಅವರ ಆಹ್ವಾನದ ಮೇರೆಗೆ ಮೋದಿ ಅವರು ರಷ್ಯಾಕ್ಕೆ ಭೇಟಿ ನೀಡುತ್ತಿದ್ದಾರೆ. 

ಫೆಬ್ರವರಿ 2022 ರಲ್ಲಿ ಉಕ್ರೇನ್ ಮೇಲೆ ಮಾಸ್ಕೋ ದಾಳಿ ನಡೆಸಿದ ಬಳಿಕ ಇದು ಮೋದಿಯವರ ಮೊದಲ ರಷ್ಯಾ ಭೇಟಿಯಾಗಿದೆ. 

ವಿಸ್ತೃತ ಕಾರ್ಯಸೂಚಿ: ಇಬ್ಬರು ಮುಖ್ಯಸ್ಥರು ಉಭಯ ದೇಶಗಳ ನಡುವಿನ ಬಹುಮುಖಿ ಸಂಬಂಧಗಳನ್ನು ಪರಿಶೀಲಿಸುತ್ತಾರೆ ಮತ್ತು ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಅಭಿಪ್ರಾಯ ವಿನಿಮಯ ಮಾಡಿಕೊಳ್ಳುತ್ತಾರೆ ಎಂದು ವಿದೇಶಾಂಗ ಸಚಿವಾಲಯ ಗುರುವಾರ ಹೊಸದಿಲ್ಲಿಯಲ್ಲಿ ಹೇಳಿದೆ.

ಮಾಸ್ಕೋದಲ್ಲಿ ಪ್ರಧಾನಿ ಮೋದಿಯವರ ಕಾರ್ಯಕ್ರಮಗಳು ವಿಸ್ತೃತವಾಗಿರಲಿದ್ದು, ಉಭಯ ನಾಯಕರು ಅನೌಪಚಾರಿಕ ಮಾತುಕತೆ ನಡೆಸ ಲಿದ್ದಾರೆ ಎಂದು ಪುಟಿನ್ ಅವರ ಪತ್ರಿಕಾ ಕಾರ್ಯದರ್ಶಿ ಡಿಮಿಟ್ರಿ ಸೆರ್ಗೆವಿಚ್ ಪೆಸ್ಕೋವ್ ಅವರು ರಷ್ಯಾದ ಸರ್ಕಾರಿ ವಿಜಿಟಿಆರ್‌ಕೆ ಟೆಲಿವಿಷನ್ ಚಾನೆಲ್‌ಗೆ ಶನಿವಾರ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. 

ʻನಿಸ್ಸಂಶಯವಾಗಿ ಕಾರ್ಯಸೂಚಿಯು ವಿಸ್ತೃತವಾಗಿರುತ್ತದೆ. ಇಬ್ಬರೂ ಅನೌಪಚಾರಿಕ ಮಾತುಕತೆ ನಡೆಸಲು ಸಾಧ್ಯವಾಗುತ್ತದೆ ಎಂದು ನಾವು ಭಾವಿಸುತ್ತೇವೆ,ʼ ಎಂದು ಪೆಸ್ಕೋವ್ ಹೇಳಿದರು. 

ಪೂರ್ಣಪ್ರಮಾಣದ ಭೇಟಿ: ರಷ್ಯಾ-ಭಾರತ ಸಂಬಂಧಗಳು ಕಾರ್ಯತಂತ್ರದ ಪಾಲುದಾರಿಕೆ ಹಂತದಲ್ಲಿವೆ. ಕ್ರೆಮ್ಲಿನ್‌ನಲ್ಲಿ ಮುಖಾಮುಖಿ ಯಲ್ಲದೆ, ನಿಯೋಗಗಳ ನಡುವೆ ಮಾತುಕತೆಗಳು ನಡೆಯಲಿವೆ ಎಂದು ಹೇಳಿದರು.

ʻಇದು ಅತ್ಯಂತ ಮಹತ್ವದ ಮತ್ತು ಪೂರ್ಣ ಪ್ರಮಾಣದ ಭೇಟಿ ಆಗಿರಲಿದೆ. ರಷ್ಯಾ-ಭಾರತೀಯ ಸಂಬಂಧಕ್ಕೆ ತುಂಬಾ ಮಹತ್ವದ್ದಾಗಿದೆ,ʼ ಎಂದು ಟಾಸ್ ಸುದ್ದಿ ಸಂಸ್ಥೆ ಅವರ ಹೇಳಿಕೆಯನ್ನು ಉಲ್ಲೇಖಿಸಿದೆ.

ಪಶ್ಚಿಮ ದೇಶಗಳ ಅಸೂಯೆ: ಪ್ರಧಾನಿ ಮೋದಿಯವರ ರಷ್ಯಾ ಭೇಟಿಯನ್ನು ಪಶ್ಚಿಮ ನಿಕಟವಾಗಿ ಮತ್ತು ಅಸೂಯೆಯಿಂದ ನೋಡುತ್ತಿದೆ ಎಂದು ಪೆಸ್ಕೋವ್ ಹೇಳಿದರು. 

