Parliament Session: ಅಂಬೇಡ್ಕರ್ ಜಪ ಫ್ಯಾಶನ್; ಅಮಿತ್ ಶಾ ಹೇಳಿಕೆಗೆ ವಿಪಕ್ಷ ವ್ಯಾಪಕ ಆಕ್ರೋಶ
Parliament Session: ರಾಜ್ಯಸಭೆಯಲ್ಲಿ ಅಮಿತ್ ಶಾ ಅವರ ಭಾಷಣ ಟೀಕಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಲು ಮಾತ್ರ ಸಂಸತ್ತಿಗೆ ಬಂದಿದ್ದಾರೆ ಎಂದು ಹೇಳಿದ್ದಾರೆ.
ಮಂಗಳವಾರ (ಡಿಸೆಂಬರ್ 17) ರಾಜ್ಯಸಭೆಯಲ್ಲಿ ಸಂವಿಧಾನದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೀಡಿದ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿದೆ. ಇದು ಸಂಸತ್ತಿನ ಉಭಯ ಸದನಗಳಲ್ಲಿ ಬುಧವಾರ (ಡಿಸೆಂಬರ್ 18) ಗಲಾಟೆಗೆ ಕಾರಣವಾಗಿದೆ.
ಬುಧವಾರ ಬೆಳಿಗ್ಗೆ ಲೋಕಸಭೆಯಲ್ಲಿ ಕಾಂಗ್ರೆಸ್ ಸಚೇತಕ ಮಾಣಿಕಂ ಠಾಗೋರ್ ಅವರು ಅಮಿತ್ ಶಾ ಅವರು ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ. ಈ ಕುರಿತು ಚರ್ಚೆ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ನಿಲುವಳಿ ಸೂಚನೆ ಮಂಡಿಸಿದರು.
ಮಂಗಳವಾರ ರಾಜ್ಯಸಭೆಯಲ್ಲಿ ಸಂವಿಧಾನದ ಕುರಿತ ಚರ್ಚೆಗೆ ಉತ್ತರಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇತ್ತೀಚಿನ ದಿನಗಳಲ್ಲಿ ಅಂಬೇಡ್ಕರ್ ಅವರ ಹೆಸರನ್ನು ಹೇಳುವುದು ಒಂದು ಫ್ಯಾಶನ್ ಆಗಿಬಿಟ್ಟಿದೆ. ಕೆಲವರು ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎಂದು ಜಪ ಮಾಡುತ್ತಿರುತ್ತಾರೆ. ಅದರ ಬದಲಿಗೆ ಭಗವಂತನನ್ನು ಜಪ ಮಾಡಿರುತ್ತಿದ್ದರೆ ಏಳು ಜನ್ಮದ ತನಕ ಸ್ವರ್ಗ ಸಿಗುತ್ತಿತ್ತು ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಪ್ರತಿಪಕ್ಷಗಳನ್ನು ಕೆರಳಿಸಿದೆ.
ಅಮಿತ್ ಶಾ ಕೇವಲ ಮೋದಿಯನ್ನು ಹೊಗಳಲು ಬಂದಿದ್ದಾರೆ
ರಾಜ್ಯಸಭೆಯಲ್ಲಿ ಅಮಿತ್ ಶಾ ಅವರ ಭಾಷಣ ಟೀಕಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಲು ಮಾತ್ರ ಸಂಸತ್ತಿಗೆ ಬಂದಿದ್ದಾರೆ. ಅವರ ಹೇಳಿಕೆಗಳು ಸತ್ಯಕ್ಕೆ ದೂರವಾಗಿವೆ ಎಂದು ಹೇಳಿದರು.
ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು.
"ಇಂದು ಗೃಹ ಸಚಿವರು ಹೇಳಿದ್ದು ಸತ್ಯಕ್ಕೆ ದೂರವಾಗಿರುವ ಸಂಗತಿ. ಅವರು ಸತ್ಯದ ಮಾತನ್ನು ಏನೂ ಹೇಳಲಿಲ್ಲ. ಉದಾಹರಣೆಗೆ, ಅಂಬೇಡ್ಕರ್ ಪ್ರತಿಮೆಯನ್ನು ಅವರ (ಬಿಜೆಪಿ) ಅಧಿಕಾರಾವಧಿಯಲ್ಲಿ ನಿರ್ಮಿಸಲಾಗಿಲ್ಲ. ಎಲ್ಲವೂ ಸುಳ್ಳು. ಪ್ರತಿದಿನ ಅವರು ಗಾಂಧಿ ಕುಟುಂಬವನ್ನು ನಿಂದಿಸುತ್ತಾರೆ. ಅವರು ಸುಳ್ಳುಗಳ ಮೂಲಕ ಜನರನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸುತ್ತಿದ್ದಾರೆ. ಅದು ಹೆಚ್ಚು ಕಾಲ ಮುಂದುವರಿಯುವುದಿಲ್ಲ. ಅವರು ಪ್ರಧಾನಿ ಮೋದಿಯವರನ್ನು ಹೊಗಳಲು ಮಾತ್ರ ಸಂಸತ್ತಿಗೆ ಬಂದಿದ್ದರು" ಎಂದು ಅವರು ಹೇಳಿದರು.
ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಮನುಸ್ಮೃತಿಯನ್ನು ನಂಬುವವರಿಗೆ ಅಂಬೇಡ್ಕರ್ ಅವರೊಂದಿಗೆ ಸಮಸ್ಯೆ ಇರುತ್ತದೆ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೂಡ ಗೃಹ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು.
"ಮನುಸ್ಮೃತಿಯನ್ನು ನಂಬುವವರಿಗೆ ಖಂಡಿತವಾಗಿಯೂ ಅಂಬೇಡ್ಕರ್ ಬಗ್ಗೆ ಸಮಸ್ಯೆಗಳಿರುತ್ತವೆ" ಎಂದು ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಒಂದು ರಾಷ್ಟ್ರ ಒಂದು ಚುನಾವಣೆ ಚರ್ಚೆ
ಕೇಂದ್ರವು ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿದ 'ಒಂದು ರಾಷ್ಟ್ರ, ಒಂದು ಚುನಾವಣೆ' ಮಸೂದೆಯ ಬಗ್ಗೆ ವಿರೋಧ ಪಕ್ಷಗಳು ತಮ್ಮ ಪ್ರತಿಭಟನೆಯನ್ನು ಮುಂದುವರಿಸುವ ನಿರೀಕ್ಷೆಯಿದೆ.
ಭಾರತೀಯ ಸಂವಿಧಾನದ 75 ನೇ ವರ್ಷಾಚರಣೆಯ ಕುರಿತು ರಾಜ್ಯಸಭೆಯಲ್ಲಿ ಮಂಗಳವಾರ ನಡೆದ ಚರ್ಚೆಯ ಕೊನೆಯಲ್ಲಿ ಮಾತನಾಡಿದ ಶಾ, ಅಧಿಕಾರದಲ್ಲಿ ಉಳಿಯಲು ಕಾಂಗ್ರೆಸ್ ತನ್ನ ಆಡಳಿತಾವಧಿಯಲ್ಲಿ ಸಂವಿಧಾನಕ್ಕೆ ಹಲವಾರು ತಿದ್ದುಪಡಿಗಳನ್ನು ಮಾಡಿದೆ ಎಂದು ಆರೋಪಿಸಿದ್ದರಯ, ಬಿಜೆಪಿ ಸರ್ಕಾರಗಳು "ನಾಗರಿಕರನ್ನು ಸಬಲೀಕರಣಗೊಳಿಸುವ" ಉದ್ದೇಶದಿಂದ ತಿದ್ದುಪಡಿಗಳನ್ನು ಮಾಡಿವೆ ಎಂದು ಅವರು ಹೇಳಿದ್ದರು.
ಆಡಳಿತಾರೂಢ ಪಕ್ಷವಾಗಿ ಕಾಂಗ್ರೆಸ್ ತನ್ನ 55 ವರ್ಷಗಳಲ್ಲಿ 77 ಬಾರಿ ಸಂವಿಧಾನ ತಿದ್ದುಪಡಿ ಮಾಡಿದರೆ. ಬಿಜೆಪಿ ಅಧಿಕಾರದಲ್ಲಿರುವ 16 ವರ್ಷಗಳಲ್ಲಿ 22 ಬಾರಿ ತಿದ್ದುಪಡಿಗಳನ್ನು ಮಾಡಿದೆ ಎಂದು ಗೃಹ ಸಚಿವರು ಹೇಳಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಶಾ, ಅಂಬೇಡ್ಕರ್ ಅವರ ಬಗ್ಗೆ ಅದರ ನಿಜವಾದ ಭಾವನೆಗಳ ಬಗ್ಗೆಯೂ ಮಾತನಾಡಬೇಕು ಎಂದು ಹೇಳಿದ್ದರು. ಅಂದಿನ ಕಾಂಗ್ರೆಸ್ ಸರ್ಕಾರದೊಂದಿಗಿನ ಭಿನ್ನಾಭಿಪ್ರಾಯಗಳಿಂದಾಗಿ ಅವರು ಮೊದಲ ಕ್ಯಾಬಿನೆಟ್ಗೆ ರಾಜೀನಾಮೆ ನೀಡಬೇಕಾಯಿತು ಎಂಬುದನ್ನು ಹೇಳಿದ್ದರು.