ʻಪಶ್ಚಿಮ ದೇಶಗಳು ಈ ಭೇಟಿಯನ್ನು ಅಸೂಯೆಯಿಂದ ನೋಡುತ್ತಿದ್ದು, ನಿಕಟವಾಗಿ ಪರಿಶೀಲಿಸುತ್ತಿವೆ. ಇದರರ್ಥವೇನೆಂದರೆ, ಈ ಭೇಟಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿವೆ,ʼ ಎಂದು ಹೇಳಿದರು ಎಂದು ಟಾಸ್ ವರದಿ ಹೇಳಿದೆ.

ಉಕ್ರೇನ್ ಸಂಘರ್ಷ: 2022 ರಲ್ಲಿ ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ನಂತರ ಮೋದಿ ಅವರು ಪುಟಿನ್ ಮತ್ತು ಉಕ್ರೇನಿನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಹಲವು ಬಾರಿ ದೂರವಾಣಿ ಸಂಭಾಷಣೆ ನಡೆಸಿದ್ದಾರೆ; ಜಾಗತಿಕ ಆರ್ಥಿಕತೆ ಮೇಲೆ ಪ್ರಭಾವ ಬೀರಿರುವ ಯುದ್ಧವನ್ನು ಕೊನೆಗೊಳಿಸುವ ಮಹತ್ವವನ್ನು ಒತ್ತಿ ಹೇಳಿದ್ದಾರೆ. 

ರಷ್ಯಾದೊಂದಿಗಿನ ಸ್ನೇಹದ ಹಿನ್ನೆಲೆಯಲ್ಲಿ ಭಾರತ, ಉಕ್ರೇನ್ ಮೇಲೆ ಮಾಸ್ಕೋ ಆಕ್ರಮಣವನ್ನು ಖಂಡಿಸಿಲ್ಲ; ಸಂಘರ್ಷವನ್ನು ರಾಜತಾಂತ್ರಿಕ ಮತ್ತು ಮಾತುಕತೆ ಮೂಲಕ ಪರಿಹರಿಸಿಕೊಳ್ಳಬೇಕು ಎಂದು ಹೇಳುತ್ತಿದೆ. 

ತೈಲ ದರದ ಮೇಲೆ ಜಿ7 ಹೇರಿದ ಮಿತಿ ಮತ್ತು ಅನೇಕ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ತೈಲ ಸಂಗ್ರಹ ಹೆಚ್ಚುತ್ತಿರುವ ಆತಂಕದ ಹೊರತಾಗಿಯೂ, ಭಾರತವು ರಷ್ಯಾದಿಂದ ಮಾಡಿಕೊಳ್ಳುತ್ತಿರುವ ಕಚ್ಚಾ ತೈಲದ ಪ್ರಮಾಣ ಗಮನಾರ್ಹವಾಗಿ ಹೆಚ್ಚಿದೆ. 

5 ವರ್ಷಗಳ ನಂತರ ಭೇಟಿ: ಸುಮಾರು ಐದು ವರ್ಷಗಳ ನಂತರ ಮೋದಿಯವರ ಮೊದಲ ರಷ್ಯಾ ಭೇಟಿ ಇದಾಗಿದೆ. 2019 ರಲ್ಲಿ ಅವರು ರಷ್ಯಾದ ವ್ಲಾಡಿವೋಸ್ಟಾಕ್‌ನಲ್ಲಿ ನಡೆದ ಆರ್ಥಿಕ ಸಮಾವೇಶದಲ್ಲಿ ಭಾಗವಹಿಸಿದ್ದರು. ಭಾರತದ ಪ್ರಧಾನಿ ಮತ್ತು ರಷ್ಯಾ ಅಧ್ಯಕ್ಷರ ನಡುವಿನ ವಾರ್ಷಿಕ ಶೃಂಗಸಭೆಯು ಉಭಯ ದೇಶಗಳ ನಡುವಿನ ಅತ್ಯುನ್ನತ ಸಾಂಸ್ಥಿಕ ಸಂವಾದವಾಗಿರಲಿದೆ.

ಈವರೆಗೆ, ಭಾರತ ಮತ್ತು ರಷ್ಯಾ ನಡುವೆ 21 ವಾರ್ಷಿಕ ಶೃಂಗಸಭೆಗಳು ನಡೆದಿವೆ. ಕೊನೆಯ ವಾರ್ಷಿಕ ಶೃಂಗಸಭೆಯು ಡಿಸೆಂಬರ್ 6, 2021 ರಂದು ಪುಟಿನ್ ಭಾರತಕ್ಕೆ ಭೇಟಿ ನೀಡಿದಾಗ ನವದೆಹಲಿಯಲ್ಲಿ ನಡೆಯಿತು.

Tags:    

Similar News